ನೌಕರಿ ಆಕಾಂಕ್ಷಿಗಳಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತಮಿಳುನಾಡು ಸಚಿವ ಸೆಂಥಿಲ್‌ ಬಾಲಾಜಿ ಅವರನ್ನು ಬಂಧಿಸಿದ್ದು ಹಾಗೂ ತನ್ನ ವಶಕ್ಕೆ ತೆಗೆದುಕೊಂಡಿದ್ದು ಸಕ್ರಮವಾಗಿದೆ ಎಂದು ಮದ್ರಾಸ್‌ ಹೈಕೋರ್ಟ್ ತೀರ್ಪಿತ್ತಿದೆ. 

ಚೆನ್ನೈ: ನೌಕರಿ ಆಕಾಂಕ್ಷಿಗಳಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತಮಿಳುನಾಡು ಸಚಿವ ಸೆಂಥಿಲ್‌ ಬಾಲಾಜಿ ಅವರನ್ನು ಬಂಧಿಸಿದ್ದು ಹಾಗೂ ತನ್ನ ವಶಕ್ಕೆ ತೆಗೆದುಕೊಂಡಿದ್ದು ಸಕ್ರಮವಾಗಿದೆ ಎಂದು ಮದ್ರಾಸ್‌ ಹೈಕೋರ್ಟ್ ತೀರ್ಪಿತ್ತಿದೆ. ಬಂಧನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಿ.ವಿ. ಕಾರ್ತಿಕೇಯನ್‌,ಸೆಂಥಿಲ್‌ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧನ ಮಾಡಿರುವುದು ಸರಿಯಾಗಿದ್ದು, ನ್ಯಾಯ ಸಮ್ಮತವಾಗಿದೆ ಎಂದರು. ಇದಕ್ಕೂ ಮೊದಲು ವಿಭಾಗೀಯ ಪೀಠದ ದ್ವಿಸದಸ್ಯ ಪೀಠ ದ್ವಂದ್ವ ತೀರ್ಪು ನೀಡಿತ್ತು. ಕಳೆದ ತಿಂಗಳು ನೌಕರಿಗಾಗಿ ಹಣ ಪಡೆದಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಸೆಂಥಿಲ್‌ ಬಾಲಾಜಿ ಅವರನ್ನು ಬಂಧಿಸಿತ್ತು.

ಜೂನ್ 14 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿಯನ್ನು ಕಸ್ಟಡಿಗೆ ಪಡೆದಿದ್ದರು. ಇವರು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ ವಿದ್ಯುತ್, ನಿಷೇಧ ಮತ್ತು ಅಬಕಾರಿ ಸಚಿವರಾಗಿದ್ದರು. ಬಂಧನದ ಬೆನ್ನಲ್ಲೇ ಅಸ್ವಸ್ಥರಾದ ಸೆಂಥಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಸರ್ಕಾರದ ವಾಗ್ದಾಳಿ, ತಮಿಳುನಾಡು ರಾಜ್ಯಪಾಲರ ವಿವಾದಾತ್ಮಕ ಆದೇಶ ವಾಪಾಸ್‌!

ಪ್ರಕರಣದ ಹಿನ್ನೆಲೆ

2011-15ರಲ್ಲಿ ದಿವಂಗತ ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದಲ್ಲಿ ಸೆಂಥಿಲ್‌ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಆಗ ಸಾರಿಗೆ ನಿಗಮಗಳಲ್ಲಿ ಚಾಲಕರು ಮತ್ತು ಕಂಡಕ್ಟರ್‌ಗಳ ನೇಮಕ ಮಾಡುವುದಾಗಿ ವಿವಿಧ ವ್ಯಕ್ತಿಗಳಿಂದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿತ್ತು. ಬಾಲಾಜಿ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು ಮತ್ತು ನಂತರ ಅವರ ವಿರುದ್ಧ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿತ್ತು. ಹಾಗೂ, ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಉಳಿದಿತ್ತು. ಈ ಪ್ರಕರಣದ ತನಿಖೆ ನಡೆಸಲು ಸುಪ್ರೀ ಕೋರ್ಟ್ ಮೇ ತಿಂಗಳಲ್ಲಿ ಪೊಲೀಸರು ಮತ್ತು ಇಡಿಗೆ ಅನುಮತಿ ನೀಡಿತ್ತು.

ಬಂಧನಕ್ಕೆ ಒಳಪಟ್ಟ ಕೆಲವೇ ಗಂಟೆಗಳಲ್ಲಿ ತಮಿಳುನಾಡು ಸಚಿವನಿಗೆ ತುರ್ತು ಶಸ್ತ್ರಚಿಕಿತ್ಸೆ

ಸೆಂಥಿಲ್‌ನನ್ನು ಮಂತ್ರಿ ಮಂಡಲದಿಂದ ವಜಾಗೊಳಿಸಿದ್ದ ರಾಜ್ಯಪಾಲ

 ಜಾರಿ ನಿರ್ದೇಶನಾಲಯದಿಂದ ಅರೆಸ್ಟ್ ಆಗಿದ್ದ ಸೆಂಥಿಲ್ ಅವರನ್ನು ತಮಿಳುನಾಡು ರಾಜ್ಯಪಾಲ ಜೂನ್ 29 ರಂದು ಮಂತ್ರಿಮಂಡಲದಿಂದ ವಜಾಗೊಳಿಸಿದ್ದರು. ರಾಜ್ಯಪಾಲರ ಈ ಆದೇಶ ಬಳಿಕ ವಿವಾದಕ್ಕೆ ಕಾರಣವಾಗಿ ನಂತರ ರಾಜ್ಯಪಾಲರು ತಮ್ಮ ಆದೇಶವನ್ನು ವಾಪಸ್ ಪಡೆದಿದ್ದರು.