ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ. ಈ ಘಟನೆಯಲ್ಲಿ ಎರಡೂ ವಿಮಾನಗಳಿಗೆ ಹಾನಿಯಾಗಿದ್ದರೂ, ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.

ನವದೆಹಲಿ (ಏ.16): ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ಸಂಸ್ಥೆಯ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿದ್ದು, ಎರಡೂ ವಿಮಾನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ದೆಹಲಿಯಿಂದ ಹೈದರಾಬಾದ್‌ಗೆ ಹೊರಡಬೇಕಿದ್ದ ಆಕಾಶ ಏರ್ (ವಿಮಾನ ಸಂಖ್ಯೆ QP1406) ಪಾರ್ಕಿಂಗ್ ಬೇನಿಂದ ಹಿಂದಕ್ಕೆ ಚಲಿಸುತ್ತಿತ್ತು (Push Back). ಇದೇ ಸಮಯದಲ್ಲಿ ಲೇಹ್‌ನಿಂದ ದೆಹಲಿಗೆ ಆಗಮಿಸಿದ್ದ ಸ್ಪೈಸ್‌ಜೆಟ್ B737-700 ವಿಮಾನವು ಟ್ಯಾಕ್ಸಿವೇ ಮೂಲಕ ಗೇಟ್‌ನತ್ತ ಚಲಿಸುತ್ತಿತ್ತು. ಈ ವೇಳೆ ಎರಡೂ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ.

ವಿಮಾನಗಳಿಗೆ ಭಾರಿ ಹಾನಿ

ಈ ಅಪಘಾತದಲ್ಲಿ ಸ್ಪೈಸ್‌ಜೆಟ್ ವಿಮಾನದ ಬಲ ರೆಕ್ಕೆಯ ತುದಿ (Right Winglet) ಮುರಿದುಹೋಗಿದೆ. ಇತ್ತ ಆಕಾಶ ಏರ್ ವಿಮಾನದ Left Horizontal Stabilizer ಹಾನಿಯಾಗಿದೆ. ಘಟನೆ ನಡೆದ ತಕ್ಷಣ ಎಚ್ಚೆತ್ತ ಆನ್‌ ಗ್ರೌಂಡ್‌ ಸಿಬ್ಬಂದಿ, ಎರಡೂ ವಿಮಾನಗಳಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ.

ವಿಮಾನಗಳು ಗ್ರೌಂಡೆಡ್; ತನಿಖೆಗೆ ಆದೇಶ

ಅಪಘಾತದ ಬೆನ್ನಲ್ಲೇ ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ಎರಡೂ ವಿಮಾನಗಳನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ನಿಲ್ಲಿಸಲಾಗಿದೆ. ಅಂದರೆ ಈ ವಿಮಾನಗಳು ದುರಸ್ತಿಯಾಗುವವರೆಗೂ ಮುಂದಿನ ಹಾರಾಟ ನಡೆಸುವಂತಿಲ್ಲ. ಸದ್ಯ ಈ ಭೀಕರ ಘಟನೆಗೆ ಕಾರಣವೇನು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.

ಆಕಾಶ ಏರ್‌ಲೈನ್ಸ್ ಸ್ಪಷ್ಟನೆ

ಈ ಕುರಿತು ಪ್ರತಿಕ್ರಿಯಿಸಿರುವ ಆಕಾಶ ಏರ್‌ಲೈನ್ಸ್ ವಕ್ತಾರರು, "ಏಪ್ರಿಲ್ 16, 2026ರಂದು ದೆಹಲಿಯಿಂದ ಹೈದರಾಬಾದ್‌ಗೆ ಹೊರಡಬೇಕಿದ್ದ QP 1406 ವಿಮಾನವು ಪಾರ್ಕಿಂಗ್ ಪ್ರದೇಶದಲ್ಲಿ ತಾಂತ್ರಿಕ ಕಾರಣದಿಂದ ಮರಳಬೇಕಾಯಿತು. ಹೈದರಾಬಾದ್‌ಗೆ ತೆರಳಬೇಕಿದ್ದ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಬೇಗ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲು ನಮ್ಮ ತಂಡ ಶ್ರಮಿಸುತ್ತಿದೆ," ಎಂದು ತಿಳಿಸಿದ್ದಾರೆ.

Scroll to load tweet…