ಬೇಹುಗಾರಿಕೆ ಆರೋಪ ಸಂಬಂಧ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಅಧಿಕಾರಿಗಳು ನೇಣು ಕುಣಿಕೆಯಿಂದ ಪಾರಾಗಿದ್ದಾರೆ.

ನವದೆಹಲಿ: ಬೇಹುಗಾರಿಕೆ ಆರೋಪ ಸಂಬಂಧ ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಅಧಿಕಾರಿಗಳು ನೇಣು ಕುಣಿಕೆಯಿಂದ ಪಾರಾಗಿದ್ದಾರೆ. ಈ ಎಂಟೂ ಮಂದಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಕತಾರ್‌ನ ಮೇಲ್ಮನವಿ ನ್ಯಾಯಾಲಯ ಕಡಿತಗೊಳಿಸಿದೆ. ಈ ಬೆಳವಣಿಗೆ, ಭಾರತಕ್ಕೆ ಸಿಕ್ಕ ಮಹತ್ತರ ರಾಜತಾಂತ್ರಿಕ ವಿಜಯ ಎಂದು ಬಣ್ಣಿಸಲಾಗುತ್ತಿದೆ.

ಏನಿದು ಪ್ರಕರಣ?
ದೋಹಾದ ಅಲ್‌ ದಹ್ರಾ ಕಂಪನಿಯಲ್ಲಿ ಈ 8 ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದರು. ಇವರು ಕೆಲಸದ ವೇಳೆ ಅತ್ಯಾಧುನಿಕ ಸಬ್‌ಮರೀನ್‌ ಒಂದರ ರಹಸ್ಯ ಮಾಹಿತಿಯನ್ನು ಇಸ್ರೇಲ್‌ ಜೊತೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಕತಾರ್‌ ಇವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.

ದಹ್ರಾ ಗ್ಲೋಬಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕತಾರ್‌ನ ಮೇಲ್ಮನವಿ ನ್ಯಾಯಾಲಯ ಭಾರತೀಯರ ಗಲ್ಲು ಶಿಕ್ಷೆಯನ್ನು ಕಡಿತಗೊಳಿಸಿದೆ. ಪೂರ್ಣ ತೀರ್ಪಿಗಾಗಿ ಕಾಯಲಾಗುತ್ತಿದೆ. ಕಾನೂನು ತಂಡ ಹಾಗೂ ಬಂಧಿತರ ಕುಟುಂಬ ಸದಸ್ಯರ ಜತೆ ಸಂಪರ್ಕದಲ್ಲಿದ್ದು, ಮುಂದಿನ ಹೆಜ್ಜೆಯನ್ನು ನಿರ್ಧರಿಸಲಾಗುತ್ತದೆ. ಪ್ರಕರಣದ ಗೋಪ್ಯತೆ ಮತ್ತು ಸೂಕ್ಷ್ಮತೆ ಗಮನದಲ್ಲಿಟ್ಟುಕೊಂಡು ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ನೀಡಲಾಗದು ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ದೋಹಾ ಮೂಲದ ಅಲ್‌ ದಹ್ರಾ ಗ್ಲೋಬಲ್‌ ಕಂಪನಿಯಲ್ಲಿ ಈ 8 ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದರು. ಕತಾರ್‌ ಸಶಸ್ತ್ರ ಪಡೆಗಳು ಹಾಗೂ ಇತರೆ ಭದ್ರತಾ ಸಂಸ್ಥೆಗಳಿಗೆ ತರಬೇತಿ ಮತ್ತು ಇನ್ನಿತರೆ ಸೇವೆಯನ್ನು ಒದಗಿಸುವ ಹೊಣೆಯನ್ನು ದಹ್ರಾ ಹೊತ್ತಿತ್ತು. ಆದರೆ ಬೇಹುಗಾರಿಕೆ ಆರೋಪ ಹೊರಿಸಿ 2022ರ ಆಗಸ್ಟ್‌ನಲ್ಲಿ 8 ಮಂದಿ ಭಾರತೀಯರನ್ನು ಬಂಧಿಸಲಾಗಿತ್ತು. ಕಳೆದ ಅಕ್ಟೋಬರ್‌ನಲ್ಲಿ ಈ ಎಲ್ಲರಿಗೂ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿತ್ತು.

ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ನೌಕಾಸೇನೆಯ ಮಾಜಿ ಅಧಿಕಾರಿಗಳ ರಕ್ಷಿಸಲು ಭಾರತದ ಮಹತ್ವದ ಕ್ರಮ!

ಡಿ.1ರಂದು ಕತಾರ್‌ ಮುಖ್ಯಸ್ಥ ಶೇಖ್‌ ತಮೀಮ್‌ ಬಿನ್‌ ಹಮಾದ್‌ ಅಲ್‌- ಥಾನಿ ಅವರನ್ನು ದುಬೈನಲ್ಲಿ ನಡೆದ ಸಿಒಪಿ28 ಶೃಂಗ ಸಭೆಯ ವೇಳೆ ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಗಲ್ಲು ವಿಚಾರವನ್ನು ಪ್ರಸ್ತಾಪಿಸಿದ್ದರು. ಇದರ ಬೆನ್ನಲ್ಲೇ 8 ಮಂದಿಯ ಶಿಕ್ಷೆಯನ್ನು ತಗ್ಗಿಸಿ, ಪ್ರಾಣ ಭೀತಿಯನ್ನು ದೂರ ಮಾಡಲಾಗಿದೆ.

ಗಲ್ಲು ಶಿಕ್ಷೆಗೆ ಗುರಿಯಾಗಿದ್ದವರಲ್ಲಿ ರಾಷ್ಟ್ರಪತಿಗಳ ಸ್ವರ್ಣಪ್ರಶಸ್ತಿ ಪುರಸ್ಕೃತರಾಗಿದ್ದ ಕ್ಯಾಪ್ಟನ್‌ ನವತೇಜ್‌ ಗಿಲ್‌ ಅವರೂ ಇದ್ದಾರೆ. ಇದಲ್ಲದೆ ಕ್ಯಾಪ್ಟನ್‌ ಸೌರಭ್‌ ವಸಿಷ್ಟ, ಕಮಾಂಡರ್‌ಗಳಾದ ಪೂರ್ಣೇಂದು ತಿವಾರಿ, ಅಮಿತ್‌ ನಾಗಪಾಲ್‌, ಎಸ್‌.ಕೆ. ಗುಪ್ತಾ, ಬಿ.ಕೆ.ವರ್ಮಾ, ಸುಗುಣಕರ್‌ ಪಾಕಲಾ ಹಾಗೂ ಸೇಲರ್‌ ರಾಗೇಶ್‌ ಅವರಿದ್ದಾರೆ.

ಇಸ್ರೇಲ್‌ ಪರ ಬೇಹುಗಾರಿಕೆ ಆರೋಪ: ಭಾರತದ 8 ಮಾಜಿ ನೌಕಾ ಸಿಬ್ಬಂದಿಗೆ ಕತಾರ್‌ ಗಲ್ಲು!

ಭಾರತದಲ್ಲೇ ಶಿಕ್ಷೆ?

2015ರಲ್ಲಿ ಭಾರತ ಮತ್ತು ಕತಾರ್‌ ಮಾಡಿಕೊಂಡ ಒಪ್ಪಂದದ ಅನ್ವಯ ಜೈಲು ಶಿಕ್ಷೆಗೆ ಗುರಿಯಾದ ಪರಸ್ಪರ ದೇಶಗಳ ಕೈದಿಗಳನ್ನು ಅವರ ದೇಶದಲ್ಲೇ ಶಿಕ್ಷೆ ಅನುಭವಿಸಲು ಅವಕಾಶವಿದೆ. ಹೀಗಾಗಿ 8 ಜನರಿಗೆ ಶಿಕ್ಷೆಯಾದರೂ ಅವರು ಭಾರತದಲ್ಲೇ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.