National Herald Case: ಇ.ಡಿ.ಯಿಂದ 2 ತಾಸು ಸೋನಿಯಾ ವಿಚಾರಣೆ
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ 2 ಗಂಟೆಗಳ ಕಾಲ ವಿಚಾರಣೆ ನಡೆಸಿದರು.
ನವದೆಹಲಿ (ಜು.22): ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ 2 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಜೊತೆಗೆ ಜು.25ರ ಸೋಮವಾರ ಮತ್ತೆ ವಿಚಾರಣೆಗೆ ಬರುವಂತೆ ಸೋನಿಯಾಗೆ ಸೂಚಿಸಿದ್ದಾರೆ. ಸೋನಿಯಾ ಅವರ ಕೋರಿಕೆ ಅನ್ವಯ ವಿಚಾರಣೆಯನ್ನು ಬೇಗ ಮುಕ್ತಾಯಗೊಳಿಸಲಾಯಿತು ಎಂದು ಇಡಿ ಮೂಲಗಳು ತಿಳಿಸಿದೆ ಈ ವಾದವನ್ನು ಕಾಂಗ್ರೆಸ್ ನಾಯಕರು ಅಲ್ಲಗಳೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ‘ಮಧ್ಯಾಹ್ನ 12.20ಕ್ಕೆ ವಿಚಾರಣೆ ಆರಂಭಿಸಿದ ಇಡಿ ಅಧಿಕಾರಿಗಳು 2 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಬಳಿಕ ಭೋಜನ ಮುಗಿಸಿ ಬರುವಂತೆ ಹೇಳಿ ಕಳುಹಿಸಿದ್ದರು. ಹೀಗಾಗಿ ಮನೆಗೆ ಬಂದಿದ್ದ ಸೋನಿಯಾ ಭೋಜನ ಮುಗಿಸಿ ಮರಳಿ ವಿಚಾರಣೆಗೆ ಮರಳಲು ಸಜ್ಜಾಗುತ್ತಿದ್ದಾಗಲೇ, ಇನ್ನೇನು ಪ್ರಶ್ನೆಗಳಿಲ್ಲ. ಇಂದು ಮತ್ತೆ ವಿಚಾರಣೆಗೆ ಬರಬೇಕಿಲ್ಲ. ಸೋಮವಾರ ಮತ್ತೆ ಹಾಜರಾಗಿ ಎಂದು ತಿಳಿಸಿದರು’ ಎಂದು ಮಾಹಿತಿ ನೀಡಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ಗದ್ದಲ: ಸೋನಿಯಾಗಿಂತ ದೊಡ್ಡದು ಭಾರತದ LAW: ಪ್ರಹ್ಲಾದ್ ಜೋಶಿ
ಆದರೆ ಈ ಹೇಳಿಕೆಗೆ ಮುನ್ನ ಇದೇ ವಿಷಯವಾಗಿ ಟ್ವೀಟ್ ಮಾಡಿದ್ದ ಜೈರಾಂ ರಮೇಶ್, ‘2.15 ಗಂಟೆ ವಿಚಾರಣೆ ಬಳಿಕ ಇನ್ನೇನು ಪ್ರಶ್ನೆಗಳಿಲ್ಲ ಎಂದು ಅಧಿಕಾರಿಗಳು ಹೇಳಿದರು. ಈ ವೇಳೆ ಇನ್ನೇನಾದರೂ ಪ್ರಶ್ನೆಗಳಿದ್ದರೆ ರಾತ್ರಿ 8-9 ಗಂಟೆಯವರೆಗೂ ಇದ್ದು ಉತ್ತರಿಸಲು ಸಿದ್ದ ಎಂದು ಸೋನಿಯಾ ಹೇಳಿದರು. ಆದರೆ ಪುನಃ ಇನ್ನೇನು ಪ್ರಶ್ನೆಗಳಿಲ್ಲ ಎಂದು ಅಧಿಕಾರಿಗಳು ಹೇಳಿದ ಬಳಿಕ ಸೋನಿಯಾ ಮರಳಿದರು’ ಎಂದು ಮಾಹಿತಿ ನೀಡಿದ್ದರು.
ವಿಚಾರಣೆಗೆ ಹಾಜರ್: ಈ ಹಿಂದೆ ಕೋವಿಡ್ ಕಾರಣಕ್ಕಾಗಿ ಎರಡು ಬಾರಿ ವಿಚಾರಣೆಗೆ ತಪ್ಪಿಸಿಕೊಂಡಿದ್ದ ಸೋನಿಯಾಗೆ ಜು.21ರೊಳಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಅದರನ್ವಯ ಗುರುವಾರ ಬೆಳಗ್ಗೆ ಝಡ್‌ಪ್ಲಸ್ ಭದ್ರತೆಯಲ್ಲಿ ಸೋನಿಯಾ ತಮ್ಮ ನಿವಾಸದಿಂದ ಇಡಿ ಕಚೇರಿಗೆ ಆಗಮಿಸಿದರು. ಈ ವೇಳೆ ಅವರ ಜೊತೆಗೆ ಅವರ ಪುತ್ರಿ ಪ್ರಿಯಂಕಾ ಗಾಂಧಿ, ಪುತ್ರ ರಾಹುಲ್ ಇದ್ದರಾದರೂ, ಬಳಿಕ ಅವರನ್ನು ವಿಚಾರಣಾ ಕೊಠಡಿಯ ಸಮೀಪದಲ್ಲೇ ಇರುವ ಇನ್ನೊಂದು ಕಟ್ಟಡದಲ್ಲಿ ಕೂರಲು ವ್ಯವಸ್ಥೆ ಮಾಡಲಾಯಿತು. ಆದರೆ ಸೋನಿಯಾ ಜೊತೆಗೆ ಒಬ್ಬರು ಆಪ್ತ ಸಿಬ್ಬಂದಿ ಇರಲು ಅವಕಾಶ ಮಾಡಿಕೊಡಲಾಗಿತ್ತು.
ವಿಚಾರಣೆ ನಡೆಸಲು ಇಡಿ ಸೋನಿಯಾ ಗಾಂಧಿಯ ಮನೆಗೆ ಹೋಗಬೇಕಿತ್ತು: ಅಶೋಕ್ ಗೆಹ್ಲೊಟ್
ಈ ಹಿಂದೆ ಇದೇ ಪ್ರಕರಣದಲ್ಲಿ ರಾಹುಲ್ ವಿಚಾರಣೆ ಮಾಡಿದ್ದ ಸಹಾಯಕ ನಿರ್ದೇಶಕ ದರ್ಜೆಯ ಅಧಿಕಾರಿಗಳೇ ಗುರುವಾರ ಸೋನಿಯಾರನ್ನು ವಿಚಾರಣೆಗೆ ಗುರಿಪಡಿಸಿದರು. ಸೋನಿಯಾ ಅವರ ಆರೋಗ್ಯ ಸಮಸ್ಯೆ ಗಮನದಲ್ಲಿಕೊಂಡು ಕೋವಿಡ್ ನೆಗೆಟಿವ್ ವರದಿ ಹೊಂದಿರುವ ಅಧಿಕಾರಿಗಳನ್ನು ಮಾತ್ರವೇ ವಿಚಾರಣಾ ಕೊಠಡಿಗೆ ಬಿಡಲಾಗಿತ್ತು. ಜೊತೆಗೆ ವಿಚಾರಣೆಗೆ ಕಾಂಗ್ರೆಸ್ ನಾಯಕರ ಆಕ್ಷೇಪ ಹಿನ್ನೆಲೆಯಲ್ಲಿ ಇಡಿ ಸುತ್ತಲೂ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಬಿಗಿಬಂದೋಬಸ್‌್ತ ಮಾಡಿ, ಯಾರೂ ಒಳಗೆ ಪ್ರವೇಶ ಮಾಡದಂತೆ ನೋಡಿಕೊಳ್ಳಲಾಯಿತು. ಹೀಗೆ ಭದ್ರತೆ, ಸುರಕ್ಷತಾ ಕ್ರಮಗಳ ನಡುವೆಯೇ ಸೋನಿಯಾರನ್ನು ಅಧಿಕಾರಿಗಳು ವಿಚಾರಣೆ ನಡೆಸಿದರು. ಬಳಿಕ ಸ್ವತಃ ಸೋನಿಯಾ ಕೋರಿಕೆ ಮೇರೆಗೆ 2 ಗಂಟೆಗಳ ಬಳಿಕ ವಿಚಾರಣೆ ಮುಗಿಸಿ ಅವರನ್ನು ಕಳುಹಿಸಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ.