ಆಪರೇಷನ್ ಸಿಂಧೂರ್ ಸಮಯದಲ್ಲಿ, ಬಿಎಸ್‌ಎಫ್‌ ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ತಮ್ಮ ಪಡೆಗಳನ್ನು ಮುನ್ನಡೆಸಿ ಶೂನ್ಯ ರೇಖೆಯಾದ್ಯಂತ ಮೂರು ಫಾರ್ವರ್ಡ್‌ ಶತ್ರು ಪೋಸ್ಟ್‌ಗಳನ್ನು ಧ್ವಂಸ ಮಾಡಿದ್ದರು.

ನವದೆಹಲಿ (ಮೇ.31): ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ಅವರಿಗೆ ಪ್ರತಿಷ್ಠಿತ ಪ್ರಶಂಸಾ ಡಿಸ್ಕ್ ಅನ್ನು ಪ್ರದಾನ ಮಾಡಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಮಿಲಿಟರಿ ನಿಖರ ದಾಳಿಯಾದ ಆಪರೇಷನ್ ಸಿಂಧೂರ್ ಸಮಯದಲ್ಲಿ ಅವರ ಅಸಾಧಾರಣ ಧೈರ್ಯ ಮತ್ತು ಕಾರ್ಯಾಚರಣೆಯ ನಾಯಕತ್ವಕ್ಕಾಗಿ ಅವರಿಗೆ ಪ್ರಶಸ್ತಿ ನೀಡಲಾಯಿತು.

ಯಾರೀಕೆ ಬಿಎಸ್‌ಎಫ್‌ ಅಧಿಕಾರಿ ನೇಹಾ ಭಂಡಾರಿ?

ಉತ್ತರಾಖಂಡದ ಮೂಲದ ಅಧಿಕಾರಿ ನೇಹಾ ಭಂಡಾರಿ, ತಮ್ಮ ಕುಟುಂಬದಲ್ಲಿ ಮೂರನೇ ತಲೆಮಾರಿನ ಸೇನಾ ಅಧಿಕಾರಿ. ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿರುವ ಕಾರ್ಯತಂತ್ರದ ಸೂಕ್ಷ್ಮ ಪ್ರದೇಶ ಪರ್ಗ್ವಾಲ್ ವಲಯದಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಕಂಪನಿಗೆ ಮುಖ್ಯಸ್ಥರಾಗಿ ಸೇವೆಯಲ್ಲಿದ್ದಾರೆ. ಇದು ಅಂತರರಾಷ್ಟ್ರೀಯ ಗಡಿಯಿಂದ ಕೇವಲ ಮೀಟರ್ ದೂರದಲ್ಲಿದೆ.

ಅವರ ನೇತೃತ್ವದಲ್ಲಿ, ಆಪರೇಷನ್ ಸಿಂಧೂರ್ ಸಮಯದಲ್ಲಿ, ಬಿಎಸ್ಎಫ್ ಘಟಕಗಳು ಮೂರು ಆಕ್ರಮಣಕಾರಿ ಪಾಕಿಸ್ತಾನಿ ಪೋಸ್ಟ್‌ಗಳನ್ನು ಧ್ವಂಸ ಮಾಡಿದ್ದವು. ಶತ್ರುಗಳ ರೇಖೆಗಳಿಗೆ ಅಪಾಯಕಾರಿಯಾಗಿ ಹತ್ತಿರವಿರುವ ಸ್ಥಾನದಿಂದ ಕಾರ್ಯನಿರ್ವಹಿಸುತ್ತಿದ್ದರೂ ನೈಜ ಸಮಯದಲ್ಲಿ ಆಗಿದ್ದ ಎಲ್ಲಾ ಬೆದರಿಕೆಯನ್ನು ಹೊಡೆದು ಹಾಕಿದ್ದವು. ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ಶತ್ರು ಪಡೆಗಳಿಗೆ ಸೂಕ್ತ ಉತ್ತರ ನೀಡುವ ಮೂಲಕ ಶೂನ್ಯ ರೇಖೆಯಾದ್ಯಂತ (ಶತ್ರು ಪ್ರದೇಶಕ್ಕೆ ಹತ್ತಿರವಿರುವ ಪ್ರದೇಶ) ಮೂರು ಮುಂಚೂಣಿಯ ಪೋಸ್ಟ್‌ಗಳನ್ನು ಧ್ವಂಸ ಮಾಡಲು ಕಾರಣರಾದರು.

ನೇಹಾ ಅವರನ್ನು ಹೊರತುಪಡಿಸಿ, ಆರು ಮಹಿಳಾ ಕಾನ್‌ಸ್ಟೆಬಲ್‌ಗಳು ಮುಂಚೂಣಿಯ ಗಡಿ ಪೋಸ್ಟ್‌ನಲ್ಲಿ ಗನ್ ಪೊಸಿಷನ್ ಹೊಂದಿದ್ದರು, ಸಾಂಬಾ-ಆರ್‌ಎಸ್ ಪುರ-ಅಖ್ನೂರ್ ಸೆಕ್ಟರ್‌ಗಳಲ್ಲಿ ಐಬಿಯಾದ್ಯಂತ ಶತ್ರು ಸ್ಥಾನಗಳ ಮೇಲೆ ಅವರು ಹಾರಿಸಿದ ಪ್ರತಿ ಗುಂಡೇಟಿನೊಂದಿಗೆ ಅವರ ಜೋಶ್‌ ಕೂಡ ಏರಿತ್ತು.

"ನನ್ನ ಸೈನಿಕರೊಂದಿಗೆ ಅಂತರರಾಷ್ಟ್ರೀಯ ಗಡಿಯಲ್ಲಿ ಒಂದು ಪೋಸ್ಟ್ ಅನ್ನು ನಿರ್ವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಇದು ಅಖ್ನೂರ್-ಪರ್ಗ್ವಾಲ್ ಪ್ರದೇಶದ ಪಾಕಿಸ್ತಾನಿ ಪೋಸ್ಟ್‌ನಿಂದ ಸುಮಾರು 150 ಮೀಟರ್ ದೂರದಲ್ಲಿದೆ" ಎಂದು ನೇಹಾ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

"ಫಾರ್ವರ್ಡ್‌ ಪೋಸ್ಟ್‌ನಲ್ಲಿ ಸೇವೆ ಸಲ್ಲಿಸುವುದು ಮತ್ತು ನನ್ನ ಪೋಸ್ಟ್‌ನಿಂದ ಶತ್ರು ಪೋಸ್ಟ್‌ಗಳಿಗೆ ಲಭ್ಯವಿರುವ ಎಲ್ಲಾ ಆಯುಧಗಳೊಂದಿಗೆ ಸೂಕ್ತ ಪ್ರತ್ಯುತ್ತರ ನೀಡುವುದು ನನಗೆ ಗೌರವ ಎನಿಸಿದೆ" ಎಂದು ಅವರು ಹೇಳಿದರು. ನೇಹಾಳ ಅಜ್ಜ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರ ಮತ್ತು ಆಕೆಯ ಪೋಷಕರು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಯಿಂದ ಬಂದವರಾಗಿದ್ದು, ಅವರು ಕುಟುಂಬದಲ್ಲಿ ಮೂರನೇ ತಲೆಮಾರಿನ ಅಧಿಕಾರಿಯಾಗಿದ್ದಾರೆ.

ಆಪರೇಷನ್ ಸಿಂಧೂರ್ ಸಮಯದಲ್ಲಿ ಅಧಿಕಾರಿ ನೇಹಾ ಭಂಡಾರಿ ಪಾತ್ರ

ಆಪರೇಷನ್ ಸಿಂಧೂರ್ ಸಮಯದಲ್ಲಿ ತಮ್ಮ ಪೋಸ್ಟ್‌ ಮೇಲೆ ಅಪ್ರಚೋದಿತ ಗುಂಡು ಹಾರಿಸಿದ್ದಕ್ಕೆ ಪ್ರತಿಯಾಗಿ ಮೂರು ಪೋಸ್ಟ್‌ಗಳನ್ನು ಹೇಗೆ ಮೌನಗೊಳಿಸಿದಳು ಎನ್ನುವ ವಿವರ ನೀಡಿದ್ದಾರೆ. "ನನ್ನ ಪ್ರದೇಶದಲ್ಲಿ ನನ್ನ ಮೂರು ಶುತ್ರು ಪೋಸ್ಟ್‌ಗಳು ಇದ್ದವು. ನಾವು ಮೂರು ಸ್ಥಳಗಳಲ್ಲಿಯೂ ಪಾಕ್‌ ಅಧಿಕಾರಿಗಳನ್ನು ಹಿಡಿದಿಟ್ಟೆವು.. ನಮ್ಮಲ್ಲಿರುವ ಎಲ್ಲಾ ಆಯುಧಗಳಿಂದ ನಾವು ಅವರನ್ನು ಹೊಡೆದಿದ್ದೇವೆ. ಅವರು ತಮ್ಮ ನೆಲೆಗಳಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದರು' ಎಂದಿದ್ದಾರೆ.

ಅವರು ಮತ್ತೆ ದಾಳಿ ಮಾಡದೇ ಇರಲಿ ಪೋಸ್ಟ್‌ಗಳನ್ನು ನಾಶಪಡಿಸಲಾಯಿತು ಎಂದು ಅವರು ಹೇಳಿದರು, ಪ್ರತೀಕಾರದ ಸಮಯದಲ್ಲಿ ಅವರ ಪಡೆಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದವು ಎಂದಿದ್ದಾರೆ.ಹುದ್ದೆಯನ್ನು ನಿರ್ವಹಿಸುತ್ತಿದ್ದ ಸೈನಿಕರಲ್ಲಿನ ಉನ್ನತ ನೈತಿಕತೆಯನ್ನು ವ್ಯಕ್ತಪಡಿಸುತ್ತಾ, 'ನಮ್ಮ ಜೋಶ್‌ ಸಾಕಷ್ಟು ಹೆಚ್ಚಾಗಿತ್ತು. ನಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ದಾಳಿ ಮಾಡಿದರು. ಏಕೆಂದರೆ ನಾವು ಮಾಡಿದ್ದೆಲ್ಲವೂ ದೇಶ ಮತ್ತು ಅದರ ಗೌರವಕ್ಕಾಗಿ' ಎಂದಿದ್ದಾರೆ.