ದೆಹಲಿಯ ಜಂತರ್ ಮಂತರ್ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಸಿಜೆಪಿ ನಾಯಕರಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಭದ್ರತಾ ಬ್ಯಾರಿಕೇಡ್ ದಾಟಿ ಒಳಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ದೀಪ್ಕೆ ಕಿಡಿ.
ದೆಹಲಿ (ಅ.14): ಜಂತರ್ ಮಂತರ್ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಪ್ರಕರಣ ಸಂಬಂಧ ಸಿಜೆಪಿ (Cockroach Janata Party) ನಾಯಕ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೋರ್ವ ನಾಯಕ ಅಜಿಂಕ್ಯ ಶಿಂಧೆ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿನ್ಹಾ ಬುಧವಾರ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿಯ ಜಂತರ್ ಮಂತರ್ಗೆ ಅನುಮತಿ ಇಲ್ಲದೆ ಪ್ರವೇಶ
ದೆಹಲಿಯ ಜಂತರ್ ಮಂತರ್ಗೆ ಅನುಮತಿಯಿಲ್ಲದೆ ಪ್ರವೇಶಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಘಟನೆಯ ಮರುದಿನವಾದ ಬುಧವಾರ ಬೆಳಗ್ಗೆ ಸುಮಾರು 8.30ಕ್ಕೆ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಮಂದಿರ್ ಮಾರ್ಗ ಪೊಲೀಸ್ ಠಾಣೆಯಲ್ಲಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಇದಕ್ಕೂ ಕೆಲವು ಗಂಟೆಗಳ ಮೊದಲು ಜಂತರ್ ಮಂತರ್ನಲ್ಲಿ ನಡೆದ ಘಟನೆಯ ಸಂಬಂಧ ಸೌರವ್ ದಾಸ್, ಆಶುತೋಷ್ ರಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು ಎಂದು ರತ್ನಾ ಸಿನ್ಹಾ ತಿಳಿಸಿದ್ದಾರೆ.
ಸಿಜೆಪಿ ನಾಯಕರ ಮೇಲಿನ ಆರೋಪಗಳೇನು?
ಅನುಮತಿಯಿಲ್ಲದೆ ಪ್ರವೇಶಿಸುವುದು, ಬಾಂಡ್ನ ಷರತ್ತು ಉಲ್ಲಂಘಿಸುವುದು ಮತ್ತು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸೇರಿದಂತೆ ಹಲವು ಆರೋಪಗಳನ್ನು ಪೊಲೀಸರು ಹೊರಿಸಿದ್ದಾರೆ. ಬಂಧಿತ ಸಿಜೆಪಿ ಮುಖಂಡರಿಗೆ ತಡರಾತ್ರಿಯವರೆಗೂ ನಮ್ಮ ವಕೀಲರನ್ನ ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎಂದು ರತ್ನಾ ಸಿನ್ಹಾ ಆರೋಪಿಸಿದ್ದಾರೆ. ಅವರನ್ನು ಬೆಳಗಿನ ಜಾವ 3 ಗಂಟೆಗೆ ಖಾಸಗಿ ವಾಹನದಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆತರಲಾಯಿತು. ಇಷ್ಟೆಲ್ಲ ಕ್ರಮಗಳ ನಡುವೆಯೂ ಪ್ರತಿಭಟನಾಕಾರರ ಆತ್ಮವಿಶ್ವಾಸ ಕುಗ್ಗಿಲ್ಲ ಎಂದು ಹೇಳಿದ್ದಾರೆ.
ಜಂತರ್ ಮಂತರ್ನಲ್ಲಿ ನಡೆದಿದ್ದೇನು? ಬಂಧಿಸಲು ಅಸಲಿ ಕಾರಣಗಳೇನು?
ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದ ಸ್ಥಳದ ಅಧಿಕೃತ ಮಾನ್ಯತೆಯನ್ನು ಅಧಿಕಾರಿಗಳು ರದ್ದುಗೊಳಿಸಿದ್ದರು. ಆದರೂ ಮರುದಿನ ಅಂದರೆ ಮಂಗಳವಾರದಂದು ಸಿಜೆಪಿ ನಾಯಕರು ಜಂತರ್ ಮಂತರ್ಗೆ ಪ್ರವೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಸೌರವ್ ದಾಸ್, ಆಶುತೋಷ್ ರಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.
ರಂಕಾ, ದಾಸ್ ಮತ್ತು ಶಿಂಧೆ ಅವರು ಪೊಲೀಸರ ಭದ್ರತಾ ಬ್ಯಾರಿಕೇಡ್ ದಾಟಿ ಜಂತರ್ ಮಂತರ್ ಪ್ರವೇಶಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಅಭಿಜೀತ್ ದೀಪ್ಕೆ ಹಂಚಿಕೊಂಡಿರುವ ವಿಡಿಯೊದಲ್ಲಿ ರಂಕಾ ಮತ್ತು ದಾಸ್ ಸೇರಿದಂತೆ ಸಿಜೆಪಿ ಪ್ರತಿಭಟನಾಕಾರರು ಬೀಗ ಹಾಕಿದ್ದ ಗೇಟ್ ಹತ್ತಿ ಒಳಗೆ ಪ್ರವೇಶಿಸಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ವೇಳೆ ಪ್ರತಿಭಟನಾಕಾರರು ರಾಷ್ಟ್ರಧ್ವಜ ಹಿಡಿದುಕೊಂಡು, ‘ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ’ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಬಂಧಿತರ ಪರ ವಾದ ಮಂಡಿಸಿದ್ದು ಯಾರು? ಹೇಳಿದ್ದೇನು?
ಬಂಧಿತರ ಪರ ವಾದ ಮಂಡಿಸಿದ ವಕೀಲ ಅಭಿಷ್ಟ್ ಹೆಲಾ ಅವರ ಹೇಳಿಕೆಯ ಲೈವ್ ಲಾ ವರದಿ ಮಾಡಿದೆ. ಜಂತರ್ ಮಂತರ್ಗೆ ಬರುವಂತೆ ರಂಕಾ ಮತ್ತು ದಾಸ್ ಜನರಿಗೆ ಕರೆ ನೀಡಿದ್ದರು. ಇದರಿಂದ ಅವರು ಅಕ್ರಮವಾಗಿ ಸ್ಥಳ ಪ್ರವೇಶಿಸಲು ಪ್ರೇರೇಪಿಸಿದರು ಎಂಬುದು ದೆಹಲಿ ಪೊಲೀಸರ ವಾದವಾಗಿದೆ. ಇದಲ್ಲದೆ, ಭಾನುವಾರ ದೆಹಲಿ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಬಂಧಿತರು ಬಾಂಡ್ಗೆ ಸಹಿ ಹಾಕಿದ್ದರು. ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬ ಷರತ್ತನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಬಂಧಿತರು ಹೊರಗಿದ್ದರೆ ಮತ್ತೆ ಅಪರಾಧ ಎಸಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಮಂಡಿಸಿದ್ದರು. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಸಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪರಿಸ್ಥಿತಿಯ ನಡುವೆಯೇ ಜಂತರ್ ಮಂತರ್ ಘಟನೆ ನಡೆದಿದೆ.
ಪ್ರಧಾನಿ ಮೋದಿ ವಿರುದ್ಧ ಅಭಿಜೀತ್ ದೀಪ್ಕೆ ವಾಗ್ದಾಳಿ!
ಸಿಜೆಪಿ ನಾಯಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆನ್ನಲ್ಲೇ ಪಕ್ಷದ ಸ್ಥಾಪಕ ಅಭಿಜೀತ್ ದೀಪ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, 'ಸ್ವಲ್ಪ ಧೈರ್ಯ ತೋರಿಸಿ ನರೇಂದ್ರ ಮೋದಿಯವರೇ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ನೀವು ಇಷ್ಟೊಂದು ದೃಢನಿಶ್ಚಯ ಹೊಂದಿದ್ದರೆ ಹೀಗೆ ಹೇಡಿತನದ ತಂತ್ರಗಳ ಹಿಂದೆ ಅಡಗಿಕೊಳ್ಳುವ ಬದಲು ಅಧಿಕೃತವಾಗಿ ತುರ್ತು ಪರಿಸ್ಥಿತಿ ಘೋಷಿಸುವ ಧೈರ್ಯ ತೋರಿಸಿ' ಎಂದು ಸವಾಲು ಹಾಕಿದ್ದಾರೆ.
ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ತಪ್ಪೇ ಎಂದು ಪ್ರಶ್ನಿಸಿರುವ ದೀಪ್ಕೆ, ಪ್ರತಿಭಟನಾಕಾರರ ವಿರುದ್ಧ ಕೈಗೊಂಡ ಕ್ರಮವನ್ನು ಟೀಕಿಸಿದ್ದಾರೆ.


