'ಲೆಕ್ಕ ಬರುತ್ತಾ ನಿಮಗೆ..' ಚುನಾವಣಾ ಬಾಂಡ್ ವಿಚಾರದಲ್ಲಿ ವಿಪಕ್ಷಗಳ ಮೇಲೆ ಅಮಿತ್ ಶಾ ವಾಗ್ದಾಳಿ!
ಸುಪ್ರೀಂ ಕೋರ್ಟ್‌ನಿಂದ ರದ್ದಾಗಿರುವ ಚುನಾವಣಾ ಬಾಂಡ್ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಕಪ್ಪು ಹಣವನ್ನು ಸಂಪೂರ್ಣವಾಗಿ ಮಟ್ಟಹಾಕಬೇಕು ಎನ್ನುವ ಕಾರಣಕ್ಕಾಗಿಯೇ ಇದನ್ನು ಜಾರಿ ಮಾಡಲಾಗಿತ್ತು ಎಂದಿದ್ದಾರೆ.
ನವದೆಹಲಿ (ನ.16): ರಾಜಕೀಯ ನಿಧಿ ಪ್ರಕ್ರಿಯೆಗಳಿಂದ ಕಪ್ಪುಹಣವನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎನ್ನುವ ಕಾರಣಕ್ಕಾಗಿ ಚುನಾವಣಾ ಬಾಂಡ್‌ಅನ್ನು ಪರಿಚಯಿಸಲಾಗಿತ್ತು ಎಂದು ಕೇಂದ್ರ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಬಳಿಕ ಅಮಿತ್ ಶಾ ನೀಡಿದ ಮೊದಲ ಪ್ರತಿಕ್ರಿಯೆ ಇಡಾಗಿದೆ. ಇಂಡಿಯಾ ಟುಡೇ ಕಾನ್‌ಕ್ಲೇವ್ 2024 ರಲ್ಲಿ ಮಾತನಾಡಿದ ಅಮಿತ್ ಶಾ, ಈಗ ಈ ಯೋಜನೆಯನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ಕಪ್ಪು ಹಣ ಮತ್ತೆ ರಾಜಕೀಯ ನಿಧಿಗಳಿಗೆ ಮರಳುತ್ತದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸದ ಅಮಿತ್ ಶಾ, ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು ಕಪ್ಪುಹಣವನ್ನು ತೊಡೆದುಹಾಕಲು ಅದನ್ನು ಹೇಗೆ ಪರಿಚಯಿಸಲಾಗಿತ್ತು ಎನ್ನುವುದರ ಕುರಿತು ಚರ್ಚಿಸಲು ಸಿದ್ಧ ಎಂದು ಹೇಳಿದರು. ಚುನಾವಣಾ ಬಾಂಡ್ ಜಾರಿಗೂ ಮುನ್ನ ರಾಜಕೀಯ ಪಕ್ಷಗಳಿಗೆ ನಗದು ಮೂಲಕ ದೇಣಿಗೆ ನೀಡಲಾಗುತ್ತಿತ್ತು ಎಂದು ಗೃಹ ಸಚಿವರು ತಿಳಿಸಿದ್ದಾರೆ. ಆದರೆ, ಚುನಾವಣಾ ಬಾಂಡ್ ಬಂದ ಬಳಿಕ ಪಕ್ಷಗಳಿಗೆ ದೇಣಿಗೆಗಾಗಿ ಬಾಂಡ್‌ಗಳನ್ನು ಕಂಪನಿಗಳು ಅಥವಾ ವ್ಯಕ್ತಿಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಚೆಕ್‌ಅನ್ನು ಸಲ್ಲಿಕೆ ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.
'ಅಧಿಕಾರದಲ್ಲಿರುವ ಕಾರಣ ಚುನಾವಣಾ ಬಾಂಡ್‌ಗಳ ಯೋಜನೆಯಿಂದ ಲಾಭ ಪಡೆದಿದೆ ಎನ್ನುವ ಗ್ರಹಿಕೆ ಇದೆ. ರಾಹುಲ್ ಗಾಂಧಿ ಕೂಡ ಇದು ವಿಶ್ವದ ಅತಿದೊಡ್ಡ ಸುಲಿಗೆ ದಂಧೆ ಎಂದು ಹೇಳಿದ್ದಾರೆ. ಅವರಿಗೆ ಇಂಥ ವಿಚಾರಗಳನ್ನೆಲ್ಲಾ ಯಾರು ಬರೆದುಕೊಡುತ್ತಾರೆ ಎನ್ನುವುದು ತಿಳಿದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಚುನಾವಣಾ ಬಾಂಡ್‌ಗಳಿಂದ ಬಿಜೆಪಿ ಒಟ್ಟು 6 ಸಾವಿರ ಕೋಟಿ ಪಡೆದುಕೊಂಡಿದೆ. ಆದರೆ, ಒಟ್ಟಾರೆ ಬಾಂಡ್‌ಗಳು (ಎಲ್ಲಾ ಪಕ್ಷಗಳಿಗೆ ನೀಡಿರುವುದು) ಮೊತ್ತ 20 ಸಾವಿರ ಕೋಟಿ ರೂಪಾಯಿ. ಉಳಿದ 14 ಸಾವಿರ ಕೋಟಿ ರೂಪಾಯಿ ಮೊತ್ತ ಎಲ್ಲಿ ಹೋಯಿತು ಎಂದು ಯಾರೂ ಕೇಳುತ್ತಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಪಡೆದಿರುವ ಮೊತ್ತದ ಬಗ್ಗೆ ಟೀಕಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ವಿರೋಧ ಪಕ್ಷಗಳು ಪಡೆದಿರುವ ಮೊತ್ತವು ಲೋಕಸಭೆಯಲ್ಲಿ ಅವರ ಸ್ಥಾನಗಳ ಸಂಖ್ಯೆಗೆ ಅಸಮಾನವಾಗಿದೆ ಎಂದಿದ್ದಾರೆ. ತೃಣಮೂಲ ಕಾಂಗ್ರೆಸ್ 1,600 ಕೋಟಿ ರೂ ಮೌಲ್ಯದ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದ್ದರೆ,, ಕಾಂಗ್ರೆಸ್ 1,400 ಕೋಟಿ ರೂಪಾಯಿ, ಭಾರತ್ ರಾಷ್ಟ್ರ ಸಮಿತಿ 1,200 ಕೋಟಿ ರೂಪಾಯಿ, ಬಿಜೆಡಿ 775 ಕೋಟಿ ರೂ, ಡಿಎಂಕೆ 649 ಕೋಟಿ ರೂಪಾಯಿ ಬಾಂಡ್ ಹಣ ಪಡೆದಿದೆ.
ಚುನಾವಣಾ ಬಾಂಡ್ ಜಾರಿಗೆ ಬಂದ ನಂತರ ಗೌಪ್ಯತೆಯೆ ಅವಕಾಶವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಏಕೆಂದರೆ, ಅವರು ನೀಡಿರುವ ಮೊತ್ತಗಳು ಪಕ್ಷಗಳು ಹಾಗೂ ದಾನಿಗಳ ಬ್ಯಾಂಕ್ ಖಾತೆಗಳಲ್ಲಿ ಕಾಣಿಸುತ್ತದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಗದು ವಹಿವಾಟಿನ ಮೂಲಕ ದೇಣಿಗೆ ನೀಡಿದಾಗ, ಪಕ್ಷದ ಖಾತೆಯಲ್ಲಿ 100 ಕೋಟಿ ಠೇವಣಿ ಇಟ್ಟರೆ, 1 ಸಾವಿರ ಕೋಟಿಯನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. ಇದನ್ನು ಕಾಂಗ್ರೆಸ್ ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದಿದ್ದಾರೆ.
Electoral bonds: ಎಸ್‌ಬಿಐ, ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿಯ 10 ಪ್ರಮುಖ ಅಂಶಗಳು
ಚುನಾವಣಾ ಬಾಂಡ್ ಸಂಖ್ಯೆಗಳನ್ನು ಬಹಿರಂಗಪಡಿಸದ ಮತ್ತು ಅದರ ಹಿಂದಿನ ತೀರ್ಪನ್ನು ಸಂಪೂರ್ಣವಾಗಿ ಅನುಸರಿಸದಿದ್ದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್‌ಬಿಐ) ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲಿಯೇ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. ಕೇಂದ್ರ ಚುನಾವಣಾ ಆಯೋಗ (ಇಸಿಐ) ಎಸ್‌ಬಿಐ ಹಂಚಿಕೊಂಡ ಚುನಾವಣಾ ಬಾಂಡ್‌ಗಳ ಡೇಟಾವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಮಾಹಿತಿಯು ಕಂಪನಿಗಳು ಮತ್ತು ವ್ಯಕ್ತಿಗಳು ಮಾಡಿದ ಖರೀದಿಗಳನ್ನು ಮತ್ತು ಪ್ರತಿ ಪಕ್ಷವು ಎಷ್ಟು ಹಣವನ್ನು ಎನ್‌ಕ್ಯಾಶ್ ಮಾಡಿದೆ ಎಂಬುದನ್ನು ಪ್ರತ್ಯೇಕವಾಗಿ ತೋರಿಸಿದೆ.
ಚುನಾವಣಾ ಬಾಂಡ್‌ಗೆ ಗರಿಷ್ಠ ದೇಣಿಗೆ ನೀಡಿದ Future Gaming and Hotel Services ಬಗ್ಗೆ ಇಲ್ಲಿದೆ ಮಾಹಿತಿ!