ಗಲ್ಲು ಶಿಕ್ಷೆ ವಿಚಾರದಲ್ಲಿ ಭಾರತವು ಕತಾರ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ವಿಷಯದ ಸೂಕ್ಷ್ಮ ಸ್ವರೂಪದ ದೃಷ್ಟಿಯಿಂದ ಊಹಾಪೋಹಗಳಿಗೆ ಒಳಗಾಗಬೇಡಿ ಎಂದು ನಾನು ಮತ್ತೊಮ್ಮೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. 

ನವದೆಹಲಿ (ನ.16): ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳ ಪ್ರಕರಣದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಇದು ಬಹಳ ಸೂಕ್ಷ್ಮ ವಿಷಯವಾಗಿದೆ ಎಂದು ಹೇಳಿದೆ. ಈ ಪ್ರಕರಣವು ಕಾನೂನು ಪ್ರಕ್ರಿಯೆಗೆ ಒಳಪಟ್ಟಿರುತ್ತದೆ. ಈಗಾಗಲೇ ಈ ಕುರಿತು ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಕಂಪನಿಯ ವಕೀಲರೊಂದಿಗೂ ಮಾತನಾಡುತ್ತಿದ್ದೇವೆ. ಅಲ್ಲದೆ ನಾವು 8 ಭಾರತೀಯರಿಗೆ ನಮ್ಮ ಕಾನೂನು ನೆರವು ನೀಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಊಹಾಪೋಹಗಳನ್ನು ತಪ್ಪಿಸಿ. ಕತಾರ್‌ ಜೊತೆಗಿನ ಈ ಪ್ರಕರಣದ ಸಂಪೂರ್ಣ ಪ್ರಕ್ರಿಯೆ ಗೌಪ್ಯವಾಗಿರುತ್ತದೆ ಎಂದು ಹೇಳಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈ ವಿಷಯದ ಬಗ್ಗೆ ಭಾರತವು ಕತಾರ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಸರ್ಕಾರವು ಭಾರತೀಯ ನಾಗರಿಕರಿಗೆ ಎಲ್ಲಾ ಕಾನೂನು ಮತ್ತು ರಾಯಭಾರ ಕಚೇರಿಯ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಅಲ್ಲದೆ ಇದು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ ಎಂದು ಭಾವಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಪ್ರಕರಣವು ಪ್ರಸ್ತುತ ಅಲ್ಲಿ ಕಾನೂನು ಪ್ರಕ್ರಿಯೆಯಲ್ಲಿದೆ ಎಂದು ಬಾಗ್ಚಿ ಹೇಳಿದರು. ಕತಾರ್ ನ್ಯಾಯಾಲಯದಲ್ಲಿಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ವಿಷಯದಲ್ಲಿ ನಾವು ಕತಾರ್ ಅಧಿಕಾರಿಗಳೊಂದಿಗೆ ಸಹ ತೊಡಗಿಸಿಕೊಂಡಿದ್ದೇವೆ. ವಿಷಯದ ಸೂಕ್ಷ್ಮ ಸ್ವರೂಪದ ದೃಷ್ಟಿಯಿಂದ ಊಹಾಪೋಹಗಳಿಗೆ ಒಳಗಾಗಬೇಡಿ ಎಂದು ನಾನು ಮತ್ತೊಮ್ಮೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು. ಪ್ರಕ್ರಿಯೆಯುದ್ದಕ್ಕೂ ಕತಾರ್ ಕಡೆಯಿಂದ ನಿರ್ಧಾರವನ್ನು ಗೌಪ್ಯವಾಗಿ ಇರಿಸಲಾಗಿದೆ. ಈ ಪ್ರಕರಣದಲ್ಲಿ ಸಲ್ಲಿಸಿರುವ ಮೇಲ್ಮನವಿಯ ನಿರ್ಧಾರವನ್ನುಈಗಾಗಲೇ ಮಾಡಲಾಗಿದೆ ಎನ್ನುವ ವರದಿಯು ತಪ್ಪಾಗಿದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 26 ರಂದು ಕತಾರ್ ನ್ಯಾಯಾಲಯವು 8 ಭಾರತೀಯರಿಗೆ ಮರಣದಂಡನೆ ವಿಧಿಸಿತ್ತು. ಭಾರತವು ಈ ನಿರ್ಧಾರವನ್ನು ಆಘಾತಕಾರಿ ಎಂದು ವಿವರಿಸಿದೆ ಮತ್ತು ಈ ವಿಷಯದಲ್ಲಿ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುವುದಾಗಿ ತಿಳಿಸಿತತ್ತು. ಈ 8 ಭಾರತೀಯರು ಖಾಸಗಿ ಕಂಪನಿ ಅಲ್ ದಹ್ರಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಹುಗಾರಿಕೆ ಪ್ರಕರಣದಲ್ಲಿ ಇವರನ್ನು ಕತಾರ್‌ ಅಧಿಕಾರಿಗಳು ಬಂಧಿಸಿದ್ದರು.

Add Asianetnews Kannada as a Preferred SourcegooglePreferred

ಇಸ್ರೇಲ್‌ ಪರ ಬೇಹುಗಾರಿಕೆ ಆರೋಪ: ಭಾರತದ 8 ಮಾಜಿ ನೌಕಾ ಸಿಬ್ಬಂದಿಗೆ ಕತಾರ್‌ ಗಲ್ಲು!

ಅದೇ ವೇಳೆ ಮ್ಯಾನ್ಮಾರ್ ವಿಚಾರದಲ್ಲಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಭಾರತದ ಗಡಿಯತ್ತ ಮ್ಯಾನ್ಮಾರ್ ಪ್ರಜೆಗಳ ಚಲನವಲನ ಆತಂಕಕಾರಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ನಮ್ಮ ಗಡಿಯಲ್ಲಿ ಇಂತಹ ಘಟನೆಗಳ ಬಗ್ಗೆ ನಾವು ಅತ್ಯಂತ ಕಳವಳ ವ್ಯಕ್ತಪಡಿಸುತ್ತೇವೆ. ಮ್ಯಾನ್ಮಾರ್ ಜೊತೆಗಿನ ಪರಿಸ್ಥಿತಿಯ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂವಾದದ ಮೂಲಕ ಪರಿಸ್ಥಿತಿಯನ್ನು ಪರಿಹರಿಸಲು ಬಯಸುತ್ತೇವೆ. ಮ್ಯಾನ್ಮಾರ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಪ್ರಜಾಪ್ರಭುತ್ವವನ್ನು ಹಿಂದಿರುಗಿಸಲು ನಾವು ಕರೆ ನೀಡುತ್ತೇವೆ ಎಂದಿದೆ.

Breaking: ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿದ್ದ 8 ಭಾರತೀಯ Navy ಅಧಿಕಾರಿಗಳಿಗೆ ಕತಾರ್‌ನಿಂದ ಗಲ್ಲು ಶಿಕ್ಷೆ!