ಕೇಂದ್ರ ಸರ್ಕಾರದ ಭದ್ರತಾ ಕ್ರಮಗಳು ಮತ್ತು ಪುನರ್ವಸತಿ ಯೋಜನೆಗಳಿಂದಾಗಿ ದೇಶದಲ್ಲಿ ನಕ್ಸಲಿಸಂ ದೊಡ್ಡ ಮಟ್ಟದಲ್ಲಿ ಕುಸಿದಿದೆ. ಕಳೆದ ದಶಕದಲ್ಲಿ 10,000ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದು, ಅಭಿವೃದ್ಧಿ ಕಾರ್ಯಗಳಿಂದಾಗಿ ನಕ್ಸಲ್ ಪ್ರಭಾವಿತ ಪ್ರದೇಶಗಳು ಮುಖ್ಯವಾಹಿನಿಗೆ ಬರುತ್ತಿವೆ.

ಶಸ್ತ್ರಾಸ್ತ್ರ ತ್ಯಜಿಸಿದ 10,000ಕ್ಕೂ ಅಧಿಕ ನಕ್ಸಲೀಯರು

ನವದೆಹಲಿ: ಭದ್ರತಾ ಪಡೆಗಳ ಒತ್ತಡ ಹಾಗೂ ಪುನರ್ವಸತಿ ಕ್ರಮಗಳ ಜಂಟಿ ಪ್ರಯತ್ನದಿಂದಾಗಿ, ದೇಶದ ಅತ್ಯಂತ ದೀರ್ಘಕಾಲದ ಉಗ್ರಗಾಮಿ ಚಳವಳಿಯಾದ ನಕ್ಸಲಿಸಂಗೆ ದೊಡ್ಡ ಹೊಡೆತ ಬಿದ್ದಿದೆ. ಕಳೆದ ದಶಕದಲ್ಲಿ 10,000ಕ್ಕೂ ಅಧಿಕ ನಕ್ಸಲೀಯರು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ತ್ಯಜಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಇದೇ ಮಾ.31ಕ್ಕೆ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

2025ರಲ್ಲಿ 2,300 ನಕ್ಸಲೀಯರು ಶಸ್ತ್ರಾಸ್ತ್ರ ತ್ಯಾಗ ಮಾಡಿದ್ದಾರೆ. 2026ರ ಮೊದಲ 3 ತಿಂಗಳಲ್ಲಿ 630ಕ್ಕೂ ಹೆಚ್ಚು ಜನ ಸಶಸ್ತ್ರ ದಂಗೆಯನ್ನು ಬಿಟ್ಟು ಮುಖ್ಯ ವಾಹಿನಿಯ ಜೀವನವನ್ನು ಆರಿಸಿಕೊಂಡಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಹಿಂದಿನ ಸರ್ಕಾರ ಅನುಸರಿಸುತ್ತಿದ್ದ ಚದುರಿದ ವಿಧಾನವನ್ನು ಬಿಟ್ಟು, ಪ್ರಸ್ತುತ ಸರ್ಕಾರವು ನಕ್ಸಲಿಸಂ ವಿರುದ್ಧ ಏಕೀಕೃತ, ಬಹುಮುಖ ಮತ್ತು ದೃಢವಾದ ತಂತ್ರವನ್ನು ಅಳವಡಿಸಿಕೊಂಡಿತು. ಹೀಗಾಗಿ ಪರಿವರ್ತನೆ ಸಾಧ್ಯವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವು ಅಭಿವೃದ್ಧಿ ಕಾರ್ಯ: ಸರ್ಕಾರದ ಬಹಳ ಉತ್ತಮ ಪ್ರಯತ್ನವೆಂದರೆ ರೆಡ್ ಕಾರಿಡಾರ್ ನಿರ್ಮಾಣ. ಪಶುಪತಿಯಿಂದ ತಿರುಪತಿಯವರೆಗೆ ವಿಸ್ತರಿಸಿದ್ದ ಈ ಪ್ರದೇಶದಲ್ಲಿ ಗುತ್ತಿಗೆದಾರರು ಕೆಲಸ ಮಾಡಲು ನಿರಾಕರಿಸುತ್ತಿದ್ದರು. ಈಗ ಕೇಂದ್ರ ಸರ್ಕಾರವು ಬಾರ್ಡ‌ರ್ ರೋಡ್ಸ್ ಆರ್ಗನೈಸೇಷನ್‌ಗೆ ಈ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸುವ ಜವಾಬ್ದಾರಿ ನೀಡಿದೆ. ಇಲ್ಲಿ 5 ಪ್ರಮುಖ ರಸ್ತೆಗಳು ಮತ್ತು 5 ಮುಖ್ಯ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ.

ಭದ್ರತೆ ಹೆಚ್ಚಳಕ್ಕೆ ಕ್ರಮ: ಸಿಪಿಐ (ಮಾವೋವಾದಿ) ಪ್ರಭಾವಿತ ಪ್ರದೇಶಗಳಲ್ಲಿ 15,000 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ಒಂದು ಕಾಲದ ನಕ್ಸಲ್ ಪ್ರಾಬಲ್ಯದ ಪ್ರದೇಶಗಳಲ್ಲಿ ಪೊಲೀಸ್ ಸ್ಟೇಷನ್‌ಗಳ ಸಂಖ್ಯೆ 2014ರಲ್ಲಿದ್ದ 66ರಿಂದ ಕಳೆದ 10 ವರ್ಷಗಳಲ್ಲಿ 586ಕ್ಕೆ ಏರಿದೆ. ಕಳೆದ 6 ವರ್ಷಗಳಲ್ಲಿ 361 ಹೊಸ ಭದ್ರತಾ ಘಟಕಗಳು ಮತ್ತು 68 ರಾತ್ರಿ ಲ್ಯಾಂಡಿಂಗ್‌ ಹೆಲಿಪ್ಯಾಡ್‌ಗಳನ್ನುನಿರ್ಮಿಸಲಾಗಿದೆ. ಇದರ ಪರಿಣಾಮವಾಗಿ ನಕ್ಸಲ್ ಘಟನೆಗಳು ಅತಿ ಹೆಚ್ಚು ದಾಖಲಾಗುತ್ತಿದ್ದ ಪೊಲೀಸ್‌ ಸ್ಟೇಷನ್‌ಗಳ ಸಂಖ್ಯೆ 2013ರಲ್ಲಿ 330ರಿಂದ 2025ರ ಜೂನ್‌ನಲ್ಲಿ ಕೇವಲ 52ಕ್ಕೆ ಇಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆ, ಆಧಾರ್ ವಿತರಣೆ ಏರಿಕೆ:

ಪಿಎಂ ಆವಾಸ್ ಯೋಜನೆಯಡಿ ನಿರ್ಮಾಣವಾದ ಮನೆಗಳ ಸಂಖ್ಯೆ 2024ರ ಮಾರ್ಚ್‌ನಲ್ಲಿ 92,847 ರಿಂದ 2025ರ ಅಕ್ಟೋಬರ್ ನಲ್ಲಿ 2,54,045ಕ್ಕೆ ಏರಿದೆ. ಆಧಾರ್ ವಿತರಣೆ 23.50 ಲಕ್ಷದಿಂದ 24.85 ಲಕ್ಷಕ್ಕೆ ಹೆಚ್ಚಾಗಿದೆ. 21.44 ಲಕ್ಷ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ.

ಉದ್ಯೋಗಸೃಷ್ಟಿ, ಸಂಪರ್ಕ ಹೆಚ್ಚಳ: 48 ನಕ್ಸಲ್ ಪ್ರಭಾವಿತ ಜಿಲ್ಲೆಗಳಲ್ಲಿ 495 ಕೋಟಿ ರು. ವೆಚ್ಚದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಸುಮಾರು 9,000 ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ. ಛತ್ತೀಸ್‌ಗಢದ ದಕ್ಷಿಣ ಬಸ್ತರ್‌ನಿಂದ ಕೇಂದ್ರ ಭಾಗಕ್ಕೆ 95 ಕಿ.ಮೀ. ರೈಲು ಮಾರ್ಗವನ್ನು ನಿರ್ಮಿಸಲಾಗಿದೆ. ರಾವ್‌ಘಾಟ್ ಮತ್ತು ಜಗದಲ್‌ಪುರ್‌ನಡುವೆ 140 ಕಿ.ಮೀ. ರೈಲು ಮಾರ್ಗ ನಿರ್ಮಾಣವಾಗುತ್ತಿದೆ.

ನಕ್ಸಲರಿಂದ ಹಣ, ಆಸ್ತಿ ಜಪ್ತಿ: ಎನ್‌ಐಎ ನಕ್ಸಲೀಯರಿಂದ 40 ಕೋಟಿ ರು. ವಶಪಡಿಸಿಕೊಂಡಿದೆ. ರಾಜ್ಯ ತನಿಖಾ ಸಂಸ್ಥೆ ಗಳು 40 ಕೋಟಿ ರು. ವಶಪಡಿಸಿ ಕೊಂಡಿವೆ. 12 ಕೋಟಿ ರು.ಗಳ ಆಸ್ತಿ ಜಪ್ತಿ ಮಾಡಲಾಗಿದೆ. ಈ ಕ್ರಮಗಳಿಂದ ನಕ್ಸಲಿಸಂ ಗಣನೀಯವಾಗಿ ನಿರ್ಮೂಲನೆಯಾಗುತ್ತಾ ಬಂದಿತು ಎಂದು ಸರ್ಕಾರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಛತ್ತೀಸ್‌ಗಢದಲ್ಲಿ ₹5 ಲಕ್ಷ ಇನಾಮು ಹೊಂದಿದ್ದ ನಕ್ಸಲ್ ಕೈಲಾಶ್ ಹತ್ಯೆ

ಸುಕ್ಕಾ: ನಕ್ಸಲ್ ನಿಗ್ರಹದತ್ತ ಹೆಜ್ಜೆ ಇಟ್ಟಿರುವ ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಯ ಗುಂಡಿಗೆ 5 ಲಕ್ಷ ರು. ಇನಾಮು ಹೊಂದಿದ್ದ ನಕ್ಸಲ್ ಬಲಿಯಾಗಿದ್ದಾನೆ. ಸರ್ಕಾರ ನಕ್ಸಲ್ ನಿಗ್ರಹಕ್ಕೆ ಮಾ.31ರ ತನಕ ನೀಡಿರುವ ಗಡುವಿಗೆ 2 ದಿನ ಬಾಕಿ ಇರುವ ಹೊತ್ತಲ್ಲಿ ಸುಕ್ಮಾ ಜಿಲ್ಲೆಯಲ್ಲಿ ಹತ್ಯೆ ನಡೆದಿದೆ. ಹತ್ಯೆಯಾದನಕ್ಸಲ್‌ನನ್ನು ಮುಚಾಕಿ ಕೈಲಾಶ್‌ ಎಂದು ಗುರುತಿಸಲಾಗಿದೆ. ಪೋಲಂಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಗುಡ್ಡದಲ್ಲಿ ಜಿಲ್ಲಾ ಮೀಸಲು ಪಡೆ ಅಧಿಕಾರಿಗಳು ನಕ್ಸಲರು ಇರುವಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸಿಬ್ಬಂದಿ ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವನ ಹತ್ಯೆಯಾಗಿದೆ. ಆತನಿಂದ ಹಲವು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಛತ್ತೀಸ್‌ಗಢದಲ್ಲಿ ಈ ವರ್ಷ ಹತರಾದ ನಕ್ಸಲರ ಸಂಖ್ಯೆ 27ಕ್ಕೇರಿಕೆಯಾಗಿದೆ. ಆರೋಪಿ ನಕ್ಸಲ್ ಕೈಲಾಶ್ ನಾಗರಿಕರ ಹತ್ಯೆ, ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಇಡುವುದು ಮತ್ತು ಪೊಲೀಸರ ಮೇಲಿನ ದಾಳಿಗಳಲ್ಲಿ ಭಾಗಿಯಾಗಿದ್ದಾನೆ.

ಇದನ್ನೂ ಓದಿ: 1ನೇ ಕ್ಲಾಸ್‌ಗೆ ವಯೋಮಿತಿ 60 ದಿನ ಸಡಿಲಿಕೆಯಿಂದ 1 ಲಕ್ಷ ಮಕ್ಕಳಿಗಷ್ಟೇ ಅನುಕೂಲ : ಇನ್ನೂ 4 ಲಕ್ಷ ಮಕ್ಕಳಿಗೆ ಅನ್ಯಾಯ

ಮಾ.31ಕ್ಕೆ ದೇಶ ನಕ್ಸಲ್ ಮುಕ್ತ: ಇಂದು ಸಂಸತ್‌ನಲ್ಲಿ ಚರ್ಚೆ ನಿಗದಿ

ನವದೆಹಲಿ: ದೇಶದಲ್ಲಿನಕ್ಸಲಿಸಂ ಮುಕ್ತಗೊಳಿಸಲು ಕೇಂದ್ರ ಸರ್ಕಾರ ನೀಡಿರುವ ಮಾ.31 ಗಡುವು ಕೊನೆಗೊಳ್ಳಲು 2 ದಿನ ಬಾಕಿ ಇರುವ ಹೊತ್ತಲ್ಲಿ ಲೋಕಸಭೆಯಲ್ಲಿ ಸೋಮವಾರ ನಕ್ಸಲ್‌ವಾದದ ಬಗ್ಗೆ ಚರ್ಚೆ ನಡೆಯಲಿದೆ. ಟಿಡಿಪಿ ಸಂಸದ ಬೈರೆಡ್ಡಿ ಶಬರಿ ಮತ್ತು ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ ಈ ವಿಚಾರಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ 2026ರ ಮಾ.31 ರೊಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸುವುದಾಗಿ ಘೋಷಿಸಿದ್ದರು. ಆ ನಿಟ್ಟಿನಲ್ಲಿ ನಡೆದ ಪ್ರಯತ್ನದ ಭಾಗವಾಗಿಯೇ ಕಳೆದ ವರ್ಷ 2,337 ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ, ಶರಣಾಗಿದ್ದರು.

ಇದನ್ನೂ ಓದಿ: ಜಾರಿ ಬಿದ್ದ ಪಾಕ್ ವಿದೇಶಾಂಗ ಸಚಿವ: 4 ಇಸ್ಲಾಮಿಕ್ ದೇಶಗಳ ಸಭೆಯಲ್ಲಿ ಘಟನೆ