ಪ್ರಧಾನಿ ಮೋದಿ ಹಾಗೂ ಭಾರತದ ಆಡಳಿತ ವ್ಯವಸ್ಥೆಯ ಬಗ್ಗೆ ಹಗುರವಾಗಿ ಮಾತನಾಡಿದ ಎಲೋನ್ ಮಸ್ಕ್ ವಿರುದ್ಧ ಎಐಎಮ್‌ಐಎಮ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿಯನ್ನು ವಿರೋಧಿಸುವುದು ನಮ್ಮ ಆಂತರಿಕ ಹಕ್ಕು, ಆದರೆ ವಿದೇಶಿಯರ ಟೀಕೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.

ನವದೆಹಲಿ/ಹೈದರಾಬಾದ್ (ಅ.16): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸದಾ ವಾಗ್ದಾಳಿ ನಡೆಸುವ ಎಐಎಮ್‌ಐಎಮ್ (AIMIM) ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ವಿಶ್ವದ ಅಗ್ರ ಸಿರಿವಂತ ಎಲೋನ್‌ ಮಸ್ಕ್ ಅವರ ಭಾರತ ವಿರೋಧಿ ಹೇಳಿಕೆಯ ವಿರುದ್ಧ ಸಿಡಿದೆದ್ದಿದ್ದಾರೆ. "ಭಾರತದ ಆಡಳಿತ ಮತ್ತು ರಾಜಕೀಯ ನಿರ್ಧಾರಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರನ್ನು ವಿರೋಧಿಸುವುದು ನಮ್ಮ ದೇಶೀಯ ರಾಜಕೀಯ ಹಕ್ಕು. ಆದರೆ ವಿದೇಶದ 'ಗೋರಾ' (ಬಿಳಿಯ) ಉದ್ಯಮಿಯೊಬ್ಬ ನಮ್ಮ ದೇಶದ ಪ್ರಧಾನಿ ಹಾಗೂ ಆಡಳಿತ ವ್ಯವಸ್ಥೆಯನ್ನು ಹಗುರವಾಗಿ ಮಾತನಾಡುವುದನ್ನು ಸಹಿಸಲು ಸಾಧ್ಯವೇ ಇಲ್ಲ" ಎಂದು ಓವೈಸಿ ಆಕ್ರೋಶ ಹೊರಹಾಕಿದ್ದಾರೆ.

ಮಸ್ಕ್ ಹೇಳಿಕೆಯನ್ನು ಪ್ರಮುಖ ಅಸ್ತ್ರವಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿಲುವಿಗಿಂತ ಸಂಪೂರ್ಣ ಭಿನ್ನವಾದ, ರಾಷ್ಟ್ರೀಯತೆಯ ಸ್ಪಷ್ಟ ಗಡಿಯನ್ನು ಓವೈಸಿ ಇಲ್ಲಿ ಪ್ರದರ್ಶಿಸಿದ್ದಾರೆ.

ಏನಿದು ಮಸ್ಕ್ ಅವರ ವಿವಾದಾತ್ಮಕ ಹೇಳಿಕೆ?

ಇಲಾನ್ ಮಸ್ಕ್ ಒಡೆತನದ 'ಸ್ಟಾರ್‌ಲಿಂಕ್' (Starlink) ಉಪಗ್ರಹ ಆಧಾರಿತ ಇಂಟರ್‌ನೆಟ್ ಸಂಸ್ಥೆಗೆ ಭಾರತದಲ್ಲಿ ವಾಣಿಜ್ಯಿಕ ಕಾರ್ಯಾಚರಣೆ ನಡೆಸಲು ಅನುಮತಿ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಮಸ್ಕ್ ಇತ್ತೀಚೆಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, "ಭಾರತದಲ್ಲಿ ಪ್ರಭಾವಿ ಉದ್ಯಮಿಗಳು ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಸ್ಟಾರ್‌ಲಿಂಕ್ ಪ್ರವೇಶವನ್ನು ತಡೆಯುತ್ತಿದ್ದಾರೆ" ಎಂದು ಆಪಾದಿಸಿದ್ದ ಅವರು, "ಭಾರತದ ನಿಜವಾದ ಬಾಸ್ (Real Boss) ಮುಕೇಶ್ ಅಂಬಾನಿಯೇ? ಅಥವಾ ಪ್ರಧಾನಿ ಮುಕೇಶ್ ಅಂಬಾನಿಯೇ?" ಎಂದು 'ಎಕ್ಸ್' (ಟ್ವಿಟರ್)ನಲ್ಲಿ ಪ್ರಶ್ನಿಸಿ ಭಾರಿ ವಿವಾದ ಸೃಷ್ಟಿಸಿದ್ದರು.

ಮಸ್ಕ್ ಅವರ ಈ ಆರೋಪವನ್ನು ತಕ್ಷಣವೇ ತಳ್ಳಿಹಾಕಿದ್ದ ಭಾರತ ಸರ್ಕಾರ, ಭದ್ರತಾ ಪರಿಶೀಲನೆಗಳು ಪ್ರತಿಯೊಂದು ಸಾಟಲೈಟ್ ಇಂಟರ್ನೆಟ್ ಸಂಸ್ಥೆಗೂ (ಸ್ಟಾರ್‌ಲಿಂಕ್, ಜಿಯೋ ಸಾಟಲೈಟ್ ಹಾಗೂ ಭಾರ್ತಿ ಒನ್‌ವೆಬ್) ಒಂದೇ ಹಂತದಲ್ಲಿ ನಡೆಯುತ್ತಿವೆ. ಭದ್ರತಾ ಮತ್ತು ಸ್ಪೆಕ್ಟ್ರಮ್ ನಿಯಮಾವಳಿಗಳು ಪೂರ್ಣಗೊಳ್ಳದೆ ಯಾರಿಗೂ ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಬಿಳಿ ಚರ್ಮ ಕಂಡರೆ ಬಿಜೆಪಿಗೆ ಏಕೆ ಅಷ್ಟೊಂದು ಭಯ? ಓವೈಸಿ ಪ್ರಹಾರ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಹೈದರಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಓವೈಸಿ, ಬಿಜೆಪಿಯ ರಾಷ್ಟ್ರೀಯತೆಯನ್ನೇ ಪ್ರಶ್ನಿಸಿದರು.

"ನಾವು ನರೇಂದ್ರ ಮೋದಿಯವರ ವಿರುದ್ಧ ಸದಾ ಇದ್ದೆವು, ಮುಂದೆಯೂ ಇರುತ್ತೇವೆ. ಆದರೆ ಮಸ್ಕ್ ಎಂಬ ವ್ಯಕ್ತಿ ನಮ್ಮ ಭಾರತದ ಪ್ರಧಾನಿ ಹಾಗೂ ದೇಶದ ಆಡಳಿತ ವ್ಯವಸ್ಥೆಯ ಬಗ್ಗೆ ಈ ರೀತಿ ಬರೆಯಲು ಧೈರ್ಯ ಮಾಡಿದ್ದು ಹೇಗೆ? ಸದಾ ರಾಷ್ಟ್ರಭಕ್ತಿಯ ಜಪ ಮಾಡುವ ಬಿಜೆಪಿಗೆ ಮತ್ತು ಮೋದಿ ಸರ್ಕಾರಕ್ಕೆ ಈ 'ಗೋರಾಚಮ್ಡಿ' (ಬಿಳಿ ಚರ್ಮ) ಕಂಡರೆ ಅಷ್ಟೊಂದು ಭಯವೇಕೆ?" ಎಂದು ಓವೈಸಿ ನೇರವಾಗಿ ಪ್ರಶ್ನಿಸಿದರು.

"ನಮ್ಮ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಮಾರುಕಟ್ಟೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ನಮ್ಮ ದೇಶವೇ ನಿರ್ಧರಿಸುತ್ತದೆ ಹೊರತು, ಯಾವನೋ ಒಬ್ಬ ಬಿಳಿಯ ಬಂದು ನಮಗೆ ಆಡಳಿತದ ಪಾಠ ಹೇಳಿಕೊಡುವುದು ನಮಗೆ ಬೇಕಿಲ್ಲ. ವಿದೇಶಿ ಬಿಳಿಯನ ಹೊಟ್ಟೆ ತುಂಬಿಸಲು ನಮ್ಮ ದೇಶದ ಸಾರ್ವಜನಿಕರ ಹೊಟ್ಟೆ ಹೊರೆಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಮೋದಿಯವರು ತಮ್ಮ ರಾಷ್ಟ್ರೀಯತೆಯನ್ನು ಪ್ರದರ್ಶಿಸಿ ಮಸ್ಕ್‌ಗೆ ಸೂಕ್ತ ತಿರುಗೇಟು ನೀಡಬೇಕು" ಎಂದಿದ್ದಾರೆ.

ರಾಹುಲ್ ಗಾಂಧಿ ಹಾಗೂ ಓವೈಸಿ ನಿಲುವಿನಲ್ಲಿದ್ದ ವ್ಯತ್ಯಾಸವೇನು?:

ಇದೇ ವಿವಾದದ ಕುರಿತು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಂಪೂರ್ಣ ವಿಭಿನ್ನವಾಗಿ ಸ್ಪಂದಿಸಿದ್ದರು. ಮಸ್ಕ್ ಅವರ 'ಭಾರತದ ರಿಯಲ್ ಬಾಸ್ ಯಾರು?' ಎಂಬ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, "ವೆಲ್‌ಕಮ್ ಟು ಇಂಡಿಯಾ ಇಲಾನ್! ನೀವು ಇನ್ನೊಬ್ಬ ವ್ಯಕ್ತಿಯನ್ನು (ಗೌತಮ್ ಅದಾನಿ) ಭೇಟಿಯಾಗುವವರೆಗೆ ಕಾಯಿರಿ" ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಮಸ್ಕ್ ಕೂಡ "ಧನ್ಯವಾದಗಳು ರಾಹುಲ್, ಇದು ನಿಜಕ್ಕೂ ಕಳವಳಕಾರಿ" ಎಂದು ಮರುಉತ್ತರ ನೀಡಿದ್ದರು.

ರಾಹುಲ್ ಗಾಂಧಿ ಅವರು ಈ ವಿವಾದವನ್ನು ಕೇಂದ್ರ ಸರ್ಕಾರ ಮತ್ತು ಉದ್ಯಮಿಗಳ ನಡುವಿನ ಬಾಂಧವ್ಯವನ್ನು ಪ್ರಶ್ನಿಸುವ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡರೆ, ಓವೈಸಿ ಅವರು ದೇಶದ ಆಡಳಿತ ಸಾರ್ವಭೌಮತ್ವಕ್ಕೆ ಹೊರಗಿನವರಿಂದ ಧಕ್ಕೆಯಾಗಬಾರದು ಎಂಬ ರಾಷ್ಟ್ರೀಯ ನಿಲುವನ್ನು ತಳೆದಿದ್ದಾರೆ. ಪ್ರಧಾನಿ ಮೋದಿಯವರನ್ನು ದೇಶದ ಒಳಗಡೆ ರಾಜಕೀಯವಾಗಿ ಎಷ್ಟೇ ವಿರೋಧಿಸಿದರೂ, ಹೊರಗಿನ ಬಿಳಿಯ ಉದ್ಯಮಿಯೊಬ್ಬ ಭಾರತದ ವ್ಯವಸ್ಥೆಯನ್ನು ಹಗುರವಾಗಿ ಕಾಣುವುದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಓವೈಸಿ ರವಾನಿಸಿದ್ದಾರೆ.