ವಿಚಾರಣೆ ನಡೆಸಲು ಇಡಿ ಸೋನಿಯಾ ಗಾಂಧಿಯ ಮನೆಗೆ ಹೋಗಬೇಕಿತ್ತು: ಅಶೋಕ್ ಗೆಹ್ಲೊಟ್
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯ ವಿಚಾರಣೆ ನಡೆಸುತ್ತಿದೆ. ಇದರ ನಡುವೆ ದೇಶಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು ರಾಜಕೀಯ ನಾಯಕರು ಪರ-ವಿರೋಧದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ನವದೆಹಲಿ (ಜುಲೈ 21): ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಆಗಮಿಸಿದ್ದು, ವಿಚಾರಣೆಗೆ ಭಾಗಿಯಾಗಿದ್ದಾರೆ. ಕರೋನಾ ಪಾಸಿಟಿವ್ ಆದ ಬಳಿಕ ಇಡಿ ವಿಚಾರಣೆಯನ್ನು ಮುಂದೂಡಿಕೆ ಮಾಡುವಂತೆ ಸೋನಿಯಾ ಗಾಂಧಿ ಮನವಿ ಸಲ್ಲಿಸಿದ್ದರು. ಅದಕ್ಕೆ ಒಪ್ಪಿದ್ದ ತನಿಖಾ ಸಂಸ್ಥೆ ಸಮನ್ಸ್‌ಅನ್ನು ಮುಂದೂಡಿಕೆ ಮಾಡಿತ್ತು. ಈ ನಡುವೆ, , ಕಾಂಗ್ರೆಸ್, ಅದರ ರಾಜ್ಯ ಘಟಕಗಳು ಸೇರಿದಂತೆ ಪಕ್ಷದ ಮುಖ್ಯಸ್ಥರೊಂದಿಗೆ ಒಗ್ಗಟ್ಟಿನಿಂದ ಪ್ರತಿಭಟನೆಗಳನ್ನು ನಡೆಸುತ್ತಿವೆ. ಇಡಿ ವಿಚಾರಣೆಗೆ 75 ವರ್ಷದ ಸೋನಿಯಾ ಗಾಂಧಿ, ಮಗಳು ಪ್ರಿಯಾಂಕಾ ಗಾಂಧಿ ಹಾಗೂ ಮಗ ರಾಹುಲ್ ಗಾಂಧಿ ಜೊತೆ ಆಗಮಿಸಿದರು. ಇತ್ತೀಚೆಗೆ ಕೋವಿಡ್ ಆದ ಹಿನ್ನಲೆಯಲ್ಲಿ ಮಾಸ್ಕ್ ಧರಿಸಿದ್ದ ಅವರಿಗೆ ಸಿಆರ್‌ಪಿಎಫ್‌ನಿಂದ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು. ಪಕ್ಷವು ಏಜೆನ್ಸಿಯ ಕ್ರಮವನ್ನು ಟೀಕಿಸಿದೆ ಮತ್ತು ಇದನ್ನು "ರಾಜಕೀಯ ಸೇಡು" ಎಂದು ಕರೆದಿದೆ. ಪಕ್ಷದ ಮುಖ್ಯಸ್ಥರನ್ನು ಬೆಂಬಲಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಪಕ್ಷವು ಶಕ್ತಿ ಪ್ರದರ್ಶನವನ್ನು ನೀಡಿದ್ದರಿಂದ ಹಲವಾರು ಕಾಂಗ್ರೆಸ್ ನಾಯಕರನ್ನು ಬಂಧಿಸಲಾಯಿತು. ಇಡಿ ದುರುಪಯೋಗ ನಿಲ್ಲಿಸಿ ಎಂಬ ದೊಡ್ಡ ಬ್ಯಾನರ್‌ಗಳನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಇಂದು ಸಂಸತ್ತಿನ ಆವರಣದಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿದರು. ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ.
ಕಾಂಗ್ರೆಸ್‌ನ ದುರಾಗ್ರಹದ ಪ್ರತಿಭಟನೆ: "ಕಾಂಗ್ರೆಸ್ ಬಗ್ಗೆ ಅವರ ಕಲ್ಪನೆಯು ಅವರು ನಮ್ಮಿಂದ ತೆಗೆದುಕೊಂಡ ನಾಯಕರ ಮೇಲೆ ಆಧಾರಿತವಾಗಿದೆ ಎಂಬುದನ್ನು ಪ್ರಧಾನಿ ಮರೆತಿದ್ದಾರೆ. ಕಾಂಗ್ರೆಸ್ ಪಕ್ಷ ಯಾವುದು, ಗಾಂಧಿ ಕುಟುಂಬ ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಹಲವಾರು ಬಾರಿ ಮರುಹುಟ್ಟು ಪಡೆಯಬೇಕು" ಎಂದು ಪಕ್ಷವು ಇಂದು ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ. ಗಾಂಧಿ ಕುಟುಂಬವನ್ನು ರಕ್ಷಿಸಲು ಕಾಂಗ್ರೆಸ್‌ನ ಪ್ರತಿಭಟನೆಗಳು ಅದರ "ದುರಾಗ್ರಹ" (ಹಠಮಾರಿ ಬೇಡಿಕೆ) ಎಂದು ಬಿಜೆಪಿ ಟೀಕಿಸಿದೆ. ಎಫ್‌ಐಆರ್ ರದ್ದುಗೊಳಿಸುವಂತೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಸೇರಿದಂತೆ ಪ್ರತಿ ನ್ಯಾಯಾಲಯವೂ ವಜಾಗೊಳಿಸಿದೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಕಾಂಗ್ರೆಸ್ ಕುಟುಂಬದ ಆಸ್ತಿಯಲ್ಲ: "ಕಾಂಗ್ರೆಸ್ ಒಂದು ಕುಟುಂಬದ ಸಂಘಟನೆಯಾಗಿ ಮಾರ್ಪಟ್ಟಿದೆ, ಮತ್ತು ಈಗ ಅದರ ಆಸ್ತಿಯನ್ನು ಕುಟುಂಬದವರು ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ" ಎಂದು ಅವರು ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಪ್ರಕರಣದಲ್ಲಿ ಇಬ್ಬರೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಟೀಕಿಸಿದ್ದಾರೆ. ಇಂದು ಮುಂಜಾನೆ, ಕೇಂದ್ರದ 'ರಾಜಕೀಯ ದ್ವೇಷ" ಕುರಿತು ಚರ್ಚಿಸಲು ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 13 ವಿರೋಧ ಪಕ್ಷಗಳು ಭಾಗವಹಿಸಿದ್ದವು. ಸಮಾನ ಮನಸ್ಕ ವಿರೋಧ ಪಕ್ಷಗಳು ಬಿಡುಗಡೆ ಮಾಡಿದ ಹೇಳಿಕೆಯು ಬಿಜೆಪಿ ನೇತೃತ್ವದ ಕೇಂದ್ರದ ತನಿಖಾ ಸಂಸ್ಥೆಗಳ "ದುರುಪಯೋಗ" ವನ್ನು ಖಂಡಿಸಿದೆ. ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಕೂಡ "ಆಡಳಿತ ಸರ್ಕಾರದಿಂದ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ" ಎಂದು ಶೂನ್ಯ ಗಂಟೆಯ ನೋಟಿಸ್ ನೀಡಿದೆ.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್, ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದ ಇತಿಹಾಸ!
ಮಹಿಳಾ ನಿರ್ದೇಶಕರ ನೇತೃತ್ವದಲ್ಲಿ ವಿಚಾರಣೆ: ಮಹಿಳಾ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ಐವರು ಅಧಿಕಾರಿಗಳು ಸೋನಿಯಾ ಗಾಂಧಿಯವರ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ವೇಳೆ ಕಾಂಗ್ರೆಸ್ ಮುಖ್ಯಸ್ಥೆ ಸುಸ್ತಾದರೆ ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಗುವುದು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಮೂರನೇ ಸಮನ್ಸ್ ನಂತರ ಕಾಂಗ್ರೆಸ್ ಮುಖ್ಯಸ್ಥರು ವಿಚಾರಣೆಗೆ ಹಾಜರಾಗಿದ್ದಾರೆ. ಜೂನ್ 8 ಹಾಗೂ 23ರ ಸಮನ್ಸ್‌ಗೆ ಅವರು ಮುಂದೂಡಿಕೆಯ ಮನವಿ ಸಲ್ಲಿಸಿದ್ದರು.
ಸೋನಿಯಾ ಗಾಂಧಿಗೆ ಇಡಿ ಸಮನ್ಸ್ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಭಾರಿ ಪ್ರತಿಭಟನೆ ಪ್ಲಾನ್!
ಹಿರಿಯ ನಾಯಕಿಗೆ ನೀವು ನೀಡುತ್ತಿರುವ ಮರ್ಯಾದೆಯನ್ನು ಇಡೀ ದೇಶ ನೋಡ್ತಿದೆ. ಆಕೆಯ ವ್ಯಕ್ತಿತ್ವ ಹಾಗೂ ಸೆಳವು ಅದ್ಭುತ. 70 ವರ್ಷಕ್ಕಿಂತ ಹೆಚ್ಚಿನ ವರ್ಷವಾಗಿದೆ ಆಕೆಗೆ. ವಿಚಾರಣೆಗೆ ಇಡಿ ಸೋನಿಯಾ ಗಾಂಧಿ ಅವರ ಮನೆಗೆ ಹೋಗಬೇಕಿತ್ತು.ನಾನು ಇಡಿ ಮತ್ತು ಸಿಬಿಐ ಮುಖ್ಯಸ್ಥರನ್ನು ಭೇಟಿಯಾಗಲು ಬಯಸುತ್ತೇನೆ ಮತ್ತು ಕೇಂದ್ರ ಏಜೆನ್ಸಿಗಳ ಬಗ್ಗೆ ಜನರು ಏನು ಯೋಚಿಸುತ್ತಿದ್ದಾರೆಂದು ಅವರಿಗೆ ಹೇಳಲು ಬಯಸುತ್ತೇನೆ. I ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ಅವರು (ಆಡಳಿತ ಪಕ್ಷ) ಅವರು ಎಷ್ಟು ಶಕ್ತಿಶಾಲಿ ಎಂಬುದನ್ನು ತೋರಿಸಲು ಬಯಸಿದ್ದಾರೆ. ನಾವು ಹಣದುಬ್ಬರದ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೇವೆ ಆದರೆ ಅವರು ಚರ್ಚೆಗೆ ಸಿದ್ಧರಿಲ್ಲ. ನಾವು ಈಗ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯ ವಿಷಯವನ್ನು ಎತ್ತಲಿದ್ದೇವೆ. I ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಆಕೆಯನ್ನು ಕರೆಸುವ ಅಗತ್ಯವಿಲ್ಲ, ಅವರು ಕಿರುಕುಳ ನೀಡುತ್ತಿದ್ದಾರೆ. ಇದು ರಾಜಕೀಯ ಸೇಡು. ಬಿಜೆಪಿ ಅವರಿಗೆ ಭಯವಿದೆ. ಕಾಂಗ್ರೆಸ್ ನಾಯಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. I ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ