ಐಸಿಸ್ ಉಗ್ರರಿಂದ ಸ್ಫೋಟಕ ಮಾಹಿತಿ ಬಯಲು, ಬೇಸ್ ಕ್ಯಾಂಪ್ ಸ್ಥಾಪಿಸಲು ಕರ್ನಾಟಕ, ಕೇರಳಕ್ಕೆ ಭೇಟಿ!
ದೆಹಲಿ ಪೊಲೀಸರು ಮೂವರು ಶಂಕಿತ ಐಸಿಸ್ ಉಗ್ರರ ಬಂಧಿಸಿದ್ದಾರೆ. ಇದೀಗ ಈ ಉಗ್ರರಿಂದ ಹಲವು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರರ ಬೇಸ್ ಕ್ಯಾಂಪ್ ಸ್ಥಾಪಿಸಲು ಕರ್ನಾಟಕ, ಕೇರಳಕ್ಕೆ ಭೇಟಿ ನೀಡಿರುವ ಮಾಹಿತಿ ಬಯಲಾಗಿದೆ.
ನವದೆಹಲಿ(ಅ.03) ಮೋಸ್ಟ್ ವಾಂಟೆಡ್ ಮೂವರು ಉಗ್ರರನ್ನು ದಿಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಹಲವು ಸ್ಫೋಟಕ ಮಾಹಿತಿ ಬಯಲಾಗಿದೆ. ಈ ಉಗ್ರರು ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರರ ಬೇಸ್ ಕ್ಯಾಂಪ್ ಸ್ಥಾಪಿಸಲು ಪ್ಲಾನ್ ಮಾಡಿದ್ದರು. ಇಷ್ಟೇ ಅಲ್ಲ ಗೋವಾ ಮೂಲಕ ಕರ್ನಾಟಕದ ಉಡುಪಿ, ಕೇರಳದ ಕಾಸರಗೋಡು ಕಣ್ಣೂರಿಗೆ ಭೇಟಿ ನೀಡಿದ ಸ್ಫೋಟಕ ಮಾಹಿತಿ ಬಯಲಾಗಿದೆ. ದೆಹಲಿ ವಿಶೇಷ ಪೊಲೀಸ್ ದಳ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಶಹನವಾಜ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಬಂಧಿಸಲಾಗಿದೆ.
ಈ ಮೂವರ ಪೈಕಿ ಶಹನವಾಜ್, ಮೊಹಮ್ಮದ್ ರಿಜ್ವಾನ್ ಕರ್ನಾಟಕ ಹಾಗೂ ಕೇರಳಕ್ಕೆ ಭೇಟಿ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪುಣೆಯಿಂದ ಗೋವಾಗೆ ತೆರಳಿ, ಅಲ್ಲಿಂದ ಕರ್ನಾಟಕದ ಉಡುಪಿಗೆ ಆಗಮಿಸಿದ್ದಾರೆ. ಬಳಿಕ ಕೇರಳದ ಕಾಸರಗೋಡಿಗೆ ತೆರಳಿ ಕಣ್ಣೂರು ಬಳಿಯ ಕಾಡಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಇವರಿಗೆ ಕೇರಳದಲ್ಲಿ ಕೆಲ ಶಂಕತಿರು ನೆರವು ನೀಡಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇವರೆಲ್ಲ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಮ್ಮ ನೆಲೆ ಸ್ಥಾಪಿಸಿ, ಬಳಿಕ ದೇಶದಲ್ಲಿ ಐಸಿಸ್ ಉಗ್ರರ ನೆಲೆ ವಿಸ್ತರಿಸಿ ಭಯೋತ್ಪಾದಕ ದಾಳಿ ನಡೆಸಲು ಹಾಗೂ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದ್ದರು.
ಪತ್ನಿ ಬಸಂತಿ ಪಟೇಲ್‌ನನ್ನು ಇಸ್ಲಾಂಗೆ ಮತಾಂತರ ಮಾಡಿದ್ದ ಬಂಧಿತ ಐಸಿಸ್ ಉಗ್ರ!
ಗೋವಾ, ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಕಾಡಿನಲ್ಲಿ ಅವಿತುಕೊಂಡು ಕಾರ್ಯಾಚರಣೆ ಆರಂಭಿಸಲು ಪ್ಲಾನ್ ರೆಡಿಯಾಗಿತ್ತು. ಬಂಧಿತ ಉಗ್ರ ಶಹನವಾಜ್ ರಾಜಕೀಯ ನಾಯಕರನ್ನು ಟಾರ್ಗೆಟ್ ಮಾಡಿದ್ದ. ಗುಜರಾತ್‌ನ ಗಾಂಧಿನಗರ ಹಾಗೂ ಮುಂಬೈ ಕೆಲ ರಾಜಕೀಯ ನಾಯಕರು ಈತನ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಇನ್ನು ದೆಹಲಿ, ರಾಜಸ್ಥಾನ ಹಾಗೂ ಉತ್ತರಖಂಡದಲ್ಲಿ ಪರೀಕ್ಷಾರ್ಥವಾಗಿ ಸ್ಪೋಟ ನಡೆಸಲಾಗಿತ್ತು. ಈ ಮೂವರಿಗೆ ಪಾಕಿಸ್ತಾನದ ಐಸಿಸ್ ಎಜೆಂಟ್ ನೆರವು ನೀಡಿದ್ದ. ದಕ್ಷಿಣ ಭಾರತದಲ್ಲಿ ಬೇಸ್ ಕ್ಯಾಂಪ್ ನಿರ್ಮಿಸಿ ಉಗ್ರರ ಮೂಲಕ ಕಾರ್ಯಾಚರಣೆಗೆ ಎಲ್ಲಾ ಪ್ಲಾನ್ ಸಿದ್ದವಾಗಿತ್ತು. ಇದಕ್ಕಾಗಿ ಆಫ್ಘಾನಿಸ್ತಾನಕ್ಕೆ ಪ್ರಯಾಣ ಬೆಳೆಸಲು ಈ ಮೂವರು ಸಜ್ಜಾಗಿದ್ದರು.
ಶಹನವಾಜ್, ಅಬ್ದುಲ್ಲಾ ಮತ್ತು ರಿಜ್ವಾನ್ ಅವರು ಐಸಿಸ್ ಸಂಬಂಧಿ ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಬ್ರೇನ್‌ವಾಶ್ ಆಗಿ ಭಯೋತ್ಪಾದಕರಾಗಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿರುವ ಐಸಿಸ್ ಮಾಡ್ಯೂಲ್‌ನೊಂದಿಗೆ ಇವರಿಬ್ಬರೂ ನಂಟು ಹೊಂದಿದ್ದರು. ಅವರು ದೇಶಾದ್ಯಂತ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರಚುರಪಡಿಸಲು ಸಂಚು ರೂಪಿಸಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.
ರಾಜ್ಯದ ಆ ಜಿಲ್ಲೆಗೂ ಕಾಲಿಟ್ಟಿದ್ದಾರಾ ಉಗ್ರರು ? ಐಸಿಸ್ ನಂಟು ಇರುವ ಶಂಕೆ !
ಮೂಲಗಳ ಪ್ರಕಾರ, ಅಬ್ದುಲ್ಲಾ ಪುಣೆಯಲ್ಲಿ ಡಯಾಪರ್ ಅಂಗಡಿಯನ್ನು ನಡೆಸುತ್ತಿದ್ದ. ಅದನ್ನು ಸ್ಫೋಟಕ ಸಾಧನಗಳನ್ನು ಜೋಡಿಸಲು ಬಳಸಲಾಗುತ್ತಿತ್ತು. ಆತ ಓಮನ್‌ಗೆ ಪರಾರಿಯಾಗಲು ಯತ್ನಿಸಬಹುದು. ಆತನಿಗಾಗಿ ಬಲೆ ಬೀಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.