ನಿರುದ್ಯೋಗ, ಬೆಲೆಯೇರಿಕೆ ಹಾಗೂ ಹೆಚ್ಚುತ್ತಿರುವ ಅಪರಾಧಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸಂಹಿತೆಯಂಥ ಅಜೆಂಡಾವನ್ನು ಹೇರಲಾಗುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಜೂನ್ 29, 2023): ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮಾಡುವ ಪರ ಪ್ರಧಾನಿ ನರೇಂದ್ರ ಮೋದಿ ಬ್ಯಾಟ್‌ ಬೀಸುತ್ತಿದ್ದಂತೆಯೇ ವಿಪಕ್ಷಗಳು ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವೆ ಬುಧವಾರ ಜಟಾಪಟಿ ನಡೆದಿದೆ. ಸಂಹಿತೆ ಜಾರಿಯನ್ನು ಕಾಂಗ್ರೆಸ್‌, ಎಐಎಂಐಎಂ, ಜೆಡಿಯು, ಶಿರೋಮಣಿ ಅಕಾಲಿ ದಳ, ಮುಸ್ಲಿಂ ಲೀಗ್‌ ಸೇರಿ ಹಲವು ವಿಪಕ್ಷಗಳು ವಿರೋಧಿಸಿದ್ದರೆ, ವಿಪಕ್ಷಗಳನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಮಾತನಾಡಿ, ‘ಬಹುಮತದ ಸರ್ಕಾರವು ತನ್ನದೇ ಆದ ಅಜೆಂಡಾ ಹೊಂದಿದೆ. ಅದನ್ನು ಜನರ ಮೇಲೆ ಹೇರಬಾರದು. ಇದರಿಂದ ಜನರ ನಡುವೆ ಮತ್ತಷ್ಟು ದ್ವೇಷ ಹೆಚ್ಚುತ್ತದೆ. ನಿರುದ್ಯೋಗ, ಬೆಲೆಯೇರಿಕೆ ಹಾಗೂ ಹೆಚ್ಚುತ್ತಿರುವ ಅಪರಾಧಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸಂಹಿತೆಯಂಥ ಅಜೆಂಡಾವನ್ನು ಹೇರಲಾಗುತ್ತಿದೆ’ ಎಂದಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಮಾತನಾಡಿ, ‘ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್‌) ಕಾನೂನಿನ ಕಾರಣ ಸರ್ಕಾರಕ್ಕೆ 3064 ಕೋಟಿ ರೂ. ಹೊರೆ ಆಗುತ್ತಿದೆ. ಸಂಹಿತೆ ಜಾರಿ ಬಗ್ಗೆ ಮಾತನಾಡುವ ಮೋದಿ ಧೈರ್ಯ ಇದ್ದರೆ ಹಿಂದೂ ಅವಿಭಜಿತ ಕುಟುಂಬ ಕಾಯ್ದೆ ರದ್ದು ಮಾಡಲಿ’ ಎಂದು ಸವಾಲು ಎಸೆದಿದ್ದಾರೆ.

ಇದನ್ನು ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್‌

ಅಕಾಲಿ ದಳ ಕೂಡ ಸಂಹಿತೆ ಜಾರಿ ವಿರೋಧಿಸಿದ್ದು, ‘ಇದು ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳಿಗೆ ಮಾರಕವಾಗಲಿದೆ’ ಎಂದಿದೆ. ಮತ್ತೊಂದೆಡೆ ಸಮಾನ ನಾಗರಿಕ ಸಂಹಿತೆ ವಿಷಯ ತೆಗೆಯುವ ಮೂಲಕ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ. ಇದು ಕೋಮು ಸೂಕ್ಷ್ಮವನ್ನು ಹೊಂದಿರುವ ವಿಷಯವಾಗಿದೆ ಎಂದು ಜೆಡಿಯು ಕಿಡಿಕಾರಿದೆ. ಮುಸ್ಲಿಂ ಲೀಗ್‌ ಕೂಡಾ, ‘ಮುಂಬರುವ ಚುನಾವಣೆಯಲ್ಲಿ ತಮ್ಮ 9 ವರ್ಷದಲ್ಲಿ ಪ್ರಚಾರ ಮಾಡಲು ಯಾವುದೇ ವಿಷಯ ಇಲ್ಲದ ಕಾರಣ ಪ್ರಧಾನಿ ಮೋದಿ ಅವರು ನಾಗರಿಕ ಸಂಹಿತೆ ಮೂಲಕ ಕ್ಯಾತೆ ತೆಗೆಯಲು ಮುಂದಾಗಿದ್ದಾರೆ. ಅದಕ್ಕಾಗಿಯೇ ಅದನ್ನು ಜಾರಿಗೆ ತರಲು ಬಹಳ ಆತುರರಾಗಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ ಎಂದಿದೆ.

ಆದರೆ ವಿಪಕ್ಷಗಳ ಆರೋಪ ತಳ್ಳಿಹಾಕಿರುವ ಬಿಜೆಪಿ ಮುಖಂಡ ಮುಖ್ತಾರ್‌ ಅಬ್ಬಾಸ್‌ ನಖ್ವಿ, ‘ಕಾಂಗ್ರೆಸ್‌ ಪಕ್ಷವು ಸಂಹಿತೆ ಜಾರಿ ಮಾಡುವ ಸಾಂವಿಧಾನಿಕ ಬದ್ಧತೆಯನ್ನು ಪ್ರದರ್ಶಿಸುತ್ತದೋ ಅಥವಾ ಅದರ ಜಾರಿ ವಿರುದ್ಧ ಮತೀಯ ಸಂಚು ಮಾಡುತ್ತದೋ ಸ್ಪಷ್ಟಪಡಿಸಬೇಕು. ಏಕೆಂದರೆ ಸಂವಿಧಾನದಲ್ಲೇ ಏಕರೂಪ ಸಂಹಿತೆ ಪರ ಉಲ್ಲೇಖಿಸಲಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ

ಆಪ್‌ ಅಚ್ಚರಿಯ ಬೆಂಬಲ
ನವದೆಹಲಿ: ಕೇಂದ್ರದ ಧೋರಣೆಗಳನ್ನು ಸದಾ ವಿರೋಧಿಸುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷ (ಆಪ್‌), ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆಗೆ ‘ತಾತ್ವಿಕ ಬೆಂಬಲ’ ಪ್ರಕಟಿಸಿದೆ.

ಮುಸ್ಲಿಂ ಮಂಡಳಿ ಆಕ್ಷೇಪ
ಲಖನೌ: ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಪ್ರಧಾನಿ ಹೇಳಿಕೆ ಬೆನ್ನಲ್ಲೇ ಮಂಗಳವಾರ ತಡರಾತ್ರಿ ಮುಸ್ಲಿಮರ ಪರಮೋಚ್ಚ ಮಂಡಳಿತಾದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸಭೆ ನಡೆಸಿದೆ. ಏಕರೂಪದ ನಾಗರಿಕ ಸಂಹಿತೆಗೆ ನಮ್ಮ ವಿರೋಧವಿದೆ ಎಂದೂ ಹೇಳಿದೆ.

ಇದನ್ನೂ ಓದಿ: ಮೂರೇ ದಿನಕ್ಕೆ ವಿಪಕ್ಷಗಳ ಮೈತ್ರಿ ಠುಸ್‌! ಪರಸ್ಪರ ಕಚ್ಚಾಡಿಕೊಂಡ ಕಾಂಗ್ರೆಸ್‌, ಟಿಎಂಸಿ, ಸಿಪಿಎಂ