ಲಾಟರಿ ಕಿಂಗ್‌ ಆಫ್‌ ಇಂಡಿಯಾ ಎಂದೇ ಪ್ರಸಿದ್ದಿ ಪಡೆದ ಸ್ಯಾಂಟಿಯಾಗೋ ಮಾರ್ಟಿನ್‌ 1991ರಲ್ಲಿ ಸ್ಥಾಪಿಸಿದ ಕಂಪನಿ ಫ್ಯುಚರ್‌ ಗೇಮಿಂಟ್‌ ಆಂಡ್‌ ಹೋಟೆಲ್‌ ಸರ್ವೀಸಸ್‌.  2019ರ ಏಪ್ರಿಲ್‌ 12 ರಿಂದ 2024ರ ಜನವರಿ 24ರವರೆಗೆ ಅವರು ಚುನಾವಣಾ ಬಾಂಡ್‌ಗೆ 1368 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.  ಮಾರ್ಚ್ 14 ರಂದು ಬಿಡುಗಡೆಯಾದ ಮಾಹಿತಿಯ ಪ್ರಕಾರ ಫ್ಯುಚರ್‌ ಗೇಮಿಂಗ್‌, ಚುನಾವಣಾ ಬಾಂಡ್‌ಗೆ ಗರಿಷ್ಠ ಹಣ ದೇಣಿಗೆ ನೀಡಿದ ಕಂಪನಿ ಎನಿಸಿದೆ. 

ನವದೆಹಲಿ (ಮಾ.15): ಕೇಂದ್ರ ಚುನಾವಣಾ ಆಯೋಗ ಗುರುವಾರ ರಾತ್ರಿ ಎಸ್‌ಬಿಐ ನೀಡಿದ ಚುನಾವಣಾ ಬಾಂಡ್‌ಗಳ ವಿವರವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡುವವರೆಗೂ ಫ್ಯುಚರ್‌ ಗೇಮಿಂಗ್‌ & ಹೋಟೆಲ್‌ ಸರ್ವೀಸಸ್‌ ಎನ್ನುವ ಪುಟ್ಟ ಕಂಪನಿಯ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಎಲ್ಲರೂ ಅದಾನಿ, ಅಂಬಾನಿ ಎಷ್ಟು ಹಣ ದೇಣಿಗೆ ನೀಡಿರಬಹುದು ಎಂದು ಯೋಚನೆ ಮಾಡುತ್ತಿರುವಾಗಲೇ, ಕೊಯಮತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪುಟ್ಟ ಫ್ಯುಚರ್‌ ಗೇಮಿಂಗ್‌ & ಹೋಟೆಲ್‌ ಸರ್ವೀಸಸ್‌ ಕಂಪನಿ ಬರೋಬ್ಬರಿ 1368 ಕೋಟಿ ರೂಪಾಯಿಯನ್ನು ಚುನಾವಣಾ ಬಾಂಡ್‌ ರೂಪದಲ್ಲಿ ದೇಣಿಗೆಯಾಗಿ ನೀಡಿದೆ. ಮಾರ್ಚ್ 14 ರಂದು ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಫ್ಯುಚರ್‌ ಗೇಮಿಂಗ್‌, ಚುನಾವಣಾ ಬಾಂಡ್‌ಗೆ ಗರಿಷ್ಠ ಹಣ ದೇಣಿಗೆ ನೀಡಿದ ಕಂಪನಿ ಎನಿಸಿದೆ. ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ಎಸ್‌ಬಿಐ ನೀಡಿದ್ದ ಈ ವಿವರಗಳನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಭಾರತದ ಲಾಟರಿ ಕಿಂಗ್‌ ಎಂದೇ ಪ್ರಸಿದ್ಧಿಯಾಗಿರುವ ಸ್ಯಾಂಟಿಯಾಗೋ ಮಾರ್ಟಿನ್‌ 1991ರಲ್ಲಿ ಸ್ಥಾಪನೆ ಮಾಡಿದ್ದ ಕಂಪನಿ, 2019ರ ಏಪ್ರಿಲ್‌ 12 ರಿಂದ 2024ರ ಜನವರಿ 24ರವರೆಗೆ ಬರೋಬ್ಬರಿ 1368 ಕೋಟಿ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದೆ. ಆ ಮೂಲಕ ಗರಿಷ್ಠ ಮೊತ್ತದ ಚುನಾವಣಾ ಬಾಂಡ್‌ ಖರೀದಿ ಮಾಡಿದ ಕಂಪನಿ ಎನಿಸಿದೆ. 2024ರ ಫೆಬ್ರವರಿ 15 ರವರೆಗಿನ ಮಾಹಿತಿಯನ್ನು ಹಂಚಿಕೊಳ್ಳಲು ನ್ಯಾಯಾಲಯವು ನಿರ್ದೇಶ ನೀಡಿರುವ ಕಾರಣ, ಈ ಸಂಖ್ಯೆ ಇನ್ನಷ್ಟು ಬದಲಾಗಲೂಬಹುದಾಗಿದೆ.

ಲಾಟರಿ ಕ್ಷೇತ್ರದಲ್ಲಿ ಮಾರ್ಟಿನ್ ಅವರ ಪ್ರಯಾಣವು 13 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ಲಾಟರಿಗಳ ಖರೀದಿದಾರರು ಮತ್ತು ಮಾರಾಟಗಾರರನ್ನು ಒಳಗೊಂಡ ಭಾರತದಾದ್ಯಂತ ವ್ಯಾಪಕವಾದ ಮಾರುಕಟ್ಟೆ ಜಾಲವನ್ನು ಈತ ನಿರ್ಮಿಸಿದ್ದರು. ಆದರೆ, ಇವರ ಲಾಟರಿ ಉದ್ಯಮವೇ ಸಾಕಷ್ಟು ಕಾನೂನು ವ್ಯಾಜ್ಯಗಳನ್ನು ತಂದಿಟ್ಟಿದೆ. ಈಗಲೂ ಕೂಡ ಸ್ಯಾಂಟಿಯಾಗೋ ಮಾರ್ಟಿನ್‌ ಅನೇಕ ತನಿಖಾ ಏಜೆನ್ಸಿಗಳ ರಾಡಾರ್‌ನಲ್ಲಿದ್ದಾರೆ.

ಡಿಸೆಂಬರ್ 2021 ರಲ್ಲಿ, ಜಾರಿ ನಿರ್ದೇಶನಾಲಯವು (ಇಡಿ) ಅವರ ₹19.5 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಶಪಡಿಸಿಕೊಂಡಿದೆ. ಹಿಂದಿನ ವರ್ಷದ ಮೇನಲ್ಲಿ ನೀಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, 2009 ಏಪ್ರಿಲ್ 1 ಹಾಗೂ 2010ರ ಆಗಸ್ಟ್‌ 31ರ ನಡುವೆ ಬಹುಮಾನ-ವಿಜೇತ ಟಿಕೆಟ್ ಕ್ಲೈಮ್‌ಗಳನ್ನು ಹೆಚ್ಚಿಸುವ ಮೂಲಕ ಸಿಕ್ಕಿಂ ಸರ್ಕಾರಕ್ಕೆ 910 ಕೋಟಿ ನಷ್ಟವನ್ನು ಉಂಟುಮಾಡುವ ಮೂಲಕ ಮಾರ್ಟಿನ್ ಮತ್ತು ಅವರ ಕಂಪನಿಗಳು ಕಾನೂನುಬಾಹಿರವಾಗಿ ಲಾಭ ಗಳಿಸಿವೆ ಎಂದು ED ಆರೋಪ ಮಾಡಿತ್ತು. ಇದಲ್ಲದೆ, 2015 ರಲ್ಲಿ, ಇಡಿ ಅಧಿಕಾರಿಗಳು ಉತ್ತರ ಬಂಗಾಳದಲ್ಲಿರುವ ಸಿಲಿಗುರಿಯ ನಿವಾಸದಲ್ಲಿ ಪತ್ತೆಯಾದ 100 ಕೋಟಿ ನಗದನ್ನು ಜಪ್ತಿ ಮಾಡಿದ್ದರು. ಈ ಹಣವನ್ನು ಬಿಹಾರ ಚುನಾವಣೆಗೆ ನೀಡಲಾಗಿತ್ತು ಎನ್ನಲಾಗಿದೆ.

ಸ್ಯಾಂಟಿಯಾಗೋ ಮಾರ್ಟಿನ್‌ ಭಾರತದಲ್ಲಿ ಮಾತ್ರವಲ್ಲ, ಲೈಬೀರಿಯಾದ ಕಾನ್ಸುಲ್‌ ಜನರಲ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ದೊಡ್ಡ ಮಟ್ಟದ ಲಾಟರಿ ಉದ್ಯಮವನ್ನು ಇವರು ಆರಂಭಿಸಿದ್ದರು. ಮಾರ್ಟಿನ್ ಪ್ರಸ್ತುತ ಆಲ್ ಇಂಡಿಯಾ ಫೆಡರೇಶನ್ ಆಫ್ ಲಾಟರಿ ಟ್ರೇಡ್ ಮತ್ತು ಅಲೈಡ್ ಇಂಡಸ್ಟ್ರೀಸ್‌ನಲ್ಲಿ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದಾರೆ, ಇದು ಲಾಟರಿ ವಿತರಕರು, ಸ್ಟಾಕಿಸ್ಟ್‌ಗಳು ಮತ್ತು ಏಜೆಂಟರನ್ನು ಪ್ರತಿನಿಧಿಸುವ ಒಕ್ಕೂಟವಾಗಿದೆ.

Breaking: ಚುನಾವಣಾ ಬಾಂಡ್‌ಗಳ ನಂಬರ್‌ ಕೂಡ ಎಸ್‌ಬಿಐ ನೀಡಬೇಕು: ಸುಪ್ರೀಂ ಕೋರ್ಟ್‌

ಮಾರ್ಟಿನ್ ಕರ್ನಾಟಕ ಮತ್ತು ಮಾರ್ಟಿನ್ ಸಿಕ್ಕಿಂ ಲಾಟರಿಯಂತಹ ಅಂಗಸಂಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಫ್ಯೂಚರ್ ಗೇಮಿಂಗ್ ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಲಾಟರಿಗಳನ್ನು ಅನುಮತಿಸುವ 13 ರಾಜ್ಯಗಳಲ್ಲಿ ಅಸ್ತಿತ್ವವನ್ನು ಸ್ಥಾಪಿಸಿದೆ. 

2019-2024ರ ಅವಧಿಯಲ್ಲಿ 22,217 ಚುನಾವಣಾ ಬಾಂಡ್‌ ಖರೀದಿ, ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮಾಹಿತಿ!

1 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಈ ಕಂಪನಿಯಲ್ಲಿದ್ದಾರೆ. ಫ್ಯೂಚರ್ ಗೇಮಿಂಗ್ ತಮ್ಮ ಪ್ಲಾಟ್‌ಫಾರ್ಮ್ ಮೂಲಕ ವಿತರಿಸಲಾದ ಲಾಟರಿಗಳಿಗಾಗಿ ವಿವಿಧ ಸರ್ಕಾರಿ ಸಂಸ್ಥೆಗಳು ನಡೆಸಿದ ಲಾಟರಿ ಡ್ರಾಗಳ ಲೈವ್ ಟೆಲಿಕಾಸ್ಟ್‌ ನಡೆಸಿದ್ದರು. ಭಾರತೀಯ ಲಾಟರಿ ಉದ್ಯಮದಲ್ಲಿ ಇಂಥ ಪ್ರಯತ್ನ ಮೊದಲು ಮಾಡಿದ್ದು ಫ್ಯುಚರ್‌ ಗೇಮಿಂಗ್‌.