ನೀಟ್ ಮರುಪರೀಕ್ಷೆಯ ಭಯದಿಂದ ತಮಿಳುನಾಡಿನ ಕೊಯಮತ್ತೂರಿನ 19 ವರ್ಷದ ವಿದ್ಯಾರ್ಥಿನಿ ಅನುಕೀರ್ತನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರೀಕ್ಷೆಗಾಗಿ ತಂದೆ ಮಾಡಿದ ಖರ್ಚು ಮತ್ತು ಮತ್ತೆ ಪರೀಕ್ಷೆ ಎದುರಿಸುವ ಆತಂಕವನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದು, ನೀಟ್ ಪರೀಕ್ಷೆ ರದ್ದಾದ ನಂತರ ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳಲ್ಲಿ ಇದು ಒಂದಾಗಿದೆ.
ವೈದ್ಯರಾಗುವ ಹಂಬಲದಿಂದ ನೀಟ್ ಪರೀಕ್ಷೆ ಒಮ್ಮೆ ಬರೆದಿರುವ ವಿದ್ಯಾರ್ಥಿಗಳು, ಅದನ್ನೇ ಮತ್ತೊಮ್ಮೆ ಬರೆಯಲು ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆತಂಕಕಾರಿ ಘಟನೆ ನಡೆಯುತ್ತಲೇ ಇದೆ. ಇದಾಗಲೇ ಕೆಲವು ವಿದ್ಯಾರ್ಥಿಗಳು ನೀಟ್ ಮರು ಪರೀಕ್ಷೆ ಎದುರಿಸಲು ಸಾಧ್ಯವಿಲ್ಲ ಎಂದು ಹೇಳಿ ಸಾವಿನ ಹಾದಿ ತುಳಿದಿದ್ದಾರೆ. ಇದರಲ್ಲಿ ಒಬ್ಬಾಕೆಯ ಸಾವು ನೀಟ್ನಿಂದ ಆಗಿದ್ದು ಎಂದು ಹೇಳಿ ಸದ್ದು ಮಾಡಿದ್ದರೂ ಕೊನೆಗೆ ಆಕೆ ಸತ್ತಿದ್ದು ವೈಯಕ್ತಿಯ ಕಾರಣದಿಂದ ಎನ್ನುವುದು ತಿಳಿದುಬಂದಿತ್ತು. ವೈದ್ಯಕೀಯ ವೃತ್ತಿಯ ಆಕಾಂಕ್ಷಿಗಳಾಗಿರುವ ವಿದ್ಯಾರ್ಥಿಗಳು ಒಮ್ಮೆ ಪರೀಕ್ಷೆಗೆ ತಯಾರಿ ನಡೆಸಿ ಚೆನ್ನಾಗಿ ಬರೆದಿದ್ದರೆ ಅದನ್ನೇ ಮತ್ತೊಮ್ಮೆ ಬರೆಯಲು ಆಗದೇ ಖಿನ್ನತೆಗೆ ಜಾರುತ್ತಿರುವುದು ಕಳವಳ ಉಂಟು ಮಾಡುತ್ತಿರುವ ವಿಷಯವಾಗಿದ್ದು, ಇದರ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮತ್ತೊಂದು ಘಟನೆ ನಡೆದಿದೆ..
ಸಾವಿನ ಹಾದಿ ತುಳಿದ ವಿದ್ಯಾರ್ಥಿನಿ
ತಮಿಳುನಾಡಿನ ಕೊಯಮತ್ತೂರಿನ 19 ವರ್ಷದ ನೀಟ್ ವಿದ್ಯಾರ್ಥಿನಿ ಅನುಕೀರ್ತನಾ ಮರು ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಹೇಳಿ ಸಾವಿನ ಹಾದಿ ಹಿಡಿದಿದ್ದಾಳೆ. ಬರುವ ಭಾನುವಾರವೇ ಮರು ಪರೀಕ್ಷೆ. ಇದಾಗಲೇ ಈ ಪರೀಕ್ಷೆಗೆ ಹೆಚ್ಚುವರಿ ಶುಲ್ಕ ಪಡೆದುಕೊಳ್ಳಲ್ಲ, ಈ ಹಿಂದೆ ನೀಡಿದ್ದ ಶುಲ್ಕವನ್ನು ವಾಪಸ್ ಮಾಡಲಾಗುವುದು ಎಂದು ಸರ್ಕಾರ ಹೇಳಿದ್ದರೂ, ಅನುಕೀರ್ತನಾ ಎನ್ನುವ ವಿದ್ಯಾರ್ಥಿನಿ ಹಣದ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ಕುಟುಂವನ್ನು ದಿಗ್ಭ್ರಮೆಗೊಳಿಸಿದೆ. ನಾನು ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಕಾಲೇಜಿಗೆ ಪ್ರವೇಶಕ್ಕಾಗಿ ಕಾಯುತ್ತಿದ್ದೆ, ಆದರೆ ಪರೀಕ್ಷೆ ರದ್ದಾಗಿದೆ. ಈಗ ಮತ್ತೆ ಪರೀಕ್ಷೆ ಬರೆಯಲು ಭಯವಾಗುತ್ತಿದೆ. ನನ್ನ ತಂದೆ ನನಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ, ಮತ್ತು ನಾನು ಅವರನ್ನು ಮತ್ತೆ ಹೇಗೆ ಎದುರಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಡೆತ್ನೋಟ್ನಲ್ಲಿ ವಿದ್ಯಾರ್ಥಿನಿ ಬರೆದಿರುವುದು ತಿಳಿದಿದೆ.
ಈ ಡೆತ್ನೋಟ್ ರೂಪದಲ್ಲಿ ಆಕೆ ಸಾಯುವ ಮುನ್ನ ತನ್ನ ಚಿಕ್ಕಪ್ಪ ಮತ್ತು ಹತ್ತಿರದ ಸಂಬಂಧಿಕರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ್ದಾಳೆ. ವಿದ್ಯಾರ್ಥಿನಿಯ ಸಂದೇಶವನ್ನು ಓದಿದ ನಂತರ, ಅವರ ಕುಟುಂಬವು ಅವರ ಮನೆಗೆ ಧಾವಿಸಿತು. ಬಾಗಿಲು ಒಡೆದು ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾಳೆ.
ಟ್ರೇಡ್ ಯೂನಿಯನ್‌ನ ಜಿಲ್ಲಾ ಕಾರ್ಯದರ್ಶಿ ಪುತ್ರಿ
ಅನುಕೀರ್ತನಾ ಕೊಯಮತ್ತೂರಿನ ಕೋವೈಪುದೂರಿನ ಪಾರ್ಕ್ ಟೌನ್ ನಿವಾಸಿಯಾಗಿದ್ದಳು. ಆಕೆಯ ತಂದೆ ಸೆಂಥಿಲ್ ಪ್ರಭು, ಸಿಐಟಿಯು ಜೊತೆ ಸಂಯೋಜಿತವಾಗಿರುವ TASMAC ಟ್ರೇಡ್ ಯೂನಿಯನ್‌ನ ಜಿಲ್ಲಾ ಕಾರ್ಯದರ್ಶಿ. ಅನುಕೀರ್ತನಾ ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯರು. ಅವರು 12 ನೇ ತರಗತಿಯವರೆಗೆ ಎಟ್ಟುಮನೂರಿನ ಖಾಸಗಿ ಶಾಲೆಯಲ್ಲಿ ಓದಿದ್ದಳು. ವೈದ್ಯೆಯಾಗುವುದು ಮತ್ತು ಬಡವರಿಗೆ ಸಹಾಯ ಮಾಡುವುದು ಆಕೆಯ ಕನಸಾಗಿತ್ತು. ಆದಾಗ್ಯೂ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ನೀಟ್ ಪರೀಕ್ಷೆ ರದ್ದತಿ ಮತ್ತು ಜೂನ್ 21 ರಂದು ಮರು ಪರೀಕ್ಷೆಯ ಘೋಷಣೆಯು ಅವರನ್ನು ತೀವ್ರವಾಗಿ ದುಃಖಿತರನ್ನಾಗಿ ಮಾಡಿತು. ಬುಧವಾರ ಬೆಳಿಗ್ಗೆ, ಅವರು ಸಂಬಂಧಿಕರಿಗೆ ದೀರ್ಘ ವಾಟ್ಸ್ಆ್ಯಪ್ ಸಂದೇಶವನ್ನು ಕಳುಹಿಸಿರುವುದು ತಿಳಿದುಬಂದಿದೆ!
ಇತ್ತೀಚಿನ ದಿದನಗಳಲ್ಲಿ ನೀಟ್ ಹೆಸರಿನಲ್ಲಿ ನಡೆಸಿರುವ ನಾಲ್ಕನೇ ಆತ್ಮಹತ್ಯೆ ಇದಾಗಿದೆ. ಇದಕ್ಕೂ ಮೊದಲು, ಜೂನ್ 16 ರಂದು, ಡೆಹ್ರಾಡೂನ್‌ನಲ್ಲಿ 23 ವರ್ಷದ ರಿಯಾ ಥಾಪಾ ಮತ್ತು ಲಖನೌದಲ್ಲಿ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡರು. ಮೇ 12 ರಂದು ನೀಟ್ ಪರೀಕ್ಷೆ ರದ್ದಾದ ನಂತರ, ದೇಶಾದ್ಯಂತ ಸುಮಾರು 12 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.


