ರೋಲ್ಸ್ ಮಾರಿ ಬದುಕುವ 10 ವರ್ಷದ ಹುಡುಗನಿಗೆ ಸಹಾಯ ಹಸ್ತ ಚಾಚಿದ ಆನಂದ್ ಮಹೀಂದ್ರಾ
ಆನಂದ್ ಮಹೀಂದ್ರಾ ಅವರು ಹುಡುಗನ ಕಥೆಯಿಂದ ಭಾವುಕರಾಗಿ ಮಗುವಿನ ಶಿಕ್ಷಣವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಸಕ್ರಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ. ಅರ್ಥಪೂರ್ಣ ಸಂಭಾಷಣೆಗಳನ್ನು ಹುಟ್ಟುಹಾಕುವ ವಿಷಯವನ್ನು ಒಳಗೊಂಡಂತ ಪೋಸ್ಟ್‌ಗಳನ್ನು ಅವರು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಆದಾಗ್ಯೂ, ಅವರ ಕಾರ್ಯಗಳು ಕೇವಲ ಟ್ರೆಂಡಿಂಗ್ ವಿಷಯಗಳ ಬಗ್ಗೆ ಪೋಸ್ಟ್ ಮಾಡಲು ಮತ್ತು ಆಕರ್ಷಕವಾದ ಕಥೆಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಹಲವಾರು ಬಾರಿ ತಾವು ಸಾಮಾಜಿಕ ಮಾಧ್ಯಮದಲ್ಲಿ ಕಂಡ ಪರಿಶ್ರಮಿಗಳಿಗೆ ತಮ್ಮದೇ ರೀತಿಯಲ್ಲಿ ಕೊಡುಗೆ ಕೊಡುವುದು, ಸಹಾಯ ಮಾಡುವುದು ಹೀಗೇ ತೊಡಗಿಸಿಕೊಂಡು ಸುದ್ದಿಯಾಗುತ್ತಿರುತ್ತಾರೆ.
ಈ ಬಾರಿ ಅವರು ಬೀದಿ ಬದಿಯಲ್ಲಿ ರೋಲ್ಸ್ ಮಾರಿ ಜೀವನ ಸಾಗಿಸುವ 10 ವರ್ಷದ ಹುಡುಗನ ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಈತನ ಶಿಕ್ಷಣದ ಜವಾಬ್ದಾರಿ ಮಹೀಂದ್ರಾ ಗ್ರೂಪ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆನಂದ್ ಮಹೀಂದ್ರಾ ಅವರ ಈ ಹೃದಯಸ್ಪರ್ಶಿ ನಡೆಗೆ ನೆಟ್ಟಿಗರು ಚಪ್ಪಾಳೆ ತಟ್ಟುತ್ತಿದ್ದಾರೆ.
ನಟಿ ಸಮಂತಾ ನಗ್ನ ಫೋಟೋ ಬಗ್ಗೆ ಬಿಸಿ ಬಿಸಿ ಚರ್ಚೆ; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ?
ಪಶ್ಚಿಮ ದೆಹಲಿಯ ತಿಲಕ್ ನಗರದ ಜಸ್ಪ್ರೀತ್ ಎಂಬ 10 ವರ್ಷದ ಬಾಲಕನ ವೀಡಿಯೊವನ್ನು ಫುಡ್ ವ್ಲಾಗರ್ ಸರಬ್ಜೀತ್ ಸಿಂಗ್ ಹಂಚಿಕೊಂಡಿದ್ದರು. ಕೋಳಿ-ಮೊಟ್ಟೆಯ ರೋಲ್‌ಗಳನ್ನು ತಯಾರಿಸುವಾಗ ಜಸ್ಪ್ರೀತ್ ಕೌಶಲ್ಯವನ್ನು ತೋರಿಸುವ ಮೂಲಕ ವೀಡಿಯೊ ಪ್ರಾರಂಭವಾಗುತ್ತದೆ. ನಂತರ, ಕ್ಷಯರೋಗದಿಂದ ತಂದೆಯ ಹಠಾತ್ ನಿಧನದ ನಂತರ ತನ್ನ ಕುಟುಂಬವನ್ನು ಬೆಂಬಲಿಸಲು ರೋಲ್ ಸ್ಟಾಲ್ ನಡೆಸುತ್ತಿರುವ ಹುಡುಗನ ದುಃಖಕರ ಕತೆ ತೆರೆದುಕೊಳ್ಳುತ್ತದೆ.
ಬಾಲಕನು ನಗುಮುಖಜದಲ್ಲೇ ತನಗೆ 14 ವರ್ಷದ ಅಕ್ಕ ಇದ್ದು, ತಾವು ಚಿಕ್ಕಪ್ಪನೊಂದಿಗೆ ಇರುವ ವಿಷಯವನ್ನು ವಿಡಿಯೋದಲ್ಲಿ ಹೇಳುತ್ತಾನೆ. ಬಾಲಕನು ತನ್ನ ಪಾಕಪ್ರಾವೀಣ್ಯತೆಯನ್ನು ತಂದೆಯಿಂದ ಕಲಿತಿದ್ದು, ವಿವಿಧ ರೀತಿಯ ರೋಲ್ ತಯಾರಿಸಲು ಬರುತ್ತದೆ ಎನ್ನುತ್ತಾನೆ. 'ನಾನು ಗುರು ಗೋಬಿಂದ್ ಸಿಂಗ್ ಜಿ ಅವರ ಮಗ. ನನ್ನ ಶಕ್ತಿ ಇರುವವರೆಗೂ ಹೋರಾಡುತ್ತೇನೆ' ಎಂಬ ಮಾತುಗಳು ಪುಟ್ಟ ಬಾಲಕನ ಬಾಯಿಂದ ಬರುವಾಗ ಎಂಥವರೂ ಭಾವುಕರಾಗುತ್ತಾರೆ.
ತನ್ನನ್ನು ಅಮಿತಾಬ್ ಬಚ್ಚನ್‌ಗೆ ಹೋಲಿಸಿಕೊಂಡ ಕಂಗನಾ ರಣಾವತ್; ಇದ್ಯಾಕೋ ಅತಿಯಾಯ್ತು ಅಂದ್ರು ನೆಟಿಜನ್ಸ್
ಜೀವನದ ಬಗೆಗಿನ ಬಾಲಕನ ದೃಢನಿರ್ಧಾರ ಮತ್ತು ಧೈರ್ಯದಿಂದ ಪ್ರಭಾವಿತರಾದ ಆನಂದ್ ಮಹೀಂದ್ರಾ ಅವರು ಆತನಿಗೆ ತಮ್ಮ ಬೆಂಬಲವನ್ನು ನೀಡಲು ಮುಂದಾದರು. ಅವರು ಹುಡುಗನ ಸಂಪರ್ಕ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದ್ದಾರೆ ಮತ್ತು ಆತನ ಶಿಕ್ಷಣವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
'ಧೈರ್ಯ, ನಿನ್ನ ಹೆಸರು ಜಸ್ಪ್ರೀತ್. ಈತನ ಶಿಕ್ಷಣಕ್ಕೆ ತೊಂದರೆಯಾಗಬಾರದು. ಈತ ದೆಹಲಿಯ ತಿಲಕ್ ನಗರದಲ್ಲಿದ್ದಾನೆ ಎಂದು ನಾನು ನಂಬುತ್ತೇನೆ. ಅವನ ಸಂಪರ್ಕ ಸಂಖ್ಯೆಯನ್ನು ಯಾರಾದರೂ ಹೊಂದಿದ್ದರೆ ದಯವಿಟ್ಟು ಹಂಚಿಕೊಳ್ಳಿ. ಈತನ ಶಿಕ್ಷಣ ಬೆಂಬಲಿಸುವ ಅವಕಾಶಗಳನ್ನು ನಮ್ಮ ಫೌಂಡೇಶನ್ ಅನ್ವೇಷಿಸುತ್ತದೆ' ಎಂದಿದ್ದಾರೆ.
ಮಹೀಂದ್ರಾ ಅವರ ಈ ಸಹಾಯ ಗುಣಕ್ಕೆ ಅನೇಕ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 'ಈ ಮಗು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮತ್ತು ತನಗಾಗಿ ದೃಢವಾಗಿ ನಿಲ್ಲಲಿ ಸಿದ್ಧನಿದ್ದಾನೆ. ಕಷ್ಟದ ಸಮಯದಲ್ಲಿ ಆತನ ಧೈರ್ಯವು ಸ್ಪೂರ್ತಿದಾಯಕವಾಗಿದೆ. ಈತ ಸರಿಯಾದ ಮಾರ್ಗದರ್ಶನ ಸಿಕ್ಕರೆ ಶಿಕ್ಷಣದ ವಿಷಯದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾನೆ' ಎಂದು ಒಬ್ಬ ಎಕ್ಸ್ ಬಳಕೆದಾರರು ಬರೆದಿದ್ದಾರೆ.
ಮತ್ತೊಬ್ಬರು 'ಒಳ್ಳೆಯದು ಸರ್. ಈ ರೀತಿಯ ಪರೋಪಕಾರಿ ಚಟುವಟಿಕೆಗಳು ಶ್ಲಾಘನೀಯ. ಹೀಗೇ ಮುಂದುವರಿಸಿ' ಎಂದಿದ್ದಾರೆ.
'ನಿಮ್ಮ ಈ ಗುಣ ಎಲ್ಲ ಮಿಲಿಯನೇರ್‌ಗಳಿಗೆ ಪ್ರೇರಣೆ ನೀಡಲಿ' ಎಂದು ಇನ್ನೊಬ್ಬ ಎಕ್ಸ್ ಬಳಕೆದಾರರು ಬರೆದಿದ್ದಾರೆ.