ದೇಶ ಕಾಯುವ ಕಾಯಕಕ್ಕೆ ಸೇರಿದ ಕೂಲಿ ಕಾರ್ಮಿಕನ ಪುತ್ರ: 23 ವರ್ಷದ ಲೆಪ್ಟಿನೆಂಟ್ ಕಬಿಲನ್ ಯಶೋಗಾಥೆ
ತಮಿಳುನಾಡಿನ ಕೂಲಿ ಕಾರ್ಮಿಕರ ಪುತ್ರ ಕಬಿಲನ್, ಎಲ್ಲಾ ಅಡೆತಡೆಗಳನ್ನು ಮೀರಿ ಭಾರತೀಯ ಸೇನೆಯ ಕಮಿಷನ್ಡ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ತಂದೆಯ ಅನಾರೋಗ್ಯ ಮತ್ತು ತಾಯಿಯ ಅಗಲಿಕೆಯ ನಡುವೆಯೂ ಕಬಿಲನ್ ಈ ಸಾಧನೆ ಮಾಡಿದ್ದಾರೆ.
![23 year old Lt. Kabilan The son of a laborer joined the Indian Army 23 year old Lt. Kabilan The son of a laborer joined the Indian Army](https://static-gi.asianetnews.com/images/01jfa2cm6x8zffvfmhdh3y6tg2/capture_363x203xt.jpg)
ಡೆಹ್ರಾಡೂನ್: ಭಾರತೀಯ ಸೇನೆಯನ್ನು ಸೇರಬೇಕೆಂಬುದು ಅನೇಕ ಯುವಕ ಯುವತಿಯರ ಕನಸು ಆದರೆ ಅನೇಕರಿಗೆ ಇದು ಸಾಧ್ಯವಾಗುವುದಿಲ್ಲ, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯ ಜೊತೆ ಅಧ್ಯಯನ ನಡೆಸಿ ಭಾರತೀಯ ಸೇನೆಯೂ ನಡೆಸುವ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ. ಆದರೆ ತಮಿಳುನಾಡಿನ ಕೂಲಿ ಕಾರ್ಮಿಕರ ಪುತ್ರರೊಬ್ಬರು ತಮ್ಮೆಲ್ಲಾ ಅಡ್ಡಿಗಳನ್ನು ಹಿಮ್ಮೆಟ್ಟಿ ಭಾರತೀಯ ಸೇನೆಯ ಕಮೀಷನ್ಡ್ ಆಫೀಸರ್ ಆಗಿ ನೇಮಕಗೊಂಡಿದ್ದು, ಇದು ಅವರು ಹಾಗೂ ಇಡೀ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ತಮಿಳುನಾಡಿನ ಮಧುರೈ ಜಿಲ್ಲೆಯ ಪುಟ್ಟ ಹಳ್ಳಿಯೊಂದರ 23 ವರ್ಷದ ಹುಡುಗ ಕಬಿಲನ್ ಅವರು ಎಲ್ಲ ಅಸಾಧ್ಯತೆಗಳನ್ನು ಕಠಿಣ ಪರಿಶ್ರಮದ ಮೂಲಕ ಸಾಧ್ಯವಾಗಿಸಿದ್ದಾರೆ. ಇತ್ತೀಚೆಗೆ ನಡೆದ, ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಪರೇಡ್‌ನಲ್ಲಿ ಅವರು ತಮ್ಮ ತಂದೆ ಕೂಲಿಕಾರ್ಮಿಕ ವೆಟ್ರಿಸೆಲ್ವಂ ಪಿ ಅವರ ಮುಂದೆ ಹೆಮ್ಮೆಯಿಂದ ಹೆಜ್ಜೆ ಹಾಕಿದ್ದರು. ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಪರೇಡ್‌ನಲ್ಲಿ ಸೈನಿಕರ ಕುಟುಂಬದವರು ಭಾಗಿಯಾಗುತ್ತಾರೆ. ಅದೇ ರೀತಿ ಕಬಿಲನ್ ಅವರ ತಂದೆ ವೆಟ್ರಿಸೆಲ್ವಂ ಅವರು ಗಾಲಿ ಕುರ್ಚಿಯಲ್ಲಿ ಕುಳಿತೇ ತಮ್ಮ ಪುತ್ರ ಪಾಸಿಂಗ್ ಔಟ್ ಪರೇಡ್‌ನಲ್ಲಿ ಹೆಮ್ಮೆಯಿಂದ ಹೆಜ್ಜೆ ಹಾಕುವುದನ್ನು ನೋಡಿದರು.
ದಿನಗೂಲಿ ಕೆಲಸ ಮಾಡುತ್ತಿದ್ದ ವೆಟ್ರಿಯನ್ ಅವರು ಮೂರು ತಿಂಗಳ ಹಿಂದೆ ತಮ್ಮ ಸಾಮರ್ಥ್ಯಕ್ಕಿಂತ ಭಾರದ ಹೊರೆಯನ್ನು ಎತ್ತಿದ ಪರಿಣಾಮ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ವೆಟ್ರಸೆಲ್ವಂ ಅವರ ಪಕ್ಕದಲ್ಲೇ ಅವರ ದಿವಂಗತ ತಾಯಿ ಪನ್ಮೈಯಮ್ಮಲ್ ಅವರ ಪ್ರೇಮ್ ಹಾಕಿದ ಫೋಟೋವನ್ನು ಇಡಲಾಗಿತ್ತು. ಅವರು ಮೂರು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. ತಂದೆಯ ಅನಾರೋಗ್ಯ ತಾಯಿಯ ಸಾವಿನಿಂದಾದ ಅನುಪಸ್ಥಿತಿಯಲ್ಲಿಯೂ ಕಬಿಲನ್ ಅವರ ಭಾರತೀಯ ಸೇನೆ ಸೇರಬೇಕೆಂಬ ಶ್ರದ್ಧೆ ಅವರನ್ನು ಪಾಸಿಂಗ್ ಔಟ್ ಸಮಾರಂಭದಲ್ಲಿ ಹೆಮ್ಮೆಯ ಆದರೆ ಭಾರವಾದ ಹೆಜ್ಜೆ ಹಾಕುವಂತೆ ಮಾಡಿತ್ತು.
ಕಬಿಲನ್ ಅವರ ಈ ಸಾಧನೆಯ ಹಾದಿ ಸುಲಭವಿರಲಿಲ್ಲ, ನಾನು ತುಂಬಾ ಸಲ ಸೋತೆ, ಆದರೆ ಕಷ್ಟಪಟ್ಟು ಸಿಕ್ಕ ಗೆಲುವು ಆ ಸೋಲನ್ನು ಹಗುರಾಗುವಂತೆ ಮಾಡಿತ್ತು. ನಾನು ರಕ್ಷಣಾ ಪಡೆಯನ್ನು ಸೇರಲು ಬಯಸಿದ್ದೆ ಹಾಗೂ ಅದನ್ನು ನಾನು ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ಯಶಸ್ಸು ಮಾತ್ರವಲ್ಲ, ಇದು ಭಾರತೀಯ ಸೇನೆಗೆ ಸೇರಲು ಬಯಸುವ ಪ್ರತಿಯೊಬ್ಬರ ಯಶಸ್ಸು ಆಗಿದೆ. ದಿನಕ್ಕೆ ನೂರು ರೂ ಸಂಬಳಕ್ಕೆ ಕೆಲಸ ಮಾಡುವ ಕೂಲಿ ಕಾರ್ಮಿಕನ ಪುತ್ರನೋರ್ವ ಈ ಸಾಧನೆ ಮಾಡಬಹುದಾದರೆ ಯಾರು ಬೇಕಾದರೂ ಈ ಸಾಧನೆ ಮಾಡಬಹುದು ಎಂದು ಹೆಮ್ಮೆಯಿಂದ ಹೇಳಿದ್ದಾರೆ ಕಬಿಲನ್ ಅವರು.
ತಮಿಳುನಾಡಿನ ಮೇಲೂರು ಗ್ರಾಮದ ಧೂಳಿನ ಹಾದಿಯಲ್ಲಿ ಬೆಳೆದ ಕಬಿಲನ್ ಅವರು ಅಣ್ಣಾ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸುವುದಕ್ಕೂ ಮೊದಲು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅನೇಕರು ಕಬಿಲನ್ ಪಾಲಿಗೆ ತುಂಬಾ ದೂರವೆಂದು ಭಾವಿಸಿದ ಕನಸನ್ನು ಕಬಿಲನ್ ಬೆನ್ನಟ್ಟಿದನು. ವರ್ಷ ವರ್ಷವೂ ಅವರು ಸೈನ್ಯಕ್ಕೆ ಅರ್ಜಿ ಸಲ್ಲಿಸಿದರು. ಎನ್‌ಸಿಸಿಯಿಂದ ಪದವಿ ಪ್ರವೇಶದವರೆಗೆ ಪ್ರತಿ ಹಂತದಲ್ಲೂ ಸೇನೆಗೆ ಸೇರುವ ಅವಕಾಶವನ್ನು ಪ್ರಯತ್ನಿಸಿದರು. ಆದರರೆ ಹಲವು ಬಾರಿ ವಿಫಲಗೊಂಡ ಅವರು ಕಡೆಗೂ ಗೆದ್ದು ಸಾಧಿಸಿದ್ದಾರೆ.
ಆದರೆ ಧೈರ್ಯ ಮಾತ್ರ ಅವಲ್ಲಿರಲಿಲ್ಲ, ಏಕೆಂದರೆ ತಾಯಿಯನ್ನು ಕಳೆದುಕೊಂಡ ನಂತರ ಕಬಿಲನ್ ಅವರು ತನ್ನ ಓದಿನ ಜೊತೆಗೆ ಕುಟುಂಬಕ್ಕೂ ಸಹಾಯ ಮಾಡಬೇಕಿತ್ತು. ಇತ್ತ ಅವರ ಕಿರಿಯ ಸಹೋದರ ನಾಗರಿಕ ಸೇವಾ ಆಯೋಗ ಪರೀಕ್ಷೆಗೆ ಸಿದ್ಧರಾಗುತ್ತಿದ್ದರು, ಇತ್ತ ತಂದೆಯ ಆರೋಗ್ಯ ಹದಗೆಡುತ್ತಿತ್ತು. ಹೀಗಾಗಿ ಕಬಿಲನ್ ಅವರು ಡೆಲ್ಟಾ ಸ್ಕ್ವಾಡ್ ಅಡಿಯಲ್ಲಿ ವಾಟರ್‌ಬೋಟ್ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಾ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ಡೆಲ್ಟಾ ಸ್ಕ್ವಾಡ್ ಎನ್‌ಡಿಆರ್‌ಎಫ್ ಕೆಳಗೆ ಕೆಲಸ ಮಾಡುವ ಸ್ವಯಂಪ್ರೇರಿತ ರಕ್ಷಣಾ ತಂಡವಾಗಿದೆ.
ಕಬಿಲನ್ ಸಾಧನೆಯ ಈ ಕ್ಷಣಕ್ಕೆ ಸಾಕ್ಷಿಯಾಗಲು ಸಮಾರಂಭದಲ್ಲಿ ಭಾಗವಹಿಸಿದ್ದ ಕಬಿಲನ್‌ನ ಮಾರ್ಗದರ್ಶಕ ಸಬ್ ಲೆಫ್ಟಿನೆಂಟ್ (ನಿವೃತ್ತ) ಸುಗಲ್ ಎಸಾನ್ ಅವರು ಮಾತನಾಡಿ, ಕಬಿಲನ್ ತಮ್ಮ ಕನಸನ್ನು ಬೆನ್ನಟ್ಟುವ ಸಮಯದಲ್ಲಿ ತಮ್ಮ ಕುಟುಂಬವನ್ನು ಉಳಿಸಿಕೊಳ್ಳಬೇಕಾಗಿತ್ತು. ಚೆನ್ನೈ ಮತ್ತು ಕನ್ಯಾಕುಮಾರಿ ಪ್ರವಾಹದ ಸಮಯದಲ್ಲಿ, ಅವರು ನಮ್ಮ ರಕ್ಷಣಾ ತಂಡದ ಭಾಗವಾಗಿದ್ದರು. ಇತರ ಸ್ವಯಂಸೇವಕರೊಂದಿಗೆ ಅವರು ಸುಮಾರು 200 ಜೀವಗಳನ್ನು ಉಳಿಸಿದರು ಎಂದು ಹೇಳಿದರು.