ಮತದಾರರ ಪಟ್ಟಿಪರಿಷ್ಕರಣೆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 25 ಲಕ್ಷ ಹೊಸ ಮತದಾರರ ಸೇರ್ಪಡೆಯಾಗಲಿದ್ದಾರೆ ಎಂಬ ಹೇಳಿಕೆ ಕುರಿತ ಗೊಂದಲಕ್ಕೆ ಸ್ಥಳೀಯ ಆಡಳಿತ ಶನಿವಾರ ತೆರೆ ಎಳೆದಿದೆ. ಇದು ಅಂಕಿ ಅಂಶಗಳನ್ನು ತಪ್ಪಾಗಿ ಬಿಂಬಿಸುವ ಕೆಲಸ ಎಂದು ಟೀಕಿಸಿದೆ.
ಶ್ರೀನಗರ/ಜಮ್ಮು: ಮತದಾರರ ಪಟ್ಟಿಪರಿಷ್ಕರಣೆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 25 ಲಕ್ಷ ಹೊಸ ಮತದಾರರ ಸೇರ್ಪಡೆಯಾಗಲಿದ್ದಾರೆ ಎಂಬ ಹೇಳಿಕೆ ಕುರಿತ ಗೊಂದಲಕ್ಕೆ ಸ್ಥಳೀಯ ಆಡಳಿತ ಶನಿವಾರ ತೆರೆ ಎಳೆದಿದೆ. ಇದು ಅಂಕಿ ಅಂಶಗಳನ್ನು ತಪ್ಪಾಗಿ ಬಿಂಬಿಸುವ ಕೆಲಸ ಎಂದು ಟೀಕಿಸಿದೆ.
ಈ ಕುರಿತು ಶನಿವಾರ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಸರ್ಕಾರ, 2011ರ ಮತ ಪಟ್ಟಿಪರಿಷ್ಕರಣೆ ಬಳಿಕ 66 ಲಕ್ಷ ಮತದಾರರಿದ್ದರು, ಹಾಲಿ ಅದು 76 ಲಕ್ಷಕ್ಕೆ ತಲುಪಿದೆ. ಈ ಹೆಚ್ಚಳಕ್ಕೆ ಕಾರಣ 18 ವರ್ಷ ತುಂಬಿದ ಹೊಸದಾಗಿ ಮತದಾನದ ಹಕ್ಕು ಪಡೆದವರು ಪಟ್ಟಿಗೆ ಸೇರಿದವರು ಎಂದು ಸ್ಪಷ್ಟನೆ ನೀಡಲಾಗಿದೆ. ಹೀಗಾಗಿ 25 ಲಕ್ಷ ಹೊಸ ಮತದಾರರ ಸೇರ್ಪಡೆ ಎಂಬ ಸುದ್ದಿ ಸುಳ್ಳು ಎಂದು ಹೇಳಿದೆ. ಜೊತೆಗೆ ಕಾಶ್ಮೀರಿ ವಲಸಿಗ ಕಾರ್ಮಿಕರು ತಮ್ಮ ಮೂಲ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವ ವಿಶೇಷ ಅವಕಾಶದಲ್ಲಿ ಯಾವುದೇ ಬದಲಾವಣೆಯೂ ಇಲ್ಲ. ಜೊತೆಗೆ ಮತಪಟ್ಟಿಪರಿಷ್ಕರಣೆಯು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಎಲ್ಲಾ ಮತದಾರರನ್ನೂ ಒಳಗೊಂಡಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಜಮ್ಮು ಕಾಶ್ಮೀರದಲ್ಲಿ ಇನ್ಮುಂದೆ ಸ್ಥಳೀಯರಲ್ಲದವರಿಗೂ ಮತ ಹಕ್ಕು..! ಮುಫ್ತಿ ವಿರೋಧ
ಇತ್ತೀಚೆಗೆ ಹೇಳಿಕೆ ನೀಡಿದ್ದ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಹೃದೇಶ್ ಕುಮಾರ್, ಮತದಾರರ ಪಟ್ಟಿಪೂರ್ಣ ಪರಿಷ್ಕರಣೆಗೊಂಡ ಬಳಿಕ ಹೊಸದಾಗಿ 25 ಲಕ್ಷ ಮತದಾರರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಅಲ್ಲದೆ ರಾಜ್ಯದಲ್ಲಿನ ವಲಸಿಗ ಕಾರ್ಮಿಕರು ಸೇರಿದಂತೆ ಹೊರಗಿನವರಿಗೂ ಮತದಾನದ ಹಕ್ಕು ಸಿಗಲಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಬಗ್ಗೆ ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದು ಅಧಿಕಾರ ಕಬಳಿಸಲು ಬಿಜೆಪಿ ನಡೆಸಿದ ಸಂಚು ಎಂದೆಲ್ಲಾ ಟೀಕಿಸಿದ್ದವು. ಈ ಬಗ್ಗೆ ಚರ್ಚಿಸಲು ಆ.22ರಂದು ಸರ್ವಪಕ್ಷಗಳ ಸಭೆಯನ್ನೂ ಕರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದ ಆಡಳಿತ ಶನಿವಾರ ಈ ಸ್ಪಷ್ಟನೆ ನೀಡುವ ಮೂಲಕ ಸ್ಥಳೀಯ ರಾಜಕೀಯ ಪಕ್ಷಗಳ ಆಕ್ರೋಶ ಕಡಿಮೆ ಮಾಡುವ ಯತ್ನ ಮಾಡಿದೆ. ಈ ಸ್ಪಷ್ಟನೆಯನ್ನು ಕಾಶ್ಮೀರಿ ಅಪ್ನಿ ಪಾರ್ಟಿ ಸ್ವಾಗತಿಸಿದೆ.
ದ್ವೇಷ ಹರಡುವ ಕಸ ಕಾಶ್ಮೀರ್ ಫೈಲ್ಸ್ ಆಸ್ಕರ್‌ಗೆ ಕಳಿಸಿದ್ರೆ ಭಾರತಕ್ಕೆ ಮುಜುಗರ; ಕೆನಡಾ ನಿರ್ದೇಶಕ
ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಅಲ್ಲಿ ಯಾವುದೇ ಚುನಾವಣೆ ನಡೆದಿಲ್ಲ. ಹಾಗೂ, ಯಾವುದೇ ರಾಜಕೀಯ ಪಕ್ಷಗಳ ಸರ್ಕಾರ ಅಧಿಕಾರದಲ್ಲಿಲ್ಲ. ಕಳೆದ 4 ವರ್ಷಕ್ಕೂ ಹೆಚ್ಚು ಸಮಯದಿಂದ ಅಲ್ಲಿ ಯಾವುದೇ ಚುನಾವಣೆಯೂ ನಡೆದಿಲ್ಲ. ಆದರೆ, ಮುಂದಿನ ವರ್ಷ ಎಲೆಕ್ಷನ್ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಸ್ಥಳೀಯರಲ್ಲದವರು ಸಹ ಇಲ್ಲಿ ಮತದಾನ ಮಾಡಲು ನೋಂದಣಿ ಮಾಡಲು ಅವಕಾಶ ಇದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ವಿರೋಧಿಸಿದ್ದು, ಇದು ಚುನಾವಣೆಗಳ ಮೇಲೆ ಪ್ರಭಾವ ಬೀರುವ ಅಪಾಯಕಾರಿ ಪ್ರಯತ್ನ ಎಂದು ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರಲ್ಲಿ 370 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಾಗಲಿದ್ದು, ಕಾಶ್ಮೀರೇತರರಿಗೆ ಮತ ಚಲಾಯಿಸಲು ಮತ್ತು ಭೂಮಿಯನ್ನು ಹೊಂದಲು ಸಂವಿಧಾನವನ್ನು ಬದಲಿಸಿದ ನಂತರ ಮೊದಲ ಬಾರಿಗೆ ಸ್ಥಳೀಯರಲ್ಲದವರು ಸಹ ಮತದಾರರಾಗಿ ನೋಂದಾಯಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿಯಾಗಿತ್ತು. ಆದರೆ ಈಗ ಸ್ಥಳೀಯ ಆಡಳಿತ ಈ ವಿವಾದಕ್ಕೆ ತೆರೆ ಎಳೆದಿದೆ. ಈ ಹೆಚ್ಚಳಕ್ಕೆ ಕಾರಣ 18 ವರ್ಷ ತುಂಬಿದ ಹೊಸದಾಗಿ ಮತದಾನದ ಹಕ್ಕು ಪಡೆದವರು ಪಟ್ಟಿಗೆ ಸೇರಿರುವುದು ಎಂದು ಸ್ಪಷ್ಟನೆ ನೀಡಲಾಗಿದೆ.
