ಬೆಂಗಳೂರು (ಮೇ. 07): ದಿಲ್ಲಿ ಮತ್ತು ಸುತ್ತಮುತ್ತಲಿನ ಉಪ ನಗರಗಳಲ್ಲಿ ಏನಿಲ್ಲಾ ಅಂದರೂ 60 ಸಾವಿರಕ್ಕಿಂತ ಹೆಚ್ಚು ಕನ್ನಡಿಗರು ಇದ್ದಾರೆ. ದಿಲ್ಲಿಯಲ್ಲಿ ಸೋಂಕು ಹೆಚ್ಚಾದಾಗ ಕಷ್ಟಕ್ಕೀಡಾದ ಕನ್ನಡಿಗರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. ಕರ್ನಾಟಕ ಭವನದಲ್ಲಿ ಇಷ್ಟೆಲ್ಲಾ ಅಧಿಕಾರಿಗಳು, ಸಿಬ್ಬಂದಿ ಇದ್ದರೂ ಒಂದು ಹೆಲ್ಪ್‌ಲೈನ್‌ ನಂಬರ್‌ ಆರಂಭಿಸಲು ಒಂದು ತಿಂಗಳು ಬೇಕಾಯಿತು.

ಕೇಂದ್ರ ಮಂತ್ರಿಗಳು ಮತ್ತು ಸಂಸದರು ಸಹಜವಾಗಿ ಕರ್ನಾಟಕದ ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಿ ವ್ಯಸ್ತರಾಗಿದ್ದರಿಂದ ಬೆಡ್‌ ಬೇಕಾದರೆ, ಆಮ್ಲಜನಕ ಬೇಕಾದರೆ ಕೇಳುವವರು ಹೇಳುವವರು ಯಾರೂ ಇಲ್ಲ. ಬೆಂಗಳೂರಿನಲ್ಲಿ ಗುರುತು ಪರಿಚಯ ಸಂಪರ್ಕ ಎಲ್ಲಾ ಇದ್ದೂ ಕೂಡ ಆಸ್ಪತ್ರೆಯಲ್ಲಿ ಒಳಹೋಗುವುದು ಕಷ್ಟಆಗಿರುವಾಗ ಉತ್ತರ ಭಾರತದ ಆರಾಜಕ ವಾತಾವರಣ ಇರುವ ದಿಲ್ಲಿ ಆಸ್ಪತ್ರೆಯಲ್ಲಿ ಎಷ್ಟುಕಷ್ಟಆಗಬಹುದು ಎಂದು ಊಹಿಸಿದರೂ ಹೆದರಿಕೆ ಆಗುತ್ತದೆ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಕಟ್ಟಿದ ಭವನಗಳು ನೂರು ನೂರು ಸಿಬ್ಬಂದಿ, 30 ಕಾರುಗಳು ಇವೆಲ್ಲಾ ಇದ್ದೂ ಕೊನೆಯದಾಗಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಆಗದಿದ್ದರೆ ಉಪಯೋಗ ಏನು ಅಲ್ಲವೇ?

ಯುಪಿ, ಬಿಹಾರಕ್ಕೆ ದೇವರೇ ಗತಿ

ಮುಂಬೈ, ಬೆಂಗಳೂರು, ಚೆನ್ನೈ, ಕೊಚ್ಚಿ ಸಮಸ್ಯೆಯಲ್ಲಿ ಇವೆಯಾದರೂ ದಕ್ಷಿಣದ ರಾಜ್ಯಗಳಲ್ಲಿ ಹಳ್ಳಿವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದರೂ ಇವೆ. ಆದರೆ ಉತ್ತರ ಪ್ರದೇಶ, ಬಿಹಾರದಲ್ಲಿ ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅತ್ಯಂತ ಶಿಥಿಲ ಅವಸ್ಥೆಯಲ್ಲಿವೆ. ಭಯಾನಕ ಎಂದರೆ ಯುಪಿ, ಬಿಹಾರದಲ್ಲಿ ಚಿಕಿತ್ಸೆ ಬಿಡಿ, ಪರೀಕ್ಷೆ ಕೂಡ ಇಲ್ಲದೇ ಜನ ನರಳುತ್ತಿರುವ ವರದಿಗಳು ತಳಮಟ್ಟದಿಂದ ಬರುತ್ತಿವೆ. ದೇಶದಲ್ಲಿ ಕೊರೋನಾದ 2ನೇ ಅಲೆಯಿಂದ ಈಗಾಗಿರುವ ಮಹಾನಗರಗಳ ಅನಾಹುತ ಸಾಕು.

ಇನ್ನು ಉತ್ತರ ಭಾರತದ ಜನದಟ್ಟಣೆಯ ಹಳ್ಳಿಗಳಲ್ಲಿ ಸೋಂಕು ಹಬ್ಬಿದರೆ ಬಹಳ ಕಷ್ಟವಾಗಲಿದೆ. ಹಬ್ಬಿದರೂ ಕೂಡ ಪರೀಕ್ಷೆ ಮತ್ತು ಚಿಕಿತ್ಸೆಯ ವ್ಯವಸ್ಥೆಗೆ ಮೋದಿ ಮತ್ತು ಯೋಗಿ ಸರ್ಕಾರ ಹರಸಾಹಸ ಪಡಬೇಕಿದೆ. ನಿಜಕ್ಕೂ ಒಂದು ದೇಶವಾಗಿ ನಮಗೆ ಕೊರೋನಾದಂಥ ಸಂಕಟದಲ್ಲಿ ನಮ್ಮಲ್ಲಿ ಇಷ್ಟರವರೆಗೆ ಇಲ್ಲದ ಆರೋಗ್ಯ ವ್ಯವಸ್ಥೆ ಸುಧಾರಿಸಿಕೊಳ್ಳಲು ಅವಕಾಶ ಇತ್ತು. ಆದರೆ ಸರ್ಕಾರಗಳ ಬೇಜವಾಬ್ದಾರಿಯಿಂದ ಈ ಅವಕಾಶ ಕೈಚೆಲ್ಲಿದೆ. ಒಂದು ಬೆಡ್‌ಗಾಗಿ, ಒಂದು ಸಿಲೆಂಡರ್‌ಗಾಗಿ ಬಡವರು ಬಿಡಿ, ದುಡ್ಡಿದ್ದವರೂ ಒದ್ದಾಡುವ, ಕೈಕಾಲು ಹಿಡಿಯುವ ಸ್ಥಿತಿಗೆ ಬಂದು ನಿಂತಿದ್ದೇವೆ.

ಬಂಗಾಳ ಗದ್ದುಗೆ ಗೆದ್ದ ಮಮತಾ ಬ್ಯಾನರ್ಜಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲರೇ?

ಮುಂಬೈ ನೋಡಿ ಕಲಿಯಿರಿ

ಮುಂಬೈನಲ್ಲಿ ನಿಧಾನವಾಗಿ ಸೋಂಕಿನ 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದೆ. ಈಗ ಒಂದು ದಿನಕ್ಕೆ ಗರಿಷ್ಠ 3000 ಸೋಂಕು ಪತ್ತೆಯಾಗುತ್ತಿವೆ. ಪರಿಣತರು ಹೇಳುವ ಪ್ರಕಾರ, ಮುಂಬೈನಲ್ಲಿ ಒಂದು ವರ್ಷದಲ್ಲಿ ಬಹುತೇಕ 60 ಪ್ರತಿಶತ ಮನೆಗಳಲ್ಲಿ ಒಬ್ಬರಿಗಾದರೂ ಸೋಂಕು ಬಂದು ಹೋಗಿದೆ. ಸೋಂಕು ಗರಿಷ್ಠ ಮಟ್ಟಕ್ಕೆ ಹೋದರೂ ದಿಲ್ಲಿಯಂತೆ ಮುಂಬೈಯಲ್ಲಿ ಆಸ್ಪತ್ರೆಗಾಗಿ ದೊಡ್ಡ ಹಾಹಾಕಾರ ಇರಲಿಲ್ಲ. ಆಮ್ಲಜನಕ ಪೂರೈಕೆಯ ಸಮಸ್ಯೆ ಇತ್ತು ನಿಜ. ಆದರೆ ಹತೋಟಿಯಲ್ಲಿತ್ತು. ಈಗ ಇಳಿಕೆಯಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣ ಅಲ್ಲಿನ ಸ್ಥಳೀಯ ಆಡಳಿತದ ವ್ಯವಸ್ಥಿತ ಪ್ರಯತ್ನಗಳು. ಮಹಾನಗರ ಪಾಲಿಕೆಯದೇ ಹತ್ತು ದೊಡ್ಡ ದೊಡ್ಡ ಅಸ್ಪತ್ರೆಗಳಿವೆ. ಅವುಗಳ ಒಟ್ಟು ಬಜೆಟ್‌ ಈಶಾನ್ಯದ 7 ರಾಜ್ಯಗಳ ಬಜೆಟ್‌ಗಿಂತ ಜಾಸ್ತಿಯಿದೆ. ಅಲ್ಲಿನ ಸರ್ಕಾರಿ ಮತ್ತು ಪಾಲಿಕೆ ಆಸ್ಪತ್ರೆಗಳಲ್ಲೇ 9500 ಬೆಡ್‌ಗಳು, 1200 ಐಸಿಯು ಬೆಡ್‌ಗಳಿದ್ದರೆ, ಖಾಸಗಿ ಆಸ್ಪತ್ರೆಗಳ 100 ಪ್ರತಿಶತ ಐಸಿಯು ಬೆಡ್‌ಗಳು ಮತ್ತು 80 ಪ್ರತಿಶತ ಸಾದಾ ಬೆಡ್‌ಗಳು ಸರ್ಕಾರದ ಸುಪರ್ದಿಯಲ್ಲಿದ್ದವು. ಕೋವಿಡ್‌ ಗೆಲ್ಲಲು ಇರುವ ಮಂತ್ರ ಒಂದೇ; ಆರೋಗ್ಯ ವ್ಯವಸ್ಥೆ ಸುಧಾರಣೆ ಮತ್ತು ಪಾರದರ್ಶಕತೆ. ಅರಾಜಕತೆ, ಭ್ರಷ್ಟವ್ಯವಸ್ಥೆ ಇಟ್ಟುಕೊಂಡು, ನಾಟಕ ಮಾಡಿ ಯಾರೂ ಕೋವಿಡ್‌ ಗೆಲ್ಲೋದು ಅಸಾಧ್ಯ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ