ಅದಾನಿ ಕೇಸ್ ತನಿಖೆ 3 ತಿಂಗಳಲ್ಲಿ ಪೂರ್ಣಗೊಳಿಸಿ; ಸೆಬಿ ತನಿಖೆ ಎತ್ತಿಹಿಡಿದ ಸುಪ್ರೀಂ; ಉದ್ಯಮಿಗೆ ತಾತ್ಕಾಲಿಕ ರಿಲೀಫ್
ಸೆಬಿ ತನಿಖೆಯನ್ನು ಎಸ್‌ಐಟಿಗೆ ವರ್ಗಾವಣೆ ಮಾಡಲ್ಲ. ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ನವದೆಹಲಿ (ಜನವರಿ 3, 2024): ಉದ್ಯಮಿ ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರೀಸರ್ಚ್ ಸಂಸ್ಥೆ ಮಾಡಿರುವ ಹಣಕಾಸು ಅಕ್ರಮಗಳ ಆರೋಪಗಳ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್, ಸೆಬಿ ತನಿಖೆಯನ್ನು ಎತ್ತಿ ಹಿಡಿದಿದೆ. ಅಲ್ಲದೆ, ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೆಬಿಗೆ ನಿರ್ದೇಶನ ನೀಡಿದೆ.
ಹಾಗೂ, ಸೆಬಿ ತನಿಖೆಯನ್ನು ಎಸ್‌ಐಟಿಗೆ ಅಥವಾ ಸಿಬಿಐಗೆ ವರ್ಗಾವಣೆ ಮಾಡಲ್ಲ. ವರ್ಗಾಯಿಸಲು ಯಾವುದೇ ಆಧಾರವಿಲ್ಲ, ಸೆಬಿ ತನಿಖೆಯಲ್ಲಿ ಯಾವುದೇ ಲೋಪದೋಷವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಸೆಬಿ ತನಿಖೆಯನ್ನು ಪ್ರವೇಶಿಸಲು ಈ ನ್ಯಾಯಾಲಯದ ಅಧಿಕಾರ ಸೀಮಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಈ ಹಿನ್ನೆಲೆ ಉದ್ಯಮಿ ಅದಾನಿ ಹಾಗೂ ಅದಾನಿ ಗ್ರೂಪ್‌ಗೆ ಸುಪ್ರೀಂಕೋರ್ಟ್‌ನ ತೀರ್ಪಿನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅಮೆರಿಕ ಶಾರ್ಟ್‌ಸೆಲ್ಲರ್ ಹಿಂಡನ್‌ಬರ್ಗ್ ಆರೋಪವನ್ನು ಅಥವಾ ಯಾವುದೇ ಇತರೆ ವಿದೇಶಿ ಸಂಸ್ಥೆಗಳ ವರದಿಯನ್ನು ಪರಿಗಣಿಸಲ್ಲ ಎಂದೂ ಹೇಳಿದೆ.
ಇದನ್ನು ಓದಿ: 2023 ಅದಾನಿಗೆ ಮರೆಯಲಾರದ ವರ್ಷ: ಮಾರುಕಟ್ಟೆ ಬಂಡವಾಳದಲ್ಲಿ 6 ಲಕ್ಷ ಕೋಟಿ ರೂ. ನಷ್ಟ!
ಉದ್ಯಮಿ ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರೀಸರ್ಚ್ ಸಂಸ್ಥೆ ಮಾಡಿರುವ ಹಣಕಾಸು ಅಕ್ರಮಗಳ ಆರೋಪಗಳ ಕುರಿತು ಕೋರ್ಟ್ ಮೇಲ್ವಿಚಾರಣೆಯ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಬುಧವಾರಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಈ ಪ್ರಕರಣವು ಅದಾನಿ ಗ್ರೂಪ್‌ನ ಹಣಕಾಸು ವ್ಯವಹಾರಗಳು ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಿಂಡನ್‌ಬರ್ಗ್ ರಿಸರ್ಚ್ ಎತ್ತಿರುವ ಆರೋಪಗಳಿಗೆ ಸಂಬಂಧಿಸಿದೆ. ಸೆಬಿ ಕೂಡ ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದೆ.
ಸಾಧನೆ-ವಿವಾದ, ಈ ವರ್ಷ ಸದ್ದು ಮಾಡಿದ ದಿಗ್ಗಜರ ಸಾಲಿನಲ್ಲಿ ಎಸ್ ಸೋಮನಾಥ್- ಅದಾನಿ ಟಾಪ್!
ನವೆಂಬರ್ 24 ರಂದು, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ನಾವು ಹಿಂಡೆನ್‌ಬರ್ಗ್ ವರದಿಯನ್ನು ವಾಸ್ತವಿಕವಾಗಿ ಸರಿ ಎಂದು ಒಪ್ಪಿಕೊಳ್ಳುವ ಅಗತ್ಯವಿಲ್ಲ. ಅದಕ್ಕಾಗಿಯೇ ನಾವು ಸೆಬಿಗೆ ತನಿಖೆ ಮಾಡುವಂತೆ ಸೂಚಿಸಿದ್ದವು.
ಅದೇ ಸಮಯದಲ್ಲಿ, ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಅಂದರೆ ಸೆಬಿ ತನಿಖೆಗೆ ಇನ್ನು ಮುಂದೆ ಯಾವುದೇ ಸಮಯವನ್ನು ಕೇಳುವುದಿಲ್ಲ ಎಂದು ತಿಳಿಸಿದ್ದು, ಅಂದಾಜು 8 ತಿಂಗಳ ಕಾಲದಿಂದಲೂ ಸೆಬಿ ಈ ಬಗ್ಗೆ ತನಿಖೆ ನಡೆಸುತ್ತಿತ್ತು.
2023ರ ಜನವರಿ 24 ರಂದು, ಅಮೆರಿಕನ್ ಶಾರ್ಟ್-ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ಷೇರುಗಳ ಮೌಲ್ಯವನ್ನು ಮೋಸದಿಂದ ಏರಿಸಿದ ಆರೋಪಗಳನ್ನು ಮಾಡಿತ್ತು. ಇದರ ಬೆನ್ನಲ್ಲಿಯೇ ಭಾರತದ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್‌ನ ಎಲ್ಲಾ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿದ್ದವು. ಈ ನಡುವೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ 6 ಸದಸ್ಯರ ಸಮಿತಿಯನ್ನು ರಚಿಸಿತ್ತು. ಇದರ ಹೊರತಾಗಿ, ಮಾರುಕಟ್ಟೆ ನಿಯಂತ್ರಕ ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಅನ್ನು ಸಹ ತನಿಖೆ ಮಾಡಲು ಕೇಳಲಾಗಿತ್ತು.