Asianet Suvarna News Asianet Suvarna News

ಕೊಲಿಜಿಯಂ ಚರ್ಚೆ ವಿವರ ಬಹಿರಂಗ ಅಸಾಧ್ಯ ಎಂದ ಸುಪ್ರೀಂಕೋರ್ಟ್‌: ಜಡ್ಜ್‌ ಆಯ್ಕೆಗೆ ಪ್ರತ್ಯೇಕ ಆಯೋಗ..?

ಕೊಲಿಜಿಯಂನ ಚರ್ಚೆಯ ವಿವರ ಬಹಿರಂಗ ಅಸಾಧ್ಯ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ತಾತ್ಕಾಲಿಕ ನಿರ್ಧಾರ, ಚರ್ಚೆಗಳನ್ನು ಬಹಿರಂಗಪಡಿಸಲು ಆಗದು ಎಂದು ಅಜೆಂಡಾ, ಚರ್ಚೆಯ ವಿವರ ಕೋರಿದ್ದ ಅರ್ಜಿ ವಜಾ ಮಾಡಲಾಗಿದೆ. 

supreme court rejects plea seeking details of collegium meeting ash
Author
First Published Dec 10, 2022, 9:35 AM IST

ನವದೆಹಲಿ: ಹೈಕೋರ್ಟ್‌ (High Court) ಹಾಗೂ ಸುಪ್ರೀಂಕೋರ್ಟ್‌ಗೆ (Supreme Court) ನ್ಯಾಯಮೂರ್ತಿಗಳನ್ನು (Judges) ಆಯ್ಕೆ ಮಾಡುವ ಕೊಲಿಜಿಯಂ (Collegium) ಸಭೆಗಳ (Meetings) ಚರ್ಚೆಯ ವಿವರಗಳನ್ನು ಅಥವಾ ತಾತ್ಕಾಲಿಕ ನಿರ್ಧಾರಗಳನ್ನು ಮಾಹಿತಿ ಹಕ್ಕು ಕಾಯ್ದೆ (Right to Information) (ಆರ್‌ಟಿಐ) (RTI) ಅಡಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಕೊಲಿಜಿಯಂ ಸಭೆಯಲ್ಲಿ ಪಾಲ್ಗೊಂಡ ಎಲ್ಲಾ ಜಡ್ಜ್‌ಗಳು ಅಂತಿಮವಾಗಿ ಕೈಗೊಂಡ ಹಾಗೂ ತಮ್ಮ ಸಹಿ ಹಾಕಿದ ನಿರ್ಧಾರವನ್ನು ಮಾತ್ರ ಸಾರ್ವಜನಿಕವಾಗಿ ಬಹಿರಂಗಪಡಿಸಬಹುದು ಎಂದೂ ತಿಳಿಸಿದೆ.

2018ರ ಡಿಸೆಂಬರ್‌ 12ರಂದು ನಡೆದ ಕೊಲಿಜಿಯಂ ಸಭೆಯ ಅಜೆಂಡಾ ಏನಾಗಿತ್ತು ಎಂಬುದನ್ನು ತಿಳಿಸಬೇಕೆಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿ ಶುಕ್ರವಾರ ಆದೇಶ ನೀಡಿದ ಸುಪ್ರೀಂಕೋರ್ಟ್‌, ಕೊಲಿಜಿಯಂ ಎಂಬುದು ಬಹು ಸದಸ್ಯರ ಸಮೂಹವಾಗಿದ್ದು, ಅದರ ತಾತ್ಕಾಲಿಕ ನಿರ್ಧಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿತು. ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ ನಡುವೆ ಕೊಲಿಜಿಯಂ ವ್ಯವಸ್ಥೆಗೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿರುವ ಹೊತ್ತಿನಲ್ಲೇ ಈ ಆದೇಶ ಹೊರಬಿದ್ದಿರುವುದು ಗಮನಾರ್ಹವಾಗಿದೆ.

ಇದನ್ನು ಓದಿ: ಜಡ್ಜ್‌ ನೇಮಕಾತಿ ಆಯೋಗ ರಚನೆ ರದ್ದು: ಸಿಜೆ ಎದುರೇ ಸುಪ್ರೀಂಗೆ ಉಪರಾಷ್ಟ್ರಪತಿ ಚಾಟಿ

2018ರ ಡಿಸೆಂಬರ್‌ 12ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಕೆಲ ಜಡ್ಜ್‌ಗಳನ್ನು ಸುಪ್ರೀಂಕೋರ್ಟ್‌ಗೆ ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿತ್ತು. ಆದರೆ, 2019ರ ಜನವರಿ 10ರಂದು ನಡೆದ ಸಭೆಯಲ್ಲಿ ಹಿಂದಿನ ಕೊಲಿಜಿಯಂನ ಸದಸ್ಯರಾಗಿದ್ದ ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ಅವರ ನಿವೃತ್ತಿಯಿಂದಾಗಿ ಬದಲಾದ ಸದಸ್ಯರ ಉಪಸ್ಥಿತಿಯಲ್ಲಿ 2018ರ ಡಿಸೆಂಬರ್‌ 12ರ ಸಭೆಯಲ್ಲಿ ಕೆಲ ಹೆಸರುಗಳನ್ನು ಕೇವಲ ಚರ್ಚೆ ಮಾಡಲಾಗಿತ್ತೇ ಹೊರತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ ಎಂದು ನಿರ್ಣಯ ಅಂಗೀಕರಿಸಲಾಗಿತ್ತು. ಹೀಗಾಗಿ 2018ರ ಡಿಸೆಂಬರ್‌ 12ರ ಕೊಲಿಜಿಯಂ ಸಭೆಯ ಅಜೆಂಡಾವನ್ನು ಬಹಿರಂಗಪಡಿಸಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಆರ್‌ಟಿಐ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಅದನ್ನು ವಜಾಗೊಳಿಸಿತ್ತು. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಐಎಎಸ್‌ ರೀತಿ ಜಡ್ಜ್‌ ಆಯ್ಕೆ ಇಲ್ಲ: ಕೇಂದ್ರ
ದೇಶದಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಗಳನ್ನು ಆಯ್ಕೆ ಮಾಡುವ ರೀತಿಯಲ್ಲೇ ಜಿಲ್ಲಾ ಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡಲು ಅಖಿಲ ಭಾರತ ನ್ಯಾಯಾಂಗ ಸೇವೆ (ಎಐಜೆಎಸ್‌) ವ್ಯವಸ್ಥೆಯನ್ನು ‘ಈ ಹಂತದಲ್ಲಿ’ ಜಾರಿಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಕೊಲಿಜಿಯಂ ವ್ಯವಸ್ಥೆಯ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ಸುಪ್ರಿಂಕೋರ್ಟ್‌ ನಡುವೆ ಬಹಿರಂಗವಾಗಿ ಭಿನ್ನಾಭಿಪ್ರಾಯಗಳು ವಿನಿಮಯವಾಗುತ್ತಿರುವ ವೇಳೆಯಲ್ಲೇ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಲೋಕಸಭೆಗೆ ಈ ಕುರಿತು ಶುಕ್ರವಾರ ಲಿಖಿತ ಉತ್ತರ ನೀಡಿದ್ದಾರೆ. ‘ಸಂಬಂಧಪಟ್ಟವರ ನಡುವೆ ಸದ್ಯ ಉದ್ಭವಿಸಿರುವ ಭಿನ್ನಾಭಿಪ್ರಾಯಗಳ ಕಾರಣ ಅಖಿಲ ಭಾರತ ನ್ಯಾಯಾಂಗ ವ್ಯವಸ್ಥೆಯನ್ನು ಈ ಹಂತದಲ್ಲಿ ಜಾರಿಗೊಳಿಸುವ ಪ್ರಸ್ತಾಪ ಇಲ್ಲ’ ಎಂದು ರಿಜಿಜು ಹೇಳಿದ್ದಾರೆ. 

ಇದನ್ನೂ ಓದಿ: ಜಡ್ಜ್‌​ ನೇಮಕ ವಿಳಂಬ: ಸುಪ್ರೀಂ ಗರಂ; ಕೇಂದ್ರದಿಂದ ಮತ್ತೆ 20 ನ್ಯಾಯಮೂರ್ತಿಗಳ ಹೆಸರು ವಾಪಸ್..!

ಜಿಲ್ಲಾ ಕೋರ್ಟ್‌ಗಳ ನ್ಯಾಯಾಧೀಶರ ಆಯ್ಕೆಗೆ ಎಐಜೆಎಸ್‌ ಬೇಕು ಎಂದು 2012ರಿಂದ ಕೇಂದ್ರ ಸರ್ಕಾರ ವಾದಿಸುತ್ತಾ ಬಂದಿದ್ದು, ಆ ವರ್ಷವೇ ಸರ್ಕಾರದ ಮಟ್ಟದಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆಯಾಗಿತ್ತು. ಆದರೆ 2013ರಲ್ಲಿ ನಡೆದ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ಸಭೆಯಲ್ಲಿ ಈ ಕುರಿತು ಇನ್ನಷ್ಟು ಚರ್ಚಿಸುವ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ನಂತರ 2015ರಲ್ಲಿ ನಡೆದ ಮುಖ್ಯ ನ್ಯಾಯಮೂರ್ತಿಗಳ ಸಭೆಯಲ್ಲಿ ಕೆಳಹಂತದ ಕೋರ್ಟ್‌ಗಳಲ್ಲಿ ಖಾಲಿಯಿರುವ ಜಡ್ಜ್‌ಗಳ ಹುದ್ದೆಗಳನ್ನು ತುಂಬಲು ಆಯಾ ಹೈಕೋರ್ಟ್‌ಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ಧರಿಸಲಾಗಿತ್ತು. ನಂತರ ಎಐಜೆಎಸ್‌ ಪ್ರಸ್ತಾಪ ನೆನೆಗುದಿಗೆ ಬಿದ್ದಿತ್ತು. ಇತ್ತೀಚೆಗೆ ಆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಆದರೆ, ಆ ಕುರಿತ ಪ್ರಶ್ನೆಗೆ ಕೇಂದ್ರ ಸರ್ಕಾರ ನಕಾರಾತ್ಮಕ ಉತ್ತರ ನೀಡಿದೆ.

‘ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ಸರಿಯಾಗಿ ರೂಪಿಸಿದ ಎಐಜೆಎಸ್‌ ವ್ಯವಸ್ಥೆ ಬಹಳ ಮುಖ್ಯವಾಗಿದೆ. ಕಾನೂನಿನಲ್ಲಿ ಪರಿಣತಿ ಪಡೆದ ಪ್ರತಿಭೆಗಳನ್ನು ನ್ಯಾಯಾಂಗಕ್ಕೆ ತರಲು ಹಾಗೂ ಮೀಸಲಾತಿಯ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಇದು ಅಗತ್ಯವಾಗಿದೆ. ಆದರೆ ಸದ್ಯಕ್ಕೆ ಅಂತಹ ಪ್ರಸ್ತಾವ ಇಲ್ಲ’ ಎಂದು ರಿಜಿಜು ತಿಳಿಸಿದ್ದಾರೆ.

ಸುಪ್ರೀಂ ಜಡ್ಜ್‌ಗಳ ಆಯ್ಕೆಗೆ ಪ್ರತ್ಯೇಕ ಆಯೋಗ: ಖಾಸಗಿ ಮಸೂದೆ
ಉನ್ನತ ನ್ಯಾಯಾಧೀಶರ ನೇಮಿಸುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ನಡುವೆ ಸಂಘರ್ಷ ನಡೆದಿರುವ ನಡುವೆಯೇ, ಈ ಕುರಿತ ಖಾಸಗಿ ಮಸೂದೆಯೊಂದು ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ರಾಷ್ಟ್ರೀಯ ನ್ಯಾಯಾಂಗ ಆಯೋಗದ ಮೂಲಕ ನ್ಯಾಯಾಧೀಶರ ನೇಮಕಾತಿಯನ್ನು ನಿಯಂತ್ರಿಸುವ ಕುರಿತಾದ ‘ರಾಷ್ಟ್ರೀಯ ನ್ಯಾಯಾಂಗ ಆಯೋಗ ಮಸೂದೆ-2022’ ಖಾಸಗಿ ವಿಧೇಯಕವನ್ನು ಸಿಪಿಎಂ ಸಂಸದ ಬಿಕಾಶ್‌ ರಂಜನ್‌ ಭಟ್ಟಾಚಾರ್ಯ ಮಂಡಿಸಿದರು.

ಇದನ್ನೂ ಓದಿ: ಕೊಲಿಜಿಯಂ ಕುರಿತು ಕೇಂದ್ರ ಸಚಿವ ರಿಜಿಜು ಹೇಳಿಕೆಗೆ ನಿವೃತ್ತ ಸಿಜೆಐ ಲಲಿತ್ ಆಕ್ಷೇಪ

ಇದಕ್ಕೆ ಆಪ್‌ನ ರಾಘವ್‌ ಛಡ್ಡಾ ವಿರೋಧಿಸಿ, ‘ಈಗಾಗಲೇ ಕೊಲಿಜಿಯಂ ವ್ಯವಸ್ಥೆ ಜಡ್ಜ್‌ಗಳ ನೇಮಕಕ್ಕೆ ಇದೆ. ಲೋಪಗಳಿದ್ದರೆ ಅದನ್ನು ಸುಧಾರಿಸಲು ಸಲಹೆ ನೀಡೋಣ. ಕೊಲಿಜಿಯಂ ರದ್ದು ಮಾಡಿ ಜಡ್ಜ್‌ಗಳ ನೇಮಕಕ್ಕೆ ಪ್ರತ್ಯೇಕ ನ್ಯಾಯಾಂಗ ಆಯೋಗ ಏಕೆ?’ ಎಂದು ಪ್ರಶ್ನಿಸಿದರು. ಆದರೆ ಇತರ ಪಕ್ಷಗಳು ಅವರಿಗೆ ದನಿಗೂಡಿಸಲಿಲ್ಲ. ಈಗಾಗಿ ಮಸೂದೆ ಮಂಡನೆಗೆ ಭಾರಿ ಧ್ವನಿಮತದ ಅಂಗೀಕಾರ ದೊರೆಯಿತು.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ನ್ಯಾಯಾಂಗ ಆಯೋಗ ರಚನೆ ಮಾಡುವ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ. ಆದರೆ ಇಂಥದ್ದೇ ಮಸೂದೆಯನ್ನು 2016ರಲ್ಲಿ ಕೇಂದ್ರ ಕಾಯ್ದೆ ಮಾಡಿತ್ತಾದರೂ ಸುಪ್ರೀಂಕೋರ್ಟ್‌ ಅದನ್ನು ರದ್ದುಪಡಿಸಿತ್ತು.

ಇದನ್ನೂ ಓದಿ: ಜಡ್ಜ್‌ಗಳ ನೇಮಕ ವಿಳಂಬ: ಕೇಂದ್ರ ಸರ್ಕಾರದ ಬಗ್ಗೆ Supreme Court ಗರಂ

Follow Us:
Download App:
  • android
  • ios