UP Election: ಅಭಿವೃದ್ಧಿ ನಗಣ್ಯ, ಜಾತಿ ಲೆಕ್ಕಾಚಾರದಲ್ಲೇ ಮುಳುಗಿರುವ ರಾಜಕೀಯ ಪಕ್ಷಗಳು
ಉತ್ತರ ಪ್ರದೇಶದಲ್ಲಿ (Uttar Pradesh) ಮುಸ್ಲಿಮರು ಶೇ.19, ಅಂದರೆ ಅಂದಾಜು 3.8 ಕೋಟಿ ಇದ್ದಾರೆ. ಅದರಲ್ಲೂ ಪಶ್ಚಿಮ ಯುಪಿಯ ಕೈರಾಣಾ, ಮೊರದಾಬಾದ್, ಮುಜಫರ್‌ನಗರ, ಬಾಘಪತ್, ಸಹರಾನಪುರ, ಪೂರ್ವ ಯುಪಿಯ ಅಜಂಗಢ, ಮೌ ಜಿಲ್ಲೆಗಳಲ್ಲಿ ಹತ್ತಿರ ಹತ್ತಿರ 35 ಪ್ರತಿಶತ ಮುಸ್ಲಿಮರಿದ್ದಾರೆ.
ನವದೆಹಲಿ (ಜ. 24): ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೋದಲ್ಲೆಲ್ಲಾ ‘ಇದು 80:20 ಹೋರಾಟ’ ಎಂದು ಹೇಳುತ್ತಿದ್ದಾರೆ. ಯುಪಿಯಲ್ಲಿ ಸುಮಾರು 19 ಪ್ರತಿಶತ ಮುಸ್ಲಿಮರು ಸೇರಿ 20 ಪ್ರತಿಶತ ಅಲ್ಪಸಂಖ್ಯಾತರಿದ್ದಾರೆ.
ಯೋಗಿ ಪ್ರಕಾರ ಚುನಾವಣೆ 80 ಪ್ರತಿಶತ ಹಿಂದೂ, 20 ಪ್ರತಿಶತ ಮುಸ್ಲಿಂ ನಡುವಿನ ಸ್ಪರ್ಧೆ ಅಷ್ಟೆ. ಯೋಗಿಯ ಈ ಘೋಷಣೆಗೆ ಪ್ರತಿಕ್ರಿಯೆ ಕೊಡದೇ ಎರಡು ದಿನ ಸುಮ್ಮನಿದ್ದ ಅಖಿಲೇಶ್ ಯಾದವ್ ತಮ್ಮ ಮಿತ್ರ ಪಕ್ಷದ ಒ.ಪಿ.ರಾಜಭರ್‌ರಿಂದ ‘ಈ ಚುನಾವಣೆ 85:15ರ ನಡುವೆ’ ಎಂದು ಹೇಳಿಸುತ್ತಿದ್ದಾರೆ. ಅಂದರೆ ಯುಪಿಯಲ್ಲಿ 15 ಪ್ರತಿಶತ ಮೇಲು ಜಾತಿಗಳಿವೆ, ಮುಸ್ಲಿಮರೂ ಸೇರಿ 85 ಪ್ರತಿಶತ ಹಿಂದುಳಿದವರು ಇದ್ದಾರೆ ಎಂದು. ಅರ್ಥ ಸ್ಪಷ್ಟ- 5 ವರ್ಷ ಆಡಳಿತ ನಡೆಸಿಯೂ ಯೋಗಿ ಹಿಂದೂ-ಮುಸ್ಲಿಂ ಧ್ರುವೀಕರಣವನ್ನೇ ನಂಬಿಕೊಂಡಿದ್ದರೆ, ಅಖಿಲೇಶ್ ಯಾದವ್ 5 ವರ್ಷ ವಿಪಕ್ಷದಲ್ಲಿ ಕುಳಿತು ಕೂಡ ಆಡಳಿತ ವಿರೋಧಿ ಅಲೆಗಿಂತ ಹೆಚ್ಚಾಗಿ ಭರವಸೆ ಇಟ್ಟಿರುವುದು ಮೇಲುಜಾತಿ ಮತ್ತು ಹಿಂದುಳಿದ ಜಾತಿಗಳ ನಡುವಿನ ಧ್ರುವೀಕರಣದ ಮೇಲೆ. 21ನೇ ಶತಮಾನದಲ್ಲೂ ಭಾರತದ ವಾಸ್ತವ ಇದು. ಇಲ್ಲಿ ಧರ್ಮ, ಜಾತಿ, ಉಪ ಜಾತಿ, ಮೇಲು-ಕೀಳು ಇನ್ನೂ ಮುಖ್ಯ ವಿಷಯಗಳೇ ಹೊರತು, ಅಭಿವೃದ್ಧಿ, ಶಿಕ್ಷಣ, ಸೌಕರ್ಯ, ಪ್ರಾಮಾಣಿಕತೆ, ಮೌಲ್ಯಗಳು ಇವೆಲ್ಲ ನಂತರದ ವಿಷಯಗಳು.
UP Elections: ಕಾಂಗ್ರೆಸ್ ಚೇತರಿಕೆ ಕಂಡರೆ ದಿಲ್ಲಿಯಲ್ಲಿ ಹೆಚ್ಚಲಿದೆ ಪ್ರಿಯಾಂಕ ರಾಜಕೀಯ ಮಹತ್ವ
ಮುಸ್ಲಿಂ ತುಷ್ಟೀಕರಣದ ಪರಿಣಾಮ
ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಶೇ.19, ಅಂದರೆ ಅಂದಾಜು 3.8 ಕೋಟಿ ಇದ್ದಾರೆ. ಅದರಲ್ಲೂ ಪಶ್ಚಿಮ ಯುಪಿಯ ಕೈರಾಣಾ, ಮೊರದಾಬಾದ್, ಮುಜಫರ್‌ನಗರ, ಬಾಘಪತ್, ಸಹರಾನಪುರ, ಪೂರ್ವ ಯುಪಿಯ ಅಜಂಗಢ, ಮೌ ಜಿಲ್ಲೆಗಳಲ್ಲಿ ಹತ್ತಿರ ಹತ್ತಿರ 35 ಪ್ರತಿಶತ ಮುಸ್ಲಿಮರಿದ್ದಾರೆ. 2012ರಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಾಗ 65 ಮುಸ್ಲಿಮರು 403 ಬಲದ ವಿಧಾನಸಭೆಗೆ ಆರಿಸಿ ಬಂದು ಶಾಸಕರಾಗಿದ್ದರು. ಅದು ಸ್ವತಂತ್ರ ಭಾರತದ ಇತಿಹಾಸದಲ್ಲೇ ದಾಖಲೆಯ ಪ್ರಾತಿನಿಧ್ಯ. ಅದಾದ ತಿಂಗಳುಗಳಲ್ಲಿ ಪಶ್ಚಿಮ ಯುಪಿಯ ಮುಜಫರ್‌ನಗರ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೋಮು ದಂಗೆಗಳು ನಡೆದವು. ಪಶ್ಚಿಮ ಯುಪಿಯಲ್ಲಂತೂ ಜಾಟರು ಮತ್ತು ಮುಸ್ಲಿಮರ ನಡುವೆ ಸಾಮಾಜಿಕ ಬಾಂಧವ್ಯವೇ ಮುರಿದುಬಿತ್ತು.
ಸಹಜವಾಗಿ ರಾಜಕೀಯ ಮೈತ್ರಿ ಚಲ್ಲಾಪಿಲ್ಲಿಯಾಯಿತು. ಇನ್ನೊಂದು ಕಡೆ ಪೂರ್ವ ಯುಪಿಯ ಅಜಂಗಢದ ಯುವಕರು ದೇಶದ ನಾನಾ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿಕ್ಕಿಹಾಕಿಕೊಳ್ಳತೊಡಗಿದರೆ, ಮೌ ಜಿಲ್ಲೆಯ ಡಾನ್‌ಗಳಾದ ಮುಕ್ತಾರ ಅನ್ಸಾರಿ ಸಹೋದರರಿಗೆ ಮುಲಾಯಂ ಕುಟುಂಬ ಖುಲೇ ಆಮ್ ಬೆಂಬಲಿಸತೊಡಗಿತ್ತು. ಉತ್ತರ ಪ್ರದೇಶದಲ್ಲಿ ಪ್ರವೇಶ ಪಡೆಯಲು ಕಾಯುತ್ತಿದ್ದ ಮೋದಿ, ಬಿಜೆಪಿಗೆ ಈ ಅಂಶಗಳೇ ಸಹಾಯ ಮಾಡಿದವು. ದೇಶದ ಅನೇಕ ರಾಜಕೀಯ ಪಕ್ಷಗಳು ಹಿಂದುತ್ವವನ್ನು ಟೀಕಿಸುತ್ತವೆಯಾದರೂ ತಾವೇ ಅತಿರೇಕದ ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗುತ್ತವೆ. ತುಷ್ಟೀಕರಣದ ಪ್ರತಿಫಲವೇ ಹಿಂದುತ್ವ ಎಂದು ಅರ್ಥ ಆಗುವುದು ಕುರ್ಚಿ ಹೋದ ಮೇಲೆಯೇ.
Netaji Subhas Chandra Bose Statue: ಹಾಲೋಗ್ರಾಮ್ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ!
ಅಖಿಲೇಶರ ಚಿಂತೆಗಳೇನು?
ಅಖಿಲೇಶರ ತಂದೆ ಮುಲಾಯಂ ಸಿಂಗ್ ಯಾದವರನ್ನು ಬಿಜೆಪಿ, ಸಂಘ ಮತ್ತು ವಿಎಚ್‌ಪಿಗಳು ‘ಮುಲ್ಲಾ ಮುಲಾಯಂ’ ಎಂದು ಕರೆಯುತ್ತಿದ್ದವು. ಅದರಿಂದ ಮುಲಾಯಂ ಅವರಿಗೂ ಲಾಭ ಇತ್ತು. ಮುಸ್ಲಿಂ ಮತಗಳ ಬಹುಪಾಲು ವಾರಸುದಾರಿಕೆ ಸಿಗುತ್ತಿತ್ತು. ಆದರೆ ಮೋದಿ ಯುಪಿಗೆ ದಾಂಗುಡಿ ಇಟ್ಟಮೇಲೆ ಪುತ್ರ ಅಖಿಲೇಶ್ ಯಾದವ್‌ಗೆ ಮುಳುವು ಆಗಿದ್ದು ಮುಸ್ಲಿಂ ಹಣೆಪಟ್ಟಿಯೇ. ಹೀಗಾಗಿ ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಹೋದ ಕಡೆ ಎಲ್ಲ ಹಿಂದೂ, ಹಿಂದುಳಿದ ಸಮುದಾಯಗಳ ವಿಷಯ ಮಾತನಾಡುತ್ತಾರೆಯೇ ಹೊರತು ಮುಸ್ಲಿಂ ವಿಷಯ ಎತ್ತೋದೇ ಇಲ್ಲ. ಪಶ್ಚಿಮ ಯುಪಿಯಲ್ಲಿ ಕೂಡ ಸಮಾಜವಾದಿ ಪರಂಪರಾಗತವಾಗಿ ಕೊಡುವ ಮುಸ್ಲಿಂ ಅಭ್ಯರ್ಥಿಗೆ ಬೆಂಬಲ ಕೊಡಲು ಬಿಜೆಪಿ ಮೇಲೆ ಮುನಿಸಿಕೊಂಡಿರುವ ಜಾಟ್ ಮತದಾರರೂ ತಯಾರಿಲ್ಲ.
ಆ ಭಾಗದ 99 ಸೀಟುಗಳಲ್ಲಿ ಯಾದವ ಮತಗಳು ಜಾಸ್ತಿ ಇಲ್ಲ. ಒಂದು ವೇಳೆ ಸಮಾಜವಾದಿ ಪಕ್ಷ ಮತ್ತು ಮಿತ್ರಪಕ್ಷವಾದ ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್ ಪುತ್ರ ಜಯಂತ್ ಚೌಧರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ, ಬಿಜೆಪಿ ಜಾಟರಿಗೆ ಟಿಕೆಟ್ ಕೊಟ್ಟಾಗ ಧ್ರುವೀಕರಣ ಒಂದು ಬದಿ ಆಗುತ್ತದೆ. ಆಗ ಬಿಎಸ್‌ಪಿ, ಕಾಂಗ್ರೆಸ್ ಮತ್ತು ಓವೈಸಿ ಕೂಡ ಜನ ಬಾಹುಳ್ಯದ ಕಾರಣದಿಂದ ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಲಾಭ ಆಗುವ ಸಾಧ್ಯತೆ ಹೆಚ್ಚು. ಹಾಗಂತ ಮುಸ್ಲಿಮರ ಟಿಕೆಟ್ ಕಡಿತ ಮಾಡಿದರೆ ಬಿಹಾರದಲ್ಲಿ ಆದಂತೆ ಓವೈಸಿ ಕೊನೇ ಗಳಿಗೆಯಲ್ಲಿ ಬಂದು ಚಿಗಿತುಕೊಳ್ಳುತ್ತಾರೆ. ಮೋದಿ ಬಂದ ಮೇಲೆ ಕಾಣುತ್ತಿರುವ ಒಂದು ಟ್ರೆಂಡ್ ಅಂದರೆ, ಬಹುಸಂಖ್ಯಾತ ಹಿಂದೂಗಳ ಯಾವುದೇ ಜಾತಿಗಳು ತಮ್ಮ ಜಾತಿಯವರು ಮುಖ್ಯಮಂತ್ರಿ ಆಗೋದಿಲ್ಲ ಅಂತಿದ್ದರೆ ಪಾರ್ಟಿ ಮತ್ತು ಸಿದ್ಧಾಂತ ಎಂದು ಮುಸ್ಲಿಂ ಅಭ್ಯರ್ಥಿಗೆ ವೋಟು ಹಾಕಲು ಸಹಜವಾಗಿ ತಯಾರಾಗುವುದಿಲ್ಲ.
ಅದು ಸರಿಯೋ, ತಪ್ಪೋ ಎನ್ನುವುದು ನಂತರದ ವಿಷಯ. ಹೀಗಾಗಿಯೇ ಸ್ಪರ್ಧೆ ತುರುಸು ಆಗುತ್ತಿರುವಾಗ ಯೋಗಿ ಆದಿತ್ಯನಾಥರು ಸಮಾಜವಾದಿಗಳು ಬಂದರೆ ಮುಸ್ಲಿಮರ ಸರ್ಕಾರ ಬರುತ್ತದೆ ಎಂಬ ಸಂದೇಶ ಕೊಡುತ್ತಿದ್ದಾರೆ. ಮುಲಾಯಂ ಮತ್ತು ಲಾಲು ಆಗಿದ್ದರೆ ಮುಸ್ಲಿಂ ಕಾರ್ಡನ್ನು ಎದೆಗೆ ಚುಚ್ಚಿಕೊಂಡು ಓಡಾಡುತ್ತಿದ್ದರು. ಆದರೆ ಬದಲಾದ ಮೋದಿ ಕಾಲದಲ್ಲಿ ಅಖಿಲೇಶರಿಗೆ ಅದರ ನಷ್ಟಏನು ಎಂಬ ಅರಿವಿದೆ. ಕಳೆದ 15 ದಿನಗಳಲ್ಲಿ ಮೌರ್ಯ, ಸೈನಿ, ಚವಾಣ್ ಹೀಗೆ ಹಿಂದುಳಿದ ಸಮುದಾಯದ ನಾಯಕರನ್ನು ಡಂಗುರ ಬಾರಿಸಿ ಕರೆದುಕೊಂಡು ಬಂದ ಅಖಿಲೇಶ್, ಮುಸ್ಲಿಂ ಸಮುದಾಯದ ನಾಯಕರನ್ನು ಕರೆದುಕೊಂಡು ಬಂದರೂ ಹೊರಗೆ ಹೇಳುವ ಸಾಹಸ ಮಾಡುತ್ತಿಲ್ಲ.
ಪಿತಾ ಪುತ್ರನ ಹೋಲಿಕೆಗಳು
ಕುಮಾರಸ್ವಾಮಿ 2006ರಲ್ಲಿ ಮುಖ್ಯಮಂತ್ರಿ ಆದಾಗ ತಂದೆ ದೇವೇಗೌಡರ ಜೊತೆ ಸಂಬಂಧ ಕೆಟ್ಟಿತ್ತು ಎಂದರೆ ಯಾರೂ ನಂಬುವುದಿಲ್ಲ. ಹಾಗೆಯೇ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ನಡುವೆ ನಡೆದ ಜಗಳ ಇಬ್ಬರು ಕುಳಿತು ಬರೆದ ಚಿತ್ರಕಥೆ ಎಂದು ಹೇಳುವವರೇ ಯುಪಿಯಲ್ಲಿ ಜಾಸ್ತಿ. ಮುಲಾಯಂ ತಳಮಟ್ಟದಿಂದ ಬಂದ ರಾಜಕಾರಣಿ. ಕಾರ್ಯಕರ್ತರು ಕರೆದರೆ ಯಾವುದೇ ಸಮಯದಲ್ಲೂ ಜೊತೆಗೆ ಹೋಗಿ ನಿಲ್ಲುತ್ತಿದ್ದರು. 1996ರಲ್ಲಿ ಮುಲಾಯಂ, ದೇವೇಗೌಡರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ಬೆಳಿಗ್ಗೆ 5 ಗಂಟೆಗೆ ಬುಲಂದ್‌ಶಹರದ ತಾಲೂಕು ಅಧ್ಯಕ್ಷನ ಮನೆಯಲ್ಲಿ ಯಾರೋ ಸತ್ತರು ಎಂದು ಗೊತ್ತಾಗಿದ್ದೇ ತಡ 7 ಗಂಟೆಗೆ ಕಾರ್ಯಕರ್ತನ ಮನೆಗೆ ಹೋಗಿ ಕುಳಿತಿದ್ದರು. ಅಲ್ಲಿನ ಜಿಲ್ಲಾಧಿಕಾರಿಗೆ ಮುಲಾಯಂ ಬಂದದ್ದು ಗೊತ್ತಾದಾಗ ಅವರು ದಿಲ್ಲಿಗೆ ಮರಳುವ ದಾರಿಯಲ್ಲಿದ್ದರು.
ವಿಪಕ್ಷದಲ್ಲಿದ್ದರೆ ಮುಲಾಯಂ ಬೀದಿಗೆ ಇಳಿದು ಕಾರ್ಯಕರ್ತರ ಜೊತೆ ಹೋರಾಟ ನಡೆಸುತ್ತಿದ್ದರು. ಆದರೆ ಅಖಿಲೇಶ್ ಹಾಗಲ್ಲ. ಕುಮಾರಸ್ವಾಮಿ ತರಹ ಯಾವುದೇ ಹೋರಾಟದಲ್ಲಿ ಭಾಗವಹಿಸುವುದಿಲ್ಲ. ನೇರವಾಗಿ ಚುನಾವಣಾ ಪ್ರಚಾರದಲ್ಲಿ ಧುಮುಕುವುದು ಜಾಸ್ತಿ. ಅಖಿಲೇಶ್ ಪ್ರಕಾರ ಪಾರ್ಟಿ ಎಂದರೆ ಚುನಾವಣೆ ಎದುರಿಸುವ ಯಂತ್ರ ಅಷ್ಟೆ.
ಮುಲಾಯಂ ಆಧುನಿಕತೆಗೆ ಒಗ್ಗಿಕೊಂಡವರಲ್ಲ. ಹೀಗಾಗಿ ಕಂಪ್ಯೂಟರ್‌ಗಳನ್ನು ವಿರೋಧಿಸಿದವರು. ಆದರೆ ಅಖಿಲೇಶ್ ಸ್ವತಃ ತಂತ್ರಜ್ಞಾನ ಸುಲಲಿತವಾಗಿ ಬಳಸುತ್ತಾರೆ. ಹೋಲಿಕೆಗಳು ಏನೇ ಇರಲಿ, 2017ಕ್ಕೆ ಹೋಲಿಸಿದರೆ ಅಖಿಲೇಶ್ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಜನಪ್ರಿಯತೆ ಕೂಡ ತಿಂಗಳಿನಿಂದ ತಿಂಗಳಿಗೆ ಹೆಚ್ಚಾಗುತ್ತಿದೆ. ಮೋದಿ ಅಖಾಡಾಕ್ಕೆ ಇಳಿದ ಮೇಲೂ ವೃದ್ಧಿ ಮುಂದುವರೆದರೆ ಯುಪಿ ಫಲಿತಾಂಶ ಸಮೀಕ್ಷೆಗಳ ಸಂಖ್ಯೆಗಿಂತ ಇನ್ನೂ ಕ್ಲೋಸ್ ಆಗಲಿದೆ.
India Gate: ಯೋಗಿಯನ್ನು ಭ್ರಷ್ಟ, ಪಕ್ಷಪಾತಿ ಎನ್ನಲು ವಿರೋಧ ಪಕ್ಷಗಳ ಬಳಿ ಸಾಕ್ಷಿಗಳೇ ಇಲ್ಲ
ಇತಿಹಾಸದ ಚಕ್ರದ ಸತ್ಯಗಳು
1989ರಲ್ಲಿ ಪ್ರಧಾನಿ ಆದ ಮೇಲೆ ವಿ.ಪಿ.ಸಿಂಗ್ ಮಂಡಲ ವರದಿ ಹೊರತೆಗೆದದ್ದು ತಾವು ಹಿಂದುಳಿದ ವರ್ಗಗಳ ಮಸೀಹಾ ಆಗಲೆಂದು. ಆದರೆ ಮುಲಾಯಂ, ಲಾಲು, ನಿತೀಶ್ ಅದರ ನಿಜವಾದ ಲಾಭಾರ್ಥಿಗಳು. ಹಾಗೆ ನೋಡಿದರೆ ಕಾಂಗ್ರೆಸ್ ರಜಪೂತ ರಾಜಮನೆತನದ ವಿ.ಪಿ.ಸಿಂಗ್ ಅವರನ್ನು ಯುಪಿ ಮುಖ್ಯಮಂತ್ರಿ ಮಾಡಿದ್ದೇ ಬೆಳೆಯುತ್ತಿದ್ದ ಜಾಟರು, ಯಾದವರು, ಲೋಧರು, ಕುರ್ಮಿಗಳನ್ನು ಎದುರಿಸಲು ಬ್ರಾಹ್ಮಣ, ಬನಿಯಾ ಮುಖ್ಯಮಂತ್ರಿಗಳಿಂದ ಸಾಧ್ಯ ಆಗದೇ ಹೋದಾಗ. 1980ರಲ್ಲಿ ವಿ.ಪಿ.ಸಿಂಗ್ ಇಟಾವಾದಲ್ಲಿ ಕಾಂಗ್ರೆಸ್‌ನಿಂದ ಒಬ್ಬ ಯಾದವ ಅಭ್ಯರ್ಥಿ ಹಾಕಿ ಮುಲಾಯಂರನ್ನು ಸೋಲಿಸಿದಾಗ ಕೈಹಿಡಿದದ್ದು ಚೌಧರಿ ಚರಣ್ ಸಿಂಗ್.
ಅವರು ವಿಧಾನ ಪರಿಷತ್ತಿಗೆ ಮುಲಾಯಂರನ್ನು ತಂದು ಮರುಜೀವ ಕೊಟ್ಟರು. ಮರಳಿ 89ರಲ್ಲಿ ಜನತಾದಳದಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂದು ಪ್ರಶ್ನೆ ಬಂದಾಗ ಪ್ರಧಾನಿ ವಿ.ಪಿ.ಸಿಂಗ್ ಬೆಂಬಲ ಕೊಟ್ಟಿದ್ದು ಚರಣ ಸಿಂಗ್ ಪುತ್ರ ಅಜಿತ್ ಸಿಂಗ್ ಅವರಿಗೆ. ಆದರೆ ಯುಪಿಯಲ್ಲಿ ಮುಲಾಯಂ ಶಾಸಕರನ್ನು ಸೆಳೆದು ಮುಖ್ಯಮಂತ್ರಿಯಾದರು.
ಜೊತೆಗೆ ವಿ.ಪಿ.ಸಿಂಗ್ ಪ್ರಧಾನಿ ಸ್ಥಾನದಿಂದ ಇಳಿದ ಮೇಲೆ ಮೂಲೆಗುಂಪು ಆಗುವಂತೆ ನೋಡಿಕೊಂಡರು. ಈಗ ನೋಡಿ ಅಜಿತ್ ಸಿಂಗ್ ಪುತ್ರ ಜಯಂತ್ ಚೌಧರಿ ಮತ್ತು ಅಖಿಲೇಶ್ ಯಾದವ್, ಯೋಗಿ ಮತ್ತು ಮೋದಿ ವಿರುದ್ಧ ಮರಳಿ ಒಟ್ಟಾಗಿದ್ದಾರೆ. ಅಂದಹಾಗೆ ಜಯಂತ್ ಚೌಧರಿಯ ಅಜ್ಜ ಚೌಧರಿ ಚರಣ ಸಿಂಗರನ್ನು ಕೇವಲ 22 ಶಾಸಕರು ಇದ್ದರೂ ಮುಖ್ಯಮಂತ್ರಿ ಮಾಡಿದ್ದು 98 ಶಾಸಕರಿದ್ದ ಜನಸಂಘದವರು. ರಾಜಕೀಯವೆಂಬುದು ಸಾಧ್ಯಾಸಾಧ್ಯತೆಯ ಆಟ ಅಷ್ಟೇ ನೋಡಿ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ