ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರ್ಪಡೆಗೊಂಡ ಅಗ್ನಿವೀರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. 4 ವರ್ಷದ ಸೇವೆಯ ನಂತರ ಸೇನೆಯಲ್ಲಿ ಮುಂದುವರಿಯಲು ಸಾಧ್ಯವಾಗದವರಿಗೆ ಇನ್ನೂ 2 ವರ್ಷಗಳ ಹೆಚ್ಚುವರಿ ಸೇವಾವಧಿ ಮತ್ತು ಖಾಯಂ ಉದ್ಯೋಗ ಪಡೆಯಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಸಣ್ಣ ವಯಸ್ಸಿನಲ್ಲೇ ಭಾರತೀಯ ಸೇನೆಗೆ ಸೇರ್ಪಡೆಯಾಗಿ, ಕಠಿಣ ಮಿಲಿಟರಿ ತರಬೇತಿ ಪಡೆದು, ಆಯುಧಗಳ ನಿರ್ವಹಣೆ ನಡೆಸುವುದನ್ನು ಕಲಿತು, ದೇಶದ ಗಡಿಗಳನ್ನು ಕಾಯಲು ಸಿದ್ಧರಾಗುವ ಯೋಧರನ್ನು ಕಲ್ಪಿಸಿಕೊಳ್ಳಿ. ಇಷ್ಟೆಲ್ಲ ಸಿದ್ಧತೆ ನಡೆಸಿದ ಯುವ ಯೋಧರನ್ನು, ನಾಲ್ಕು ವರ್ಷಗಳ ಬಳಿಕ ನೀವು ಸೇನೆಯಿಂದ ತೆರಳಿ ಎಂದರೆ? ಸಾವಿರಾರು ಯುವ ಭಾರತೀಯರಿಗೆ 2022ರಲ್ಲಿ ಜಾರಿಗೆ ಬಂದ ಸಣ್ಣ ಅವಧಿಯ ಮಿಲಿಟರಿ ನಿಯೋಜನಾ ಯೋಜನೆಯಾದ ಅಗ್ನಿಪಥ್‌ನ ವಾಸ್ತವ ಚಿತ್ರಣ ಇದೇ ಆಗಿತ್ತು. ಆದರೆ, ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರ ಈ ಯುವ ಯೋಧರಿಗೆ ಪೂರ್ಣ ಮಿಲಿಟರಿ ವೃತ್ತಿಜೀವನ ರೂಪಿಸಿಕೊಳ್ಳಲು ಹೊಸ ಆಶಾಭಾವನೆ ನೀಡಿದೆ.

ಅಗ್ನಿವೀರರಿಗೆ ಶುಭಸುದ್ದಿ

ಕಳೆದ ನಾಲ್ಕು ವರ್ಷಗಳಿಂದ ಅಗ್ನಿವೀರರ ಸಾಮರ್ಥ್ಯವನ್ನು ಗಮನಿಸಿದ ಕೇಂದ್ರ ಸರ್ಕಾರ, ಯೋಜನೆಯಲ್ಲಿ ಬದಲಾವಣೆ ತರಲು ನಿರ್ಧರಿಸಿದೆ. ಮಿಲಿಟರಿ ಕಮಾಂಡರ್‌ಗಳು ಅಗ್ನಿವೀರರ ದೈಹಿಕ ಕ್ಷಮತೆ, ಶಿಸ್ತು, ಬದ್ಧತೆ, ಉತ್ಸಾಹ, ಸ್ಪರ್ಧಾತ್ಮಕ ಮನೋಭಾವ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯ ಸಾಮರ್ಥ್ಯವನ್ನು ಮೆಚ್ಚಿದ್ದಾರೆ.

ಯುವ ಯೋಧರನ್ನು ಆಯುಧ ನಿರ್ವಹಣಾ ಸಾಮರ್ಥ್ಯ, ದೈಹಿಕ ಕ್ಷಮತೆ, ಮಿಲಿಟರಿ ಜ್ಞಾನ, ಮತ್ತು ಯೋಧರಿಗೆ ಬೇಕಾದ ಇತರ ಕೌಶಲಗಳ ಕುರಿತು ಪರೀಕ್ಷಿಸಲಾಗಿದೆ. ನೈಜ ಮಿಲಿಟರಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕಾರ್ಯಾಚರಿಸುವ ಸಾಮರ್ಥ್ಯಕ್ಕೆ ಅತ್ಯಧಿಕ ಒತ್ತು ನೀಡಲಾಗಿದೆ.

ಅವರ ಸಾಮರ್ಥ್ಯದಿಂದ ಸಂತೋಷಗೊಂಡ ಸೇನಾ ವಿಭಾಗಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ತರಲು ಶಿಫಾರಸು ಮಾಡಿದವು. ಹಿರಿಯ ಸಚಿವರನ್ನು ಒಳಗೊಂಡ ಕೇಂದ್ರ ಮಂತ್ರಿ ಮಂಡಲ ಈ ಪ್ರಸ್ತಾವನೆಗೆ ತನ್ನ ಒಪ್ಪಿಗೆ ಸೂಚಿಸಿತು.

ನವೆಂಬರ್ 4, 2026ರಂದು, ಮೂರೂ ಸೇನಾಪಡೆಗಳ ನಡುವಿನ ಸಮನ್ವಯದ ಜವಾಬ್ದಾರಿ ಹೊಂದಿರುವ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಎನ್ ಎಸ್ ರಾಜಾ ಸುಬ್ರಮಣಿ ಅವರು ಪರಿಷ್ಕೃತ ಅಗ್ನಿಪಥ್ ಯೋಜನೆಯನ್ನು ಘೋಷಿಸಿದರು. ನೂತನ ನಿಯಮದ ಅಡಿಯಲ್ಲಿ, ಮೊದಲ ನಾಲ್ಕು ವರ್ಷಗಳ ಸೇವೆಯ ಬಳಿಕ ಸೇನೆಗೆ ಖಾಯಂ ನೇಮಕಾತಿ ಹೊಂದಲು ಸಾಧ್ಯವಾಗದ ಅಗ್ನಿವೀರರಿಗೆ ಇನ್ನೂ ಎರಡು ವರ್ಷಗಳ ಹೆಚ್ಚುವರಿ ಸೇವಾವಧಿ ಮತ್ತು ಖಾಯಂ ಸೈನಿಕರಾಗಿ ನೇಮಕಾತಿ ಹೊಂದಲು ಇನ್ನೊಂದು ಅವಕಾಶವನ್ನು ಕಲ್ಪಿಸಲಾಗಿದೆ.

4 ವರ್ಷದ ಸೇವೆ ಬಳಿಕ ಹೆಚ್ಚುವರಿ 2 ವರ್ಷ ಅವಕಾಶ!

ಪರಿಷ್ಕೃತ ಯೋಜನೆ ಭಾರತೀಯ ಸೇನೆ, ನೌಕಾಪಡೆ, ಮತ್ತು ವಾಯು ಸೇನೆಗಳಲ್ಲಿ ಕಾರ್ಯಾಚರಿಸುತ್ತಿರುವ ಅಂದಾಜು 3 ಲಕ್ಷ ಯೋಧರಿಗೆ ಅನ್ವಯಿಸಲಿದೆ. ಪ್ರತಿಯೊಂದು ಸೇನಾ ವಿಭಾಗವೂ ಈಗ ತಲಾ ಒಂಬತ್ತು ಅಗ್ನಿವೀರರ ಬ್ಯಾಚ್‌ಗಳನ್ನು ಹೊಂದಿವೆ. ಹೆಚ್ಚುವರಿ ಎರಡು ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವವರು, ಅಗತ್ಯ ಮಾನದಂಡಗಳನ್ನು ಪೂರೈಸಿ, ಸೇನೆಯಲ್ಲಿ ಮುಂದುವರಿಯಲು ಬಯಸಿದರೆ ಖಾಯಂ ಉದ್ಯೋಗವನ್ನು ಪಡೆಯಬಹುದು. ಡಿಸೆಂಬರ್ 31ರ ನಂತರ ಸೇರ್ಪಡೆಯಾಗುವ ಹೊಸ ಅಗ್ನಿವೀರರಿಗೆ ಸಂಬಂಧಿಸಿದಂತೆ ಮತ್ತಷ್ಟು ಬದಲಾವಣೆಗಳು ಉಂಟಾಗುವ ನಿರೀಕ್ಷೆಗಳಿವೆ.

ಆಸಕ್ತಿಯ ಅಂಶವೆಂದರೆ, ಈ ಬದಲಾವಣೆಗಳನ್ನು ಘೋಷಿಸುವ ಮುನ್ನವೇ ಅಗ್ನಿವೀರರಲ್ಲಿ ಸೇನೆಯಲ್ಲಿ ಮುಂದುವರಿಯುವ ಬಯಕೆ ಆಳವಾಗಿತ್ತು.

ರಾಹುಲ್ ಸಿಂಗ್ ಅವರು ಹಿಂದುಸ್ತಾನ್ ಟೈಮ್ಸ್‌ನಲ್ಲಿ ಬರೆದ ವರದಿಯೊಂದರ ಪ್ರಕಾರ, ಸರ್ಕಾರ ಪರಿಷ್ಕೃತ ಯೋಜನೆಯನ್ನು ಪ್ರಕಟಿಸುವ ಮುನ್ನವೇ, ಮೊದಲ ತಂಡದ ಅಗ್ನಿವೀರರ ಪೈಕಿ ಬಹುತೇಕ 80% ಯೋಧರು ಸೇನಾ ಸೇವೆ ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ಹಿಂದಿನ ನಿಯಮಗಳ ಪ್ರಕಾರ, ಪ್ರತಿ 100 ಅಗ್ನಿವೀರರಲ್ಲಿ ಕೇವಲ 25 ಮಂದಿಗೆ ಮಾತ್ರ ಹೆಚ್ಚುವರಿಯಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶವಿತ್ತು. ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ಸಿಬ್ಬಂದಿಯ ಪಟ್ಟಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಸೇನೆಯು ಅಗ್ನಿವೀರರು ಸೇವೆಯಲ್ಲಿ ಮುಂದುವರಿಯಲು ಬಯಸುತ್ತಾರೆಯೇ ಅಥವಾ ನಿರ್ಗಮಿಸಲು ಇಚ್ಛಿಸುತ್ತಾರೆಯೇ ಎಂಬುದನ್ನು ಕೇಳಿತ್ತು. ಆಯ್ಕೆಯಾಗುವ ಯೋಧರ ಪೈಕಿಯೂ ಕೆಲವರು ಸೇನೆಯ ಹೊರಗೆ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸಬಹುದು ಎಂಬುದನ್ನು ಅಧಿಕಾರಿಗಳು ಅರಿತಿದ್ದರು.

ನೌಕಾಪಡೆ ಮತ್ತು ವಾಯುಪಡೆಯಲ್ಲೂ ಬಹುತೇಕ ಇಂತಹದ್ದೇ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲಿನ ಅಗ್ನಿವೀರರಲ್ಲಿಯೂ ಸುಮಾರು 80% ಮಂದಿ ಸೇನೆಯಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದರು.

ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಅನಾಮಧೇಯವಾಗಿ ಮಾತನಾಡಿದ ಅಧಿಕಾರಿಗಳು, ಪರಿಷ್ಕೃತ ಯೋಜನೆಯಡಿ ಈ ಪ್ರಮಾಣವು 97ರಿಂದ 98%ಕ್ಕೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಮೊದಲ ತಂಡದಿಂದ ಇನ್ನೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದರೆ ಇಲ್ಲಿಯ ತನಕ ಸೇನಾ ಕಮಾಂಡರ್‌ಗಳಿಂದ ಬಂದಿರುವ ಪ್ರತಿಕ್ರಿಯೆಗಳು ಧನಾತ್ಮಕವಾಗಿವೆ.

ಪ್ರಸ್ತುತ ಬೆಳವಣಿಗೆಯ ಹಿಂದಿರುವ ಕಾರಣಗಳೂ ಸ್ಪಷ್ಟ. ಸೇನೆಯಲ್ಲಿ ಖಾಯಂ ಉದ್ಯೋಗ ಲಭಿಸಿದರೆ ಹೆಚ್ಚಿನ ವೇತನ, ಪಿಂಚಣಿ, ಸೇನೆಯಲ್ಲಿ ಸೇವೆಯ ಅವಧಿಗೆ ಅನುಗುಣವಾಗಿ ನೀಡುವ ಇಡುಗಂಟು (ಗ್ರಾಚ್ಯುಟಿ), ವೈದ್ಯಕೀಯ ಸೌಲಭ್ಯಗಳು, ಮತ್ತು ಅವಶ್ಯಕ ವಸ್ತುಗಳನ್ನು ಕಡಿಮೆ ಬೆಲೆಗೆ ಪೂರೈಸುವ ಮಿಲಿಟರಿ ಕ್ಯಾಂಟೀನ್‌ಗಳ ಬಳಕೆಗೆ ಅವಕಾಶ ಮುಂತಾದ ಹಲವಾರು ಪ್ರಯೋಜನಗಳು ಲಭಿಸಲಿವೆ. ಇಂತಹ ಅನುಕೂಲತೆಗಳು ಯೋಧರು ಮತ್ತು ಅವರ ಕುಟುಂಬಸ್ಥರಿಗೆ ದೀರ್ಘಾವಧಿಯ ಆರ್ಥಿಕ ಭದ್ರತೆ ಕಲ್ಪಿಸಲಿವೆ.

ಸರ್ಕಾರದ ಈ ಘೋಷಣೆ ಅತ್ಯಂತ ನಿರ್ಣಾಯಕ ಸಮಯದಲ್ಲೇ ನಡೆದಿದೆ. ಮೂಲ ಯೋಜನಾ ವೇಳಾಪಟ್ಟಿಯ ಅನುಸಾರ, ಸುಮಾರು 18,300 ಅಗ್ನಿವೀರರು 2026ರ ನವೆಂಬರ್ ಮಧ್ಯಭಾಗದಿಂದ ಡಿಸೆಂಬರ್ 31ರ ನಡುವೆ ಸೇನಾ ಸೇವೆಯಿಂದ ನಿರ್ಗಮಿಸಬೇಕಿತ್ತು. ಇವರು ಮೊದಲ ಹಂತದಲ್ಲಿ ನೇಮಕಗೊಂಡಿದ್ದ ಒಟ್ಟು 24,400 ಅಗ್ನಿವೀರರ ನಾಲ್ಕನೇ ಮೂರು ಭಾಗ ಹೊಂದಿದ್ದಾರೆ.

ಮೊದಲ ಹಂತದಲ್ಲಿ ನಡೆದ ಒಟ್ಟು ನೇಮಕಾತಿಯ ಪೈಕಿ 19,000 ಅಗ್ನಿವೀರರು ಭಾರತೀಯ ಸೇನೆಗೆ ಸೇರ್ಪಡೆಯಾದರೆ, 2,850 ಮಂದಿ ವಾಯುಪಡೆಗೆ ಮತ್ತು 2,550 ಜನರು ನೌಕಾಪಡೆಗೆ ಸೇರ್ಪಡೆಯಾದರು.

ಪ್ರಸ್ತುತ ನಿರ್ಧಾರ ರಾಜಕೀಯ ಮಹತ್ವವನ್ನೂ ಪಡೆದುಕೊಂಡಿದೆ. 2027ರ ಆರಂಭದಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಪೈಕಿ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಯುವಕರು ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗುತ್ತಾರೆ. 2022ರಲ್ಲಿ ಪರಿಚಯವಾದ ತಕ್ಷಣವೇ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಅಗ್ನಿಪಥ್ ಯೋಜನೆಯು ಈಗ ಆ ರಾಜ್ಯಗಳಲ್ಲಿ ಪ್ರಮುಖ ಚುನಾವಣಾ ವಿಷಯವಾಗಿದೆ.

ಅಗ್ನಿಪಥ್ ಯೋಜನೆ ಜಾರಿಗೆ ಬರುವುದಕ್ಕೂ ಮುನ್ನ, ಅಧಿಕಾರಿಗಳ ಹುದ್ದೆಗಿಂತ ಕೆಳಗಿನ ಶ್ರೇಣಿಯ ಸೇನಾ ಸಿಬ್ಬಂದಿ ಸಾಮಾನ್ಯವಾಗಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ, ಮೂವತ್ತರ ಹರೆಯದ ಕೊನೆಯ ಭಾಗದಲ್ಲಿ ಪಿಂಚಣಿ ಮತ್ತು ಇತರ ಸೌಲಭ್ಯಗಳೊಂದಿಗೆ ನಿವೃತ್ತರಾಗುತ್ತಿದ್ದರು.

ಸಶಸ್ತ್ರ ಪಡೆಗಳನ್ನು ಯುವಜನರಿಂದ ಕೂಡಿದ, ಯುದ್ಧಕ್ಕೆ ಸದಾ ಸನ್ನದ್ಧವಾಗಿರುವ ಪಡೆಗಳನ್ನಾಗಿ ರೂಪಿಸುವುದು ಮೂಲ ಯೋಜನೆಯ ಉದ್ದೇಶವಾಗಿತ್ತು. ಸೇನಾ ವೇತನ ಮತ್ತು ಪಿಂಚಣಿಗಳಿಗಾಗಿ ಸರ್ಕಾರ ಮಾಡುತ್ತಿದ್ದ ಅಗಾಧ ವೆಚ್ಚವನ್ನು ನಿಯಂತ್ರಿಸುವ ಗುರಿಯೂ ಇದರ ಹಿಂದಿತ್ತು.

ಆದರೆ, ನೂತನ ಪರಿಷ್ಕರಣೆ ಮೂಲ ಯೋಜನೆಯ ಬಹುಪಾಲು ಅಂಶಗಳನ್ನು ಬದಲಿಸಲಿದೆ. ಹೆಚ್ಚಿನ ಸಂಖ್ಯೆಯ ಸೈನಿಕರನ್ನು ದೀರ್ಘಕಾಲ ಸೇವೆಯಲ್ಲಿ ಉಳಿಸಿಕೊಳ್ಳುವುದರಿಂದ ಸರ್ಕಾರದ ವೆಚ್ಚ ಹೆಚ್ಚಾಗಬಹುದು. ಅದೇ ವೇಳೆ, ಸೇನೆಯಲ್ಲಿ ಯುವ ಯೋಧರ ಪ್ರಮಾಣವನ್ನು ಕಾಯ್ದುಕೊಳ್ಳುವುದೂ ಕಷ್ಟವಾಗಬಹುದು.

ಈಗ ಭಾರತ ಸೇನಾ ಸನ್ನದ್ಧತೆ, ರಕ್ಷಣಾ ವೆಚ್ಚ ಮತ್ತು ಯುವ ಸೈನಿಕರ ಆಕಾಂಕ್ಷೆಗಳ ನಡುವೆ ಸಮತೋಲನ ಸಾಧಿಸಬೇಕಿದೆ.

ಕಠಿಣ ತರಬೇತಿಯನ್ನು ಸಹಿಸಿಕೊಂಡು, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗಿರುವ ಅಗ್ನಿವೀರನ ಪಾಲಿಗೆ ಸಮವಸ್ತ್ರವೆಂದರೆ ಕೇವಲ ಮಾಸಿಕ ವೇತನವಷ್ಟೇ ಆಗಿ ಉಳಿದಿಲ್ಲ. ಅದು ಅಗ್ನಿವೀರನಿಗೆ ಗೌರವ, ತನ್ನ ಗುರುತು, ಸೇನೆಯೊಂದಿಗಿನ ಬಾಂಧವ್ಯ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರತೀಕವಾಗಿದೆ.

ನೂತನ ಪರಿಷ್ಕರಣೆ ಯುವ ಅಗ್ನಿವೀರರು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಅವಕಾಶವೊಂದನ್ನು ಒದಗಿಸಲಿದೆ. ನಾಲ್ಕು ವರ್ಷಗಳ ಸೇನಾ ಅವಧಿಯನ್ನು ತಾಯ್ನಾಡಿನ ರಕ್ಷಣೆಗೆ ಮುಡಿಪಾಗಿಟ್ಟ ಅಗ್ನಿವೀರರು, ಅದನ್ನು ಸುದೀರ್ಘ ವೃತ್ತಿಜೀವನವನ್ನಾಗಿ ಪರಿವರ್ತಿಸಿಕೊಳ್ಳಲು ಇನ್ನೊಂದು ಅವಕಾಶ ಪಡೆಯಲಿದ್ದಾರೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com