ಕೇರಳ(ಎ.02): ಕೇರಳ ವಿಧಾನಸಭಾ ಚುನಾವಣೆಗೆ ಕಾವು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಕೇರಳಗೆ ಭೇಟಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದರ ನಡುವೆ ಖ್ಯಾತ ಮಲೆಯಾಳಂ ನಟ ಮೋಹನ್‌ಲಾಲ್ ಬಿಜೆಪಿ ಅಭ್ಯರ್ಥಿ, ಮೆಟ್ರೋಮ್ಯಾನ್ ಇ ಶ್ರೀಧರನ್ ಸೇವೆ ಕೇರಳ ಹಾಗೂ ದೇಶಕ್ಕೆ ಅತ್ಯವಶ್ಯಕ ಎಂದು ಹೇಳೋ ಮೂಲಕ ಬಿಜೆಪಿ ರಣತ್ಸೋಹಕ್ಕೆ ಹೋಸ ವೇಗ ನೀಡಿದ್ದಾರೆ.

'ಮದುವೆ ಹೆಸರಿನಲ್ಲಿ ಲವ್ ಜಿಹಾದ್ ಕೂಪ' ಮೆಟ್ರೋ ಮ್ಯಾನ್ ಹೇಳಿದ ಕೇರಳ ಕತೆ

ಇ ಶ್ರೀಧರನ್ ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇ ಶ್ರೀಧರನ್ ಉಮೇದುವಾರಿಕೆಯನ್ನು ನಟ ಮೋಹನ್‌ಲಾಲ್ ಅನುಮೋದಿಸಿದ್ದಾರೆ. ಇಷ್ಟೇ ಅಲ್ಲ ಶ್ರೀಧರನ್ ಸಾಧನೆಗಳನ್ನು ಉಲ್ಲೇಖಿಸಿದ ಮೋಹನ್‌ಲಾಲ್, ಭವಿಷ್ಯದಲ್ಲಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಶ್ರೀಧರನ್ ಸೇವೆ ಅಗತ್ಯ ಎಂದಿದ್ದಾರೆ.

 

ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ಒಂದು ವ್ಯಕ್ತಿತ್ವ ಇದೆ. ಅವರೇ ಇ ಶ್ರೀಧರನ್ ಸರ್. ಬಿರುಗಾಳಿಗೆ ಮುರಿದು ಬಿದ್ದ ಪಾಂಬನ್ ಸೇತುವೆಯನ್ನು ಕೇವಲ 46 ದಿನದಲ್ಲಿ ನಿರ್ಮಿಸಿ ತನ್ನ ಇಚ್ಚಾ ಶಕ್ತಿ ತೋರಿಸಿದ ಸಾಧಕ ಶ್ರೀಧರನ್. ಅಸಾಧ್ಯವಾಗಿದ್ದ ಕೊಂಕಣ್ ರೈಲು ಮಾರ್ಗವನ್ನು ಬೆಟ್ಟ ಗುಡ್ಡಗಳ ನಡುವೆ ಸುರಂಗ ಮಾರ್ಗಳನ್ನು ನಿರ್ಮಿಸಿ ಪೂರ್ಣಗೊಳಿಸಿದ ವ್ಯಕ್ತಿ. ದೆಹಲಿ, ಕೊಚ್ಚಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲು ನಿರ್ಮಾಣ ಕಾಮಾಗಾರಿ ಪೂರ್ಣಗೊಳಿಸಿದ ರಾಷ್ಟ್ರ ಶಿಲ್ಪಿ. ನಿಯೋಜಿಸಿದ ಕಾಮಾಗಾರಿ, ಕೆಲಸವನ್ನು ನಿಗದಿತ ಸಮಯಕ್ಕಿಂತ ಮೊದಲೋ ಪೂರ್ಣಗೊಳಿಸಿ, ಬಾಕಿ ಹಣವನ್ನು ಮತ್ತೆ ಸರ್ಕಾರಕ್ಕೆ ವಾಪಸ್ ನೀಡಿದ ನಿಷ್ಠಾವಂತ ನಾಯಕ. ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿರುವ ನಮ್ಮ ನೆಚ್ಚಿನ ಇ ಶ್ರೀಧರನ್ ಸರ್ ಅವರ ಸೇವೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತಕ್ಕೆ ಅವಶ್ಯಕತೆ ಇದೆ. ಶ್ರೀಧರನ್ ಸರ್ ಅವರ ಗೆಲುವಿಗೆ ನನ್ನ ಶುಭ ಹಾರೈಕೆ ಎಂದು ಮೋಹನ್‌ಲಾಲ್ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಕೇರಳ ‘ಸಿಎಂ ಆಕಾಂಕ್ಷಿ’ ಮೆಟ್ರೋ ಶ್ರೀಧರನ್‌ಗೆ ಬಿಜೆಪಿ ಟಿಕೆಟ್‌!

ಮೋಹನ್‌ಲಾಲ್ ವಿಡಿಯೋ ಸಂದೇಶಕ್ಕೆ ಮೆಟ್ರೋಮ್ಯಾನ್ ಇ ಶ್ರೀಧರನ್ ಧನ್ಯವಾದ ಹೇಳಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಅಪಾರ. ಜೊತೆಯಾಗಿ ನಾವು ಹೊಸ ಕೇರಳ ಕಟ್ಟೋಣ ಎಂದು ಇ ಶ್ರೀಧರನ್ ಪ್ರತಿಕ್ರಿಯೆ ನೀಡಿದ್ದಾರೆ.

ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಎಪ್ರಿಲ್ 6 ರಂದು ಮತದಾನ ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ02ರಂದು ಫಲಿತಾಂಶ ಹೊರಬೀಳಲಿದೆ.