Asianet Suvarna News Asianet Suvarna News

ಈ ಬಾರಿ ಬೆಂಗಳೂರಿನಲ್ಲಿ ಭಾರತೀಯ ಸೇನಾ ಪಥಸಂಚಲನ ದಿನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪಗೆ ಗೌರವ!

ಜನವರಿ 15 ರಂದು ಪ್ರತಿ ವರ್ಷ ಭಾರತೀಯ ಸೇನೆಯ ಪಥಸಂಚಲನ ದಿನ ಆಚರಿಸಲಾಗುತ್ತದೆ. ಈ ಬಾರಿ ಪ್ರತಿಷ್ಠಿತ ಪಥಸಂಚಲನಕ್ಕೆ ಬೆಂಗಳೂರು ಆತಿಥ್ಯ ವಹಿಸುತ್ತಿದೆ. ಈ ಮೂಲಕ ಕರ್ನಾಟಕದ ಮೂಲದ ಫೀಲ್ಡ್ ಮಾರ್ಷಲ್. ಕೆ ,ಎಂ. ಕಾರ್ಯಪ್ಪಗೆ ತಮ್ಮದೇ ರಾಜ್ಯದಲ್ಲಿ ಗೌರವ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ.
 

Army Day parade to be organized at Bengaluru on 15th January 2023 tribute to Field Marshal KM Cariappa ckm
Author
First Published Dec 19, 2022, 9:00 PM IST

ಬೆಂಗಳೂರು(ಡಿ.19):  ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ಪಥಸಂಚಲನ ದಿನ ಆಚರಿಸಲಾಗುತ್ತದೆ. 1949ರ ಜನವರಿ 15ರಂದು ಬ್ರಿಟಿಷ್ ಉತ್ತರಾಧಿಕಾರಿಯನ್ನು ಬದಲಾಯಿಸಿ ಮೊದಲ ಬಾರಿಗೆ ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಅಧಿಕೃತವಾಗಿ ಅಧಿಕಾರವಹಿಸಿಕೊಂಡ ದಿನದ ಸಂಕೇತವಾಗಿದೆ. ಇದೀಗ ಈ ಪಥಸಂಚಲನಕ್ಕೆ ಬೆಂಗಳೂರು ಆತಿಥ್ಯ ವಹಿಸುತ್ತಿದೆ. ಇದೇ ಮೊದಲ ಬಾರಿಗೆ ದೆಹಲಿಯಿಂದ ಹೊರಗಡೆ ಪಥಸಂಚಲನ ಆಯೋಜಿಸಲಾಗುತ್ತಿದೆ. ಈ ಮೂಲಕ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆದ ಕರ್ನಾಟಕ ಮೂಲದ  ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಗೆ ಅವರ ರಾಜ್ಯದಲ್ಲೇ ಗೌರವ ನೀಡಲು ರಕ್ಷಣಾ ಇಲಾಖೆ ಮುಂದಾಗಿದೆ. 

ಬೆಂಗಳೂರಿನಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ದಕ್ಷಿಣ ಭಾರತದ ಜನರ ಶೌರ್ಯ, ತ್ಯಾಗ ಮತ್ತು ರಾಷ್ಟ್ರಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸಿ ಗೌರವಿಸಿದೆ.  ಕರ್ನಾಟಕ ಮೂಲದ ಫೀಲ್ಡ್ ಮಾರ್ಷಲ್. ಕೆ ,ಎಂ. ಕಾರ್ಯಪ್ಪ ಅವರಿಗೆ ಸಲ್ಲಿಸುವ ಗೌರವದ ದ್ಯೋತಕವಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.   

 

ಚೀನಾದಿಂದ ದಾಳಿ, ಭಾರತೀಯ ಯೋಧರ ಸಾಹಸ ಕಡೆಗಣಿಸಿದ ರಾಹುಲ್ ವಿರುದ್ದ ಆಕ್ರೋಶ!

2023ರ ಜನವರಿ 15 ರಂದು ಸೇನಾ ಸಿಬ್ಬಂದಿಯ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ ಅವರು ವೀರಯೋಧರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.  ಪಥಸಂಚಲನ  ಭಾರತೀಯ ಸೇನೆಯ ಸೇನಾ ಪರಾಕ್ರಮವನ್ನು ಎತ್ತಿ ತೋರಿಸುವುದೇ ಅಲ್ಲದೆ, ಭವಿಷ್ಯ ಸಿದ್ಧ, ತಂತ್ರಜ್ಞಾನ ಆಧಾರಿತ, ಮಾರಕ ಮತ್ತು ಚುರುಕುಬುದ್ಧಿಯ ಪಡೆಯನ್ನಾಗಿ ಪರಿವರ್ತಿಸಲು ಭಾರತೀಯ ಸೇನೆಯು ಕೈಗೊಂಡಿರುವ ಪ್ರಯತ್ನಗಳನ್ನು ಪ್ರದರ್ಶಿಸುತ್ತದೆ. ನಾನಾ ತುಕಡಿಗಳ ಪಥಸಂಚಲನದ ಜತೆಗೆ ಮಿಲಿಟರಿ ಬ್ಯಾಂಡ್‌ಗಳು, ಮೋಟಾರು ಸೈಕಲ್ ಸಾಹಸ ಪ್ರದರ್ಶನ, ಪ್ಯಾರಾ ಮೋಟಾರ್ಸ್ ಮತ್ತು ಸಮರ ಮುಕ್ತ ಪತನದಂತಹ ಸಾಹಸ ಚಟುವಟಿಕೆಗಳನ್ನು ರಾಷ್ಟ್ರದ ಯುವ ಪೀಳಿಗೆಗೆ ಸ್ಫೂರ್ತಿ ತುಂಬಲು  ಆಯೋಜಿಸಲಾಗುತ್ತದೆ. ಸೇನಾ ಸಿಬ್ಬಂದಿ ಮತ್ತು ಘಟಕಗಳ ಶೌರ್ಯ ಮತ್ತು ಅರ್ಹ ಸೇವೆಯನ್ನು ಗುರುತಿಸಿ ಸೇನಾ ಮುಖ್ಯಸ್ಥರಿಂದ ಹಲವಾರು ಶೌರ್ಯ ಪ್ರಶಸ್ತಿಗಳು ಮತ್ತು ಘಟಕಗಳಿಗೆ ಶ್ಲಾಘನಪತ್ರಗಳನ್ನು ಸಹ ನೀಡಲಾಗುತ್ತದೆ. ಸೇನಾ ದಿನಾಚರಣೆ 2023 ರ ಪೂರ್ವಭಾವಿಯಾಗಿ, ದಕ್ಷಿಣ ಕಮಾಂಡ್ ದೀಕ್ಷಾದಾನ ಸಮಾರಂಭವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. 2023ರ ಜನವರಿ 13 ರಂದು, ಸದರನ್ ಕಮಾಂಡ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಸೇನಾ ಸಿಬ್ಬಂದಿಗೆ ವಿಶಿಷ್ಟ ಸೇವಾ ಪ್ರಶಸ್ತಿಗಳನ್ನು ನೀಡಲಿದ್ದಾರೆ.

ರಾಷ್ಟ್ರ ನಿರ್ಮಾಣಕ್ಕೆ ಭಾರತೀಯ ಸೇನೆಯ ಬದ್ಧತೆಯನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಸರಣಿಯನ್ನು ದಕ್ಷಿಣ ಕಮಾಂಡ್‌ನ ಸೇನಾ ಘಟಕಗಳು ಮುಂದಿನ ಒಂದು ತಿಂಗಳ ಕಾಲ ಸಮಾಜದ ಎಲ್ಲಾ ವರ್ಗಗಳ ನಾಗರಿಕರ ಸಮಗ್ರ ಪಾಲ್ಗೊಳ್ಳುವಿಕೆಯೊಂದಿಗೆ ಆಯೋಜಿಸಲಿದೆ. 2022ರ ಡಿಸೆಂಬರ್ 17ರಂದು ವಿಜಯ ದಿನದ ಸ್ಮರಣಾರ್ಥ,  "ದಕ್ಷಿಣ ಸ್ಟಾರ್ ವಿಜಯದ ಓಟ - 2022" (ಧೇಯ - ಸೈನಿಕರಿಗಾಗಿ ಓಟ - ಸೈನಿಕರೊಂದಿಗೆ ಓಟ) ಆಯೋಜಿಸಲಾಗಿತ್ತು, ಇದರಲ್ಲಿ ದಕ್ಷಿಣ ಕಮಾಂಡ್ ವ್ಯಾಪ್ತಿಯ 18 ಕೇಂದ್ರಗಳಲ್ಲಿ ಸುಮಾರು 50,000 ಮಂದಿ ಭಾಗವಹಿಸಿದ್ದರು (ಜೈಸಲ್ಮೇರ್, ಅಹಮದಾಬಾದ್, ಜೋದ್‌ಪುರ್, ಭುಜ್ & ಅಲ್ವಾರ್, ಭೋಪಾಲ್, ಸಿಕಂದ್ರಾಬಾದ್, ಝಾನ್ಸಿ, ಗ್ವಾಲಿಯರ್, ಚೆನ್ನೈ, ಬೆಂಗಳೂರು, ಬೆಳಗಾವಿ, ವೆಲ್ಲಿಂಗ್ಟನ್ (ಟಿಎನ್), ಪುಣೆ, ನಾಸಿಕ್, ನಾಗ್ಪುರ, ಅಹಮದಾಬಾದ್ ಮತ್ತು ಮುಂಬೈ) ಗಳಲ್ಲಿ ಏಕಕಾಲದಲ್ಲಿ ಹಸಿರು ನಿಶಾನೆ ತೋರಲಾಗಿತ್ತು.

 

ಬೈಕ್ ಮೇಲೆ ಸಾಹಸ: ಭಾರತೀಯ ಸೇನೆ 3 ವಿಶ್ವ ದಾಖಲೆ!

ಮುಂದಿನ ಒಂದು ತಿಂಗಳಲ್ಲಿ, ಭಾರತೀಯ ಸೇನೆಯು ಶಾಲಾ/ಕಾಲೇಜು ವಿದ್ಯಾರ್ಥಿಗಳು, ದೂರದ ಗ್ರಾಮಗಳು ಮತ್ತು ಸಮಾಜದ ಎಲ್ಲಾ ಸ್ತರಗಳ ಜನರೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಗರಿಕರ ಜತೆಗಿನ ಬಾಂಧವ್ಯವನ್ನು ವೃದ್ಧಿಸಲು ವ್ಯಾಪಕ ಪ್ರಚಾರ ಅಭಿಯಾನವನ್ನು ಆಯೋಜಿಸಿದೆ.

ಆನಂತರ, ಕೆಳಗಿನ ವಿವರಗಳಂತೆ ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜದೊಂದಿಗೆ ಸಮನ್ವಯದಲ್ಲಿ ಭಾರತೀಯ ಸೇನೆಯ ರಾಷ್ಟ್ರದ ಬದ್ಧತೆಯನ್ನು ಪ್ರತಿಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ:-

24 ಡಿಸೆಂಬರ್ 2022- ರಕ್ತದಾನ ಶಿಬಿರ(ಧೇಯ: ರಕ್ತದಾನ ಮಾಡಿ - ಜೀವ ಉಳಿಸಿ) 
30 ಡಿಸೆಂಬರ್ 2022: ಭಾರತೀಯ ಸೇನೆಯಿಂದ 75 ದೂರದ /ಗಡಿ /  ಅಭಿವೃದ್ಧಿಯಲ್ಲಿ ಹಿಂದುಳಿದ ಹಳ್ಳಿಗಳಲ್ಲಿ (ಧ್ಯೇಯ : ಗ್ರಾಮ ಸೇವೆ- ರಾಷ್ಟ್ರ ಸೇವೆ) 
೦7 ಜನವರಿ 2023 : ‘ವಿದ್ಯಾಂಜಲಿ’ ಯೋಜನೆ 
10 ಜನವರಿ 2023 : ಜಲಮೂಲಗಳ ಪುನರುಜ್ಜೀವನ 
14 ಜನವರಿ 2023 : ದಕ್ಷಿಣ ಕಮಾಂಡ್ ಪ್ರದೇಶದಾದ್ಯಂತ ಹಸಿರು ಭಾರತಕ್ಕಾಗಿ 75,000 ಸಸಿಗಳನ್ನು ನೆಡುವುದು.

ಸೇನಾ ದಿನಾಚರಣೆಯ ವಾರದಲ್ಲಿ (2023ರ ಜನವರಿ 09-15ರವರೆಗೆ), ಶಸ್ತ್ರಾಸ್ತ್ರಗಳು ಮತ್ತು ಸಾಧನಗಳ ಪ್ರದರ್ಶನ, ಬ್ಯಾಂಡ್ ಪ್ರದರ್ಶನಗಳು, ರಸಪ್ರಶ್ನೆ ಸ್ಪರ್ಧೆಗಳು, ಚಿತ್ರಕಲೆ ಮತ್ತು ಪ್ರಬಂಧ ಬರೆಯುವ ಸ್ಪರ್ಧೆಗಳು, ಸೈಕ್ಲಥಾನ್‌ಗಳು, ಶೌರ್ಯ ಪ್ರಶಸ್ತಿ ಪುರಸ್ಕೃತರಿಂದ ಉತ್ತೇಜನಕಾರಿ ಭಾಷಣಗಳು, ಪ್ರಸಿದ್ಧ ಯುದ್ಧಗಳ ಮರುಸೃಷ್ಟಿ ಪ್ರದರ್‍ಶನ, ಯುದ್ಧ ಸ್ಮಾರಕ/ಯುದ್ಧ ವಸ್ತು ಸಂಗ್ರಹಾಲಯಗಳಿಗೆ ಭೇಟಿ ಮತ್ತು "ಏಕ್ ಭಾರತ್ ಸರ್ವಶ್ರೇಷ್ಠ ಭಾರತ’  ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.

ಸೇನಾ ದಿನದ ಪಥಸಂಚಲನದ ಅಂಗವಾಗಿ ನಡೆಯಲಿರುವ ನಾನಾ ಕಾರ್ಯಕ್ರಮಗಳಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರು ಸಕ್ರಿಯವಾಗಿ ಭಾಗವಹಿಸುವಂತೆ ಭಾರತೀಯ ಸೇನೆಯು ಕರೆ ನೀಡುತ್ತದೆ.
 

Follow Us:
Download App:
  • android
  • ios