ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಿಳುನಾಡಿನ ಇಂಧನ ಸಚಿವ ವಿ.ಬಾಲಾಜಿ ಸೆಂತಿಲ್‌ರನ್ನು ಬುಧವಾರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಆದರೆ, ಇಡಿ ಬಂಧಿಸುವ ವೇಳೆಗೆ ಎದೆನೋವು ಎಂದು ಕಣ್ಣೀರಿಟ್ಟ ಸಚಿವನಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆದಷ್ಟು ಬೇಗ ಬೈಪಾಸ್‌ ಸರ್ಜರಿ ಕೂಡ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. 

ಚೆನ್ನೈ (ಜೂ.14): ಮಹತ್ವದ ಬೆಳವಣಿಗೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಿಳುನಾಡಿನ ಇಂಧನ ಹಾಗೂ ಅಬಕಾರಿ ಸಚಿವ ವಿ. ಬಾಲಾಜಿ ಸೆಂತಿಲ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಬಂಧನ ಮಾಡಿತ್ತು. ಅವರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಬಳಿಕ ಈ ಅಕ್ರಮ ಹಣ ವರ್ಗಾವಣೆಯ ಬಗ್ಗೆ ಪ್ರಶ್ನೆಯನ್ನೂ ಮಾಡಿತ್ತು. ಇದಕ್ಕೆ ಸೂಕ್ತ ಉತ್ತರ ಸಿಗದ ಹಿನ್ನಲೆಯಲ್ಲಿ ಕ್ಯಾಶ್‌ ಫಾರ್‌ ಜಾಬ್‌ ಸ್ಕ್ಯಾಮ್‌ನ ಪಿಎಂಎಲ್‌ಎ ಕೇಸ್‌ನಲ್ಲಿ ಸೆಂತಿಲ್‌ರನ್ನು ಬಂಧನ ಮಾಡಿತ್ತು. ಸಚಿವ ತಮ್ಮ ಮನೆಯಲ್ಲಿ ಇದ್ದ ಸಮಯದಲ್ಲಿಯೇ ಸರಿಯಾಗಿ 24 ಗಂಟೆಗಳ ಹಿಂದೆ ಇಡಿ ಮನೆಯ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿತ್ತು. ಅಂದಾಜು ತಡರಾತ್ರಿ 1.30ರ ಸುಮಾರಿಗೆ ಬಂಧನ ಮಾಡುತ್ತಿರುವ ಬಗ್ಗೆ ಸಚಿವನಿಗೆ ಇಡಿ ಮಾಹಿತಿ ನೀಡಿತ್ತು. ಆದರೆ, ಈ ಸುದ್ದಿ ಸಿಕ್ಕ ಬೆನ್ನಲ್ಲಿಯೇ ಕಾರ್‌ನಲ್ಲಿಯೇ ಎದೆನೋವು ಎಂದು ಸೆಂತಿಲ್‌ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಚೆನ್ನೈನ ಓಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು.ಡಿಎಂಕೆ ನಾಯಕನನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆಯೇ ಆಸ್ಪತ್ರೆಯ ಹೊರಗೆ ನಾಟಿಕೀಯ ಘಟನೆಗಳು ನಡೆದವು. ಇಡಿ ಕ್ರಮವನ್ನು ವಿರೋಧಿಸಿ ಅವರ ಬೆಂಬಲಿಗರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರೆ, ಕಾರ್‌ನ ಹಿಂಬದಿಯ ಸೀಟ್‌ನಲ್ಲಿದ್ದ ಸೆಂತಿಲ್‌ ಬಾಲಾಜಿ, ಎದೆನೋವಿನಿಂದ ಅಳುತ್ತಿರುವುದು ಕಂಡುಬಂದಿತ್ತು.

ಡಿಎಂಕೆ ನಾಯಕ ಆಂಬ್ಯುಲೆನ್ಸ್‌ನಲ್ಲಿ ಎದೆ ಹಿಡಿದುಕೊಂಡು ಅಳುತ್ತಿದ್ದರೆ, ಅವರ ಬೆಂಬಲಿಗರು ಹೊರಗೆ ಇಡಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ವೈದ್ಯರು ಅವರ ಇಸಿಜಿಯಲ್ಲಿ ವ್ಯತ್ಯಾಸಗಳನ್ನು ಕಂಡಿದ್ದರಿಂದ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಶಿಫ್ಟ್‌ ಮಾಡಿದ್ದರು.

ಬಂಧನಕ್ಕೆ ಒಳಪಟ್ಟ ಬಳಿಕ ತಮಿಳುನಾಡು ಸಚಿವರಿಗೆ ಬೈಪಾಸ್‌ ಸರ್ಜರಿಗೆ ಒಳಪಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೃದಯದಲ್ಲಿ ಮೂರು ಬ್ಲಾಕ್‌ಗಳು ಕಂಡುಬಂದಿದ್ದು, ಅದಕ್ಕಾಗಿ ತುರ್ತಾಗಿ ಒಂದು ಶಸ್ತ್ರಚಿಕಿತ್ಸೆ ಅಗತ್ಯವಿದ್ದು ಬಳಿಕ ಬೈಪಾಸ್‌ ಸರ್ಜರಿಗೂ ಒಳಗಾಗಬೇಕು ಎಂದು ಸಲಹೆ ನೀಡಿದ್ದಾರೆ. 'ಸಚಿವ ಸೆಂತಿಲ್‌ ಬಾಲಾಜಿಗೆ ಇಂದು ಕರೋನರಿ ಆಂಜಿಯೋಗ್ರಾಮ್‌ಗೆ ಒಳಗಾಗಿದ್ದಾರೆ. ಆದಷ್ಟು ಬೇಗ ಬೈಪಾಸ್‌ ಸರ್ಜರಿಗೆ ಒಳಗಾಗಬೇಕು ಎಂದು ಸಲಹೆಯನ್ನೂ ನೀಡಲಾಗಿದೆ' ಎಂದು ತಮಿಳುನಾಡು ಸರ್ಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚೆನ್ನೈ ತನ್ನ ವೈದ್ಯಕೀಯ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ.

ಚೆನ್ನೈನ ಓಮಂದೂರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದ್ದು, ಸೆಂತಿಲ್‌ ಬಾಲಾಜಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆತರಲಾಗಿತ್ತು. ಬಂಧನದ ನಂತರ ಬಾಲಾಜಿ ಅವರನ್ನು ಭೇಟಿ ಮಾಡಲು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ಆಗಮಿಸಿದ್ದರು. ಡಿಎಂಕೆ ಮುಖ್ಯಸ್ಥರು ತನಿಖಾ ಸಂಸ್ಥೆಯೊಂದಿಗೆ ಸಹಕರಿಸಿದರೂ ಬಾಲಾಜಿ ಅವರ ಮೇಲೆ ಒತ್ತಡ ಹೇರಿದ್ದರಿಂದ ಎದೆನೋವಿಗೆ ಕಾರಣವಾಗಿದೆ. ಆಸ್ಪತ್ರೆಯ ಹೊರಗೆ ಹಾಜರಿದ್ದ ಡಿಎಂಕೆ ಕಾರ್ಯಕರ್ತರು ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ಘೋಷಣೆ ಕೂಗಿದರು.

ತಮಿಳುನಾಡು ಸರ್ಕಾರಕ್ಕೆ ಶಾಕ್‌: ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಸಚಿವ ವಿ. ಸೆಂಥಿಲ್ ಬಾಲಾಜಿ ಬಂಧಿಸಿದ ಇಡಿ

ಕಾನೂನುಬದ್ಧವಾಗಿ ಹೋರಾಡುತ್ತೇನೆ: ಸೆಂಥಿಲ್ ಬಾಲಾಜಿ ಅವರನ್ನು ಇಡಿ ಬಂಧಿಸಿ ಓಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಕರೆತಂದಿದೆ. ಆಸ್ಪತ್ರೆಗೆ ದಾಖಲಿಸಿದಾಗ ಅವರಿಗೆ ಪ್ರಜ್ಞೆ ಇರಲಿಲ್ಲ ಎಂದು ತೋರುತ್ತದೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಬಂಧನವಾಗಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ" ಎಂದು ಸೆಂಥಿಲ್ ಬಾಲಾಜಿ ವಕೀಲರು ಮತ್ತು ಡಿಎಂಕೆ ನಾಯಕ ಎನ್ ಆರ್ ಎಲಾಂಗೋ ತಿಳಿಸಿದ್ದಾರೆ. ತಮಿಳುನಾಡು ಸಚಿವರಾದ ಐ.ಪೆರಿಯಸಾಮಿ, ಪೊನ್ಮುಡಿ, ಅನ್ಬಿಲ್ ಮಹೇಶ್ ಪೊಯ್ಯಮೊಳಿ ಮತ್ತು ಆರ್ ಗಾಂಧಿ ಅವರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಭೇಟಿ ಮಾಡಿದರು. ಸೆಂಥಿಲ್ ಬಾಲಾಜಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ನಾವು ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆದರಿಕೆ ರಾಜಕೀಯಕ್ಕೆ ನಾವು ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಮತ್ತೆ ಸಿಡಿದೆದ್ದ ತಮಿಳ್ನಾಡು ಸಿಎಂ