Social Media ಸ್ಟಾರ್‌ಗಳಿಗೆ ಸರ್ಕಾರದ ಶಾಕ್: ರೆಡಿಯಾಗ್ತಿದೆ ಹೊಸ ಮಾರ್ಗಸೂಚಿ
ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ತಾವು ಪ್ರಯೋಜಕತ್ವ ವಹಿಸುವ ಉತ್ಪನ್ನಗಳ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ನವದೆಹಲಿ: ಇದು ಸಾಮಾಜಿಕ ಜಾಲತಾಣಗಳ ಯುಗವಾಗಿದ್ದು, ಸಾಮಾಜಿಕ ಜಾಲತಾಣ ಅದೆಷ್ಟು ಪ್ರಭಾವಿ ಎಂದು ಊಹೆ ಮಾಡಲು ಸಾಧ್ಯವಿಲ್ಲ. ಅನೇಕ ಹೊಸ ಹೊಸ ಪ್ರತಿಭೆಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿಭೆಗೆ ಜಾಗ ಕಂಡುಕೊಂಡಿದ್ದು, ಈ ಮೂಲಕ ಆರ್ಥಿಕವಾಗಿಯೂ ಸಬಲರಾಗಿದ್ದಾರೆ. ಜನ ಸಾಮಾನ್ಯರಿಗೂ ಸೆಲೆಬ್ರಿಟಿ ಪಟ್ಟ ತಂದುಕೊಟ್ಟ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲವು ಉತ್ಪನ್ನಗಳು ಜಾಹೀರಾತುಗಳನ್ನು ನೀಡುತ್ತಿದ್ದು, ಪ್ರತಿಭೆ ಇರುವ ಅನೇಕರು ತಾವಿರುವಲ್ಲೇ ಮಾಡೆಲ್‌ಗಳಾಗುತ್ತಿದ್ದಾರೆ. ಈ ಎಲ್ಲಾ ವಿಚಾರವನ್ನು ಸರ್ಕಾರವೂ ಗಮನಿಸುತ್ತಿದ್ದು, ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ತಾವು ಪ್ರಯೋಜಕತ್ವ ವಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಗಳಿಗೆ ಹೊಸ ಮಾರ್ಗಸೂಚಿಗಳನ್ನು (guidelines) ಬಿಡುಗಡೆ ಮಾಡಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಿದ್ಧವಾಗಿದೆ, ಸಾಮಾಜಿಕ ಜಾಲತಾಣದ ಮಾಡೆಲ್‌ಗಳು, ತಾವು ಪ್ರಚಾರ ನೀಡುವ ಉತ್ಪನ್ನದೊಂದಿಗೆ ತಮ್ಮ ಸಂಬಂಧವನ್ನು ಘೋಷಿಸುವುದನ್ನು ಕಡ್ಡಾಯಗೊಳಿಸಿದೆ. ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆಯು ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಹೊಸ ಮಾರ್ಗಸೂಚಿಗಳೊಂದಿಗೆ ಬಂದಿದ್ದು, ಇದು ಇನ್ನು ಮುಂದೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು (social media influencers) ಏನು ಮಾಡಬೇಕು ಏನು ಮಾಡಬಾರದು ಎಂಬ ವಿಚಾರಗಳ ಪಟ್ಟಿ ಸಿದ್ಧಪಡಿಸುತ್ತಿದೆ ಎಂದು ಎಂದು ಅಧಿಕೃತ ಮೂಲವೊಂದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸಾವಿರಾರು ಫಾಲೋವರ್‌ಗಳಿಗೆ ಕೋಟಿ ಕೋಟಿ ಪಂಗನಾಮ ಹಾಕಿದ ಯೂಟ್ಯೂಬ್ ಸ್ಟಾರ್..!
Instagram, ಯೂಟ್ಯೂಬ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಅಭಿಮಾನಿಗಳನ್ನು (followers) ಹೊಂದಿರುವ ಪ್ರಭಾವಿಗಳು, ಹಣ ತೆಗೆದುಕೊಂಡು ಹಲವು ಉತ್ಪನ್ನಗಳಿಗೆ ಪ್ರಚಾರ ನೀಡುತ್ತಾರೆ. ಇಂತಹ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳಿಗೆ ಪಿಟಿಐ ಮೂಲಗಳಿಗೆ ಸಿಕ್ಕಿರುವ ಮಾಹಿತಿಯಂತೆ ಸರ್ಕಾರ ಸಿದ್ಧಪಡಿಸಿದ ಕೆಲ ಗೈಡ್‌ಲೈನ್‌ಗಳು ಇಲ್ಲಿವೆ ನೋಡಿ..
ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಗಳು ಹಣ ತೆಗೆದುಕೊಂಡ ನಂತರ ಯಾವುದೇ ಉತ್ಪನ್ನವನ್ನು ಪ್ರಮೋಟ್ ಮಾಡಿದರೆ, ಆ ಬ್ರಾಂಡ್ ಜೊತೆ ತಮಗಿರುವ ಸಂಬಂಧವನ್ನು ಘೋಷಿಸಬೇಕಾಗುತ್ತದೆ.
ಹೀಗೆ ಉತ್ಪನ್ನಗಳನ್ನು ಪ್ರಮೋಷನ್ (endorsement) ಮಾಡಿ ಹಾಕುವ ಪೋಸ್ಟ್‌ಗಳಲ್ಲಿ ಹಕ್ಕು ನಿರಾಕರಣೆಗಳನ್ನು (disclaimers) ಕೂಡ ಹಾಕಬೇಕಾಗುತ್ತದೆ
ಈ ಗೈಡ್‌ಲೈನ್‌ಗಳು ಮುಂದಿನ 15 ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ (e-commerce websites) ಪೋಸ್ಟ್ ಮಾಡಲಾದ ನಕಲಿ ವಿಮರ್ಶೆಗಳನ್ನು (fake reviews) ತಡೆಯುವ ಸಲುವಾಗಿ ಅದಕ್ಕೊಂದು ಅಂಕುಶ ಹಾಕಲು ಮಾರ್ಗಸೂಚಿ ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ಕೇಂದ್ರ ಗ್ರಾಹಕರ ಇಲಾಖೆ ಪೂರ್ಣಗೊಳಿಸಿದ್ದು ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ.
ವಿಮಾನದಲ್ಲಿ ಸಿಗರೇಟ್ ಸೇದಿದ ಸೋಷಿಯಲ್ ಮೀಡಿಯಾ ಸ್ಟಾರ್: ವಿಡಿಯೋ ವೈರಲ್..!
ಈ ಉತ್ಪನ್ನಗಳ ನಕಲಿ ವಿಮರ್ಶೆಗಳಿಂದಾಗಿ ಆನ್‌ಲೈನ್ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸುವ ವೇಳೆ ಗ್ರಾಹಕರು ದಾರಿ ತಪ್ಪುತ್ತಾರೆ. ಹೀಗಾಗಿ ಕಳೆದ ಮೇ ತಿಂಗಳಲ್ಲಿ, ಗ್ರಾಹಕರ ವ್ಯವಹಾರಗಳ ಇಲಾಖೆಯೂ, ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ASCI) ಜೊತೆಗೆ ಇ-ಕಾಮರ್ಸ್ ಘಟಕಗಳು ಸೇರಿದಂತೆ ಮಧ್ಯಸ್ಥಗಾರರೊಂದಿಗೆ ತಮ್ಮ ವೇದಿಕೆಗಳಲ್ಲಿ ನಕಲಿ ವಿಮರ್ಶೆಗಳ ಪ್ರಮಾಣವನ್ನು ಚರ್ಚಿಸಲು ಆನ್‌ಲೈನ್ ಸಭೆಯನ್ನು ನಡೆಸಿತು.
ಭಾರತದಲ್ಲಿ ಇ-ಕಾಮರ್ಸ್ ಘಟಕಗಳು ಅನುಸರಿಸುತ್ತಿರುವ ಪ್ರಸ್ತುತ ಕಾರ್ಯವಿಧಾನ ಮತ್ತು ಜಾಗತಿಕವಾಗಿ ಲಭ್ಯವಿರುವ ಕೆಲ ವಿಚಾರಗಳನ್ನು ಅಧ್ಯಯನ ಮಾಡಿದ ನಂತರ ಈ ಮಾರ್ಗಸೂಚಿ ಬಿಡುಗಡೆ ಮಾಡಲು ಕೇಂದ್ರ ಗ್ರಾಹಕರ ಇಲಾಖೆ ನಿರ್ಧರಿಸಿತ್ತು.
ಇ-ಕಾಮರ್ಸ್ ಅಥವಾ ಆನ್‌ಲೈನ್ ಶಾಪಿಂಗ್ ನಲ್ಲಿ ಉತ್ಪನ್ನವನ್ನು ಭೌತಿಕವಾಗಿ ವೀಕ್ಷಿಸಲು ಅಥವಾ ಪರೀಕ್ಷಿಸಲು ಯಾವುದೇ ಅವಕಾಶವಿಲ್ಲದ ಕಾರಣ ಗ್ರಾಹಕರು ಈಗಾಗಲೇ ಸರಕು ಅಥವಾ ಸೇವೆಯನ್ನು ಖರೀದಿಸಿದ ಬಳಕೆದಾರರ ಅಭಿಪ್ರಾಯ ಮತ್ತು ಅನುಭವವನ್ನು ನೋಡಲು ವೇದಿಕೆಗಳಲ್ಲಿ ಪೋಸ್ಟ್ ಮಾಡಲಾದ ವಿಮರ್ಶೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯೂ ಗ್ರಾಹಕರ ಹಕ್ಕನ್ನು ರಕ್ಷಿಸಲಿದೆ.