ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ, ಇಂದಿಗೂ ಸಿಂಪಲ್ ಲೈಫ್ ಬದುಕುತ್ತಿರುವ ರಾಕೇಶ್ ಶರ್ಮ!
ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವರು ಚಂದ್ರಯಾನ -3 ರ ಉಡಾವಣೆಯನ್ನು ಶ್ಲಾಘಿಸಿದ್ದಾರೆ. ಈ ದಿನಗಳಲ್ಲಿ ರಾಕೇಶ್ ಶರ್ಮ ಎಲ್ಲಿದ್ದಾರೆ ಅನ್ನೋದು ನಿಮಗೆ ಗೊತ್ತಾ?
ಬೆಂಗಳೂರು (ಜು.16): ವಿಂಗ್ ಕಮಾಂಡರ್ (ನಿವೃತ್ತ) ರಾಕೇಶ್ ಶರ್ಮಾ, ಬಾಹ್ಯಾಕಾಶಕ್ಕೆ ಕಾಲಿಟ್ಟ ಮೊದಲ ಭಾರತೀಯ ವ್ಯಕ್ತಿ, ಇಂದಿಗೂ ಸಿಂಪಲ್ ಜೀವನಶೈಲಿಯನ್ನು ಅಳವಡಿಸಿಕೊಂಡು ತಮಿಳುನಾಡಿನ ಗ್ರಾಮದಲ್ಲಿ ವಾಸವಿರುವ ಅವರು, ಚಂದ್ರಯಾನ-3 ರ ಯಶಸ್ವಿ ಉಡಾವಣೆಯನ್ನು ಶ್ಲಾಘಿಸಿದ್ದಾರೆ. 2019 ರಲ್ಲಿ ಚಂದ್ರಯಾನ-2 ಮಿಷನ್ ತನ್ನ ಸಾಫ್ಟ್ ಲ್ಯಾಂಡಿಂಗ್ ಸಮಯದಲ್ಲಿ ಸವಾಲುಗಳನ್ನು ಎದುರಿಸಿದ ನಂತರ ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2ನೇ ಪ್ರಯತ್ನವಾಗಿದೆ. ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3, ನಿಗದಿತ ಉಡಾವಣಾ ಸಮಯದ ಪ್ರಕಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಯಿತು. ಈ ಕುರಿತಂತೆ ಮಾತನಾಡಿರುವ ರಾಕೇಶ್ ಶರ್ಮ, ಇಸ್ರೋ ಚೇರ್ಮನ್ ಎಸ್. ಸೋಮನಾಥ್ ಹೇಳಿರುವ ಮಾತನ್ನೇ ಪುನರಾವರ್ತನೆ ಮಾಡಿದರು. 'ಈಗಾಗಲೇ ಇಸ್ರೋ ಚೇರ್ಮನ್ ಎರಡೇ ಶಬ್ದಗಳಲ್ಲಿ ಇದನ್ನು ಹೇಳಿದ್ದಾರೆ. ನಾನು ಹೇಳೋದು ಕೂಡ ಇಷ್ಟೇ. ಅಭಿನಂದನೆಗಳು ಭಾರತ' ಎಂದು ತಿಳಿಸಿದ್ದಾರೆ. 35ನೇ ವರ್ಷದಲ್ಲಿಯೇ ಬಾಹ್ಯಾಕಾಶ ಪ್ರಯಾಣ ಮಾಡಿದ್ದ ರಾಕೇಶ್ ಶರ್ಮ, "ಅನೇಕ ಏಜೆನ್ಸಿಗಳು ಶೈಕ್ಷಣಿಕ ಮತ್ತು ಎಲ್ಲಾ ಖಾಸಗಿ ವಲಯದಾದ್ಯಂತ ಈ ಮಿಷನ್‌ಗಾಗಿ ಸಹಕರಿಸಿವೆ. ನಾವು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಭರವಸೆ ಹೊಂದಿದ್ದೇವೆ. ನಮ್ಮ ಹಿಂದಿನ ಅನುಭವಗಳಿಂದ ನಾವು ಪಾಠ ಕಲಿತಿದ್ದೇವೆ.’’ ಎಂದರು.
ಬಾಹ್ಯಾಕಾಶದಿಂದ ಭಾರತ ಪ್ರಧಾನಿ ಇಂದಿರಾಗಾಂಧಿ ಜೊತೆ ಟಿವಿ ನ್ಯೂಸ್ ಕಾನ್ಪರೆನ್ಸ್‌ನಲ್ಲಿ ರಾಕೇಶ್ ಶರ್ಮ ಮಾತನಾಡಿದ್ದು ಇಂದಿಗೂ ಹಚ್ಚಹಸುರಾಗಿದೆ. ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ ಎನ್ನುವ ಪ್ರಶ್ನೆಗೆ ಕವಿ ಇಕ್ಬಾಲ್ ಅವರ ಸಾಲಾದಾ 'ಸಾರೇ ಜಹಾನ್ ಸೇ ಅಚ್ಚಾ (ಇಡೀ ಜಗತ್ತಿಗಿಂತ ಅದ್ಭುತ)' ಎಂದು ರಾಕೇಶ್ ಶರ್ಮ ಹೇಳಿದ್ದರು. 1984ರಲ್ಲಿ ಐತಿಹಾಸಿಕ ಬಾಹ್ಯಾಕಾಶ ಪ್ರಯಾಣವನ್ನು ರಾಕೇಶ್ ಶರ್ಮ ಮಾಡಿದ್ದು, ಇಸ್ರೋ ಹಾಗೂ ಸೋವಿಯತ್ ಇಂಟರ್‌ಕಾಸ್ಮೋಸ್ ಸ್ಪೇಸ್ ಪ್ರೋಗ್ರಾಮ್ ಅಡಿಯಲ್ಲಿ ಅವರು ಬಾಹ್ಯಾಕಾಶ ಪ್ರಯಾಣ ಮಾಡಿದ್ದರು. ಸಲ್ಯುತ್ ಸ್ಪೇಸ್ ಸ್ಟೇಷನ್‌ನಲ್ಲಿ 8 ದಿನ ಇದ್ದ ರಾಕೇಶ್ ವರ್ಮ, ಇಬ್ಬರು ರಷ್ಯಾ ಗಗನ ಯಾತ್ರಿಗಳೊಂದಿಗೆ 1984ರ ಏಪ್ರಿಲ್ 3 ರಂದು ಸುಯೇಜ್ ಟಿ-11 ಮೂಲಕ ಬಾಹ್ಯಾಕಾಶಕ್ಕೆ ಏರಿದ್ದರು. ಬಾಹ್ಯಾಕಾಶದಿಂದ ಇಳಿದ ಬಳಿಕ ಇವರಿಗೆ ಹೀರೋ ಆಫ್ ದ ಸೋವಿಯತ್ ಯೂನಿಯನ್ ಗೌರವ ನೀಡಲಾಗಿತ್ತು. ಭಾರತ ಸರ್ಕಾರ ಶಾಂತಿ ಕಾಲದ ಅಶೋಕ ಚಕ್ರ ನೀಡಿ ಗೌರವಿಸಿತ್ತು.
1949 ಜನವರಿ 13 ರಂದು ಪಟಿಯಾಲದಲ್ಲಿ ಜನಿಸಿದ್ದ ರಾಕೇಶ್ ಶರ್ಮ, 1970ರಲ್ಲಿ ಏರ್‌ಫೋರ್ಸ್‌ಗೆ ಸೇರ್ಪಡೆಯಾಗಿದ್ದರು. 1971ರ ಬಾಂಗ್ಲಾದೇಶ ಯುದ್ಧದ ಸಂದರ್ಭದಲ್ಲಿ 21 ಬಾರಿ ಯುದ್ದಕಾರ್ಯದ ಮಿಗ್-21 ಯುದ್ಧವಿಮಾನಕ್ಕೆ ಪೈಲಟ್ ಆಗಿದ್ದರು. ಬಾಹ್ಯಾಕಾಶ ಪ್ರಯಾಣದ ಬಳಿಕ ಏರ್‌ಫೋರ್ಸ್‌ನಲ್ಲಿ ಕೆಲಸ ಮುಂದುವರಿಸಿದ ಅವರು 1987ರಲ್ಲಿ ವಿಂಗ್ ಕಮಾಂಡರ್ ಆಗಿ ಭಾರತೀಯ ವಾಯುಸೇನೆಯಿಂದ ನಿವೃತ್ತರಾಗಿದ್ದರು.
ಆಸ್ಟ್ರೇಲಿಯಾದ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3, ಫೋಟೋ ವೈರಲ್!
ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದ ಈ ವ್ಯಕ್ತಿ ಇಂದು ಬದುಕಿದ್ದಾರೆ ಅನ್ನೋದೇ ಕೆಲವರಿಗೆ ಗೊತ್ತಿಲ್ಲ. ಆದರೆ, ಮಾಧ್ಯಮ, ಸೋಶಿಯಲ್ ಮೀಡಿಯಾಗಳಿಂದ ದೂರು ಉಳಿದುವ ರಾಕೇಶ್ ಶರ್ಮ ಬಹಳ ಸರಳವಾದ ಜೀವನವನ್ನು ತಮಿಳುನಾಡಿನ ಕೂನೂರ್‌ನಲ್ಲಿ ಅನುಭವಿಸುತ್ತಿದ್ದಾರೆ. ಪತ್ನಿ ಮಧು ಜೊತೆ ವಾಸವಿರುವ ರಾಕೇಶ್ ಶರ್ಮ ಅವರನ್ನು ಇಸ್ರೋ ತಮ್ಮ ಪ್ರಮುಖ ಕಾರ್ಯಕ್ಕೆ ಸಲಹೆಗಾರರನ್ನಾಗಿ ಆಯ್ಕೆ ಮಾಡಿದ. ಇಸ್ರೋದ ಗಗನಯಾನಕ್ಕೆ ಗಗನಯಾತ್ರಿಗಳನ್ನು ಆಯ್ಕೆ ಮಾಡುವ ಆಸ್ಟ್ರೋನಟ್ ಸೆಲೆಕ್ಷನ್ ಪ್ರೋಗ್ರಾಮ್‌ನ ರಾಷ್ಟ್ರೀಯ ಸಲಹಾ ಸಮಿತಿಗೆ ಇವರು ಸಲಹೆಗಾರರಾಗಿದ್ದಾರೆ.
Watch: 'ಪ್ರಯಾಣಿಕರೆ ಗಮನಿಸಿ ಮುಂದಿನ ನಿಲ್ದಾಣ ಚಂದ್ರ..' ಇಸ್ರೋ ಯಶಸ್ಸಿಗೆ ಟ್ರಾವೆಲ್ ಪೋರ್ಟಲ್ ಜಾಹೀರಾತು ವೈರಲ್!
2021 ರಲ್ಲಿ, ಶರ್ಮಾ ಅವರು ಬೆಂಗಳೂರು ಮೂಲದ ಕಂಪನಿಯಾದ ಕ್ಯಾಡಿಲಾ ಲ್ಯಾಬ್ಸ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದರು. ಈ ಕಂಪನಿಯು ವಿಶೇಷವಾಗಿ ವಿಮಾ ವಲಯದ ಕಂಪನಿಗಳಿಗೆ ಬುದ್ಧಿವಂತ ಯಾಂತ್ರೀಕರಣವನ್ನು ಒದಗಿಸಲು ಕೆಲಸ ಮಾಡುತ್ತದೆ.