ಫ್ಲ್ಯಾಟ್ ಕೊಡಿಸುವ ನೆಪದಲ್ಲಿ ಹಿರಿ ಜೀವಗಳಿಗೆ ಮೋಸ, ಇಡಿ ವಿಚಾರಣೆಗೆ ಹಾಜರಾದ ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್
ಅಂದಾಜು 400ಕ್ಕೂ ಅಧಿಕ ಹಿರಿಯ ಜೀವಗಳಿಗೆ ಫ್ಲ್ಯಾಟ್ ಕೊಡಿಸುವ ನೆಪದಲ್ಲಿ ಅಕ್ರಮವಾಗಿ ತನ್ನ ಕಂಪನಿಗೆ ಹಣ ಪಡೆದುಕೊಂಡಿರುವ ಆರೋಪದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಈಗ ಇಡಿ ಕುಣಿಕೆಯಲ್ಲಿದ್ದಾರೆ. ಮಂಗಳವಾರ ಅವರು ಈ ಕುರಿತು ವಿಚಾರಣೆಗೂ ಹಾಜರಾಗಿದ್ದಾರೆ.
ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಈಗ ಇಡಿ ಇಕ್ಕಳದಲ್ಲಿ ಸಿಲುಕಿಕೊಂಡಿದ್ದಾರೆ.
ಅಂದಾಜು 400ಕ್ಕೂ ಅಧಿಕ ಹಿರಿಯ ಜೀವಗಳಿಗೆ ಫ್ಲ್ಯಾಟ್ ಕೊಡಿಸುವ ನೆಪದಲ್ಲಿ ಅಕ್ರಮವಾಗಿ ಹಣ ಪಡೆದುಕೊಂಡಿರುವ ಆರೋಪದಲ್ಲಿ ನುಸ್ರತ್ ಜಹಾನ್ ಈಗ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಗಾಗಲಿದ್ದಾರೆ,
ಇತ್ತೀಚೆಗೆ ಇಡಿಯಿಂದ ಸಮನ್ಸ್ ಸ್ವೀಕರಿಸಿದ್ದ ನುಸ್ರತ್ ಜಹಾನ್, ಮಂಗಳವಾರ ಸಾಲ್ಟ್‌ಲೇಕ್‌ನಲ್ಲಿರುವ ಸಿಜಿಓ ಆಫೀಸ್‌ನಲ್ಲಿ ವಿಚಾರಣೆಗೆ ಹಾಜರಾದರು.
400ಕ್ಕೂ ಅಧಿಕ ವೃದ್ಧರಿಗೆ ಕೈಗೆಟುಕುವ ದರದಲ್ಲಿ ಫ್ಲ್ಯಾಟ್‌ಗಳನ್ನು ನೀಡುವುದಾಗಿ ಈಕೆ ನಿರ್ದೇಶಕಿಯಾಗಿದ್ದ ಕಂಪನಿ ಹಣವನ್ನು ಸ್ವೀಕರಿಸಿತ್ತು. ಆದರೆ, ಅವರಿಗೆ ಫ್ಲ್ಯಾಟ್‌ಗಳನ್ನು ನೀಡದೇ ವಂಚನೆ ಮಾಡಿರುವ ಆರೋಪವ್ನು ಇವರ ಮೇಲೆ ಮಾಡಲಾಗಿದೆ.
ಜಾರಿ ನಿರ್ದೇಶನಾಲಯ (ED) ಮಂಗಳವಾರ ಸಾಲ್ಟ್ ಲೇಕ್‌ನಲ್ಲಿರುವ CGO ಕಾಂಪ್ಲೆಕ್ಸ್‌ನಲ್ಲಿರುವ ತನ್ನ ಕಛೇರಿಗೆ ನುಸ್ರತ್ ಅವರನ್ನು ಕರೆಸಿದ್ದು, 7 ಸೆನ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಈಕೆಗೆ ಇರುವ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಲಿದೆ.
ಪಶ್ಚಿಮ ಬಂಗಾಳದ ಬಸಿರ್‌ಹತ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ 33 ವರ್ಷದ ನುಸ್ರತ್ ಜಹಾನ್, ಈ ಕಂಪನಿಯ ಮಾಜಿ ನಿರ್ದೇಶಕಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ನಾಯಕಿಯ ವಿರುದ್ಧ ದೂರು ದಾಖಲಿಸಿರುವ ಹಿರಿಯ ನಾಗರಿಕರಿಗೆ ಬಿಜೆಪಿಯ ಶಂಕುದೇಬ್ ಪಾಂಡಾ ಸಹಾಯ ಮಾಡುತ್ತಿದ್ದಾರೆ.
ಟಿಎಂಸಿಗೆ ವಿರೋಧಿಯಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ನುಸ್ರತ್ ಜಹಾನ್ ವಿರುದ್ಧ ಖಚಿತವಾದ ಸಾಕ್ಷ್ಯಾಧಾರಗಳಿದ್ದರೆ, ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಅಗ್ನಿಮಿತ್ರ ಪಾಲ್ ಹೇಳಿದ್ದಾರೆ.
ಈಗ ಇರುವುದು ಕೇಂದ್ರದಲ್ಲಿ ಮೋದಿ ಸರ್ಕಾರ. ನೀವು ಮುಖ್ಯಮಂತ್ರಿ, ರಾಜಕಾರಣಿ ಅಥವಾ ಫಿಲ್ಮ್ ಸ್ಟಾರ್. ಯಾರೇ ಅಗಿದ್ದರೂ, ಜನರಿಗೆ ಮೋಸ ಮಾಡಿದರೆ ಈ ಸರ್ಕಾರ ಬಿಡೋದಿಲ್ಲ ಎಂದು ಅಗ್ನಿಮಿತ್ರ ಪಾಲ್ ಹೇಳಿದ್ದಾರೆ.
ಜೀವಮಾನ ಪೂರ್ತಿ ದುಡಿದ ಹಣವನ್ನು ಆ ಹಿರಿಯ ಜೀವಗಳು ನುಸ್ರತ್ ಜಹಾನ್‌ಗೆ ಕೊಟ್ಟು ಒಂದು ಸೂರು ಪಡೆಯಲು ನಿರ್ಧಾರ ಮಾಡಿದ್ದರು. ಆದರೆ, ಇವರಿಗೆ ಫ್ಲ್ಯಾಟ್ ಸಿಕ್ಕಿಲ್ಲ. ಕೊನೆಗೆ ಅವರು ನೀಡಿದ ಹಣ ಕೂಡ ವಾಪಾಸ್ ಸಿಕ್ಕಿಲ್ಲ ಎಂದಿದ್ದಾರೆ.
ಈ ಪ್ರಕರಣದಲ್ಲಿ ತನಿಖೆ ತೀವ್ರವಾಗಿ ಸಾಗುತ್ತಿದೆ. ಹಾಗೇನಾದರೂ ಪೊಲೀಸರಿಗೆ ಸೂಕ್ತವಾದ ಸಾಕ್ಷ್ಯ ಸಿಕ್ಕಿದಲ್ಲಿ, ಶಿಕ್ಷೆಯಿಂದ ನುಸ್ರತ್ ಜಹಾನ್ ಪಾರಾಗೋದು ಆಧ್ಯವೇ ಇಲ್ಲ ಎಂದು ಅಗ್ನಿಮಿತ್ರ ಪಾಲ್ ಹೇಳಿದ್ದಾರೆ
2014-15ರಲ್ಲಿ 400ಕ್ಕೂ ಅಧಿಕ ಹಿರಿಯ ವ್ಯಕ್ತಿಗಳು ಫ್ಲ್ಯಾಟ್ ಸಲುವಾಗಿ ನುಸ್ರತ್ ಜಹಾನ್ ನಿರ್ದೇಶಕಿಯಾಗಿದ್ದ ಕಂಪನಿಯಲ್ಲಿ ತಮ್ಮ ಹಣ ನೀಡಿದ್ದರು.
ಪ್ರತಿಯೊಬ್ಬರಿಗೂ 1 ಸಾವಿರ ಸ್ಕ್ವೇರ್‌ಫೀಟ್‌ನ ಫ್ಲ್ಯಾಟ್ ನೀಡುವ ಭರವಸೆಯೊಂದಿಗೆ ನುಸ್ರತ್ ಜಹಾನ್ ಕಂಪನಿ ಇವರಿಂದ ತಲಾ 5.5 ಲಕ್ಷ ರೂಪಾಯಿ ಹಣ ಸ್ವೀಕರಿಸಿತ್ತು.
ಆದರೆ, ಸಮಯ ಮೀರಿದರೂ ಇವರ ಕಂಪನಿಯಿಂದ ಫ್ಲ್ಯಾಟ್ ಸಿಕ್ಕಿರಲಿಲ್ಲ. ಕೊಟ್ಟ ಹಣವನ್ನು ವಾಪಾಸ್ ನೀಡಿ ಎಂದರೂ ಕಂಪನಿ ಈ ಹಣವನ್ನು ವಾಪಾಸ್ ಮಾಡಿರಲಿಲ್ಲ.
ಈ ಹಗರಣ ನಡೆಯುವ ಸಮಯದಲ್ಲಿ ನುಸ್ರತ್ ಜಹಾನ್ 7 ಸೆನ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿದ್ದರು.
ಈ ಸಂಬಂಧ ಬಿಜೆಪಿ ಮುಖಂಡ ಶಂಕುದೇವ್ ಪಂಡಾ, ಇಡಿಗೆ ದೂರು ನೀಡಿದ್ದರು. ಆ ನಂತರ ಇಡಿ ತನ್ನ ತನಿಖೆಯನ್ನು ಆರಂಭ ಮಾಡಿತ್ತು. ಸೆ.5 ರಂದು ಮೊದಲ ಸಮನ್ಸ್ ನೀಡಲಾಗಿತ್ತು.
ಹಿರಿಯ ನಾಗರಿಕರಿಗೆ ನಗರದ ನ್ಯೂ ಟೌನ್‌ನಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ನುಸ್ರತ್ ಜಹಾನ್ ಭರವಸೆ ನೀಡಿದ್ದರು ಎಂದು ಆರೋಪಿಸಲಾಗಿತ್ತು.
ನುಸ್ರತ್ ಜಹಾನ್ ಸುದ್ದಿಯಾಗುತ್ತಿರುವುದು ಇದು ಮೊದಲ ಬಾರಿಯೇನಲ್ಲ. 2019ರಲ್ಲಿ ನಿಖಿಲ್ ಜೈನ್ ಎನ್ನುವ ಉದ್ಯಮಿಯನ್ನು ಟರ್ಕಿಯಲ್ಲಿ ಮದುವೆಯಾಗಿದ್ದಾಗಿ ಹೇಳಿದ್ದರು. ಕೋಲ್ಕತ್ತಾದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕೂಡ ನಡೆದಿತ್ತು. ಆದರೆ, ಅದಾದ ಕೆಲವೇ ದಿನಗಳಲ್ಲಿ ನನಗೆ ಮದುವೆಯೇ ಆಗಿಲ್ಲ. ನಿಖಿಲ್ ಜೈನ್ ಜೊತೆ ನಾನು ಲಿವ್ ಇನ್ ರಿಲೇಶನ್‌ಷಿಪ್‌ನಲ್ಲಿದ್ದೆ ಎಂದಿದ್ದರು.
ಅದಾದ ಬಳಿಕ ಕೋರ್ಟ್ ಕೂಡ ಇವರಿಬ್ಬರ ಮದುವೆ ಅಮಾನ್ಯ ಎಂದಿತ್ತು. 2021ರಲ್ಲಿ ನಟ ಯಶ್ ದಾಸ್‌ಗುಪ್ತಾ ಅವರನ್ನು ವಿವಾಹವಾಗಿರುವ ಈಕೆ 2021ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.