ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿನಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. 2026ರಲ್ಲಿ ಡಿಎಂಕೆ ಸರ್ಕಾರ ಪತನಗೊಂಡು ಬಿಜೆಪಿ-ಎಐಎಡಿಎಂಕೆ ಸರ್ಕಾರ ರಚನೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಎಂಕೆಯ ಭ್ರಷ್ಟ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮದುರೈ (ಜೂ.9): ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ತಮಿಳುನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. 2026ರಲ್ಲಿ ರಾಜ್ಯದಲ್ಲಿ ಡಿಎಂಕೆ ಸರ್ಕಾರ ಪತನಗೊಂಡು ಬಿಜೆಪಿ- ಎಐಎಡಿಎಂಕೆ ಸರ್ಕಾರ ರಚನೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಚುನಾವಣಾ ಸಿದ್ಧತೆಯ ಭಾಗವಾಗಿ ಭಾನುವಾರ ಮದುರೈಗೆ ಭೇಟಿ ನೀಡಿದ್ದ ಅಮಿತ್‌ ಶಾ, ಚುಣಾವಣೆ ಸಂಬಂಧ ಪಕ್ಷದ ನಾಯಕರು ಕಾರ್ಯಕರ್ತರಿಗೆ ಸಲಹೆ ಸೂಚನೆ ನೀಡಿದ್ದಾರೆ. ಪಕ್ಷದ ಪದಾಧಿಕಾರಿಗಳ ಜತೆ ಸಭೆ ನಡೆಸಿದ ಅವರು, ‘ಮದುರೈ ಪರಿವರ್ತನೆಯ ನಗರ. ನಮ್ಮ ಪಕ್ಷದ ಕಾರ್ಯಕರ್ತರ ಸಭೆಯು ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸಿ, ರಾಜ್ಯದಲ್ಲಿ ಬದಲಾವಣೆ ತರಲಿದೆ. ಡಿಎಂಕೆಯ ಭ್ರಷ್ಟ ಆಡಳಿತ ತಮಿಳುನಾಡಿನ ಬಡವರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಪಕ್ಷದ ಕಾರ್ಯಕರ್ತರು ಸ್ಟಾಲಿನ್ ನೇತೃತ್ವದ ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸಬೇಕು’ ಎಂದು ಕರೆ ನೀಡಿದರು.

‘2026ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ-ಎಐಎಡಿಎಂಕೆ ತಮಿಳುನಾಡಿನಲ್ಲಿ ಎನ್‌ಡಿಎ ಸರ್ಕಾರವನ್ನು ರಚಿಸಲಿವೆ. ಜನ ಡಿಎಂಕೆಯನ್ನು ಸೋಲಿಸಲಿದ್ದಾರೆ. ಡಿಎಂಕೆ ಸಂಪೂರ್ಣ ವಿಫಲ ಸರ್ಕಾರ’ ಎಂದು ಟೀಕಿಸಿದರು.

ಶ್ರೇಷ್ಠ ಭಾಷೆ ತಮಿಳಲ್ಲಿ ಮಾತನಾಡಲು ಆಗದ್ದಕ್ಕೆ ಕ್ಷಮೆ ಇರಲಿ: ಅಮಿತ್‌ ಶಾ

ಮದುರೈನಲ್ಲಿ ಸಾರ್ವಜನಿಕ ಮೆರವಣಿಗೆಯಲ್ಲಿ ಪಾಲ್ಗೊಂಡ ಅಮಿತ್ ಶಾ, ‘ಭಾರತದ ಶ್ರೇಷ್ಠ ಭಾಷೆಗಳಲ್ಲಿ ಒಂದಾದ ತಮಿಳಿನಲ್ಲಿ ನಿಮ್ಮೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ನಾನು ತಮಿಳುನಾಡಿನ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದರು. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಡಿಎಂಕೆ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿತ್ತು. ಅದರ ಬೆನ್ನಲ್ಲೆ ಅಮಿತ್ ಶಾ ಈ ರೀತಿ ಹೇಳಿಕೆ ನೀಡಿರುವುದು ಗಮನ ಸೆಳೆದಿದೆ.