ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಇರುವ ಅಸರ್ವಾ ಮೀನು ಮಾರುಕಟ್ಟೆಯು ವಿಮಾನಗಳಿಗೆ ಹಕ್ಕಿಗಳ ಢಿಕ್ಕಿಯ ಅಪಾಯವನ್ನು ಹೆಚ್ಚಿಸುತ್ತಿದೆ. ಮಕರ್ಬಾಗೆ ಮಾರುಕಟ್ಟೆಯನ್ನು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಇನ್ನೂ ಅನುಮೋದಿಸಲಾಗಿಲ್ಲ, ಇದರಿಂದಾಗಿ ವಿಮಾನಗಳ ಟೇಕ್‌ಆಫ್ ಮತ್ತು ಲ್ಯಾಂಡಿಂಗ್‌ಗೆ ಸವಾಲಾಗಿದೆ.
ಅಹಮದಾಬಾದ್ (ಜೂ.13): ಮೇಘನಿನಗರದಲ್ಲಿ ಗುರುವಾರ ಸಂಭವಿಸಿದ ವಿಮಾನ ಅಪಘಾತಕ್ಕೆ ಹಕ್ಕಿಗೆ ಢಿಕ್ಕಿ ಹೊಡೆದಿರುವುದೂ ಕೂಡ ಒಂದು ಕಾರಣ ಎನ್ನುವ ಶಂಕೆಯ ನಡುವೆ ಅಹಮದಾಬಾದ್ ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವ ಅಸರ್ವಾ ಮೀನು ಮಾರುಕಟ್ಟೆ ಕುರಿತಾಗಿ ಚರ್ಚೆ ಆರಂಭವಾಗಿದೆ. ವಿಮಾನ ನಿಲ್ದಾಣದ ಸಮೀಪದಲ್ಲಿರುವ ಅಸರ್ವಾದ ತಾತ್ಕಾಲಿಕ ಮೀನು ಮಾರುಕಟ್ಟೆಯ ಬಳಿ ಅಪಾರ ಪ್ರಮಾಣದ ಪಕ್ಷಿಗಳು ಹಾರಾಟ ಮಾಡುತ್ತಿರುತ್ತದೆ. ಇವುಗಳಿಂದ ವಿಮಾನಕ್ಕೆ ಪ್ರತಿದಿನವೂ ಟೇಕ್‌ಆಪ್ ಹಾಗೂ ಲ್ಯಾಂಡಿಂಗ್ ಸವಾಲಿನಿಂದ ಕೂಡಿರುತ್ತದೆ ಎನ್ನಲಾಗಿದೆ.
ಪ್ರತಿ ದಿನದ ಆತಂಕದ ಹೊರತಾಗಿಯೂ, ಅಧಿಕಾರಿಗಳು ನಿರ್ಧರಿಸಿದಂತೆ ಮಾರುಕಟ್ಟೆಯನ್ನು ದೂರಕ್ಕೆ, ಮಕರ್ಬಾಗೆ ಸ್ಥಳಾಂತರಿಸಲು ವಿಫಲರಾಗಿದ್ದಾರೆ.
2011 ರಲ್ಲಿ, ಗುಜರಾತ್ ಮೀನುಗಾರಿಕೆ ಕೇಂದ್ರ ಸಹಕಾರ ಸಂಘ ಲಿಮಿಟೆಡ್ (GFCCA) ಅಸರ್ವಾದಲ್ಲಿ 10,241 ಚದರ ಮೀಟರ್ ವಿಸ್ತೀರ್ಣದ ಮೀನು ಮಾರುಕಟ್ಟೆಯನ್ನು ಸ್ಥಾಪಿಸಲು ನಿರ್ಧಾರ ಮಾಡಿತ್ತು. ಆದರೆ, ಈ ಯೋಜನೆಗೆ ಸ್ಥಳೀಯ ನಾಯಕರ ವಿರೋಧವಿತ್ತು. ನಂತರ GFCCA ನಗರದ ಪಶ್ಚಿಮದಲ್ಲಿ, ಸ್ಯಾಟಲೈಟ್, ಬೊಡಕ್‌ದೇವ್ ಮತ್ತು ಮಕರ್ಬಾದಂತಹ ಪ್ರದೇಶಗಳಲ್ಲಿ ಒಂದು ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿತು. ಅಹಮದಾಬಾದ್ ಮಹಾನಗರ ಪಾಲಿಕೆ (AMC)ಯ ಎಸ್ಟೇಟ್ ಇಲಾಖೆಯು GFCCA ಗೆ ಹಲವಾರು ಆಯ್ಕೆಗಳನ್ನು ತೋರಿಸಿದ ನಂತರ, ಮಕರ್ಬಾದ TP ಯೋಜನೆ ಸಂಖ್ಯೆ 84 (B) ನಲ್ಲಿ 5,601 ಚದರ ಮೀಟರ್ ವಿಸ್ತೀರ್ಣದ ಜಮೀನನ್ನು ಅಂತಿಮಗೊಳಿಸಲಾಗಿತ್ತು.
ನಂತರ ಎಎಂಸಿ ಎರಡೂ ಪ್ಲಾಟ್‌ಗಳ ಮೌಲ್ಯಮಾಪನ ನಡೆಸಿತು, ಅದರ ಮೌಲ್ಯಮಾಪನ ಸಮಿತಿಯು ಅಸರ್ವಾ ಪ್ಲಾಟ್‌ನ ಒಟ್ಟು ಮೌಲ್ಯವನ್ನು ಪ್ರತಿ ಚದರ ಮೀಟರ್‌ಗೆ 42,700 ರೂ.ಗಳಂತೆ 43.72 ಕೋಟಿ ರೂ. ಎಂದು ತಿಳಿಸಿದ್ದರೆ. ಮಕರ್ಬಾ ಪ್ಲಾಟ್‌ನ ಮೌಲ್ಯವನ್ನು ಪ್ರತಿ ಚದರ ಮೀಟರ್‌ಗೆ 76,150 ರೂ.ಗಳಂತೆ 42.65 ಕೋಟಿ ರೂ. ಎಂದು ನಿಗದಿಪಡಿಸಲಾಯಿತು.
ಅಸರ್ವಾ ಜಮೀನಿಗೆ ಬದಲಾಗಿ ಜಿಎಫ್‌ಸಿಸಿಎಗೆ ಮಕರ್ಬಾ ಜಮೀನನ್ನು ನೀಡಲು ನಿರ್ಧರಿಸಲಾಯಿತು, ಮೀನುಗಾರಿಕಾ ಸಂಘವು ಎಎಂಸಿಗೆ 1.07 ಕೋಟಿ ರೂ. ವ್ಯತ್ಯಾಸದ ಹಣವನ್ನು ಪಾವತಿ ಮಾಡಿತು.
ಈ ಪ್ಲಾಟ್ ವಿನಿಮಯ ಪ್ರಸ್ತಾವನೆಯನ್ನು ಅಕ್ಟೋಬರ್ 6, 2022 ರಲ್ಲಿ ಸ್ಥಾಯಿ ಸಮಿತಿಯ ಮುಂದೆ ಮಂಡಿಸಲಾಗಿತ್ತು. ಆದರೆ ಅಂದಿನಿಂದ ಅನುಮೋದನೆ ಪಡೆದಿಲ್ಲ. ಇದರ ಪರಿಣಾಮವಾಗಿ, AMC ಅಸರ್ವಾದಲ್ಲಿನ ಮೀನು ಮಾರುಕಟ್ಟೆಗೆ ತಾತ್ಕಾಲಿಕ ಅಂಗಡಿಗಳನ್ನು ಒದಗಿಸಿತು, ಅದು ಇನ್ನೂ ಅಸ್ತಿತ್ವದಲ್ಲಿದೆ.
"GFCCA ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಂದಾಜು 2.90 ಕೋಟಿ ರೂ. ಅನುದಾನದೊಂದಿಗೆ ಅಸರ್ವಾದಲ್ಲಿ ಮೀನು ಮಾರುಕಟ್ಟೆಯನ್ನು ಸ್ಥಾಪಿಸಬೇಕಿತ್ತು, ಆದರೆ ಈ ಯೋಜನೆಗೆ 2019 ರಿಂದ ಸ್ಥಳೀಯ ನಾಯಕರ ವಿರೋಧ ವ್ಯಕ್ತವಾಗಿತ್ತು. ಮಕರ್ಬಾದಲ್ಲಿನ ಒಂದು ಜಾಗದಲ್ಲಿ ಮಾರುಕಟ್ಟೆಯನ್ನು ಸ್ಥಾಪಿಸಬೇಕಿತ್ತು, ಆದರೆ ನಿವೇಶನ ವಿನಿಮಯದ ಪ್ರಸ್ತಾವನೆಯನ್ನು ಅನುಮೋದಿಸಲಾಗಿಲ್ಲ. ಈ ವಿಷಯದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಮತ್ತು ಪ್ರಸ್ತುತ ಮಾರುಕಟ್ಟೆಯು ಅಸರ್ವಾದಲ್ಲಿ AMC ನಿಂದ ಹಂಚಿಕೆಯಾದ ಅಂಗಡಿಗಳಿಂದ ನಡೆಯುತ್ತದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾರಿವಾಳದ ರೇಸ್‌ಗೂ ಇಲ್ಲ ನಿಷೇಧ!
ಗುಜರಾತ್ ರಾಜ್ಯ ಸರ್ಕಾರದ ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ, ವಿಮಾನ ನಿಲ್ದಾಣದಲ್ಲಿ ಪಕ್ಷಿಗಳ ಡಿಕ್ಕಿಯನ್ನು ತಡೆಗಟ್ಟಲು 2022 ಅಕ್ಟೋಬರ್ 6ರಂದು ಪರಿಸರ ಸಮಿತಿಯ ಸಭೆ ನಡೆಯಿತು. ಹೆಚ್ಚು ಚರ್ಚಿಸಲ್ಪಟ್ಟ ವಿಷಯವೆಂದರೆ ನಗರ ವಿಮಾನ ನಿಲ್ದಾಣದ ಬಳಿ ಪಾರಿವಾಳ ರೇಸಿಂಗ್ ಸ್ಪರ್ಧೆಗಳ ವಿಚಾರ. ವಿಮಾನ ನಿಲ್ದಾಣದ ಅಧಿಕಾರಿಗಳು ಈ ಪ್ರದೇಶದಲ್ಲಿ ಅಂತಹ ಸ್ಪರ್ಧೆಗಳನ್ನು ನಿಷೇಧಿಸುವಂತೆ AMC ಯನ್ನು ವಿನಂತಿಸಿದ್ದರು, ಆದರೆ ನಾಗರಿಕ ಸಂಸ್ಥೆಯು ಈ ವಿಷಯದಿಂದ ಕೈತೊಳೆದು, ಅದು ತನ್ನ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದೆ. ಅಂತಿಮವಾಗಿ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರಿವಾಳ ಸ್ಪರ್ಧೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲು AMC ಮತ್ತು ವಿಮಾನ ನಿಲ್ದಾಣ ನಿರ್ವಾಹಕರು ಜಂಟಿ ಭೇಟಿಗಳನ್ನು ನಡೆಸುತ್ತಾರೆ ಎಂದು ನಿರ್ಧರಿಸಲಾಯಿತು. ಅಸರ್ವಾ, ಸರ್ದಾರ್‌ನಗರ, ಕುಬೇರ್‌ನಗರ ಮತ್ತು ಮೇಘನಿನಗರ ಸೇರಿದಂತೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
