ದೆಹಲಿಯ ಜಂತರ್ ಮಂತರ್ನಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹಾಗೂ ಪತ್ರಕರ್ತೆ ರೋಸಿ ಸೇರಿದಂತೆ ಹಲವರ ವಿರುದ್ಧ ದೆಹಲಿ ಪೊಲೀಸರು ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.
ನವದೆಹಲಿ (ಅ.14): ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಸುದ್ದಿ ಮಾಡಿದ್ದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ (Abhijeet Dipke), ಸ್ವತಂತ್ರ ಪತ್ರಕರ್ತೆ ರೋಸಿ ಹಾಗೂ ಗಜೇಂದ್ರ ಸಿಂಗ್ ಸೇರಿದಂತೆ ಹಲವರ ವಿರುದ್ಧ ದೆಹಲಿ ಪೊಲೀಸರು ಗಂಭೀರ 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ' ಅಡಿಯಲ್ಲಿ (Atrocity Act) ಪ್ರಕರಣ ದಾಖಲಿಸಿದ್ದಾರೆ. ಸ್ವತಃ ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಸೇರಿರುವ ಅಭಿಜೀತ್ ದಿಪ್ಕೆ ಅವರ ವಿರುದ್ಧವೇ ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲಾಗಿರುವುದು ಪ್ರಸ್ತುತ ಭಾರಿ ಸಂಚಲನ ಮೂಡಿಸಿದೆ.
ದೆಹಲಿ ಸಂಸದ್ ಮಾರ್ಗ ಪೊಲೀಸ್ ಠಾಣೆಯ (Sansad Marg Police Station) ಸಹಾಯಕ ಪೊಲೀಸ್ ಕಮಿಷನರ್ (ACP) ವಿವೇಕ್ ಭಗತ್ ನೀಡಿದ ಅಧಿಕೃತ ದೂರಿನ ಅನ್ವಯ ಅಕ್ಟೋಬರ್ 13 ರಂದು ಈ ಪ್ರಕರಣ ದಾಖಲಾಗಿದೆ. ಕರ್ತವ್ಯನಿರತ ಅಧಿಕಾರಿಗೆ ಜಾತಿನಿಂದನೆ ಮಾಡುವುದು, ಸಾರ್ವಜನಿಕವಾಗಿ ಅಪಮಾನಿಸುವುದು, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿತ್ವ ಹರಣ ಮಾಡುವುದು ಸೇರಿದಂತೆ ಹಲವು ಕಠಿಣ ಆರೋಪಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಜಂತರ್ ಮಂತರ್ ಪ್ರತಿಭಟನೆ ವೇಳೆ ಸಂಭವಿಸಿದ್ದೇನು? - ಎಸಿಪಿ ದೂರಿನ ವಿವರ
ಎಸಿಪಿ ವಿವೇಕ್ ಭಗತ್ ಅವರು ನೀಡಿರುವ ದೂರಿನ ಪ್ರಕಾರ, 2026 ರ ಅಕ್ಟೋಬರ್ 3 ರಂದು ಅವರು ದೆಹಲಿಯ ಜಂತರ್ ಮಂತರ್ನಲ್ಲಿ 'ಚುನಾವಣಾ ಆಯೋಗದ' ವಿರುದ್ಧ ಸಿಜೆಪಿ ಹಾಗೂ ಇತರೆ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭದ್ರತಾ ಕರ್ತವ್ಯದಲ್ಲಿದ್ದರು. ಈ ವೇಳೆ 'ಬೂಟಾ ಸಿಂಗ್ ಚೌಕ್' ಬಳಿ ಸ್ವತಂತ್ರ ಪತ್ರಕರ್ತೆ ರೋಸಿ ಎಂಬಾಕೆ, ಎಸಿಪಿ ವಿವೇಕ್ ಭಗತ್ ಅವರ ಜಾತಿಯನ್ನು (ಮೇಘವಾಲ್ ಸಮುದಾಯ) ಪ್ರಸ್ತಾಪಿಸಿ ಅತ್ಯಂತ ಅಪಮಾನಕರ ಹಾಗೂ ನಿಂದನಾತ್ಮಕ ಪದಗಳಿಂದ ನಿಂದಿಸಿದ್ದಾಳೆ. ಅಲ್ಲದೆ, ಆಯಕಟ್ಟಿನ ಹುದ್ದೆಯಲ್ಲಿ ಆತ ಹೇಗೆ ಮುಂದುವರಿದಿದ್ದಾನೆ ಎಂದು ಸಾರ್ವಜನಿಕವಾಗಿ ಪ್ರಶ್ನಿಸಿ ಅಪಮಾನಿಸಿದ್ದಾಳೆ. ಆದರೆ, ಕರ್ತವ್ಯದ ಹಿತದೃಷ್ಟಿಯಿಂದ ಎಸಿಪಿ ಭಗತ್ ಈ ನಿಂದನೆಯನ್ನು ನಿರ್ಲಕ್ಷಿಸಿ ತಮ್ಮ ಕೆಲಸ ಮುಂದುವರಿಸಿದ್ದರು.
ಲೈಂಗಿಕ ಕಿರುಕುಳದ ಸುಳ್ಳು ಆರೋಪ
ಅಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪ್ರತಿಭಟನಾಕಾರರನ್ನು ನಿಯಂತ್ರಿಸಿ ವಶಕ್ಕೆ ಪಡೆಯುವ ಸಂದರ್ಭದಲ್ಲಿ, ಪತ್ರಕರ್ತೆ ರೋಸಿ ಹಾಗೂ ಆಕೆಯ ಸಹಚರರು ಎಸಿಪಿ ವಿವೇಕ್ ಭಗತ್ ತಮ್ಮ ಮೇಲೆ 'ಲೈಂಗಿಕ ಕಿರುಕುಳ' (Sexual Harassment) ಎಸಗಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿದರು. ಈ ಮೂಲಕ ಸಾರ್ವಜನಿಕವಾಗಿ ಗೊಂದಲ ಸೃಷ್ಟಿಸಿ ಸರ್ಕಾರಿ ಕೆಲಸಕ್ಕೆ ನಿರಂತರ ಅಡ್ಡಿಪಡಿಸಿದರು. ಅಷ್ಟಕ್ಕೇ ನಿಲ್ಲದೆ, ಅಂದು ಸಂಜೆ ಸಂಸದ್ ಮಾರ್ಗ ಪೊಲೀಸ್ ಠಾಣೆಯ ಮುಂದೆ ಬೃಹತ್ ಧರಣಿ ನಡೆಸಿ, ಎಸಿಪಿ ವಿವೇಕ್ ಭಗತ್ ಅವರ ವಿರುದ್ಧ "ಕಾಮಪಿಶಾಚಿ" ಹಾಗೂ "ಸಂಭಾವ್ಯ ಅ*ತ್ಯಾಚಾರಿ" ಎಂದು ಕೀಳಾಗಿ ಘೋಷಣೆಗಳನ್ನು ಕೂಗಿದರು ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಎಫ್ಐಆರ್ನಲ್ಲಿ ಯಾರ ಯಾರ ಹೆಸರುಗಳಿವೆ?
ಈ ಘಟನೆಯ ಆಧಾರದ ಮೇಲೆ ಎಸಿಪಿ ವಿವೇಕ್ ಭಗತ್ ಅವರು ನೀಡಿದ ದೂರಿನಲ್ಲಿ ರೋಸಿ, ಗಜೇಂದ್ರ ಸಿಂಗ್, ಅಭಿಜೀತ್ ದಿಪ್ಕೆ, ಆಶುತೋಷ್ ರಾಂಕಾ, ಸೌರವ್ ದಾಸ್ ಹಾಗೂ ರತ್ನಾ ಸಿಂಗ್ ಅವರ ಹೆಸರುಗಳನ್ನು ದಾಖಲಿಸಲಾಗಿದೆ. ಆರೋಪಿಗಳು ತಮ್ಮ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಅದಕ್ಕೆ ಸಂಬಂಧಿಸಿದ ವೀಡಿಯೊಗಳು, ರೀಲ್ಸ್ ಹಾಗೂ ಪೋಸ್ಟ್ಗಳನ್ನು 'ಎಕ್ಸ್' (X) ಮತ್ತು 'ಇನ್ಸ್ಟಾಗ್ರಾಮ್' ಖಾತೆಗಳಲ್ಲಿ ವೈರಲ್ ಮಾಡಿದ್ದಾರೆ. ಇದರಿಂದ ತಮಗೆ ತೀವ್ರ ಮಾನಸಿಕ ಕಿರುಕುಳ ಉಂಟಾಗಿದ್ದು, ಸಮಾಜದಲ್ಲಿ ಹಾಗೂ ವೃತ್ತಿಜೀವನದಲ್ಲಿ ತಮ್ಮ ಗೌರವ ಮತ್ತು ಕೀರ್ತಿಗೆ ತೀವ್ರ ಧಕ್ಕೆಯಾಗಿದೆ ಎಂದು ಎಸಿಪಿ ಭಗತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾಖಲಾಗಿರುವ ಕಠಿಣ ಕಾನೂನು ವಿಭಾಗಗಳು
ಈ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಎಸ್ಸಿ/ಎಸ್ಟಿ ಕಾಯ್ದೆಯಡಿ ಜಾತಿನಿಂದನೆ ಮತ್ತು ಅಪಮಾನದ ಪ್ರಕರಣ ದಾಖಲಿಸಿದ್ದಾರೆ. ಇದರ ಜೊತೆಗೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 221 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ), ಸೆಕ್ಷನ್ 356(2) (ಮಾನನಷ್ಟ) ಹಾಗೂ ಸೆಕ್ಷನ್ 3(5) (ಸಾಮಾನ್ಯ ಉದ್ದೇಶದೊಂದಿಗೆ ನಡೆಸಿದ ಅಪರಾಧ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮತ್ತೊಂದೆಡೆ, ಪತ್ರಕರ್ತೆ ರೋಸಿ ನೀಡಿದ್ದ ಲೈಂಗಿಕ ಕಿರುಕುಳದ ದೂರನ್ನು ದೆಹಲಿ ಪೊಲೀಸರ 'ಕ್ರೈಮ್ ಬ್ರಾಂಚ್' (Crime Branch) ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. "ಎಫ್ಐಆರ್ನಲ್ಲಿ ಹೆಸರು ಬಂದ ತಕ್ಷಣವೇ ಅಪರಾಧ ಸಾಬೀತಾಗುವುದಿಲ್ಲ, ಆರೋಪಗಳ ನೈಜತೆಯನ್ನು ತನಿಖೆಯ ಮೂಲಕ ಕಂಡುಕೊಳ್ಳಲಾಗುವುದು" ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.


