ಹೈದರಾಬಾದ್ (ಮೇ 17) ಕೊರೋನಾ ವಾರಿಯರ್ಸ್ ಆಗಿ ವೈದ್ಯರು ದುಡಿಯುತ್ತಿದ್ದಾರೆ. ಆದರೆ ಆಂಧ್ರ ಪ್ರದೇಶದಲ್ಲಿ ವೈದ್ಯರೊಬ್ಬರು ಮಾಡಿರುವ ಅವಾಂತರ ದೊಡ್ಡ ಸುದ್ದಿಯಾಗುತ್ತಿದೆ.

 ವಿಶಾಖಪಟ್ಟಣಂ​ನಲ್ಲಿ ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಓರ್ವ ವೈದ್ಯನನ್ನು ಅಮಾನತು ಮಾಡಲಾಗಿತ್ತು.  ಅದೇ ವೈದ್ಯರು ಕಂಠಪೂರ್ತಿ ಕುಡಿದು, ರಸ್ತೆಯಲ್ಲಿ ಉರುಳಾಡುತ್ತಾ ಸರ್ಕಾರಕ್ಕೆ ಹಿಡಿಶಾಪ  ಹಾಕುತ್ತ ಇದ್ದರು. ಈಗ ಅವರನ್ನು ವಶಕ್ಕೆ ಪಡೆಯಲಾಗಿದೆ.

ದಂಪತಿ ಕ್ವಾರಂಟೈನ್ ಆಗಲು ಕಾರಣರಾದ ಅತಿಥಿಗಳು

ಆಂಧ್ರ ಪ್ರದೇಶದ ನರಸೀಪಟ್ಟಣಂ ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ಸುಧಾಕರ್  ಕೆಲಸ ಮಾಡುತ್ತಿದ್ದರು. ಆಂಧ್ರ ಸರ್ಕಾರ ವಿರುದ್ಧ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಡಾ. ಸುಧಾಕರ್ ಆಂಧ್ರ ಪ್ರದೇಶ ಸರ್ಕಾರ ವೈದ್ಯರಿಗೆ ಪಿಪಿಇ ಕಿಟ್​ಗಳನ್ನು ನೀಡದೆ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಒತ್ತಾಯ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿತ್ತು.

ಆದರೆ, ಆಂಧ್ರ ಪ್ರದೇಶದಲ್ಲಿ ಪಿಪಿಇ ಕಿಟ್​ಗಳ ಕೊರತೆಯಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು  ಎಂದಿದ್ದ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಂಡಿತ್ತು. ಇದ್ದಕ್ಕಿದ್ದಂತೆ ಶನಿವಾರ ವಿಶಾಖಪಟ್ಟಣಂನ ರಸ್ತೆಯಲ್ಲಿ ಕಾಣಿಸಿಕೊಂಡ ಡಾ. ಸುಧಾಕರ್ ಕುಡಿದ ಮತ್ತಿನಲ್ಲಿ ವಿಚಿತ್ರವಾಗಿ ವರ್ತಿಸತೊಡಗಿದ್ದರು. ಅಲ್ಲದೆ, ಆಂಧ್ರದ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವಾಗಲೇ ಪೊಲೀಸರ ಕೈಗೆ ಸಿಕ್ಕಿದ್ದಾರೆ.

ವೈದ್ಯನ ಕೈ ಕಟ್ಟಿ ರಸ್ತೆಯಲ್ಲೇ ಪೊಲೀಸರು ಎಳೆದಾಡಿದ್ದಾರೆ.  ಪೊಲೀಸರ ನಡವಳಿಕೆಗೆ ಸಾಮಾಜಿಕ ತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.