ಮಂಗನ ಕೈಲಿ ಮಾಣಿಕ್ಯ: ಅಪ್ಪ ಬೈದರೆಂದು ಮನೆಬಿಟ್ಟು ಹೋದ ಬಿಂದಾಸ್ ಕಾವ್ಯ
ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ 17 ವರ್ಷದ ತರುಣಿಯೊಬ್ಬಳು ಮನೆಬಿಟ್ಟು ಓಡಿ ಹೋಗಿದ್ದು, ಇದರಿಂದ ಆಕೆಯ ಪೋಷಕರು ಗಾಬರಿಯಿಂದ ಕೈಕಾಲು ಬಿಡುವಂತೆ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ.
ಔರಂಗಬಾದ್: ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಎಂಬ ಗಾದೆ ಮಾತೊಂದಿದೆ. ಅದರಂತೆ ಈಗಿನ ಯುವ ಸಮೂಹದ ಕೈಗೆ ಮೊಬೈಲ್ ನೀಡಿ ಪೋಷಕರು ಇನ್ನಿಲ್ಲದ ಪಾಡು ಪಾಡುವಂತಾಗಿದೆ. ಮೊಬೈಲ್ ಗೀಳಿಗೊಳಗಾಗಿ ಅದರಲ್ಲೇ ಕಾಲ ಕಳೆಯುತ್ತಾ ಅದೇ ಜೀವನವೆಂದು ಭಾವಿಸುವ ಮಕ್ಕಳು ಅಪ್ಪ ಅಮ್ಮ ಬುದ್ದಿ ಹೇಳಿದರೆ ಮನೆಬಿಟ್ಟು ಹೋಗುವಂತಹ ಸ್ಥಿತಿಗೆ ಬಂದು ಪೋಷಕರು ಪರದಾಡುವಂತೆ ಮಾಡುತ್ತಿದ್ದಾರೆ. ಅದೇ ರೀತಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ 17 ವರ್ಷದ ತರುಣಿಯೊಬ್ಬಳು ಮನೆಬಿಟ್ಟು ಓಡಿ ಹೋಗಿದ್ದು, ಇದರಿಂದ ಆಕೆಯ ಪೋಷಕರು ಗಾಬರಿಯಿಂದ ಕೈಕಾಲು ಬಿಡುವಂತೆ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಕಾವ್ಯ ಎಂಬ ತರುಣಿ ಬಿಂದಾಸ್ ಕಾವ್ಯ (Bindass Kavya) ಎಂಬ ಯೂಟ್ಯೂಬ್ ಚಾನೆಲ್ (YouTube channel) ಹೊಂದಿದ್ದು, ಸೆಪ್ಟೆಂಬರ್ 9 ರಂದು (ಶುಕ್ರವಾರ) ಮಹಾರಾಷ್ಟ್ರದ (Maharashtra) ಔರಂಗಾಬಾದ್‌ನಿಂದ (Aurangabad) ನಾಪತ್ತೆಯಾಗಿದ್ದಳು. ನಂತರ ಆಕೆ ಖುಷಿನಗರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸರ್ಕಾರಿ ರೈಲ್ವೆ ಪೊಲೀಸರಿಗೆ ಶನಿವಾರ ಸಿಕ್ಕಿ ಬಿದ್ದಿದ್ದಾಳೆ.
17 ವರ್ಷದ ಅಪ್ರಾಪ್ತೆಯಾದ ಈ ಬಿಂದಾಸ್ ಕಾವ್ಯಳ ಪತ್ತೆಗೆ ರೈಲಿನಲ್ಲಿ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾವ್ಯ ತನ್ನ ಅಪ್ಪ ಬೈದರೆಂದು ಸಿಟ್ಟಿಗೆದ್ದು ಪೋಷಕರಿಗೂ ಹೇಳದೇ ಮನೆ ಬಿಟ್ಟು ಹೋಗಿದ್ದಳು. ಹೀಗಾಗಿ ಈಕೆ ನಾಪತ್ತೆಯಾದ ಬಗ್ಗೆ ಔರಂಗಾಬಾದ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆಕೆಯ ಪತ್ತೆಗಾಗಿ ಪೊಲೀಸರು ಆಕೆಯ ಫೋಟೋವನ್ನು ಬಿಡುಗಡೆಗೊಳಿಸಿದ್ದರು. ನಂತರ ಶನಿವಾರ ಮಧ್ಯಾಹ್ನ ಖುಷಿನಗರ ಎಕ್ಸ್‌ಪ್ರೆಸ್ ರೈಲಿನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಆಕೆ ಕಂಡು ಬಂದಿದ್ದಳು. ಬಳಿಕ ಆಕೆಯನ್ನು ವಶಕ್ಕೆ ಪಡೆದು ರೈಲ್ವೆ ಪೊಲೀಸರು ವಿಚಾರಿಸಿ ಬಿಡುಗಡೆಯಾದ ಫೋಟೋದೊಂದಿಗೆ ಹೋಲಿಸಿದಾಗ ಆಕೆ ಬಿಂದಾಸ್ ಕಾವ್ಯ ಎಂಬುದು ತಿಳಿದು ಬಂದಿತ್ತು.
Social Media ಸ್ಟಾರ್‌ಗಳಿಗೆ ಸರ್ಕಾರದ ಶಾಕ್: ರೆಡಿಯಾಗ್ತಿದೆ ಹೊಸ ಮಾರ್ಗಸೂಚಿ
ನಂತರ ಈ ಬಗ್ಗೆ ಈತ್ರಾಸಿ (Itarsi) ಪೊಲೀಸರು ಔರಂಗಾಬಾದ್‌ನ ಪೊಲೀಸರಿಗೆ ಈಕೆ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಕಾವ್ಯಳ ಪೋಷಕರು ರಾತ್ರಿಯೇ ಈತ್ರಾಸಿಗೆ ಆಗಮಿಸಿದ್ದು, ಪೊಲೀಸರು ಆಕೆಯನ್ನು ಪೋಷಕರ ಮಡಿಲಿಗೊಪ್ಪಿಸಿದ್ದಾರೆ.
ಈ ಬಿಂದಾಸ್ ಕಾವ್ಯ ಯೂಟ್ಯೂಬ್‌ನಲ್ಲಿ 4 ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ಗಳನ್ನು (followers) ಹೊಂದಿದ್ದು, ಕಾವ್ಯ ಪತ್ತೆಗೆ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ಮೊದಲಾದ ಆಕೆಯ ಸಾಮಾಜಿಕ ಜಾಲತಾಣಗಳ (social Media) ಪೇಜ್ ಅನ್ನೇ ಪೋಷಕರು ಬಳಸಿಕೊಂಡಿದ್ದರು. ಕಾವ್ಯಳ ಅಭಿಮಾನಿಗಳು, ಸ್ನೇಹಿತರ ಜೊತೆ ಕಾವ್ಯ ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದರು. ಪೋಷಕರ ಈ ವಿಡಿಯೋವನ್ನು 41 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರು. ಅಲ್ಲದೇ ಆಕೆಯ ಪೋಷಕರು ಮಹಾರಾಷ್ಟ್ರದಿಂದ ಮಧ್ಯಪ್ರದೇಶದವರೆಗಿನ ತಮ್ಮ ಜರ್ನಿಯನ್ನು ವಿಡಿಯೋ ಮಾಡಿದ್ದರು. ಅಲ್ಲದೇ ಅದೇ ಪೇಜ್‌ನಲ್ಲಿ ಕಾವ್ಯ ಸಿಕ್ಕಿರುವುದಾಗಿ ಮಾಹಿತಿ ನೀಡಿದ್ದರು. ಇದಾದ ಬಳಿಕ ಕಾವ್ಯಳನ್ನು ಪೊಲೀಸರು ವಿಚಾರಿಸಿದಾಗ ನನ್ನ ತಂದೆ ನನಗೆ ಬೈದರು. ಇದರಿಂದ ಸಿಟ್ಟು ಬಂದು ನಾನು ಫೋನ್ ಮನೆಯಲ್ಲಿ ಬಿಟ್ಟು ಮನೆ ಬಿಟ್ಟು ಬಂದೆ. ನಾನು ರೈಲೇರಿ ಲಕ್ನೋದತ್ತ(Lucknow) ಪ್ರಯಾಣ ಬೆಳೆಸಿದ್ದೆ. ಈ ಮಧ್ಯೆ ಪೊಲೀಸರು ನನ್ನ ಹಿಡಿದರು ಎಂದು ಆಕೆ ಹೇಳಿಕೊಂಡಿದ್ದಾಳೆ.
ಸಾವಿರಾರು ಫಾಲೋವರ್‌ಗಳಿಗೆ ಕೋಟಿ ಕೋಟಿ ಪಂಗನಾಮ ಹಾಕಿದ ಯೂಟ್ಯೂಬ್ ಸ್ಟಾರ್..!
ಇದು ಸೋಶಿಯಲ್ ಮೀಡಿಯಾ ಯುಗವಾಗಿದ್ದು, ಸೋಶಿಯಲ್ ಮೀಡಿಯಾ ಎಷ್ಟೊಂದು ಪ್ರಭಾವಶಾಲಿಯಾಗಿದೆ ಎಂಬುದನ್ನು ಈಗ ಪದಗಳಲ್ಲಿ ಬಣ್ಣಿಸಲು ಸಾಧ್ಯವಲ್ಲ. ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜಂದಿರು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಇದು ಜನಸಾಮಾನ್ಯನನ್ನು ಕೂಡ ಸೆಲೆಬ್ರಿಟಿ ಮಾಡಿದೆ ಎಂದರೆ ತಪ್ಪಾಗಲಾರದು. ಅನೇಕರಿಗೆ ಈ ಸೋಶಿಯಲ್ ಮೀಡಿಯಾದಿಂದ ಧುತ್ತನೇ ಎದುರಾದ ಯಶಸ್ಸನ್ನು ಹೇಗೆ ನಿಭಾಯಿಸಬೇಕು ಎಂದಬುದೇ ತಿಳಿಯದೇ ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಈ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ ಗಿಟ್ಟಿಸಲು ಜನರು ಏನೇನೋ ಅವಾಂತರಗಳನ್ನು ಮಾಡಲು ಹೋದ ಸಾಕಷ್ಟು ಪ್ರಕರಣಗಳು ಈಗಾಗಲೇ ನಡೆದಿವೆ.