ನವದೆಹಲಿ(ಜು.07) ತಂಟೆ, ತಕರಾರು ಮಾಡಿಕೊಂಡು ಭಾರತದ ಗಡಿಯೊಳಕ್ಕೆ ಬಂದಿದ್ದ ಚೀನಾ ಹಿಂದಕ್ಕೆ ಸರಿದು ಮನೆ ಸೇರಿಕೊಂಡಿದ್ದು ಯಾಕೆ? ಎಂಬುದಕ್ಕೆ ಉತ್ತರ ಸಿಕ್ಕಿದೆ. ಇದಕ್ಕೆಲ್ಲ ಕಾರಣ ಭದ್ರತಾ ಸಲಹೆಗಾರ ಅಜಿತ್ ದೋವೆಲ್.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ನಡುವೆ ನಡೆದ ದೂರವಾಣಿ  ಮಾತುಕತೆ ನಂತರ ಚೀನಾ ಹಿಂದೆ ಸರಿದಿದೆ ಎನ್ನುವುದು ಬಹಿರಂಗವಾಗಿದೆ.

ಭಾನುವಾರ ಬೆಳಗ್ಗೆ  8. 45  ರ ಸುಮಾರಿಗೆ ಭಾರತದ ಸೇನಾ ಮುಖ್ಯಸ್ಥ ಎಂಎಂ ನರವಾನೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ಕೆರೆ ಮಾಡಿ ವಿವರ  ನೀಡಿದ್ದಾರೆ.  ಇದಾದ ಮೇಲೆ ಎರಡು ದೇಶಗಳ ರಾಯಭಾರಿಗಳು ಸಂಜೆ ಮಾತನಾಡುವುದು ಎಂದು ತೀರ್ಮಾನ ಮಾಡಲಾಗಿದೆ. ತುರ್ತಾಗಿ ಭಾರತದ ಭದ್ರತಾ ಸಲಹೆಗಾರ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ನಡುವಿನ ಮಾತುಕತೆ ಫಿಕ್ಸ್ ಆಗಿದೆ.

ಮೋದಿ ಲಡಾಖ್ ಭೇಟಿಯ ಹಿಂದಿನ ಸೂತ್ರಧಾರ ದೋವಲ್

ಸಂಜೆ ಮಾತುಕತೆ ಶುರುವಾಗಿದ್ದು ಸುಮಾರು ಎರಡು ಗಂಟೆ ಕಾಲ ನಡೆದಿದೆ.  ಹಳೆಯ ಒಪ್ಪಂದಗಳ ಉಲ್ಲಂಘನೆ, ಜೂನ್  15  ರ ಘಟನೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಪರಸ್ಪರರು ಅಭಿಪ್ರಾಯ ಮುಂದಿಟ್ಟಿದ್ದು ಕೊನೆಗೆ ಒಂದು  ತೀರ್ಮಾನಕ್ಕೆ ಬಂದಿದ್ದಾರೆ. ಚೀನಾ ಲೈನ್ ಆಫ್ ಕಂಟ್ರೋಲ್ ಉಲ್ಲಂಘಿಸಿರುವುದನ್ನು ದೋವಲ್ ಮತ್ತೆ ಮನವರಿಕೆ ಮಾಡಿಕೊಟ್ಟಿದ್ದಾರೆ.
 
ಶಾಂತಿ ಮಾತುಕತೆಗಳಿಗೂ ಮುನ್ನ ಗಡಿಯಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಿ ಎಂದು ಧೋವಲ್ ತಿಳಿಸಿದ್ದಾರೆ.   ಇದಾದ ನಂತರವೇ ಚೀನಾ ಗಲ್ವಾನ್ ವ್ಯಾಲಿ ಗಡಿಯಿಂದ ತನ್ನ ಸೇನೆಯನ್ನು ಸುಮಾರು 1 ಕಿ.ಮೀ ಹಿಂದಕ್ಕೆ ಕರೆಸಿಕೊಂಡಿದೆ.   ಪಾಕಿಸ್ತಾನದ ಮೇಲಿನ ಸರ್ಜಿಕಲ್ ದಾಳಿ ಇರಬಹುದು ಅಥವಾ ಸಿಎಎ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಸಂದರ್ಭ ಇರಬಹುದು ಅಜಿತ್ ದೋವಲ್ ಎಲ್ಲ ಕಡೆ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ.