* ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ದಟ್ಟ'* ಛತ್ತೀಸ್‌ಗಢ ಮುಖ್ಯಮಂತ್ರಿ ಬಾಘೇಲ್‌ ರಾಜೀನಾಮೆ ಸುಳಿವು* ಪಕ್ಷ ಸೂಚಿಸಿದರೆ ರಾಜೀನಾಮೆ: ಬಾಘೇಲ್‌

ನವದೆಹಲಿ(ಜು.12): ಹಿರಿಯ ಕಾಂಗ್ರೆಸ್‌ ಮುಖಂಡ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರು ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ.

ಎರಡೂವರೆ ವರ್ಷಗಳಿಗಾಗಿ ಮಾತ್ರವೇ ಭೂಪೇಶ್‌ ಬಾಘೇಲ್‌ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು ಎಂಬ ಊಹಾಪೋಹಗಳ ಬೆನ್ನಲ್ಲೇ, ಭಾನುವಾರ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ಪ್ರಿಯಾಂಗಾ ಗಾಂಧಿ ಅವರನ್ನು ಭೇಟಿ ಬಳಿಕ ಮಾತನಾಡಿದ ಬಾಘೇಲ್‌ ಅವರು, ‘ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಹೊಸಬರಿಗೆ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಡಲು ಸಿದ್ಧ’ ಎಂದು ಹೇಳಿದರು. ಅಲ್ಲದೆ ಹೈಕಮಾಂಡ್‌ ಹೇಳಿದರೆ ಮುಂದಿನ ವರ್ಷದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಜವಾಬ್ದಾರಿ ವಹಿಸಿಕೊಳ್ಳಲು ಸಹ ಸಿದ್ಧ ಎಂದರು.

ಬಾಘೇಲ್‌ ಅವರಿಗೆ ಎರಡೂವರೆ ವರ್ಷ ಸಿಎಂ ಹುದ್ದೆ ನೀಡಿ, ನಂತರ ಸಚಿವ ಟಿ.ಎಸ್‌. ಸಿಂಗದೇವ್‌ ಅವರಿಗೆ ಸಿಎಂ ಹುದ್ದೆ ನೀಡಲಾಗುವುದು ಎಂದು ಈ ಹಿಂದೆ ಗುಲ್ಲು ಹರಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಘೇಲ್‌ ಬಣ, ‘ಇಂಥ ಯಾವುದೇ ಸಾಧ್ಯತೆ ಇಲ್ಲ’ ಎಂದು ಹೇಳಿದೆ.