ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಡಿಎಂಕೆ ನಂಟಿನ ಆರೋಪಿ ಜ್ಞಾನಶೇಖರನ್‌ಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಣ್ಣಾ ವಿವಿ ಲೈಂಗಿಕ ಕಿರುಕುಳ : ಡಿಎಂಕೆ ನಂಟಿನ ಆರೋಪಿಗೆ 30 ವರ್ಷ ಜೈಲು

ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ, ಆಡಳಿತಾರೂಢ ಡಿಎಂಕೆಯೊಂದಿಗೆ ನಂಟು ಹೊಂದಿರುವ ಅಪರಾಧಿ ಜ್ಞಾನಶೇಖರನ್‌ಗೆ ಇಲ್ಲಿನ ಮಹಿಳಾ ನ್ಯಾಯಾಲಯ ಕ್ಷಮಾದಾನ ರಹಿತ ಕನಿಷ್ಠ 30 ವರ್ಷ ಸೆರೆವಾಸದ ಜೀವಾವಧಿ ಶಿಕ್ಷೆ ವಿಧಿಸಿದೆ.

ಜ್ಞಾನಶೇಖರನ್‌ ವಿರುದ್ಧ ದಾಖಲಾಗಿದ್ದ 11 ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾ। ಎಂ. ರಾಜಲಕ್ಷ್ಮಿ, ಮೇ 28ರಂದು ಆತ ದೋಷಿಯೆಂದು ತೀರ್ಪು ಹೊರಡಿಸಿದ್ದರು ಹಾಗೂ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಇದೇ ವೇಳೆ, ‘ಮನೆಯಲ್ಲಿ ತಾನೊಬ್ಬನೇ ದುಡಿಯುವ ವ್ಯಕ್ತಿ ಎಂದು ಆರೋಪಿ ಶಿಕ್ಷೆ ಕಡಿತಕ್ಕೆ ಆಗ್ರಹಿಸಿದ್ದ. ಆದರೆ ಆತನಿಗೆ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ’ ಎಂದು ಅವರು ಹೇಳಿದರು.

ಏನಿದು ಪ್ರಕರಣ?:

ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಇದ್ದಾಗ ಆಕೆಯನ್ನು ಬೆದರಿಸಿದ್ದ ಜ್ಞಾನಶೇಖರನ್‌, ಲೈಂಗಿಕವಾಗಿ ಕಿರುಕುಳ ನೀಡಿದ್ದ. ಈ ಕುರಿತು ಅವಳು 2024ರ ಡಿ.23ರಂದು ಕೊಟ್ಟುಪುರಂನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಳು. ಆ ಎಫ್‌ಐಆರ್‌ ಸೋರಿಕೆಯಾಗಿ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು.

ಬಳಿಕ ಆರೋಪಿಯನ್ನು ಬಂಧಿಸಲಾಯಿತು. ಮದ್ರಾಸ್‌ ಹೈಕೋರ್ಟ್‌ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿತು. ಬಳಿಕ ಅದನ್ನು ಮಹಿಳಾ ಕೋರ್ಟ್‌ಗೆ ಹಸ್ತಾಂತರಿಸಲಾಯಿತು. ಅಲ್ಲಿ, ಭಾರತೀಯ ನ್ಯಾಯ ಸಂಹಿತೆ, ಐಟಿ ಕಾಯ್ದೆ, ತಮಿಳುನಾಡು ಮಹಿಳಾ ಕಿರುಕುಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.

ಅತ್ತ ಜ್ಞಾನಶೇಖರನ್‌ ಆಡಳಿತಾರೂಢ ಡಿಎಂಕೆ ಜತೆ ನಂಟು ಹೊಂದಿದ್ದಾನೆ ಎಂಬ ವಿಷಯ ರಾಜಕೀಯದಲ್ಲೂ ಸಂಚಲನ ಸೃಷ್ಟಿಸಿತ್ತು. ಆದರೆ ಜನವರಿಯಲ್ಲಿ ಡಿಎಂಕೆ ಮುಖ್ಯಸ್ಥರಾಗಿರುವ ಸಿಎಂ ಎಂ.ಕೆ. ಸ್ಟಾಲಿನ್ ಅವರು, ‘ಆತ ಪಕ್ಷದ ಸದಸ್ಯನಲ್ಲ. ಬೆಂಬಲಿಗನಷ್ಟೇ’ ಎಂದು ಸ್ಪಷ್ಟನೆ ನೀಡಿ, ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದರು.