Asianet Suvarna News Asianet Suvarna News

Presidential Election: ಸಂಭಾವ್ಯರ ರೇಸ್‌ನಲ್ಲಿ ಕನ್ನಡತಿ ಸುಧಾಮೂರ್ತಿ, ಸಚಿವೆ ನಿರ್ಮಲಾ ಸೀತಾರಾಮನ್‌ ?

 ಬಹುತೇಕ 4ರಿಂದ 5 ತಿಂಗಳು ಮೊದಲೇ ರಾಷ್ಟ್ರಪತಿ ಕುಟುಂಬ ಬದಲಿ ಸರ್ಕಾರಿ ನಿವಾಸದ ಹುಡುಕಾಟ ಶುರು ಮಾಡುತ್ತದೆ. ಸರ್ಕಾರದ ಮೂಲಗಳು ರಾಮನಾಥ ಕೋವಿಂದ್‌ ಅವರನ್ನೇ ಮುಂದುವರೆಸುವ ಸಾಧ್ಯತೆ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಹಾಗಿದ್ದಲ್ಲಿ ಬದಲಿ ಯಾರು ಎನ್ನುವುದು ದಿಲ್ಲಿ ಅಂಗಳದ ಹೊಸ ಕುತೂಹಲಗಳಲ್ಲಿ ಒಂದು. 

Probable Candidates List of  President Election in India hls
Author
Bengaluru, First Published Feb 4, 2022, 9:23 AM IST

ಪಂಚ ರಾಜ್ಯಗಳ ಚುನಾವಣೆಗಳ ನಂತರ ಮೋದಿ ಸರ್ಕಾರ ಮಾಡಬೇಕಾದ ಮೊದಲ ದೊಡ್ಡ ನಿರ್ಧಾರ ಮುಂದಿನ ರಾಷ್ಟ್ರಪತಿ ಆಯ್ಕೆ. ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗೌರವ ವಂದನೆ ಸ್ವೀಕರಿಸಿ ಮತ್ತು ಸಂಸತ್ತಿನ ಜಂಟಿ ಅ​ಧಿವೇಶನ ಉದ್ದೇಶಿಸಿ ಮಾತನಾಡಿ ತಮ್ಮ ಬಹುಮುಖ್ಯ ಅ​ಧಿಕೃತ ಜವಾಬ್ದಾರಿ ಮುಗಿಸಿದ್ದಾರೆ. ಬಹುತೇಕ 4ರಿಂದ 5 ತಿಂಗಳು ಮೊದಲೇ ರಾಷ್ಟ್ರಪತಿ ಕುಟುಂಬ ಬದಲಿ ಸರ್ಕಾರಿ ನಿವಾಸದ ಹುಡುಕಾಟ ಶುರು ಮಾಡುತ್ತದೆ.

ಸರ್ಕಾರದ ಮೂಲಗಳು ರಾಮನಾಥ ಕೋವಿಂದ್‌ ಅವರನ್ನೇ ಮುಂದುವರೆಸುವ ಸಾಧ್ಯತೆ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಹಾಗಿದ್ದಲ್ಲಿ ಬದಲಿ ಯಾರು ಎನ್ನುವುದು ದಿಲ್ಲಿ ಅಂಗಳದ ಹೊಸ ಕುತೂಹಲಗಳಲ್ಲಿ ಒಂದು. ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಕಡಿಮೆ ಆಗಿ ಸರ್ಕಾರಗಳು ಬದಲಾಗಿವೆ. ತಮಿಳುನಾಡಿನಲ್ಲಿ ವಿರೋ​ಧ ಪಕ್ಷದ ಸ್ಟಾಲಿನ್‌ ಸರ್ಕಾರ ಬಂದು ಕುಳಿತಿದೆ. ಹೀಗಾಗಿ ಉತ್ತರ ಪ್ರದೇಶವನ್ನು ಪುನರಪಿ ಗೆದ್ದರೆ ಮಾತ್ರ ಬಿಜೆಪಿ ತನ್ನ ಆಯ್ಕೆಯ ವ್ಯಕ್ತಿಯನ್ನೇ ರಾಷ್ಟ್ರಪತಿಯನ್ನಾಗಿ ಕೂರಿಸಬಹುದು. ಪ್ರಧಾನಿ ಮೋದಿ ಮತ್ತು ನಂ.2 ಅಮಿತ್‌ ಶಾ ಯಥಾ ಪ್ರಕಾರ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ ದಕ್ಷಿಣದ ರಾಜ್ಯಗಳ ಒಬ್ಬ ಮಹಿಳೆ ರಾಷ್ಟ್ರಪತಿ ಆಗಬಹುದು ಎಂದು ಬಿಜೆಪಿ ಆಪ್ತ ಮೂಲಗಳು ಹೇಳುತ್ತಿವೆ. ಅದರಲ್ಲೂ ತಮಿಳು ಭಾಷಿಕರಾಗಿದ್ದೇ ಆದಲ್ಲಿ ಅಲ್ಲಿನ ಎಲ್ಲಾ ದ್ರಾವಿಡ ಪಕ್ಷಗಳೂ ಬೇಷರತ್‌ ಬೆಂಬಲಿಸುತ್ತವೆ.

UP Election: ಅಭಿವೃದ್ಧಿ ನಗಣ್ಯ, ಜಾತಿ ಲೆಕ್ಕಾಚಾರದಲ್ಲೇ ಮುಳುಗಿರುವ ರಾಜಕೀಯ ಪಕ್ಷಗಳು

ಇದು ರಾಜಕೀಯವಾಗಿ ಕೂಡ ಲಾಭಕರ ಎಂಬ ಗುಸುಗುಸು ಕೇಳಿಬರುತ್ತಿದೆ. ಆದರೆ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕೆಲ ಆಂಗ್ಲ ಪತ್ರಿಕೆಗಳು ತಮಿಳು ಮೂಲದವರಾದ ನಿರ್ಮಲಾ ಸೀತಾರಾಮನ್‌ ಮತ್ತು ಕನ್ನಡತಿ ಸುಧಾಮೂರ್ತಿ ಹೆಸರು ರೇಸ್‌ನಲ್ಲಿದೆ ಎಂದು ಬರೆದಿವೆಯಾದರೂ ಯಾವುದೂ ಇನ್ನೂ ಖಚಿತವಿಲ್ಲ. ಯಾರೇ ರಾಷ್ಟ್ರಪತಿ ಆದರೂ ಯಾವುದೇ ಸಮಸ್ಯೆ ಸೃಷ್ಟಿಮಾಡದೆ ಔಪಚಾರಿಕತೆಗೆ ಸೀಮಿತರಾಗಿ ಕೆಲಸ ಮಾಡುವ ಮತ್ತು ತಮ್ಮ ಆಯ್ಕೆಯಿಂದ ಮತದಾರರಿಗೆ ಸಂದೇಶ ಕೊಡುವ ಸಾಮರ್ಥ್ಯ ಇರುವ ವ್ಯಕ್ತಿಗಳನ್ನೇ ಮೋದಿ ಆಯ್ಕೆ ಮಾಡುತ್ತಾರೆ ಬಿಡಿ.

ಸ್ವಾಮಿ ಮೌರ್ಯ ತಳಮಳ

ಮೊದಲು ಮಾಯಾವತಿ ಜೊತೆ ಇದ್ದು, ನಂತರ ಬಿಜೆಪಿ ಸೇರಿ, ಈಗ ಅಖಿಲೇಶ್‌ ಯಾದವರ ಜೊತೆ ಸೇರಿಕೊಂಡು ದೊಡ್ಡ ಸುದ್ದಿ ಮಾಡಿದ್ದ ಸ್ವಾಮಿ ಪ್ರಸಾದ್‌ ಮೌರ್ಯ ಪೂರ್ತಿ ತಳಮಳದಲ್ಲಿದ್ದಾರೆ. ಸ್ವಾಮಿ ಮೌರ್ಯ ಬಿಜೆಪಿ ಬಿಟ್ಟು ಹೋದಾಗ ಬಿಜೆಪಿ, ಕಾಂಗ್ರೆಸ್‌ನಲ್ಲಿದ್ದ ಪದರೌನಾದ ರಾಜ ಮನೆತನದ ಕುಡಿ ಹಿಂದುಳಿದ ಕುರ್ಮಿ ಸಮುದಾಯದ ಆರ್‌.ಪಿ.ಎನ್‌.ಸಿಂಗ್‌ರನ್ನು ತನ್ನತ್ತ ಸೆಳೆದುಕೊಂಡಿದೆ. ಇದರಿಂದ ವ್ಯಾಕುಲರಾದ ಸ್ವಾಮಿ ಮೌರ್ಯ, ಅಖಿಲೇಶ್‌ ಬಳಿ ಹೋಗಿ ಕುಶಿನಗರ ಜಿಲ್ಲೆಯಿಂದ ಟಿಕೆಟ್‌ ಕೇಳಿದ್ದಾರೆ. ಅಖಿಲೇಶ್‌ ಇದಕ್ಕೆ ಒಪ್ಪದೇ ಇದ್ದಾಗ ‘ನಾನು ಮಾಯಾವತಿ ಜೊತೆ ಹೋಗುತ್ತೇನೆ’ ಎಂದೆಲ್ಲಾ ಅತ್ತು ಕರೆದ ಮೇಲೆ ಮುಸ್ಲಿಂ ಬಾಹುಳ್ಯದ ಫಾಜಿಲ್‌ನಗರದಿಂದ ಟಿಕೆಟ್‌ ಪಡೆದಿದ್ದಾರೆ. ಒಟ್ಟಾರೆ ಈಗ ಅಖಿಲೇಶ್‌ಗೆ ಆಡಳಿತ ವಿರೋ​ಧಿ ಅಲೆ ಎದುರಿಸುತ್ತಿರುವ ಸ್ವಾಮಿ ಪ್ರಸಾದ ಮೌರ್ಯರನ್ನು ತೆಗೆದುಕೊಂಡಿದ್ದು ಉಪಯೋಗ ಆಗಿಲ್ಲ ಅನಿಸತೊಡಗಿದೆ.

ರಾಹುಲ್‌ ಮಿತ್ರರೇ ಪರಾರಿ

ಕಾಂಗ್ರೆಸ್‌ನ ಕಷ್ಟಕಾಲದಲ್ಲಿ ಗಾಂಧಿ​ ಪರಿವಾರದ ವಿರುದ್ಧ ಎಷ್ಟೇ ಬೇಸರ ಇದ್ದರೂ ಹಿರಿಯರಾದ ಗುಲಾಂ ನಬಿ, ಆನಂದ ಶರ್ಮಾ, ಹರೀಶ ರಾವತ್‌, ಕಪಿಲ್‌ ಸಿಬಲ್‌ ತರಹದ ನಾಯಕರು ತಳವೂರಿ ಕುಳಿತಿದ್ದಾರೆ. ಆದರೆ ರಾಹುಲ್‌ ಅಕ್ಕಪಕ್ಕ ಓಡಾಡುತ್ತಾ ಅ​ಧಿಕಾರ ಅನುಭವಿಸಿದ, ತಮ್ಮ ಮಿತ್ರರು ಎಂದು ರಾಹುಲ್‌ ಕರೆಯುತ್ತಿದ್ದ ಘಟಾನುಘಟಿ ಕುಟುಂಬದ ಕುಡಿಗಳು ಪಲಾಯನಗೈಯುತ್ತಿದ್ದಾರೆ. ಮೊದಲಿಗೆ ಜ್ಯೋತಿರಾದಿತ್ಯ ಸಿಂಧಿ​ಯಾ, ಆನಂತರ ಜಿತಿನ್‌ ಪ್ರಸಾದ್‌ ಮತ್ತು ಈಗ ಆರ್‌.ಪಿ.ಎನ್‌.ಸಿಂಗ್‌ ಕಾಂಗ್ರೆಸ್ಸಿನ ಕಡು ಕಷ್ಟದ ದಿನಗಳಲ್ಲಿ ಹೋಗಿ ಕೇಸರಿ ಶಾಲು ಹಾಕಿಕೊಳ್ಳುತ್ತಿದ್ದಾರೆ.

UP Election: ಕಾಂಗ್ರೆಸ್ ಚೇತರಿಕೆ ಕಂಡರೆ ದಿಲ್ಲಿಯಲ್ಲಿ ಹೆಚ್ಚಲಿದೆ ಪ್ರಿಯಾಂಕಾ ರಾಜಕೀಯ ಮಹತ್ವ

ತಮಾಷೆಯ ವಿಷಯ ಎಂದರೆ ಆರ್‌.ಪಿ.ಎನ್‌.ಸಿಂಗ್‌ ಬಿಜೆಪಿಗೆ ಹೋಗುವ ಹಿಂದಿನ ದಿನ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಮಾಡುವಾಗ ಸೋನಿಯಾ ಗಾಂ​ಧಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲರನ್ನು ಕರೆದು,‘ಆರ್‌.ಪಿ.ಎನ್‌ ಹೆಸರು ಹಾಕುತ್ತಿದ್ದೀರಿ? ಅವರು ಬಿಜೆಪಿಗೆ ಹೋಗೋ ಸುದ್ದಿ ಇದೆ’ ಅಂದಾಗ ವೇಣುಗೋಪಾಲ ,‘ಇಲ್ಲ ಮೇಡಂ ಅಂಥದ್ದು ಏನೂ ಇಲ್ಲ, ರಾಹುಲ್‌ರ ಮಿತ್ರ ಅಲ್ಲವಾ ಅವರು’ ಎಂದಿದ್ದಾರೆ. ಈ ಕಡೆ ಕಾಂಗ್ರೆಸ್ಸಿನ ಸ್ಟಾರ್‌ ಪ್ರಚಾರಕರ ಪಟ್ಟಿಬಿಡುಗಡೆ ಆಗಿದೆ. ಆ ಕಡೆ ಆರ್‌.ಪಿ.ಎನ್‌.ಸಿಂಗ್‌ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ರಾಹುಲ್‌ರಿಗೆ ಕಾಂಗ್ರೆಸ್ಸನ್ನು ಮರಳಿ ಅಧಿ​ಕಾರಕ್ಕೆ ತರುವ ಶಕ್ತಿಯಿಲ್ಲ, ನಮ್ಮ ದಾರಿ ನಾವು ನೋಡಿಕೊಳ್ಳೋಣ ಎಂದು ಮಿತ್ರರಿಗೆ ಅನ್ನಿಸಲು ಶುರು ಆಗಿರಬೇಕು.

ಉಪಕಾರದ ಲೆಕ್ಕ ಚುಕ್ತಾ

ಈ ರಾಜಕೀಯ ಪಕ್ಷಗಳ ದೊಡ್ಡವರೆಲ್ಲಾ ಒಳಗಿಂದ ಒಳಗೆ ಚೆನ್ನಾಗಿಯೇ ಇರುತ್ತಾರೆ ನೋಡಿ. ಪ್ರತ್ಯೇಕವಾಗಿ ಸ್ಪ​ರ್ಧಿಸುತ್ತಿದ್ದರೂ ಕಾಂಗ್ರೆಸ್‌ ಪಕ್ಷ ಅಖಿಲೇಶ್‌ ಯಾದವ್‌ ಮತ್ತು ಶಿವಪಾಲ್‌ ಯಾದವ್‌ ವಿರುದ್ಧ ಅಭ್ಯರ್ಥಿಗಳನ್ನು ಹಾಕಿಲ್ಲ. ಮೊದಲಿನಿಂದಲೂ ಮುಲಾಯಂ ಸಿಂಗ್‌ ಯಾದವ್‌ ಮತ್ತು ಮಾಯಾವತಿ ಇಬ್ಬರೂ ಗಾಂಧಿ​ ಪರಿವಾರ ಸ್ಪ​ರ್ಧಿಸುವ ರಾಯಬರೇಲಿ ಮತ್ತು ಅಮೇಠಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕದೇ ಕಾಂಗ್ರೆಸ್‌ ಅಲ್ಲಿ ಗೆಲ್ಲುವಂತೆ ನೋಡಿಕೊಳ್ಳುತ್ತಾರೆ. ಈಗ ಸ್ಥಳೀಯ ಕಾಂಗ್ರೆಸ್‌ ಘಟಕ ಒಂದು ಕ್ಷೇತ್ರಕ್ಕೆ 5 ಹೆಸರು ಕಳುಹಿಸಿದರೂ ದಿಲ್ಲಿಯಲ್ಲಿ ಸೋನಿಯಾ ಗಾಂಧಿ​ ಅಭ್ಯರ್ಥಿ ಹಾಕುವುದು ಬೇಡ ಅಂದರಂತೆ. ಬಹುಶಃ ಉಪಕಾರ ಚುಕ್ತಾದ ಲೆಕ್ಕಾಚಾರ ಇರಬಹುದು. ಅಷ್ಟೇ ಅಲ್ಲ, 2024ರ ಲೋಕಸಭಾ ಚುನಾವಣೆಗೆ ತಯಾರಿ ಕೂಡ ಇರಬಹುದು.

ಕ್ರಿಶ್ಚಿಯನ್‌ ಪಾಲಿಟಿಕ್ಸ್‌

90ರ ದಶಕದಲ್ಲಿ ಗೋವಾಕ್ಕೆ ಬಿಜೆಪಿ ಕಾಲಿಟ್ಟಿದ್ದು ಹಿಂದುತ್ವದ ಅಲೆಯ ಮೇಲೆ; ಅದು ಕೂಡ ಗೋಮಾಂತಕವಾದಿ ಪಾರ್ಟಿಯ ಬೆನ್ನೇರಿ ಮತ್ತು ಕಾಂಗ್ರೆಸ್ಸಿನ ಕ್ರಿಶ್ಚಿಯನ್‌ ತುಷ್ಟೀಕರಣದ ವಿರುದ್ಧ ಮಾತನಾಡಿ. ಆದರೆ ಮನೋಹರ ಪರ್ರಿಕರ್‌ ಅವರಿಗೆ 2002ರ ಸಮ್ಮಿಶ್ರ ಸರ್ಕಾರದ ನಂತರ 25 ಪ್ರತಿಶತ ಕ್ರಿಶ್ಚಿಯನ್‌ರನ್ನು ಜೊತೆಗೆ ತೆಗೆದುಕೊಳ್ಳದೇ ಏಕಾಂಗಿಯಾಗಿ ಅ​ಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಗೊತ್ತಾಗಿತ್ತು. ಹೀಗಾಗಿ 2012ರಲ್ಲಿ 5 ಕ್ಯಾಥೋಲಿಕ್‌ ಕ್ರಿಶ್ಚಿಯನ್‌ರಿಗೆ ಬಿಜೆಪಿ ಟಿಕೆಟ್‌ ನೀಡಿದ ಪರ್ರಿಕರ್‌ ಸುಲಭವಾಗಿ ಬಹುಮತ ಗಳಿಸಿದರು. 2014ರಲ್ಲಿ ಬಿಜೆಪಿಗೆ ಸೇರಿಕೊಂಡಿದ್ದ ಪ್ರಮೋದ್‌ ಮುತಾಲಿಕ್‌ರನ್ನು ಬಿಜೆಪಿ ರಾತ್ರೋರಾತ್ರಿ ಮನೆಗೆ ಕಳುಹಿಸಲು ಕಾರಣ ಪರ್ರಿಕರ್‌ ಅವರ ವಿರೋಧ. ಚಚ್‌ರ್‍ ಮೇಲೆ ದಾಳಿ ನಡೆಸಿದ್ದನ್ನು ಸಮರ್ಥಿಸಿಕೊಂಡಿದ್ದ ಮುತಾಲಿಕ್‌ ಅವರನ್ನು ಸೇರಿಸಿಕೊಂಡರೆ ಗೋವಾದಲ್ಲಿ ಕ್ಯಾಥೋಲಿಕರು ಮುನಿಸಿಕೊಳ್ಳುತ್ತಾರೆ ಎಂದು ಪರ್ರಿಕರ್‌ ಮೋದಿಯವರ ಮನವೊಲಿಸಿದ್ದರು.

India Gate: ಯೋಗಿಯನ್ನು ಭ್ರಷ್ಟ, ಪಕ್ಷಪಾತಿ ಎನ್ನಲು ವಿರೋಧ ಪಕ್ಷಗಳ ಬಳಿ ಸಾಕ್ಷಿಗಳೇ ಇಲ್ಲ

ಗೋವಾದ ಖಿಚಡಿ ಬಿಜೆಪಿ

ಗೋವಾದ 40 ಕ್ಷೇತ್ರಗಳ ಪೈಕಿ 39ರಲ್ಲಿ ಬಿಜೆಪಿ ಕೊಟ್ಟಿರುವ ಟಿಕೆಟ್‌ಗಳ ಪೈಕಿ 30 ಅಭ್ಯರ್ಥಿಗಳು ಕಾಂಗ್ರೆಸ್‌ ಮತ್ತು ಇತರ ಪಕ್ಷಗಳಿಂದ ಬಂದವರು. ಕೇವಲ 9 ಮಾತ್ರ ಮೂಲ ಬಿಜೆಪಿಯವರು. ವರ್ಷಾನುಗಟ್ಟಲೆ ಕೆಲಸ ಮಾಡಿದವರನ್ನು ನಿರ್ಲಕ್ಷಿಸಿ ಕಾಂಗ್ರೆಸ್ಸಿನಿಂದ ಬಂದವರಿಗೂ ಮತ್ತು ಅವರ ಹೆಂಡತಿಯರಿಗೂ ಟಿಕೆಟ್‌ ಕೊಟ್ಟಿರುವ ಬಿಜೆಪಿ ಗೋವಾದ ಚಿರಪರಿಚಿತ ಸಂಘದ ಕುಟುಂಬಗಳಾದ ಪರ್ರಿಕರ್‌, ಪಾರ್ಸೆಕರ್‌, ಮೆಹುಲ್‌ಕರ್‌ ಅವರನ್ನು ಬಂಡಾಯ ಏಳುವ ಅನಿವಾರ್ಯತೆಗೆ ದೂಡಿದೆ. ಕಾಂಗ್ರೆಸ್‌ನಿಂದ ಬಂದ ವಿಶ್ವಜಿತ್‌ ರಾಣೆ ಪತ್ನಿ ಮತ್ತು ಮೊಂಟೆಸ್ಸೋ ಪತ್ನಿಗೆ ಟಿಕೆಟ್‌ ನೀಡಿರುವ ಬಿಜೆಪಿ ಪರ್ರಿಕರ್‌ ಪುತ್ರನಿಗೆ ಮಾತ್ರ ಕುಟುಂಬ ರಾಜಕಾರಣದ ಹೆಸರು ಹೇಳಿ ಬದಿಗೆ ಸರಿಸಿದೆ. ರಾಜಕಾರಣ ಎಷ್ಟುವಿಚಿತ್ರ ನೋಡಿ, ಯಾವ ರಾಣೆ ಕುಟುಂಬದ ವಿರುದ್ಧ ಪರ್ರಿಕರ್‌ ಬಿಜೆಪಿಯನ್ನು ಕಟ್ಟಿಬೆಳೆಸಿದರೋ ಇವತ್ತು ಅದೇ ರಾಣೆಯ ಮಗ ಮತ್ತು ಸೊಸೆಗೆ ಕೆಂಪು ಹಾಸು ಹಾಕಿದರೆ, ಪರ್ರಿಕರ್‌ ಪುತ್ರನಿಗೆ ಗೇಟ್‌ಪಾಸ್‌ ನೀಡಿದೆ.

ನಿರ್ಮಲಾ ಸ್ಟ್ಯಾಂಡಿಂಗ್ ಸೀಕ್ರೆಟ್‌

ಮುಂಗಡ ಪತ್ರ ಮಂಡಿಸಲು 90 ನಿಮಿಷ ನಿಂತು ಭಾಷಣ ಮಾಡಿದ ನಿರ್ಮಲಾ ಸೀತಾರಾಮನ್‌ ಮಧ್ಯೆ ಮಧ್ಯೆ ದಣಿವಾದಾಗ ಒಮ್ಮೆ ಎಡಗಡೆ ಇದ್ದ ಗ್ಲಾಸ್‌ನಿಂದ, ಇನ್ನೊಮ್ಮೆ ಬಲಗಡೆ ಇದ್ದ ಗ್ಲಾಸ್‌ನಿಂದ ನೀರು ಗುಟುಕುತ್ತಿದ್ದರು. ನಿರ್ಮಲಾರಿಗೆ ಭಾಷಣ ಮುಗಿದ ಮೇಲೆ ಕೆಲ ಸಂಸದರು ಹೋಗಿ ಕೇಳಿದಾಗ ‘ಎಡಗಡೆ ಗ್ಲಾಸಲ್ಲಿ ಎಳನೀರು ಇತ್ತು, ಬಲಗಡೆ ಗ್ಲಾಸಲ್ಲಿ ಎಲೆಕ್ಟ್ರೋಲ್‌ ಇತ್ತು. ಗಂಟಲು ಆರಿದಾಗ ಗುಟುಕು ಕುಡಿಯುತ್ತಿದ್ದೆ’ ಎಂದು ಹೇಳಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios