* ಕಾಂಗ್ರೆಸ್‌ಗೆ ಹೊಸ ಸಂಕಟ ಶುರು* ಪಂಜಾಬ್ ಬೆನ್ನಲ್ಲೇ ಛತ್ತೀಸ್‌ಗಡ ಕಾಂಗ್ರೆಸ್‌ನಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ* ಎರಡೂವರೆ ವರ್ಷಗಳ ಹಿಂದೆ ಕೊಟ್ಟಿದ್ದ ವಾಗ್ದಾನ ಈಡೇರಿಸುವಂತೆ ಸಿಂಗ್ ಡಿಯೋ ಒತ್ತಾಯ

ನವದೆಹಲಿ, (ಸೆ.20): ಪಂಜಾಬ್ ಆಯ್ತು ಇನ್ನು ಛತ್ತೀಸ್‌ಗಡ.. ಇದು ಕಾಂಗ್ರೆಸ್‌ಗೆ ಹೊಸ ಸಂಕಟ ಶುರುವಾಗಿದೆ. 

ಹೌದು...ಎರಡೂವರೆ ವರ್ಷಗಳ ಹಿಂದೆ ಕೊಟ್ಟಿದ್ದ ವಾಗ್ದಾನ ಈಗ ಪೂರೈಸಿ ಅಂತ ಛತ್ತೀಸಗಡದ ಆರೋಗ್ಯ ಮಂತ್ರಿ ಟಿ.ಎಸ್.ಸಿಂಗ್ ಡಿಯೋ ಜನಪತ್ ಬಾಸ್ ಗಳ ಬಾಗಿಲು ತಟ್ಟಿದ್ದಾರೆ.

ವಾರದ ಹಿಂದಷ್ಟೆ ಛತ್ತೀಸಗಡ ಸಿಎಂ ಭೂಪೇಶ್ ಬಘೇಲಾ ರಾಹುಲ್ ಗಾಂಧಿಯವರನ್ನು ಭೇಟಿಯಾದ ಬೆನ್ನಲ್ಲೇ ಡಿಯೋ ದೆಹಲಿಗೆ ಬಂದಿದ್ದಾರೆ. 

ಛತ್ತೀಸ್‌ಗಢ ಮುಖ್ಯಮಂತ್ರಿ ಬಾಘೇಲ್‌ ರಾಜೀನಾಮೆ ಸುಳಿವು!

 'ವೈಯಕ್ತಿಕ ಕೆಲಸದ ಮೇಲೆ ಬಂದಿದ್ದೇನೆ. ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತವೆ' ಅಂಥ ದೆಹಲಿಯಲ್ಲಿ ಡಿಯೋ ಕೊಟ್ಟಿರುವ ಹೇಳಿಕೆ ಜನಪತ್ ಕಟ್ಟೆಯ ಚರ್ಚೆಯ ವಸ್ತುವಾಗಿದೆ. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ವೇಳೆ ಅರ್ಧ ಅವಧಿ ಬಿಟ್ಟು ಕೊಡಿಸುವುದಾಗಿ ಪಕ್ಷದ ಬಾಸ್ ಗಳು ಭರವಸೆ ಕೊಟ್ಟಿದ್ದರಂತೆ. ಈ ಟೈಮ್ ಜೂನ್ ಗೆ ಮುಗಿದಿದ್ದು, ಮೂರು ತಿಂಗಳು ಹೆಚ್ಚಾಗಿದೆ. ಕೊಟ್ಟ ಭರವಸೆ ಉಳಿಸಿಕೊಳ್ಳಿ ಎಂದು ಡಿಯೋ ಪಟ್ಟು ಹಿಡಿದಿದ್ದಾರೆ.

ಡಿಯೋ, ಛತ್ತೀಸ್‌ಗಡ ಪ್ರಭಾವಿ ನಾಯಕ. ಸಾಕಷ್ಟು ಜನಪ್ರಿಯತೆ ಇರುವ ಮುಖಂಡ ಕೂಡ. 2018ರಲ್ಲಿ ಪಕ್ಷ ಅಧಿಕಾರ ಹಿಡಿಯಲು ಬಘೇಲಾ ಮತ್ತು ಡಿಯೋ ಇಬ್ಬರ ಪಾತ್ರವೂ ಇತ್ತು. ಬಘೇಲಾ ಜನಪ್ರಿಯ ಒಬಿಸಿ ನಾಯಕ. ಇನ್ನು ಆಗಸ್ಟ್ ನಲ್ಲಿ ರಾಹುಲ್ ಗಾಂಧಿ ಅವರ ಮುಂದೆ ನಡೆದಿದ್ದ ಸಭೆಯಲ್ಲಿ ರೋಟೆಷನ್ ಸಿಎಂ ಪ್ರಸ್ತಾಪ ಇಲ್ಲ ಅನ್ನೋ ಮಾಹಿತಿಗಳು ಕೇಳಿ ಬಂದಿದ್ದವು.

ಪಂಜಾಬ್ ಪರಿಸ್ಥಿತಿ ಇಲ್ಲ:
 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 68 ಸ್ಥಾನಗಳು ಪಡೆದಿತ್ತು. ಬಘೇಲಾ, ಡಿಯೋ ಮತ್ತು ಟಿ ಡಿ ಸಾಹೂ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ ಇತ್ತು. ಆಗ ಬಘೇಲಾ ಪರ ಹೈಕಮಾಂಡ್ ನಿಂತು, ಸಿಎಂ ಆಗುವಂತೆ ನೋಡಿಕೊಂಡಿತ್ತು. ಆಗ ರೋಟೆಷನ್ ಭರವಸೆ ನೀಡಲಾಗಿತ್ತು. 

ಆದರೆ, ಈಗ ಬಘೇಲಾ ಪರ 55 ಮಂದಿ ಶಾಸಕರಿದ್ದಾರೆ. ಪಂಜಾಬ್ ನಲ್ಲಿ ಕ್ಯಾಪ್ಟನ್ ಪರ 15 ಮಂದಿ ಶಾಸಕರೂ ಕೂಡ ಇರಲಿಲ್ಲ. ಹಾಗಾಗಿ ಛತ್ತೀಸಗಡದಲ್ಲಿ ಈ ಪರಿಸ್ಥಿತಿ ಇಲ್ಲ ಎನ್ನುತ್ತೆ ಬಘೇಲಾ ಟೀಂ. ಈಗ ರೋಟೆಷನ್ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಯಾರ ಪರ ಗೋಲ್ ಹೊಡೆಯುತ್ತೋ ಕಾದು ನೋಡಬೇಕಿದೆ.

ಗುಜರಾತ್, ಕರ್ನಾಟಕದಲ್ಲಿ ಬಿಜೆಪಿ ಹೊಸ ಪ್ರಯೋಗವನ್ನು ನೋಡಿರುವ ಕಾಂಗ್ರೆಸ್ ಡೆಲ್ಲಿ ಬಾಸ್ ಗಳು ರಾಜಸ್ಥಾನ ಮತ್ತು ಛತ್ತೀಸ್‌ಗಡದಲ್ಲಿ ರಾಜ್ಯಗಳಲ್ಲಿ ಬಿಜೆಪಿ ಮಾದರಿಯ ಪ್ರಯೋಗಕ್ಕೆ ಕೈ ಹಾಕಲಿದೆ ಎನ್ನುತ್ತಿವೆ ಜನಪತ್ ಮೂಲಗಳು.