Watch: 'ಪ್ರಯಾಣಿಕರೆ ಗಮನಿಸಿ ಮುಂದಿನ ನಿಲ್ದಾಣ ಚಂದ್ರ..' ಇಸ್ರೋ ಯಶಸ್ಸಿಗೆ ಟ್ರಾವೆಲ್ ಪೋರ್ಟಲ್ ಜಾಹೀರಾತು ವೈರಲ್!
ಭಾರತದ ಇಸ್ರೋ ಯಶಸ್ವಿಯಾಗಿ ಚಂದ್ರನತ್ತ ನೌಕೆಯನ್ನು ಉಡಾಯಿಸಿದೆ. ಭಾರತದೆಲ್ಲೆಡೆ ಇದಕ್ಕೆ ಸಂಭ್ರಮ ವ್ಯಕ್ತವಾದವು. ಈ ನಡುವೆ ಭಾರತದ ಆನ್‌ಲೈನ್ ಟ್ರಾವೆಲ್ ವೆಬ್‌ಸೈಟ್ ಇಕ್ಸಿಗೋ ಶುಭಕೋರಿ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ಬೆಂಗಳೂರು (ಜು.15): ನಾಲ್ಕು ವರ್ಷಗಳ ಹಿಂದೆ ಚಂದ್ರನ ನೆಲದಲ್ಲಿ ವಿಕ್ರಮ್ ಲ್ಯಾಂಡರ್ ಕ್ರ್ಯಾಶ್ ಆಗಿ ಬಿದ್ದಾಗ ನೋವು ಪಟ್ಟವರು ಶುಕ್ರವಾರ ಹೆಮ್ಮೆಯಿಂದ ಬೀಗಿದ್ದರು. ಅದಕ್ಕೆ ಕಾರಣ, ಚಂದ್ರನ ನೆಲದಲ್ಲಿ ಲ್ಯಾಂಡರ್‌ಅನ್ನು ಸ್ಪರ್ಶಿಸುವ ಪ್ರಯತ್ನವಾಗಿ ಚಂದ್ರಯಾನ-3ಯನ್ನು ಇಸ್ರೋ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ನಭಕ್ಕೆ ಹಾರಿಬಿಟ್ಟಿತು. ಇನ್ನೊಂದು 40 ದಿನಗಳಲ್ಲಿ ಚಂದ್ರಯಾನದ ಉಪಕರಣಗಳನ್ನು ಹೊತ್ತ ಬಾಹ್ಯಾಕಾಶ ನೌಕೆ ಚಂದ್ರನ ನೆಲದಲ್ಲಿ ಇಳಿಯಲಿದೆ. ಈ ಸಂಭ್ರಮವನ್ನು ಭಾರತದ ಎಲ್ಲಡೆ ಆಚರಣೆ ಮಾಡಲಾಯಿತು. ಈ ನಡುವೆ ಭಾರತದ ಪ್ರಮುಖ ಟ್ರಾವೆಲ್ ಆನ್‌ಲೈನ್ ಪೋರ್ಟಲ್ ಆಗಿರುವ ಇಕ್ಸೊಗೋ (ixigo) ಮಾಡಿರುವ ವಿಡಿಯೋ ಗಮನಸೆಳೆದಿದೆ. ವಿಶೇಷವೇನೆಂದರೆ, ಇಕ್ಸಿಗೋ ಪೋಸ್ಟ್ ಮಾಡಿರುವ ವಿಡಿಯೋವನ್ನು ಬಹುತೇಕ ಎಲ್ಲರೂ ಮೆಚ್ಚಿದ್ದು ಕಂಟೆಂಟ್ ಟೀಮ್‌ನ ಕ್ರಿಯೇಟಿವಿಟಿಯನ್ನು ಮನಸಾರೆ ಹೊಗಳಿದ್ದಾರೆ. ಇನ್ನೊಂದೆಡೆ, ಭವಿಷ್ಯದಲ್ಲಿ ಚಂದ್ರಯಾನ ಹೀಗೂ ಆಗಬಹುದು ಎಂದು ಅಚ್ಚರಿ ವ್ಯಕ್ತಪಡಿಸುತ್ತಾ ಟ್ವೀಟ್ ಮಾಡಿದ್ದಾರೆ.
ಹಾಗಿದ್ದರೆ ವಿಡಿಯೋದಲ್ಲಿ ಅಂಥದ್ದೇನಿದೆ: 1 ನಿಮಿಷ 40 ಸೆಕೆಂಡ್‌ನ ವಿಡಿಯೋದಲ್ಲಿ ಭವಿಷ್ಯದಲ್ಲಿ ಮಾನವ ಚಂದ್ರನಲ್ಲಿ ಹೇಗೆ ಹೋಗಬಹುದು ಎನ್ನುವುದನ್ನು ವಿವರಿಸಲಾಗಿದೆ. ರಾಕೆಟ್ ಮೂಲಕ ಚಂದ್ರನತ್ತ ಸಾಗುವ ಮಾನವನಿಗೆ ಬಾಹ್ಯಾಕಾಶದಲ್ಲಿಯೇ ಗಗನಯಾತ್ರಿಯ ಸೂಟ್ ಧರಿಸಿಕೊಂಡಿರುವ ವ್ಯಕ್ತಿ 'ಚಾಯ್..ಚಾಯ್..' ಎನ್ನುತ್ತಾ ನಿಮ್ಮ ಕಿಟಕಿಯ ಹೊರಗೆ ಕಾಣಿಸಿಕೊಳ್ಳಬಹುದು (ಟ್ರೇನ್ ರೀತಿಯಲ್ಲಿ). ಪ್ರಯಾಣ ಮಾಡುವ ವ್ಯಕ್ತಿ ಬಾಹ್ಯಾಕಾಶ ನೌಕೆಯ ಫುಟ್‌ಬೋರ್ಡ್‌ನಲ್ಲಿ ಕುಳಿತು ಪ್ರಯಾಣ ಮಾಡಬಹುದು. ನೌಕೆಯ ಒಳಗಡೆಯೇ ಇಸ್ಪೀಟು ಆಡಬಹುದು, ಸ್ಪೇಸ್ ನೀರ್ (ರೈಲ್ ನೀರ್ ರೀತಿಯಲ್ಲಿ) ನೀರಿನ ಬಾಟಲ್‌ಗಳು ಹಾರುತ್ತಲೇ ನಿಮಗೆ ಸಿಗುತ್ತವೆ.
ಇನ್ನು ಚಂದ್ರನ ಮೇಲೆ ಲ್ಯಾಂಡ್ ಆದಾಗ ಅಲ್ಲಿನ ಬೋರ್ಡ್‌ನಲ್ಲಿ ರೈಲ್ವೇ ಸ್ಪೇಷನ್‌ನಲ್ಲಿ ಇರುವ ಹಾಗೆ ಚಂದ್ರ ಎನ್ನುವ ರೀತಿಯ ಬೋರ್ಡ್‌ಗಳು ಕಾಣಬಹುದು. ಗಗನಯಾತ್ರಿಯ ಸೂಟ್‌ನಲ್ಲಿ ನೀವು ಲಗೇಜ್‌ಗಳನ್ನು ದೂಡಿಕೊಂಡು ಚಂದ್ರನ ಮೇಲೆ ಕಾಲಿಡಬಹುದು. ಈ ವೇಳೆ ನಿಮ್ಮ ಗೆಳೆಯರು ಸ್ಟೇಷನ್‌ನ ಹೊರಗಡೆ ನಿಮ್ಮ ಹೆಸರಿರುವ ಬೋರ್ಡ್‌ಗಳನ್ನು ಇರಿಸಿಕೊಂಡು ಕಾಯಬಹುದು. ಗಗನಯಾತ್ರಿಯ ಸೂಟ್‌ನಲ್ಲಿ ಇರುವ ಕೂಲಿ ನಿಮ್ಮ ಲಗೇಜ್‌ಗಳನ್ನು ತಲೆಯ ಮೇಲೆ ಹೊತ್ತು ಸಾಗಬಹುದು. ಚಂದ್ರನ ಮೇಲೆ ಸಿಗುವ ಆಲೂಪುರಿ, ಪ್ರೀಪೇಡ್ ಟ್ಯಾಕ್ಸಿ ಬೂತ್‌ಗಳು, ನಿಮ್ಮನ್ನು ಕರೆದುಕೊಂಡು ಹೋಗುವ ಟ್ರಾಲಿ ಗಾಡಿಗಳು, ಕೂಡ ಇರಬಹುದು ಎನ್ನುವ ಕಲ್ಪನೆಯನ್ನು ಬಿತ್ತರಿಸಲಾಗಿದೆ.
ಚಂದ್ರಯಾನ-3 ಆಯ್ತು.. ಚಂದ್ರಯಾನ-4ಗೆ ರೆಡಿಯಾದ ಇಸ್ರೋ!
ಚಂದ್ರನಲ್ಲಿರುವ ನಿಮಗೆ ಭೂಮಿಯಿಂದ 'ನನಗೂ ಒಂದು ರಾಕೆಟ್ ಬುಕ್ ಮಾಡು' ಎಂದು ತಂದೆಯ ಮೆಸೇಜ್ ಬರಬಹುದು, ಇಕ್ಸಿಗೋ ಮೂಲಕ ನೀನು ಅದನ್ನು ಮಾಡಬಹುದು. ಚಂದ್ರನ ಬಂಡೆಯ ಮೇಲೆ 'ರಾಜು ಲವ್ಸ್ ಪೂಜಾ' ಎನ್ನುವ ಅಕ್ಷರ ಕಾಣಬಹುದು. ಭೂಮಿಯಿಂದ ಕರೆ ಮಾಡುವ ತಾಯಿ ಚಂದ್ರನಲ್ಲಿ ಎಲ್ಲಿ ಹೋಗಿ ಮುಟ್ಟಿದೆ ಎಂದು ನಿಮ್ಮನ್ನು ಕೇಳಬಹುದು. ಅಲ್ಲಿಂದಲೇ ಭೂಮಿಯನ್ನು ಕಾಣುವ ರೀತಿ ಸೆಲ್ಫಿ ತೆಗೆಯಬಹುದು. ತಾಜ್‌ಮಹಲ್ ಎದುರು ಫೋಟೋ ತೆಗೆದುಕೊಳ್ಳುವ ರೀತಿಯಲ್ಲಿ ಚಂದ್ರನಲ್ಲಿ ನೀವು ಫೋಟೋ ತೆಗೆದುಕೊಳ್ಳಬಹುದು. ಬಾಹ್ಯಾಕಾಶ ನೌಕೆಯಲ್ಲಿ ನಿಮ್ಮ ಪಿಎನ್‌ಆರ್ ಟಿಕೆಟ್ ಲಿಸ್ಟ್ ಕೂಡ ಸಿಗಬಹುದು.. ಹೀಗೆ ಇನ್ನೂ ಹತ್ತಾರು ಕಲ್ಪನೆಗಳನ್ನು ಬಿತ್ತರಿಸಲಾಗಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಯ ಹಾಗೆ ಪೋಸ್ಟ್ ಮಾಡಿರುವ ಈ ವಿಡಿಯೋಗೆ ಈ ವರೆಗೂ 1 ಮಿಲಿಯನ್‌ಗೂ ಅಧಿಕ ವೀವ್ಸ್ ಬಂದಿದ್ದು, 16 ಸಾವಿರ ಲೈಕ್ಸ್‌ಗಳು ಬಂದಿವೆ.
ಚಂದ್ರನ ಮೇಲೆ ಲ್ಯಾಂಡ್ ಆಗಲು ಇನ್ನೂ 40 ದಿನ ಬೇಕು: ಆ.23ಕ್ಕೆ ಸಂಕೀರ್ಣ ಸವಾಲ್
'ಈ ವಿಡಿಯೋ ಬಹಳ ಮಜವಾಗಿದೆ' ಎಂದು ಹೆಚ್ಚಿನವರು ಕಾಮೆಂಟ್ ಮಾಡಿದ್ದರೆ, ವಿಷ್ಯ ಏನೇ ಇರಲಿ ನಿಮ್ಮ ಕಲ್ಪನೆ ನಮ್ಮ ಮೆಚ್ಚುಗೆ ಇದೆ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.