Electoral bonds: ಎಸ್‌ಬಿಐ, ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿಯ 10 ಪ್ರಮುಖ ಅಂಶಗಳು
ಭಾರತೀಯ ಚುನಾವಣಾ ಆಯೋಗ (ಇಸಿಐ), ಮಾರ್ಚ್ 14 ರಂದು ರಾಜಕೀಯ ಪಕ್ಷಗಳಿಗೆ ದೇಣಿಗೆಗೆ ಸಂಬಂಧಿಸಿದಂತೆ ಚುನಾವಣಾ ಬಾಂಡ್‌ಗಳ ವಿವರವಾದ ಡೇಟಾವನ್ನು ಬಿಡುಗಡೆ ಮಾಡಿದೆ. ಎಸ್‌ಬಿಐ ಈ ಮಾಹಿತಿಯನ್ನು ಇಸಿಐಗೆ ನೀಡಿತ್ತು. ಪ್ರಕಟವಾದ ಮಾಹಿತಿಯ 10 ಪ್ರಮುಖ ಅಂಶಗಳು ಇಲ್ಲಿವೆ.
ನವದೆಹಲಿ (ಮಾ.15): ಭಾರತೀಯ ಚುನಾವಣಾ ಆಯೋಗವು (ECI) ಮಾರ್ಚ್ 14 ರಂದು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಪ್ರಖ್ಯಾತ ಕಂಪನಿಗಳಿಂದ ಹಿಡಿದು, ಸಣ್ಣ ಪ್ರಮಾಣದ ಕಂಪನಿಗಳು ಕೂಡ ಚುನಾವಣಾ ಬಾಂಡ್‌ಗೆ ದೊಡ್ಡ ಪ್ರಮಾಣದಲ್ಲಿ ದೇಣಿಗೆಯನ್ನು ನೀಡಿದೆ. ಅದರ ವಿವರಗಳು ಇಲ್ಲಿದೆ. ಚುನಾವಣಾ ಬಾಂಡ್ ಮಾಹಿತಿಯ 10 ಪ್ರಮುಖ ಅಂಶಗಳು ಇಲ್ಲಿವೆ.
1.ಸಾರ್ವಜನಿಕರ ದೃಷ್ಟಿಯಲ್ಲಿ ಅಷ್ಟಾಗಿ ಗಮನಕ್ಕೆ ಬರದ ಫ್ಯುಚರ್ ಗೇಮಿಂಗ್ & ಹೋಟೆಲ್ ಸರ್ವೀಸಸ್ 1368 ಕೋಟಿಯನ್ನು ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷಕ್ಕಾಗಿ ದೇಣಿಗೆ ನೀಡಿದೆ. ಆ ಮೂಲಕ ಚುನಾವಣಾ ಬಾಂಡ್‌ನ ಗರಿಷ್ಠ ಖರೀದಿದಾರ ಕಂಪನಿ ಎನಿಸಿದೆ. ವಿಶೇಷವೆಂದರೆ, ಬೃಹತ್ ಪ್ರಮಾಣದ ಕಾರ್ಪೋರೇಟ್ ಕಂಪನಿಗಳು ಕೂಡ ಇಷ್ಟು ಪ್ರಮಾಣದ ದೇಣಿಗೆ ನೀಡಿಲ್ಲ. 2022ರಲ್ಲಿ ಇದೇ ಕಂಪನಿಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.
2.ಸ್ಟೀಲ್ ಮ್ಯಾಗ್ನೆಟ್ ಉದ್ಯಮಿ ಲಕ್ಷ್ಮಿ ಮಿತ್ತಲ್, ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್‌ನ ಸುನಿಲ್ ಭಾರ್ತಿ ಮಿತ್ತಲ್ ಮತ್ತು ಅನಿಲ್ ಅಗರ್ವಾಲ್ ನೇತೃತ್ವದ ಮೈನಿಂಗ್ ದೈತ್ಯ ವೇದಾಂತ ಮುಂತಾದ ಉದ್ಯಮದ ದೈತ್ಯರು ಅಗ್ರ ದಾನಿಗಳಲ್ಲಿ ಸೇರಿದ್ದಾರೆ. ಐಟಿಸಿ, ಮಹೀಂದ್ರಾ ಮತ್ತು ಮಹೀಂದ್ರಾ, ಡಿಎಲ್‌ಎಫ್, ಪಿವಿಆರ್, ಬಿರ್ಲಾ, ಬಜಾಜ್, ಜಿಂದಾಲ್, ಸ್ಪೈಸ್‌ಜೆಟ್, ಇಂಡಿಗೋ ಮತ್ತು ಗೋಯೆಂಕಾ ಸೇರಿದಂತೆ ಇತರ ಹೆಸರಾಂತ ಸಂಸ್ಥೆಗಳು ಈ ಲಿಸ್ಟ್‌ನಲ್ಲಿದೆ.
3. ದೇಣಿಗೆ ನೀಡಿದ ಉಳಿದ ಕಂಪನಿಗಳೆದರೆ, ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಎಡೆಲ್‌ವೀಸ್, ಕೆವೆಂಟರ್, ಸುಲಾ ವೈನ್ಸ್, ವೆಲ್‌ಸ್‌ಪನ್, ಸನ್ ಫಾರ್ಮಾ, ವರ್ಧಮಾನ್ ಟೆಕ್ಸ್‌ಟೈಲ್ಸ್, ಜಿಂದಾಲ್ ಗ್ರೂಪ್, ಲಿಮಿಟ್ರೆಸ್, ಡಾಕ್ಟರ್ ಗ್ರೂಪ್, ಫಿಲಿಪ್ಸ್, ಕಾರ್ಬನ್ ರೆಡ್ಡೀಸ್ ಲ್ಯಾಬೋರೇಟರೀಸ್, ಕೇಪೀ ಎಂಟರ್‌ಪ್ರೈಸಸ್, ಸಿಪ್ಲಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್.
4. ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಗರಿಷ್ಠ ಲಾಭ ಪಡೆದುಕೊಂಡಿದೆ. ಒಟ್ಟಾರೆ ಬಂದ ದೇಣಿಗೆಗಳ ಪೈಕಿ ಶೇ. 57.77ರಷ್ಟು ಅಂದರೆ 6566 ಕೋಟಿ ರೂಪಾಯಿಗಳು ಬಿಜೆಪಿಗೆ ಸಂದಾಯವಾಗಿದೆ. ಬಿಜೆಪಿಗೆ ಅತ್ಯಂತ ಸನಿಹದ ಸ್ಪರ್ಧಿಯಾಗಿರುವ ಕಾಂಗ್ರೆಸ್ ಪಕ್ಷ ದೇಣಿಗೆ ವಿಚಾರದಲ್ಲಿ ಭಾರೀ ಪ್ರಮಾಣದಲ್ಲಿ ಹಿಂದಿದ್ದು, ಶೇ. 9.37ರಷ್ಟು ಅಂದರೆ 1123 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಮಮತಾ ಬ್ಯಾನರ್ಜಿ ಅವರ ಕೇವಲ ಬಂಗಾಳದಲ್ಲಿ ಮಾತ್ರವೇ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಶೇ. 9.11 ಅಂದರೆ 1092 ಕೋಟಿ ರೂಪಾಯಿ ದೇಣಿಗೆ ಪಡೆದಿದೆ.
5. ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಜೆಡಿ-ಎಸ್, ಎನ್‌ಸಿಪಿ, ಜೆಡಿಯು, ಆರ್‌ಜೆಡಿ, ಎಎಪಿ, ಸಮಾಜವಾದಿ ಪಕ್ಷ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಬಿಜೆಡಿ, ಗೋವಾ ಫಾರ್ವರ್ಡ್ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಜೆಎಂಎಂ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಮತ್ತು ಜನ ಸೇನಾ ಪಕ್ಷ. ಸೇರಿದಂತೆ ಚುನಾವಣಾ ಬಾಂಡ್‌ಗಳನ್ನು ಪಡೆದುಕೊಂದ ಮಾಡಿದ ಇತರ ಪಕ್ಷಗಳಾಗಿವೆ.
6. ವೈಯಕ್ತಿಕ ದಾನಿಗಳಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ, ವರುಣ್ ಗುಪ್ತಾ, ಬಿ ಕೆ ಗೋಯೆಂಕಾ, ಜೈನೇಂದ್ರ ಷಾ ಮತ್ತು ಮೋನಿಕಾ ಎಂಬ ಹೆಸರಿನಿಂದ ಮಾತ್ರ ತಿಳಿದಿರುವ ಒಬ್ಬ ವ್ಯಕ್ತಿ ಸೇರಿದ್ದಾರೆ.
7.ಮುಂಬೈ ಮೂಲದ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ₹410 ಕೋಟಿ ಮತ್ತು ಹಲ್ದಿಯಾ ಎನರ್ಜಿ ₹377 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಗಾಜಿಯಾಬಾದ್ ಮೂಲದ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು 162 ಬಾಂಡ್‌ಗಳನ್ನು ಖರೀದಿಸಿದೆ, ಹೆಚ್ಚಾಗಿ ತಲಾ ₹1 ಕೋಟಿ ರೂಪಾಯಿಯ ಬಾಂಡ್ ಇದಾಗಿದೆ. ಬಜಾಜ್ ಆಟೋ ₹ 18 ಕೋಟಿ, ಬಜಾಜ್ ಫೈನಾನ್ಸ್ ₹ 20 ಕೋಟಿ, ಮೂರು ಇಂಡಿಗೋ ಸಂಸ್ಥೆಗಳು ಸೇರಿ ₹ 36 ಕೋಟಿ, ಇಂಡಿಗೋದ ರಾಹುಲ್ ಭಾಟಿಯಾ ₹ 20 ಕೋಟಿ ಮತ್ತು ಸ್ಪೈಸ್‌ಜೆಟ್ ₹ 65 ಲಕ್ಷ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿವೆ.
8. ಈ ಬಾಂಡ್‌ಗಳನ್ನು 2019ರ ಏಪ್ರಿಲ್ 1 ಮತ್ತು2024ರ ಫೆಬ್ರವರಿ 15 ರ ನಡುವೆ ಖರೀದಿಸಲಾಗಿದೆ. 22,217 ಎಲೆಕ್ಟೋರಲ್ ಬಾಂಡ್‌ಗಳಲ್ಲಿ 22,030 ಅನ್ನು ರಾಜಕೀಯ ಪಕ್ಷಗಳು ಬಳಕೆ ಮಾಡಿಕೊಂಡಿವೆ. 15 ದಿನಗಳಲ್ಲಿ ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡದ ಬಾಂಡ್‌ಗಳನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.
SBI Electoral Bonds: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಕಂಪನಿ ಇದು…!
9. ಮುಖೇಶ್ ಅಂಬಾನಿಯವರ ನೇತೃತ್ವದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಹೆಸರುಗಳು ಈ ದಾನಿಗಳ ಪಟ್ಟಿಯಲ್ಲಿಲ್ಲ. ಭಾರತದ ಎರಡು ಬೃಹತ್ ಉದ್ಯಮ ಸಂಸ್ಥೆಗಳಾಗಿರುವ ಈ ಇಬ್ಬರ ಹೆಸರುಗಳು ಇಲ್ಲದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಚುನಾವಣಾ ಬಾಂಡ್‌ಗೆ ಗರಿಷ್ಠ ದೇಣಿಗೆ ನೀಡಿದ Future Gaming and Hotel Services ಬಗ್ಗೆ ಇಲ್ಲಿದೆ ಮಾಹಿತಿ!
10. ಚುನಾವಣಾ ಬಾಂಡ್‌ಗಳ ಡೇಟಾ ಬಿಡುಗಡೆ ಮಾಡಿದ ನಂತರ, ಕಾಂಗ್ರೆಸ್ ಇದರಲ್ಲಿ ವತ್ಯಾಸವಿದೆ ಎಂದು ಹೇಳಿದೆ. ದಾನಿಗಳ ಫೈಲ್‌ನಲ್ಲಿ 18,871 ದಾಖಲೆಗಳಿದ್ದರೆ, ಸ್ವೀಕರಿಸಿರುವವ ಫೈಲ್‌ನಲ್ಲಿ 20,421 ನಮೂದುಗಳಿವೆ. 'ವಿಶಿಷ್ಟ' ಆಲ್ಫಾ-ಸಂಖ್ಯೆಯ ಸಂಖ್ಯೆಗಳೊಂದಿಗೆ ಚುನಾವಣಾ ಬಾಂಡ್ ಡೇಟಾವನ್ನು ಒದಗಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಾರ್ಚ್ 15 ರಂದು ಎಸ್‌ಬಿಐಗೆ ನೋಟಿಸ್ ನೀಡಿತು. ಬ್ಯಾಂಕ್ ಮಾರ್ಚ್ 18 ರಂದು ಪ್ರತಿಕ್ರಿಯಿಸಬೇಕು ಎಂದು ತಿಳಿಸಿದೆ.