ಜಮ್ಮುದಲ್ಲಿ ಬಸ್ ಮೇಲೆ ದಾಳಿಗೆ ಬಳಸಿದ್ದು ಅಮೆರಿಕನ್ ಗನ್: ಮಣಿಪುರದಲ್ಲೂ ಸಿಎಂ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ
ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ನಡೆದ ಉಗ್ರ ದಾಳಿಗೆ ಅಮೆರಿಕ ನಿರ್ಮಿತ ಎಂ4 ರೈಫಲ್ ಬಳಸಿರುವುದು ಪ್ರಾಥಮಿಕ ತನಿಖೆ ವೇಳೆ ಖಚಿತಪಟ್ಟಿದೆ.
ಜಮ್ಮು: ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಭಾನುವಾರ ನಡೆದ ಉಗ್ರ ದಾಳಿಯಲ್ಲಿ ವಿದೇಶಿ ಉಗ್ರ ಸಂಘಟನೆಗಳ ಕೈವಾಡ ವ್ಯಕ್ತವಾಗಿದೆ. 9 ಜನರನ್ನು ಬಲಿ ಪಡೆದ ದಾಳಿಯಲ್ಲಿ ಮೂವರು ವಿದೇಶಿ ಉಗ್ರರು ಭಾಗಿಯಾಗಿರುವ ಮತ್ತು ದಾಳಿಗೆ ಅಮೆರಿಕ ನಿರ್ಮಿತ ಎಂ4 ರೈಫಲ್ ಬಳಸಿರುವುದು ಪ್ರಾಥಮಿಕ ತನಿಖೆ ವೇಳೆ ಖಚಿತಪಟ್ಟಿದೆ. ಈ ನಡುವೆ ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂಬ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಯಾತ್ರಾ ರ್ಥಿಗಳಿದ್ದ ಬಸ್ ಮೇಲೆ ರೀಸಿಯಲ್ಲಿ ದಾಳಿ ಮಾಡಿದ್ದು ನಾವೇ. ಇದು ಕೇವಲ ಆರಂಭವಷ್ಟೇ. ಇನ್ನು ಮುಂದೆಯೂ ಸಹ ಸ್ಥಳೀಯರು ಮತ್ತು ಪ್ರವಾಸಿಗರ ಮೇಲೆ ಮತ್ತಷ್ಟು ಭಯಾನಕ ದಾಳಿಗಳು ನಡೆಯಲಿವೆ ಎಂದು ಎಚ್ಚರಿಸಿದೆ.
ಹುಡುಕಾಟ: ಬಸ್ ಮೇಲೆ ದಾಳಿ ಬಳಿಕ ಉಗ್ರರು ಸಮೀಪದ ಕಾಡಿನೊಳಗೆ ಅವಿತಿರುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದು, ಉಗ್ರರಿಗಾಗಿ ಹುಡುಕಾಟ ನಡೆಸಿವೆ. ಈ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ತನಿಖಾ ದಳ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ವಿಧಿವಿಜ್ಞಾನ ತಜ್ಞರೊಂದಿಗೆ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದೆ.
ಕಾಶ್ಮೀರದ ದೇವಸ್ಥಾನಕ್ಕೆ ತೆರಳಿದ ಭಕ್ತರ ಬಸ್ ಮೇಲೆ ಉಗ್ರರ ದಾಳಿ, 10 ಯಾತ್ರಾರ್ಥಿಗಳು ಸಾವು!
ಗುರುತು ಪತ್ತೆ: ದಾಳಿಯಲ್ಲಿ ಮೃತರಾದ 9 ಮಂದಿಯಲ್ಲಿ ರಾಜಸ್ಥಾನದ ನಾಲ್ವರು ಹಾಗೂ ಉತ್ತರಪ್ರದೇಶದ ಮೂವರು ಸಾವನ್ನಪ್ಪಿರುವುದು ಖಚಿತವಾಗಿದೆ. ಇದರ ಜೊತೆಗೆ ಬಸ್ ಚಾಲಕ ಹಾಗೂ ನಿರ್ವಾಹಕ ಕೂಡ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 41 ಮಂದಿಯನ್ನು ಜಮ್ಮುವಿನಲ್ಲಿರುವ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರಿಗೆ ಪರಿಹಾರ: ಜಮ್ಮು ಕಾಶ್ಮೀರದ ಉಪ ರಾಜ್ಯಪಾಲರಾಗಿರುವ ಮನೋಜ್ ಸಿನ್ಹಾ ಗಾಯಾಳುಗಳನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರು. ಪರಿಹಾರ ಪ್ರಕಟಿಸಿದ್ದಾರೆ.
ಮಣಿಪುರದ ಸಿಎಂ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ
ಮತ್ತೊಂದೆಡೆ ಮಣಿಪುರದ ಕಾಂಗ್‌ಪೋಕ್ಷಿ ಜಿಲ್ಲೆಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಮುಂಚೂಣಿ ಬೆಂಗಾವಲು ವಾಹನದ ಮೇಲೆ ಸೋಮವಾರ ಶಂಕಿತ ಉಗ್ರರು ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಹಾಗೂ ಅವರ ಬೆಂಗಾವಲು ಪಡೆ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-53 ರಲ್ಲಿ ಈ ಘಟನೆ ಸಂಭವಿಸಿದೆ.
ಭದ್ರತಾ ಪಡೆಗಳ ವಾಹನಗಳ ಮೇಲೆ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ವಾಹನ ಚಾಲಕರೊಬ್ಬರಿಗೆ ಗುಂಡು ತಾಕಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ಉಗ್ರರ ಪತ್ತೆಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ: ಕಲ್ಲು ತೂರಾಟಗಾರನಾಗಿದ್ದವ ಮೋದಿ ಅಭಿಮಾನಿಯಾಗಿ ಬದಲಾದ, ಇಂದು ಗುಂಡಿಗೆ ಬಲಿಯಾದ
ಜನಾಂಗೀಯ ಕಲಹ ಪೀಡಿತ ರಾಜ್ಯದಲ್ಲಿ ಶನಿವಾರ ನಡೆದ ಹೊಸ ಹಿಂಸಾಚಾರದಲ್ಲಿ ಜಿರಿಬಾಮ್‌ನಲ್ಲಿರುವ ಎರಡು ಪೊಲೀಸ್ ಔಟ್ ಪೋಸ್ಟ್‌ಗಳು, ಅರಣ್ಯ ಬೀಟ್ ಕಚೇರಿ ಮತ್ತು ಕನಿಷ್ಠ 70 ಮನೆಗಳನ್ನು ಶಂಕಿತ ಉಗ್ರಗಾಮಿಗಳು ಸುಟ್ಟು ಹಾಕಿದ್ದರು.