Asianet Suvarna News Asianet Suvarna News

UP Election: ಓವೈಸಿ ಪಡೆಯುವ ಒಂದೊಂದು ಮತವೂ ಅಖಿಲೇಶ್‌ ಪಾಲಿಗೆ ನಷ್ಟ, ಯೋಗಿಗೆ ಲಾಭ

ಕರ್ನಾಟಕದ ಹಿಜಾಬ್‌-ಕೇಸರಿ ಶಾಲಿನ ವಿವಾದ ಉತ್ತರಪ್ರದೇಶದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಇವತ್ತು ಚುನಾವಣೆ ನಡೆಯುವ 58 ಕ್ಷೇತ್ರಗಳಲ್ಲಿ ಪ್ರತಿ 4 ಮತದಾರರಲ್ಲಿ ಒಬ್ಬ ಮುಸ್ಲಿಮರಿದ್ದಾರೆ. 

5 States Election How Muslim Dominated Seats Voted in Uttar Pradesh Assembly Election hls
Author
Bengaluru, First Published Feb 10, 2022, 9:16 AM IST

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಮೇಲೆ ಮತ್ತು ಪ್ರಧಾನಿ ಮೋದಿ ಸರ್ಕಾರದ ಮೇಲೆ ಅತ್ಯಂತ ಹೆಚ್ಚು ಮುನಿಸಿಕೊಂಡ ಸಮುದಾಯ ಎಂದರೆ ಅದು ರೈತಾಪಿ ಜಾಟ್‌ ಸಮುದಾಯ. ಕೃಷಿ ಕಾಯ್ದೆ ವಿಚಾರದಲ್ಲಿ ಬಿಜೆಪಿಯಿಂದ ದೂರವಾದ ಜಾಟರನ್ನು ಪುನರಪಿ ಓಲೈಸಲು ಎಂಬಂತೆ ಮೋದಿ ಸರ್ಕಾರ ಕೃಷಿ ಕಾಯ್ದೆಯನ್ನೇ ಹಿಂದೆ ತೆಗೆದುಕೊಂಡಿತು. 5 ವರ್ಷದ ಹಿಂದೆ 2017ರಲ್ಲಿ ಜಾಟ್‌ ಸಮುದಾಯದ ಅಂದಾಜು 62 ಪ್ರತಿಶತ ಮತಗಳು ಬಿಜೆಪಿಗೆ ಬಂದಿದ್ದರೆ,

2019ರಲ್ಲಿ ಪುಲ್ವಾಮಾ ಘಟನೆಯ ನಂತರ 91 ಪ್ರತಿಶತ ಜಾಟರು ಬಿಜೆಪಿ ಕಡೆ ವಾಲಿದ್ದರು. ಆದರೆ ಯಾವಾಗ ಕೃಷಿ ಕಾಯ್ದೆ ಹೋರಾಟ ಆರಂಭವಾಯಿತೋ ಆಗ ಅತಿ ಹೆಚ್ಚು ಬೀದಿಗೆ ಇಳಿದು ಹೋರಾಟ ಮಾಡಿದ್ದು ಪಂಜಾಬಿನ ಜಾಟ್‌ ಸಿಖ್ಖರು ಮತ್ತು ಹರಾರ‍ಯಣ, ಪಶ್ಚಿಮ ಯುಪಿಯ ಹಿಂದೂ ಜಾಟರು. 2017ರಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದ ಜಾಟರೇ ತುಂಬಿಕೊಂಡಿರುವ ರಾಷ್ಟ್ರೀಯ ಲೋಕದಳ ಈ ಬಾರಿ ಅಖಿಲೇಶ್‌ ಯಾದವರ ಸಮಾಜವಾದಿಯನ್ನು ಅಪ್ಪಿಕೊಂಡಿದ್ದು, ಈ 58 ಕ್ಷೇತ್ರಗಳಲ್ಲಿ ಎಷ್ಟುಗೆಲ್ಲಬಹುದು ಎನ್ನುವುದು ಯುಪಿಯ ಅಂತಿಮ ಸಂಖ್ಯೆಗಳನ್ನು ನಿರ್ಧಾರ ಮಾಡಲಿದೆ. ಅಂದಹಾಗೆ 2017ರಲ್ಲಿ ಪಶ್ಚಿಮ ಯುಪಿಯ ಬಾಘಪತ್‌, ಮಥುರಾ, ಮೊರಾದಾಬಾದ್‌, ಕೈರಾನಾದ ಈ 58 ಕ್ಷೇತ್ರಗಳಲ್ಲಿ 53 ಗೆದ್ದಿತ್ತು. ಈ ಬಾರಿ ಜಾಟರ ಬೇಸರದ ನಡುವೆ ಬಿಜೆಪಿ ಎಷ್ಟುಮರಳಿ ಗೆಲ್ಲುತ್ತದೆ ಮತ್ತು ಎಷ್ಟುಸೋಲುತ್ತದೆ ಅನ್ನೋದೇ ಚುನಾವಣೆಯ ದೊಡ್ಡ ಕುತೂಹಲ.

Presidential Election: ಸಂಭಾವ್ಯರ ರೇಸ್‌ನಲ್ಲಿ ಕನ್ನಡತಿ ಸುಧಾಮೂರ್ತಿ, ಸಚಿವೆ ನಿರ್ಮಲಾ ಸೀತಾರಾಮನ್?

ಏಕೆ ಜಾಟ್‌ ವರ್ಸಸ್‌ ಮುಸ್ಲಿಂ?

ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಜಾಟರು ಕಾಂಗ್ರೆಸ್ಸಿನ ಕಟ್ಟಾಮತದಾರರು. ಆದರೆ ಯಾವಾಗ 1967ರಲ್ಲಿ ದೇಶದ ಬಹುತೇಕ ಜಮೀನುದಾರ ಜಾತಿಗಳು ಕಾಂಗ್ರೆಸ್‌ ಮೇಲೆ ಸಿಟ್ಟಾದವೋ ಆಗ ಚೌಧರಿ ಚರಣ್‌ ಸಿಂಗ್‌ ಕೂಡ ಕಾಂಗ್ರೆಸ್‌ ಬಿಟ್ಟು ಹೊರಹೋದರು. ಆವತ್ತಿನಿಂದ ಜಾಟರು ಮೊದಲು ಚರಣ್‌ ಸಿಂಗ್‌, ಆನಂತರ ಅಜಿತ್‌ ಸಿಂಗ್‌ ಮತದಾರರು. ಹೀಗಾಗಿ ಬಿಜೆಪಿ ಇರಲಿ, ಸಮಾಜವಾದಿಗಳು ಇರಲಿ ಪಶ್ಚಿಮ ಯುಪಿಯಲ್ಲಿ ಜಾಟ್‌ ಮತ ಪಡೆಯಲು ಅದೇ ಕುಟುಂಬದ ಬೆನ್ನು ಹತ್ತುತ್ತಿದ್ದವು. ಆದರೆ 2014ರಲ್ಲಿ ಮುಸ್ಲಿಮರ ವಿರುದ್ಧದ ಆಕ್ರೋಶದಿಂದ ಜಾಟರು ಪೂರ್ತಿ ಬಿಜೆಪಿ ಕಡೆ ವಾಲಿದರು.

ಆದರೆ ಈಗ ಕೃಷಿ ಕಾಯ್ದೆ ಹೋರಾಟ ದೊಡ್ಡದು ಮಾಡಿ ಅಖಿಲೇಶ್‌ ಯಾದವ್‌ ಮತ್ತು ಚರಣ್‌ ಸಿಂಗ್‌ ಮೊಮ್ಮಗ ಜಯಂತ ಚೌಧರಿ ಜಾಟ್‌-ಮುಸ್ಲಿಂ ಏಕತೆಯನ್ನು ಪುನರ್‌ ಸ್ಥಾಪಿಸುವ ಪ್ರಯತ್ನದಲ್ಲಿ ಇದ್ದಾರೆ. ಇದು ಸಾಧ್ಯವಾದರೆ ಅಖಿಲೇಶ್‌ಗೆ ಲಾಭ. ಗ್ರೌಂಡ್‌ ರಿಪೋರ್ಟ್‌ಗಳು ಜಾಟರ ಬಿಜೆಪಿ ಮೇಲಿನ ಆಕ್ರೋಶವನ್ನು ತೋರಿಸುತ್ತವೆಯಾದರೂ ಜಾಟರು-ಮುಸ್ಲಿಮರ ತಿಕ್ಕಾಟ ಕೂಡ ಬೂದಿ ಮುಚ್ಚಿದ ಕೆಂಡದಂತೆ ಇದೆ. ಇದರ ಲಾಭ ಪಡೆಯಲು ಎರಡೂ ಬದಿಯ ಪಕ್ಷಗಳು ತುಪ್ಪ ಹಾಕುವ ಪ್ರಯತ್ನ ಮುಂದುವರೆಸಿವೆ.

ಜಾಟರು-ಮುಸ್ಲಿಮರ ತಿಕ್ಕಾಟಗಳು

ಇವತ್ತು ಚುನಾವಣೆ ನಡೆಯುವ 58 ಕ್ಷೇತ್ರಗಳಲ್ಲಿ ಜಾಟರ ಜನಸಂಖ್ಯೆ ಕ್ಷೇತ್ರವಾರು 15ರಿಂದ 20 ಪ್ರತಿಶತ ಇದ್ದು, ಮುಸ್ಲಿಮರು ಕೂಡ 28ರಿಂದ 35 ಪ್ರತಿಶತ ಇದ್ದಾರೆ. 2013ರಲ್ಲಿ ಅಖಿಲೇಶ್‌ ಮುಖ್ಯಮಂತ್ರಿ ಆದ ನಂತರ ಮುಜಫರ್‌ ನಗರದಲ್ಲಿ ನಡೆದ ಹಿಂದೂ-ಮುಸ್ಲಿಂ ಕೋಮು ಸಂಘರ್ಷಗಳ ನಂತರ ಜಾಟರು ಬಿಜೆಪಿಗೆ ಅತೀವ ಹತ್ತಿರದವರಾದರು. ಅದು ಎಷ್ಟರ ಮಟ್ಟಿಗೆ ಅಂದರೆ ಮುಸ್ಲಿಂ ಮತಗಳ ಧ್ರುವೀಕರಣದಿಂದ ಈ ಭಾಗದಲ್ಲಿ ಪ್ರಸ್ತುತತೆ ಇದ್ದ ಎಸ್‌ಪಿ ಮತ್ತು ಜಾಟ್‌ ಮತಗಳ ಕ್ರೋಢೀಕರಣದಿಂದ ಲಾಭ ಉಣ್ಣುತ್ತಿದ್ದ ಚೌಧರಿ ಅಜಿತ್‌ ಸಿಂಗರ ಆರ್‌ಎಲ್‌ಡಿ ಹೇಳ ಹೆಸರಿಲ್ಲದಂತೆ ಆದವು. ಇದಕ್ಕೆ ಮುಖ್ಯ ಕಾರಣ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ತುಷ್ಟೀಕರಣದ ವಿರುದ್ಧ ನಡೆದ ಹಿಂದೂ ಧ್ರುವೀಕರಣ. ಇದರ ಮುಂಚೂಣಿಯಲ್ಲಿ ಇದ್ದವರು ಜಾಟರು. ಆದರೆ ಈಗ ಅದೇ ಜಾಟ್‌ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಂಡಿದೆ. ಅದರ ನಿಶ್ಚಿತ ಪರಿಣಾಮ ಎಷ್ಟುಅನ್ನುವುದು ಇವತ್ತಿನ ವೋಟಿಂಗ್‌ ವಾತಾವರಣದ ಮೇಲೆಯೇ ಗೊತ್ತಾಗಿಬಿಡಬಹುದು.

UP Election: ಅಭಿವೃದ್ಧಿ ನಗಣ್ಯ, ಜಾತಿ ಲೆಕ್ಕಾಚಾರದಲ್ಲೇ ಮುಳುಗಿರುವ ರಾಜಕೀಯ ಪಕ್ಷಗಳು

ಹಿಜಾಬ್‌ ವಿವಾದದ ಸದ್ದು

ಇವತ್ತಿನ ಸೋಶಿಯಲ್ ಮೀಡಿಯಾ ದಿನಗಳಲ್ಲಿ ದೇಶದ ಯಾವ ಮೂಲೆಯಲ್ಲಿ ಗದ್ದಲ ಗಲಾಟೆ ನಡೆದರೂ ದಿಲ್ಲಿವರೆಗೂ ಬಹುಬೇಗ ತಲುಪಿಬಿಡುತ್ತದೆ. ಹೀಗಿರುವಾಗ ಮೊನ್ನೆಕರ್ನಾಟಕದ ಕಾಲೇಜು ಕ್ಯಾಂಪಸ್‌ಗಳಲ್ಲಿ ನಡೆದ ಹಿಜಾಬ್‌-ಕೇಸರಿ ಶಾಲಿನ ತಿಕ್ಕಾಟದ ದೃಶ್ಯಗಳು ಉತ್ತರಪ್ರದೇಶದಲ್ಲಿ ಕೂಡ ಭಾರೀ ಚರ್ಚೆಗೆ ಕಾರಣವಾಗಿವೆ. ಇವತ್ತು ಚುನಾವಣೆ ನಡೆಯುವ 58 ಕ್ಷೇತ್ರಗಳಲ್ಲಿ ಪ್ರತಿ 4 ಮತದಾರರಲ್ಲಿ ಒಬ್ಬ ಮುಸ್ಲಿಮರಿದ್ದಾರೆ. ಹೀಗಾಗಿ ಹಿಜಾಬ್‌ ವಿವಾದದಿಂದ ಮುಸ್ಲಿಂ ಮತಗಳ ಧ್ರುವೀಕರಣ ಈ 58 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಇನ್ನೂ ಜಾಸ್ತಿ ಆಗಬಹುದು.

ಆದರೆ ಹಾಗೆಯೇ ಧ್ರುವೀಕರಣ ನಡೆದರೆ ಹಿಂದೂ ಮತಗಳೂ ಕ್ರೋಢೀಕರಣಗೊಳ್ಳಬಹುದು. ಹೀಗಾಗಿ ಯಾರು ಹೆಚ್ಚು ಧ್ರುವೀಕರಣ ಮತ್ತು ಕ್ರೋಢೀಕರಣ ಮಾಡುತ್ತಾರೋ ಅವರು ಈ 58 ಕ್ಷೇತ್ರಗಳಲ್ಲಿ ಸಿಂಹಪಾಲು ಗಳಿಸುವ ಸಾಧ್ಯತೆ ಹೆಚ್ಚು. ಜಾಟ್‌ ಬಾಹುಳ್ಯದ ಪ್ರದೇಶಗಳಲ್ಲಿ ಹೇಗೂ ಬಿಜೆಪಿ, ಮೋದಿ ಮತ್ತು ಯೋಗಿ ಆದಿತ್ಯನಾಥ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಹೀಗಾಗಿ ಒಂದು ವೇಳೆ ಏನಾದರೂ ಹಿಜಾಬ್‌ ಕಾರಣದಿಂದ ಕೊನೆ ಕ್ಷಣದಲ್ಲಿ ಮುಸ್ಲಿಮರ ವಿರುದ್ಧ ಭಾವನೆಗಳು ಕೆದಕಿದರೆ ಬಿಜೆಪಿಗೆ ಮರಳಿ ಲಾಭ ಆದರೂ ಆಗಬಹುದು.

ಓವೈಸಿ ಎಫೆಕ್ಟ್ ಏನು?

ಬಿಜೆಪಿ ವಿರುದ್ಧ ಬೊಬ್ಬೆ ಹೊಡೆಯುತ್ತಲೇ ಬಿಜೆಪಿ ವಿರುದ್ಧದ ಜಾತ್ಯತೀತ ಪಕ್ಷಗಳ ಆಟ ಕೆಡಿಸುವ ಅಸಾವುದ್ದೀನ್‌ ಓವೈಸಿ ಉತ್ತರಪ್ರದೇಶದಲ್ಲಿ ಎಷ್ಟುಪರಿಣಾಮ ಬೀರಿಯಾರು ಎನ್ನುವುದು ಈ 58 ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲೇ ನಿರ್ಧಾರ ಆಗಲಿದೆ. ಓವೈಸಿ ಪಡೆಯುವ ಒಂದೊಂದು ಮತವೂ ಸಮಾಜವಾದಿ ಪಕ್ಷದ ಬುಟ್ಟಿಯಲ್ಲಿ ಬೀಳಬೇಕಾದ ಮತಗಳೇ. ಹೀಗಾಗಿ ಓವೈಸಿ ಪಡೆಯುವ ಮತ ಅಖಿಲೇಶ್‌ಗೆ ನಷ್ಟ, ಯೋಗಿ ಆದಿತ್ಯನಾಥರ ಲಾಭ. ಪಕ್ಕದ ಬಿಹಾರದ ಸೀಮಾಂಚಲದಲ್ಲಿ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆರ್‌ಜೆಡಿಯ ಮತ ಪಡೆದಿದ್ದ ಓವೈಸಿ ಅಲ್ಲಿ ತೇಜಸ್ವಿ ಯಾದವ್‌ ಮುಖ್ಯಮಂತ್ರಿ ಆಗುವುದನ್ನು ತಡೆದಿದ್ದರು. ಇಲ್ಲಿ ಕೂಡ ಅದು ಪುನರಾವರ್ತನೆಯಾದರೆ ಸೆಕ್ಯುಲರ್‌ ಪಕ್ಷಗಳಿಗೆ ಓವೈಸಿ ಮೈತ್ರಿ ಅನಿವಾರ್ಯ ಆಗಬಹುದು. ಮೇರಠ್‌ನಲ್ಲಿ ಓವೈಸಿ ಮೇಲಿನ ಹಲ್ಲೆ ಯತ್ನದ ನಂತರ ಓವೈಸಿ ಇನ್ನಷ್ಟುಬಿರುಸಾಗಿ ಓಡಾಡುತ್ತಿದ್ದಾರೆ.

ಜೈ ಭೀಮ್ ಜೈ ಮೀಮ್

ಅಂದರೆ ದಲಿತ ಮುಸ್ಲಿಂ ಏಕತೆ. ಒಂದು ಕಾಲದಲ್ಲಿ ಅಸಾವುದ್ದೀನ್‌ ಓವೈಸಿ ಮಹಾರಾಷ್ಟ್ರದಲ್ಲಿ ಈ ಘೋಷಣೆ ಹಾಕುತ್ತಿದ್ದರು. ಈಗ ಯುಪಿಯಲ್ಲಿ ಮಾಯಾವತಿ ಹಾಕುತ್ತಿದ್ದಾರೆ. ಉತ್ತರ ಪ್ರದೇಶದ ಯಾವುದೇ ಭಾಗದಲ್ಲಿ 16ರಿಂದ 18 ಪ್ರತಿಶತ ದಲಿತ ಮತಗಳು ಮಾಯವತಿಗೆ ಬಂದೇ ಬರುತ್ತವೆ. ಹೀಗಾಗಿ ಪಶ್ಚಿಮ ಯುಪಿಯ ಈ 58 ಕ್ಷೇತ್ರಗಳಲ್ಲಿ ಹೆಚ್ಚಾನು ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಬಿಎಸ್‌ಪಿ ಟಿಕೆಟ್‌ ಕೊಟ್ಟಿರುವ ಮಾಯಾವತಿ ಜೈ ಭೀಮ್ ಜೈ ಮೀಮ್ ಅನ್ನುತ್ತಿದ್ದಾರೆ. ಅಭ್ಯರ್ಥಿ ಮುಸ್ಲಿಂ ಆಗಿರುವುದರಿಂದ ಮುಸ್ಲಿಮರು ತಮ್ಮ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಎಸ್‌ಪಿಗೆ ವೋಟು ಕೊಟ್ಟರೆ ಒಂದಿಷ್ಟುಸೀಟುಗಳಲ್ಲಿ ಗೆಲುವಿನ ಗೆರೆ ತಲುಪಬಹುದು ಅನ್ನುವುದು ಮಾಯಾವತಿ ಲೆಕ್ಕಾಚಾರ. ಆದರೆ ಇದರಿಂದ ನೇರವಾಗಿ ನಷ್ಟಆಗುವುದು ಮುಸ್ಲಿಂ ಮತಗಳ ಯುಪಿ ವಾರಸುದಾರ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ಗೆ. ಯಾಕೋ ಏನೋ 2019ರಲ್ಲಿ ಅಖಿಲೇಶ್‌ ಯಾದವ್‌ ನನ್ನ ಅಣ್ಣನ ಮಗ ಎನ್ನುತ್ತಿದ್ದ ಮಾಯಾವತಿ ಈಗ ಸಮಾಜವಾದಿ ಪಕ್ಷವನ್ನು ಸೋಲಿಸಬೇಕು ಎನ್ನುವ ರೀತಿಯಲ್ಲಿ ಯುಪಿಯಲ್ಲಿ ಟಿಕೆಟ್‌ ಕೊಟ್ಟಿದ್ದಾರೆ.

UP Elections: ಕಾಂಗ್ರೆಸ್ ಚೇತರಿಕೆ ಕಂಡರೆ ದಿಲ್ಲಿಯಲ್ಲಿ ಹೆಚ್ಚಲಿದೆ ಪ್ರಿಯಾಂಕಾ ರಾಜಕೀಯ ಮಹತ್ವ

ಬಿಜೆಪಿ ತಂತ್ರ ಏನು?

ಮೊದಲ ಹಂತದ 58 ಕ್ಷೇತ್ರಗಳಲ್ಲಿ ಬಾಘಪತ್‌, ಮೇರಠ್‌, ಮುಜಫರ್‌ನಗರದ ಮುಸ್ಲಿಂ ಬಾಹುಳ್ಯದ ಭಾಗದಲ್ಲಿ ಜಾಟರ ಬಿಜೆಪಿ ಮೇಲಿನ ಸಿಟ್ಟಿನಿಂದಾಗಿ ಆರ್‌ಎಲ…ಡಿಗೆ ಲಾಭ ಆಗುವ ಸಾಧ್ಯತೆಯಿದ್ದು, ಹೀಗಾಗಿ ಬಿಜೆಪಿ ಜಾಟರು ಮತ್ತು ದಲಿತ ಜಾಟವ ಹೊರತುಪಡಿಸಿ ಇತರ ಹಿಂದುಳಿದ ಜಾತಿಗಳನ್ನು ಒಟ್ಟಾಗಿ ತರುವ ಗಂಭೀರ ಪ್ರಯತ್ನ ಮಾಡುತ್ತಿದೆ. ಆದರೆ ನೋಯ್ಡಾ, ಮಥುರಾ, ಆಗ್ರಾ ಭಾಗದಲ್ಲಿ ಮುಸ್ಲಿಂ ಜನಸಂಖ್ಯೆ ಸ್ವಲ್ಪ ಕಡಿಮೆ ಇದ್ದು, ಅಲ್ಲಿ ಅತಿ ಹಿಂದುಳಿದ ಜಾತಿಗಳ ಒಟ್ಟಾಗಿ ಬರುವಿಕೆ ಲಾಭ ತರಬಹುದು. ಬಿಜೆಪಿಗೆ ಕೊರೋನಾ ಸಮಯದಲ್ಲಿ ನೀಡಿದ ಉಚಿತ ಪಡಿತರ ಮತ್ತು ಕಾನೂನು ಸುವ್ಯವಸ್ಥೆ ಈ ಎರಡು ಅಂಶಗಳು ರಾಜಕೀಯ ಲಾಭ ತರುವ ಸಾಧ್ಯತೆಗಳಿವೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios