Asianet Suvarna News Asianet Suvarna News

ಮಹಿಳೆಯ ದೇಹದಿಂದ 47 ಕೆಜಿ ತೂಕದ ಬೃಹತ್‌ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆದ ವೈದ್ಯರು

  • ಮಹಿಳೆಯ ದೇಹದಲ್ಲಿದ್ದ 47 ಕೆಜಿ ತೂಕದ ಬೃಹತ್‌ ಗಡ್ಡೆ
  • 4 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಗೆಡ್ಡೆ ಹೊರತೆಗೆದ ವೈದ್ಯರು
  • ಗುಜರಾತ್‌ ಮೂಲದ ಮಹಿಳೆಯ ಹೊಟ್ಟೆಯಲ್ಲಿದ್ದ ಗೆಡ್ಡೆ
     
Ahmedabad Doctors remove 47 kg tumour from Gujarat womans stomach akb
Author
Bangalore, First Published Feb 18, 2022, 2:48 PM IST | Last Updated Feb 18, 2022, 3:02 PM IST

ಅಹಮದಾಬಾದ್: 56 ವರ್ಷದ ಮಹಿಳೆಯೊಬ್ಬರ ದೇಹದಲ್ಲಿದ್ದ 47 ಕೆಜಿ ತೂಕದ ಗಡ್ಡೆಯನ್ನು ಗುಜರಾತ್‌ನ ಅಹ್ಮದಾಬಾದ್‌ನ ವೈದ್ಯರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ತೆಗೆದು ಹಾಕಿ  ವೈದ್ಯಕೀಯ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಭಾರತದಲ್ಲಿ ಇದುವರೆಗೆ ನಡೆದ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಲಾದ ಅಂಡಾಶಯವಲ್ಲದ ಗಡ್ಡೆಗಳಲ್ಲಿ ಈ ಗಡ್ಡೆಯೇ ಅತ್ಯಂತ ದೊಡ್ಡ ಗೆಡ್ಡೆ ಎಂದು ಹೇಳಲಾಗುತ್ತಿದೆ. 

ಮಹಿಳೆಯ ಗುರುತನ್ನು ಪತ್ತೆ ಮಾಡಿಲ್ಲ. ಈ ಮಹಿಳೆ 18 ವರ್ಷಗಳಿಂದ ಗೆಡ್ಡೆಯನ್ನು  ತಮ್ಮ ದೇಹದಲ್ಲಿ ಹೊತ್ತಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತೆಗೆದು ಹಾಕಲಾದ ಕಿಬ್ಬೊಟ್ಟೆಯ ಗೋಡೆಯ ಅಂಗಾಂಶಗಳು ಮತ್ತು ಹೆಚ್ಚುವರಿ ಚರ್ಮವನ್ನು ಸೇರಿಸಿ, ಒಟ್ಟು  54 ಕೆಜಿಯಷ್ಟು ತೂಕದ ಬೇಡದ ವಸ್ತುವನ್ನು ದೇಹದಿಂದ ತೆಗೆದು ಹಾಕಲಾಗಿದೆ.

ಶಸ್ತ್ರಚಿಕಿತ್ಸೆಯ ಮೊದಲು ರೋಗಿಯು ನಿಲ್ಲಲು ಸಾಧ್ಯವಾಗದ ಕಾರಣ ನಾವು ರೋಗಿಯನ್ನು ತೂಕ ಮಾಡಲು ಸಾಧ್ಯವಾಗಲಿಲ್ಲ. ಆದರೆ ಶಸ್ತ್ರಚಿಕಿತ್ಸೆಯ ನಂತರ ಆಕೆಯ ತೂಕ 49 ಕಿಲೋಗ್ರಾಂಗೆ ಇಳಿದಿತ್ತು ಎಂದು ಶಸ್ತ್ರಚಿಕಿತ್ಸೆ ಮಾಡಿದ ಅಪೋಲೋ ಆಸ್ಪತ್ರೆಯ (Apollo Hospital)ಶಸ್ತ್ರಚಿಕಿತ್ಸೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ (gastroenterologist)ಡಾ ಚಿರಾಗ್ ದೇಸಾಯಿ ( Dr Chirag Desai)ಮಾಧ್ಯಮಗಳಿಗೆ ತಿಳಿಸಿದರು.

ಗ್ರೀಕ್ ಹಿಪೊಕ್ರೆಟಿಕ್ ಪ್ರಮಾಣ ವಚನಕ್ಕೆ ಕೋಕ್: ವೈದ್ಯಕೀಯ ಪದವೀಧರರಿಗೆ ಇನ್ಮುಂದೆ 'ಚರಕ್ ಶಪತ್'?

ನಮ್ಮ ವೈದ್ಯಕೀಯ ಪರಿಭಾಷೆಯಲ್ಲಿ ರೆಟ್ರೊಪೆರಿಟೋನಿಯಲ್ ಲಿಯೋಮಿಯೋಮಾ ಎಂದು ಹೇಳುವ ಗೆಡ್ಡೆ ಸೇರಿದಂತೆ ದೇಹಕ್ಕೆ ಅಗತ್ಯವಿರದ ಅಂಗಾಂಶವನ್ನು ತೆಗೆದಾಗ ಮಹಿಳೆಯ ದೇಹದ ನಿಜವಾದ ತೂಕಕ್ಕಿಂತ ಈ ಗಡ್ಡೆಯ ತೂಕವೇ ಹೆಚ್ಚಿತ್ತು. ಇದು ಅಪರೂಪದ ಪ್ರಕರಣವಾಗಿದೆ ಎಂದು ವೈದ್ಯರು ಹೇಳಿದರು.

ಆರಂಭದಲ್ಲಿ ಗೆಡ್ಡೆ ಇಷ್ಟು ದೊಡ್ಡದಾಗಿರಲಿಲ್ಲ ಎಂದು ಮಹಿಳೆಯ ಹಿರಿಯ ಮಗ ಹೇಳಿದ್ದಾರೆ. ಮಹಿಳೆಯು ತನ್ನ ಹೊಟ್ಟೆಯ ಪ್ರದೇಶದಲ್ಲಿ ಹೇಳಿಕೊಳ್ಳಲಾಗದಷ್ಟು ತೂಕವನ್ನು ಹೊಂದಿದ್ದರು. ಗ್ಯಾಸ್ಟ್ರಿಕ್‌ ಸಮಸ್ಯೆ ಇರಬಹುದು ಎಂದು ಭಾವಿಸಿ ಕೆಲವು ಆಯುರ್ವೇದ ಮತ್ತು ಅಲೋಪತಿ ಔಷಧಿಗಳನ್ನು ಈ ಮಹಿಳೆ ತೆಗೆದುಕೊಂಡಿದ್ದರು. ಆದಾಗ್ಯೂ, ಇದು ಹಾನಿಕರವಲ್ಲದ ಗೆಡ್ಡೆ ಎಂದು 2004 ರಲ್ಲಿ ವೈದ್ಯರು ತಿಳಿಸಿದ್ದರು. 

ಬಳಿಕ ಮಹಿಳೆಯ ಕುಟುಂಬವು ಆಕೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲು ನಿರ್ಧರಿಸಿತು. ಆದರೆ ಈ ಗೆಡ್ಡೆ ದೇಹದೊಳಗಿನ ಎಲ್ಲಾ ಆಂತರಿಕ ಅಂಗಗಳಿಗೆ ಜೋಡಿಸಿಕೊಂಡಿದೆ ಎಂದು ತಿಳಿದು ಬಂದಾಗ ವೈದ್ಯರು ಶಸ್ತ್ರಚಿಕಿತ್ಸೆಯ ಕಾರ್ಯವಿಧಾನ ತುಂಬಾ ಅಪಾಯಕಾರಿ ಎಂದು ಪರಿಗಣಿಸಿದ್ದರು.ಕಳೆದ ಎರಡು ವರ್ಷಗಳಲ್ಲಿ, ಗೆಡ್ಡೆಯ ಗಾತ್ರವು ದ್ವಿಗುಣಗೊಂಡಿತ್ತು ಮತ್ತು ಮಹಿಳೆ ನಿರಂತರ ನೋವಿನಿಂದ ಬಳಲುತ್ತಿದ್ದರು. ಅವರಿಗೆ ಹಾಸಿಗೆಯಿಂದ ಏಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರೋಗಿಯ ಕುಟುಂಬದವರು ಮತ್ತೊಮ್ಮೆ ವೈದ್ಯರನ್ನು ಸಂಪರ್ಕಿಸಿದರು. 

ವೈದ್ಯ ದೇಸಾಯಿ(Desai) ಮಾತನಾಡಿ, ಗಡ್ಡೆಯಿಂದಾಗಿ ಮಹಿಳೆಯ ದೇಹದ ಎಲ್ಲಾ ಆಂತರಿಕ ಅಂಗಗಳು ಬೇರೆಡೆ ಪಲ್ಲಟಗೊಂಡಿವೆ. ಹೊಟ್ಟೆಯ ಭಾಗದಲ್ಲಿ ದೊಡ್ಡದಾದ ಗಡ್ಡೆಯಿಂದ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಗರ್ಭಾಶಯ ಇತ್ಯಾದಿಗಳು ಪಕ್ಕಕ್ಕೆ ತಳ್ಳಲ್ಪಟ್ಟವು. ಹೀಗಾಗಿ, ಯೋಜನೆ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸುವುದು ಸಾಧ್ಯವಾಗಿರಲಿಲ್ಲ. ಈ ಬೃಹತ್‌ ಗಡ್ಡೆಯು CT ಸ್ಕ್ಯಾನ್ ಯಂತ್ರದ ಗ್ಯಾಂಟ್ರಿಯನ್ನು ಅಡ್ಡಿಪಡಿಸಿತು. ಹೀಗಾಗಿ ನಾವು ಸ್ಕ್ಯಾನ್‌ ಮಾಡಲು ಸ್ಕ್ಯಾನಿಂಗ್ ಯಂತ್ರದ ಕೆಳಗಿನ ಪ್ಲೇಟ್ ಅನ್ನು ಬದಲಿಸುವ ತಂತ್ರಜ್ಞನನ್ನು ಕರೆತರಬೇಕಾಯಿತು ಎಂದು ಹೇಳಿದರು. 

ಸದಾ ಎಲ್ಲರನ್ನೂ ನಗಿಸೋ ಕಲಾವಿದ Sunil Groverಗೆ ಹೃದಯ ಶಸ್ತ್ರಚಿಕಿತ್ಸೆ!

ಗೆಡ್ಡೆಯ ದೊಡ್ಡ ಗಾತ್ರದ ಕಾರಣದಿಂದ ಅದರ ಮೂಲವನ್ನು ಕಂಡುಹಿಡಿಯುವುದು ಅಸಾಧ್ಯವೆಂಬುದು ವೈದ್ಯರಿಗೆ ಅರ್ಥವಾಗಿತ್ತು. ರೋಗಿಯು ಕುಸಿದು ಬೀಳುವುದನ್ನು ತಡೆಯಲು ಶಸ್ತ್ರಚಿಕಿತ್ಸೆಗೆ ಒಂದು ವಾರ ಮೊದಲು ವಿಶೇಷ ಔಷಧ ಮತ್ತು ಚಿಕಿತ್ಸೆಯನ್ನು ನೀಡಲಾಯಿತು. ಬಳಿಕ ನಾಲ್ವರು ಶಸ್ತ್ರಚಿಕಿತ್ಸಕರು ಸೇರಿದಂತೆ ಎಂಟು ವೈದ್ಯರ ತಂಡವು ನಾಲ್ಕು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಈ ಬೃಹತ್‌  ಗಡ್ಡೆಯನ್ನು ಹೊರ ತೆಗೆದರು. ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿ ಹದಿನೈದು ದಿನಗಳನ್ನು ಕಳೆದ ನಂತರ ರೋಗಿಯನ್ನು ಸೋಮವಾರ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Latest Videos
Follow Us:
Download App:
  • android
  • ios