Asianet Suvarna News Asianet Suvarna News

ಯೌವ್ವನದ ಆಸೆ ತೋರಿಸಿ ವೃದ್ಧರಿಗೆ ಕೋಟ್ಯಾಂತರ ರೂ ಮೋಸ: ವಿದೇಶಕ್ಕೆ ಹಾರಿದ ಕಿಲಾಡಿ ಜೋಡಿ

ಕಾನ್ಪುರದಲ್ಲಿ ವಯಸ್ಸನ್ನು ಹಿಮ್ಮೆಟ್ಟಿಸುವ ಇಸ್ರೇಲ್ ಟೈಮ್ ಮೆಷಿನ್ ಇದೆ ಎಂದು ನಂಬಿಸಿ 12ಕ್ಕೂ ಹೆಚ್ಚು ವೃದ್ಧರಿಂದ ಕೋಟ್ಯಾಂತರ ರೂ ವಂಚಿಸಿ ದಂಪತಿ ಪರಾರಿಯಾದ ಘಟನೆ ನಡೆದಿದೆ. 

Age Reversal Fraud: UP Couple Cheats Elderly Out of Rs 35 Crore
Author
First Published Oct 4, 2024, 9:55 PM IST | Last Updated Oct 4, 2024, 9:55 PM IST

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕಿಲಾಡಿ ದಂಪತಿಗಳಿಬ್ಬರು ವಯಸ್ಸನ್ನು ರಿವರ್ಸ್‌ ಮಾಡುವ ಮೇಡ್ ಇನ್‌ ಇಸ್ರೇಲ್ ಟೈಮ್‌ ಮೆಷಿನ್ ನಮ್ಮ ಬಳಿ ಇದೆ ಎಂದು ಹೇಳಿದ್ದ 12ಕ್ಕೂ ಹೆಚ್ಚು ವೃದ್ಧರಿಗೆ ಮೋಸ ಮಾಡಿದ್ದಾರೆ. ಅವರಿಗೆ ಮತ್ತೆ ತಮ್ಮನ್ನು ಯೌವ್ವನಕ್ಕೆ ಮರಳಿಸುತ್ತೇವೆ ಎಂಬ ಭರವಸೆ ನೀಡಿ ಅವರಿಂದ ಒಟ್ಟು 35 ಕೋಟಿ ರೂಪಾಯಿಗಳನ್ನು ಈ ದಂಪತಿ ಪೀಕಿದ್ದಾರೆ. 

ರಾಜೀವ್ ಕುಮಾರ್ ದುಬೆ ಹಾಗೂ ಆತನ ಪತ್ನಿ ರಶ್ಮಿ ದುಬೆ ಎಂಬುವವರೇ ಹೀಗೆ ಮೋಸ ಮಾಡಿದವರು. ಈ ಕಿಲಾಡಿ ಮೋಸಗಾರ ದಂಪತಿ ಕಾನ್ಪುರದಲ್ಲಿ ರಿವೈವಲ್ ವರ್ಲ್ಡ್ ಎಂಬ ಥೆರಪಿ ಸೆಂಟರ್‌ನ್ನು ಸ್ಥಾಪಿಸಿದ್ದರು. ಅಲ್ಲಿ ತಾವು ಇಸ್ರೇಲ್‌ನಿಂದ ತಂದಿರುವ ಟೈಮ್ ಮೆಷಿನ್ ಇದ್ದು, ಈ ಮೆಷಿನ್ ಮಾಡುವ ಥೆರಪಿಯಿಂದ 60 ವರ್ಷ ಪ್ರಾಯದ ವೃದ್ಧರು 25ರ ಪ್ರಾಯದ ತಾರುಣ್ಯಕ್ಕೆ ತಿರುಗುತ್ತಾರೆ ಎಂದು ವೃದ್ಧರಿಗೆ ನಂಬಿಸಿ ಅವರ ಬಳಿಯಿಂದ ಕೋಟ್ಯಾಂತರ ರೂಪಾಯಿಗಳನ್ನು ಪೀಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಭಾರತದಲ್ಲಿ ಶೇ.65ರಷ್ಟು ವೃದ್ಧರಿಗೆ ಆರ್ಥಿಕ ಭದ್ರತೆಯಿಲ್ಲ..!

ಈ ಮೆಷಿನ್‌ನಿಂದ ಮಾಡುವ ಆಕ್ಸಿಜನ್ ಥೆರಪಿ ಮೂಲಕ ವೃದ್ಧರು ಮತ್ತೆ ತಮ್ಮ ಯೌವ್ವನವನ್ನು ಮರಳಿ ಪಡೆಯುತ್ತಾರೆ ಎಂದು ಈ ಜೋಡಿ ನಂಬಿಸಿದ್ದರು. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಈ ದಂಪತಿ, ಇತ್ತೀಚೆಗೆ ವಾಯು ಮಾಲಿನ್ಯ ತೀವ್ರವಾಗಿದ್ದು, ಇದರಿಂದ ಬೇಗನೆ ಮನುಷ್ಯರು ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಆಕ್ಸಿಜನ್ ಥೆರಪಿಯಿಂದ ವೃದ್ಧರು ಮತ್ತೆ ಯೌವ್ವನಕ್ಕೆ ಮರಳಬಹುದು ಎಂದು ನಂಬಿಸಿದ್ದರು. ಅಲ್ಲದೇ ಈ ತಮ್ಮ ಸೇವೆಗೆ ಅವರು ಪ್ಯಾಕೇಜ್‌ಗಳನ್ನು ಮಾಡಿದ್ದರು. ಇದರ ಒಟ್ಟು 10 ಥೆರಪಿಗಳಿಗೆ 6 ಸಾವಿರ ಹಾಗೂ ಮೂರು ವರ್ಷದ ಥೆರಪಿಗೆ 90 ಸಾವಿರ ಎಂದು ಪ್ಯಾಕೇಜ್ ನಿಗದಿ ಮಾಡಿದ್ದರು. ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಜಲಿ ವಿಶ್ವಕರ್ಮ ಮಾಹಿತಿ ನೀಡಿದ್ದಾರೆ. 

ಹೀಗೆ ಈ ಖತರ್ನಾಕ್ ದಂಪತಿಗಳಿಂದ ಮೋಸ ಹೋದವರಲ್ಲಿ ಒಬ್ಬರಾದ ರೇಣು ಸಿಂಗ್ ಎಂಬುವವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಗೆ ಈ ದಂಪತಿ 10.75 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ. ನನ್ನಂತೆಯೇ 100ಕ್ಕೂ ಹೆಚ್ಚು ಜನರಿಂದ ಅಂದಾಜು 35 ಕೋಟಿಯಷ್ಟು ಹಣ ವಸೂಲಿ ಮಾಡಿದ್ದಾರೆ ಎಂದು ರೇಣು ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ರೇಣು ಸಿಂಗ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಕಿಲಾಡಿ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಕೆಲ ಮೂಲಗಳ ಪ್ರಕಾರ ಜನರಿಗೆ ಇಷ್ಟೊಂದು ಮೊತ್ತದಲ್ಲಿ ವಂಚಿಸಿದ ಈ ಜೋಡಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. 

ಫ್ಲ್ಯಾಟ್‌ ಕೊಡಿಸುವ ನೆಪದಲ್ಲಿ ಹಿರಿ ಜೀವಗಳಿಗೆ ಮೋಸ, ಇಡಿ ವಿಚಾರಣೆಗೆ ಹಾಜರಾದ ನಟಿ, ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌

Latest Videos
Follow Us:
Download App:
  • android
  • ios