ತುರ್ತು ಸೇವೆಯಲ್ಲಿ ಹೊತ್ತಿ ಉರಿದ ಆ್ಯಂಬುಲೆನ್ಸ್, ನವಜಾಶ ಶಿಶು, ತಾಯಿ ಸೇರಿ ನಾಲ್ವರು ಸಜೀವ ದಹನ, ಭೀಕರ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂದು ದಿನದ ಮಗುವನ್ನು ಆಸ್ಪತ್ರೆ ದಾಖಲಿಸಲು ತೆರಳುವಾಗ ಈ ಘಟನೆ ನಡೆದಿದೆ.
ಅಹಮ್ಮದಾಬಾದ್ (ನ.18) ನವಜಾತ ಶಿಶುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ ಸಣ್ಣ ಆಸ್ಪತ್ರೆಯಿಂದ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯುವಾಗ ದುರಂತ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಆ್ಯಂಬುಲೆನ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಪರಿಣಾಮ ನವಜಾತ ಶಿಶು, ತಾಯಿ, ತಂದೆ ಸೇರಿ ನಾಲ್ವರು ಸಜೀವ ದಹನವಾಗಿದ್ದಾರೆ. ಚಾಲಕ ಸೇರಿದಂತೆ ಇತರ ಮೂವರ ಗಂಭೀರವಾಗಿ ಗಾಯಗೊಂಡ ಘಟನೆ ಗುಜರಾತ್‌ನ ಮೊಡಸಾ ನಗರದಲ್ಲಿ ನಡೆದಿದೆ.
ಮೊಡಸಾದಿಂದ ಅಹಮ್ಮದಾಬಾದ್‌ಗೆ ತೆರಳುತ್ತಿದ್ದ ವೇಳೆ ದುರಂತ
ಮೊಡಸಾ ಆಸ್ಪತ್ರೆಯಲ್ಲಿ ಮಗು ಜನನವಾಗಿತ್ತು. ಒಂದು ದಿನದ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿತ್ತು. ಹೀಗಾಗಿ ಮೊಡಸಾದ ಆಸ್ಪ್ರೆಯಿಂದ ಅಹಮ್ಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ಮೂಲಕ ಸಾಗುವಾಗ ದುರ್ಘಟನೆ ನಡೆದಿದೆ. ನವಜಾತ ಶಿಶು, ಮಗುವಿನ ತಾಯಿ ಹಾಗೂ ತಂದೆ ಆ್ಯಂಬುಲೆನ್ಸ್ ಒಳಗಿದ್ದರೆ, ಡ್ರೈವರ್ ಸೀಟು ಬಳಿ ವೈದ್ಯ ಹಾಗೂ ಹಾಗೂ ಸಹಾಯಕ ನರ್ಸ್ ಸೇರಿದಂತೆ ಮೂವರು ಕುಳಿತಿದ್ದರು.
ಆ್ಯಂಬುಲೆನ್ಸ್ ಹಿಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ
ಆ್ಯಂಬುಲೆನ್ಸ್ ಹಿಂಭಾಗದಲ್ಲಿ ನವಜಾತ ಶಿಶುವನ್ನು ಹಿಡಿದು ತಾಯಿ ಹಾಗೂ ತಂದೆ ಇಬ್ಬರು ಸಾಗುತ್ತಿದ್ದರು. ಈ ವೇಳೆ ಆ್ಯಂಬುಲೆನ್ಸ್ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವೇಗವಾಗಿ ಸಾಗುತ್ತಿದ್ದ ಆ್ಯಂಬುಲೆನ್ಸ್ ಬೆಂಕಿಯ ಕೆನ್ನಾಲಗೆ ಹೆಚ್ಚಾಗುತ್ತಿದ್ದಂತೆ ಚಾಲಕ ವಾಹನ ನಿಲ್ಲಿಸಿದ್ದಾನೆ. ಆದರೆ ಅಷ್ಟರಲ್ಲೇ ಆ್ಯಂಬುಲೆನ್ಸ್ ಬಹುತೇಕ ಭಸ್ಮವಾಗಿದೆ. ಮುಂಭಾಗದಲ್ಲಿ ಕುಳಿತಿದ್ದ ಮೂವರು ಪ್ರಯಾಸದಿಂದ ಹೊರಗೆ ಬಂದಿದ್ದಾರೆ. ಆದರೆ ಹಿಂಭಾಗದಲ್ಲಿದ್ದ ನವಜಾತ ಶಿಶು ಹಾಗೂ ಪೋಷಕರು ಸಜೀವವಾಗಿ ದಹನವಾಗಿದ್ದಾರೆ. ಒಟ್ಟು ನಾಲ್ವರು ಸಜೀವ ದಹನವಾಗಿದ್ದಾರೆ, ಮೂವರು ಗಾಯಗೊಂಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಆದರೆ ಅಷ್ಟರಲ್ಲೇ ನಾಲ್ವರು ಸಜೀವ ದಹನವಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ತನಿಖೆಗೆ ಆದೇಶ
ಆ್ಯಂಬುಲೆನ್ಸ್ ಹೊತ್ತಿಕೊಳ್ಳಲು ಕಾರಣವೇನು? ಘಟನೆ ಕುರಿತು ಸಂಪೂರ್ಣ ತನಿಖೆಗೆ ಆದೇಶ ನೀಡಲಾಗಿದೆ. ಮಗುವಿನ ಪ್ರಾಣ ಉಳಿಸಲು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ಹೋದರೆ ಇಡೀ ಕುಟುಂಬವೇ ಸರ್ವನಾಶವಾಗಿರುವ ದುರಂತ ಘಟನೆಗೆ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ. ಜೊತೆಗೆ ಆಘಾತ ವ್ಯಕ್ತವಾಗಿದೆ. ವಾಹನಗಳ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳು ಎದ್ದಿದೆ.


