Asianet Suvarna News Asianet Suvarna News

ಆಸ್ಪತ್ರೆಗೆ ಹೋಗ್ತಿದ್ದ ಆಂಬ್ಯುಲೆನ್ಸ್, ಮಾರ್ಗ ಮಧ್ಯದಲ್ಲೇ ಮದ್ಯ ಸೇವಿಸಿ, ರೋಗಿಗೂ ಕುಡಿಸಿದ ಡ್ರೈವರ್!

ರೋಗಿಯೊಂದಿಗೆ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಆಂಬ್ಯುಲೆನ್ಸ್ ಚಾಲಕನು ತನ್ನ ವಾಹನವನ್ನು ನಿಲ್ಲಿಸಿದ್ದಲ್ಲದೆ, ಆಂಬ್ಯುಲೆನ್ಸ್‌ನಲ್ಲಿದ್ದ ಗಾಯಗೊಂಡವನಿಗೂ ಮದ್ಯಪಾನ ನೀಡಿದ್ದಾನೆ.

ambulance driver on way to hospital halts to booze serves peg to patient too ash
Author
First Published Dec 20, 2022, 10:11 PM IST

ರೋಗಿಗಳನ್ನು (Patients) ಆಂಬ್ಯುಲೆನ್ಸ್‌ನಲ್ಲಿ (Ambulance) ಆಸ್ಪತ್ರೆಗೆ (Hospital) ಕರೆದೊಯ್ಯುವುದು ಸವಾಲಿನ ಕೆಲಸವೇ ಸರಿ. ರೋಗಿಯ ಜೀವ ಕಾಪಾಡಲು ವೇಗವಾಗಿ ವಾಹನ ಚಾಲನೆ  (Vehicle Driving) ಜತೆಗೆ ಜಾಗರೂಕತೆಯೂ ಮುಖ್ಯವಾಗುತ್ತದೆ. ಆದರೆ, ನಾವು ಹೇಳಲು ಹೊರಟಿರುವ ಈ ಸ್ಟೋರಿ ಡಿಫರೆಂಟ್‌ ಆಗಿದೆ ನೋಡಿ.. ರೋಗಿಯೊಂದಿಗೆ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಆಂಬ್ಯುಲೆನ್ಸ್ ಚಾಲಕನು ತನ್ನ ವಾಹನವನ್ನು ನಿಲ್ಲಿಸಿದ್ದಲ್ಲದೆ, ಆಂಬ್ಯುಲೆನ್ಸ್‌ನಲ್ಲಿದ್ದ ಗಾಯಗೊಂಡವನಿಗೂ ಮದ್ಯಪಾನ ನೀಡಿದ್ದಾನೆ..! ಹೌದು, ಒಡಿಶಾದ (Odisha) ಜಗತ್‌ಸಿಂಗ್‌ಪುರ ಜಿಲ್ಲೆಯ ತಿರ್ತೋಲ್ ಪ್ರದೇಶದ ಕಟಕ್-ಪರದೀಪ್ ಎಕ್ಸ್‌ಪ್ರೆಸ್‌ವೇಯ ಸರಳಾ ರಸ್ತೆಯ ಬಳಿ ಸೋಮವಾರ ಈ ವಿಚಿತ್ರ ಘಟನೆ ನಡೆದಿದೆ.

ಆಂಬ್ಯುಲೆನ್ಸ್ ಚಾಲಕನನ್ನು ದಿಲೀಪ್ ರಾತ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಮತ್ತು ನೆರೆಹೊರೆಯವರು ಈ ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ನಂತರ ಈ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಆಂಬ್ಯುಲೆನ್ಸ್ ಚಾಲಕ ತನಗೆ ಮತ್ತು ಆಂಬ್ಯುಲೆನ್ಸ್‌ನೊಳಗೆ ಸ್ಟ್ರೆಚರ್ ಮೇಲೆ ಮಲಗಿರುವ ರೋಗಿಗೆ ಹಾಗೂ ವಾಹನದೊಳಗೆ ಕುಳಿತಿದ್ದ ಇನ್ನೊಬ್ಬ ವ್ಯಕ್ತಿಗೆ ಪೆಗ್‌ ರೆಡಿ ಮಾಡುತ್ತಿರುವುದು ಕಂಡುಬರುತ್ತದೆ. ಇನ್ನು, ಆಂಬ್ಯುಲೆನ್ಸ್‌ ಅನ್ನು ಹೆದ್ದಾರಿ ಬದಿಯ ಟಿರ್ಟೋಲ್ ಪ್ರದೇಶದಲ್ಲಿ ನಿಲ್ಲಿಸಿರಲಾಗುತ್ತದೆ ಎಂದು ವರದಿಯಾಗಿದೆ.

ಇದನ್ನು ಓದಿ: ಕೇರಳದಲ್ಲಿ ಬಾಲಕನ ಕಿತಾಪತಿ: ಆಸ್ಪತ್ರೆಯ ಆಂಬ್ಯುಲೆನ್ಸ್ ರಸ್ತೆಗಿಳಿಸಿ 8 Km ರೈಡ್

ಇನ್ನು, ಈ ವಿಡಿಯೋದಲ್ಲಿ ಚಾಲಕನು ತನ್ನ ಪೆಗ್ ಅನ್ನು ಒಂದೇ ಬಾರಿಗೆ ಕುಡಿಯುತ್ತಿರುವುದನ್ನು, ಅಲ್ಲದೆ, ಒಂದು ಕಾಲಿಗೆ ಪ್ಲಾಸ್ಟರ್‌ ಹಾಕಿರುವ ರೋಗಿ ಸಹ ಮದ್ಯಪಾನ ಸೇವಿಸುತ್ತಿರುವುದನ್ನು ನೋಡಬಹುದಾಗಿದೆ. ಸ್ಥಳದಲ್ಲಿದ್ದ ಜನರು, ಚಾಲಕನನ್ನು ಪ್ರಶ್ನೆ ಮಾಡಿದಾಗ ರೋಗಿಯು ಸ್ವತಃ ಪಾನೀಯವನ್ನು ಕೇಳಿದ್ದಾನೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ, ಆ ಆಂಬ್ಯುಲೆನ್ಸ್‌ನಲ್ಲಿ ಮಹಿಳೆ ಮತ್ತು ಮಗು ಕೂಡ ಇದ್ದರು ಎಂದೂ ತಿಳಿದುಬಂದಿದೆ.

 ಈ ವಿಡಿಯೋ ಅಧಿಕೃತ ಎಂದು ಆಂಬ್ಯುಲೆನ್ಸ್ ಚಾಲಕ ಒಡಿಶಾದ ಮಾಧ್ಯಮವೊಂದಕ್ಕೆ ಒಪ್ಪಿಕೊಂಡಿದ್ದಾನೆ. ನಾನು ಕಾಲು ಮುರಿದುಕೊಂಡಿದ್ದ ರೋಗಿಯನ್ನು ಪರದೀಪ್‌ನಿಂದ ಕಟಕ್‌ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದೆ. ಇದು ಖಾಸಗಿ ಆಂಬ್ಯುಲೆನ್ಸ್ ಮತ್ತು ಉಚಿತ ಸೇವೆಯಾಗಿತ್ತು. ಆದರೆ ನಾನು ಪ್ರಯಾಣವನ್ನು ಪ್ರಾರಂಭಿಸಿದ ತಕ್ಷಣ, ಅವರು (ರೋಗಿ) ತನಗಾಗಿ ಸ್ವಲ್ಪ ಮದ್ಯವನ್ನು ತರಲು ನನ್ನನ್ನು ವಿನಂತಿಸಲು ಪ್ರಾರಂಭಿಸಿದನು. ಅವರು ನೋವಿನಿಂದ ದೂರಿದರು ಮತ್ತು ವಿಶ್ರಾಂತಿ ಪಡೆಯಲು ಮದ್ಯವನ್ನು ಕುಡಿಯಲು ಬಯಸಿದ್ದರು ಎಂದು ದಿಲೀಪ್ ರಾತ್ ಹೇಳಿದರು.

ಇದನ್ನೂ ಓದಿ: 3368 ಆ್ಯಂಬುಲೆನ್ಸ್‌ಗೆ ಜಿಪಿಎಸ್‌: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

“ಆರಂಭದಲ್ಲಿ ನಾನು ಅವನನ್ನು ನಿರ್ಲಕ್ಷಿಸಲು ಪ್ರಯತ್ನಿಸಿದೆ. ಆದರೆ ನಾನು ಚಾಲನೆ ಮಾಡುವಾಗ ಅವನು ನನಗೆ ತೊಂದರೆ ಕೊಡುತ್ತಿದ್ದನು ಮತ್ತು ಅವನು ತೀವ್ರ ನೋವಿನಲ್ಲಿದ್ದಾನೆ ಮತ್ತು ಕಿರುಚುವುದನ್ನು ಮುಂದುವರಿಸಿದನು. ಕೊನೆಗೆ ಸರಳಾ ರಸ್ತೆಯ ಬಳಿ ಆತನಿಗೆ ನಾನು ಬಲವಂತವಾಗಿ ಮದ್ಯ ತರಬೇಕಾಯಿತು ಎಂದೂ ಅವರು ಹೇಳಿದರು.

ಅಲ್ಲದೆ, ನೀವು ಏಕೆ ಕುಡಿದಿರಿ ಎಂದು ದಿಲೀಪ್‌ ರಾತ್‌ ಅವರನ್ನು ಕೇಳಿದ್ದಕ್ಕೆ, ನನಗೆ ಪ್ರಚೋದನೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಈ ಹಿನ್ನೆಲೆ ಸ್ವಲ್ಪ ಮದ್ಯ ಸೇವಿಸಿದೆ ಎಂದು ಹೇಳಿದರು. ನಂತರ, ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು, ಮುಂದೆ ಅದನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ತುರ್ತು ಸೇವೆ ನಡುವೆ ಆ್ಯಂಬುಲೆನ್ಸ್ ಪೆಟ್ರೋಲ್ ಖಾಲಿ, ನಡು ರಸ್ತೆಯಲ್ಲಿ ರೋಗಿ ಸಾವು!

ಮತ್ತೊಂದೆಡೆ, ಇದು ಖಾಸಗಿ ಆಂಬ್ಯುಲೆನ್ಸ್ ಆಗಿರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. "ಆದರೆ ಸಂಬಂಧಿಸಿದ ಆರ್‌ಟಿಒ ಮತ್ತು ಪೊಲೀಸ್ ಠಾಣೆ ತಪ್ಪಾದ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಗತ್‌ಸಿಂಗ್‌ಪುರ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ (ಸಿಡಿಎಂಒ) ಡಾ. ಕ್ಷೇತ್ರಬಸಿ ದಾಶ್ ಪಿಟಿಐಗೆ ಹೇಳಿದರು. ಇನ್ನು, ಈ ಬಗ್ಗೆ ನಮಗೆ ಇನ್ನೂ ಔಪಚಾರಿಕ ದೂರು ಬಂದಿಲ್ಲ. ಎಫ್‌ಐಆರ್ ದಾಖಲಾದರೆ ಮಾತ್ರ ತನಿಖೆ ನಡೆಸಲಾಗುವುದು ಎಂದು ತಿರ್ತೋಲ್ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಜುಗಲ್ ಕಿಶೋರ್ ದಾಸ್ ಹೇಳಿದ್ದಾರೆ. 

ಇದನ್ನೂ ಓದಿ: ಉತ್ತರಕನ್ನಡ: ಪಶುಗಳಿಗಿಲ್ಲ ಆ್ಯಂಬುಲೆನ್ಸ್, ವೈದ್ಯರ ಸೇವೆ..!

Follow Us:
Download App:
  • android
  • ios