Asianet Suvarna News Asianet Suvarna News

COVIDನಿಂದ ಪೋಷಕರನ್ನು ಕಳೆದುಕೊಂಡ 17 ವರ್ಷದ ಯುವತಿಗೆ ಲೋನ್‌ ಕಟ್ಟುವಂತೆ ಹಿಂಸೆ, ಕೇಂದ್ರದಿಂದ ತನಿಖೆ

COVID 19 Orphan Story: ಆಕೆಗಿನ್ನೂ 17 ವರ್ಷ. ಆದರೆ ಚಿಕ್ಕ ತಮ್ಮನನ್ನು ಸಾಕುವ ಜವಾಬ್ದಾರಿ. ಇದರ ನಡುವೆಯೂ ಆಕೆ ಹತ್ತನೇ ತರಗತಿಯಲ್ಲಿ 99.80% ಅಂಕ ಗಳಿಸಿದ್ದಾಳೆ. ಕೊರೋನಾ ಎರಡನೇ ಅಲೆಯಲ್ಲಿ ತಂದೆ - ತಾಯಿ ಇಬ್ಬರನ್ನೂ ಕಳೆದುಕೊಂಡ ಈಕೆಗೆ ಈಗ ತಂದೆ ಮಾಡಿದ ಗೃಹ ಸಾಲ ತೀರಿಸುವಂತೆ ಬ್ಯಾಂಕ್‌ ಪೀಡಿಸುತ್ತಿದೆ. ಈ ಬಗ್ಗೆ ಅರಿತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಸ್ಥಿಕೆಗೆ ಮುಂದಾಗಿದ್ದು, ಅಲ್ಲಿಂದಲಾದರೂ ಪ್ರತಿಭಾವಂತ ವಿದ್ಯಾರ್ಥಿನಿಗೆ ಸಹಾಯ ಸಿಗಲಿ ಎಂದು ಜನ ಅಭಪ್ರಾಯ ವ್ಯಕ್ತಪಡಿಸಿದ್ದಾರೆ. 

17 year old covid orphan girl tortured by bank to repay her father's loan
Author
Bengaluru, First Published Jun 6, 2022, 1:32 PM IST

ನವದೆಹಲಿ: ಕೊರೋನಾವೈರಸ್‌ (Coronavirus) ಕೇವಲ ಜೀವಗಳನ್ನು ಬಲಿ ಪಡೆದಿಲ್ಲ, ಬದುಕುಳಿದವರನ್ನೂ ಕಾಡುತ್ತಿದೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಇದೇ ರೀತಿಯ ಮನಕಲಕುವ ವಿಚಾರವೊಂದು ಬೆಳಕಿಗೆ ಬಂದಿದ್ದು, ಅಪ್ಪ ಅಮ್ಮ ಇಬ್ಬರನ್ನೂ ಕಳೆದುಕೊಂಡಿರುವ ಹದಿನೇಳು ವರ್ಷದ ಯುವತಿಗೆ ಮನೆ ಸಾಲ ಮರುಪಾವತಿ (Home loan repayment) ಮಾಡುವಂತೆ ಕಿರುಕುಳ ನೀಡಲಾಗುತ್ತಿದೆ. ಈ ವಿಚಾರ ತಿಳಿದ ತಕ್ಷಣ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಖುದ್ದು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ. 

ವನಿಶಾ ಪಾಠಕ್‌ ಬೋಪಾಲ್‌ನಲ್ಲಿ ಕ್ಲಾಸ್‌ X ಟಾಪರ್‌ (Class X Topper Vanisha Pathak) ಆಗಿದ್ದ ಪ್ರತಿಭಾವಂತ ಹುಡುಗಿ. ಕೆಲ ತಿಂಗಳುಗಳ ಹಿಂದಷ್ಟೇ ಶೇ 99.80 ಅಂಕ ಪಡೆಯುವ ಮೂಲಕ ಸುದ್ದಿಯಾಗಿದ್ದವಳು. ಜತೆಗೆ ಅಗಲಿದ ತಂದೆಯ ಬಗ್ಗೆ ಭಾವನಾತ್ಮಕವಾದ ಕವನವೊಂದನ್ನು ಈ ಸಮಯದಲ್ಲಿ ವನಿಶಾ ಬರೆದಿದ್ದಳು. "ಅಪ್ಪ ನೀನಿಲ್ಲದೆಯೂ ನಾನು ಎತ್ತರವಾಗಿ ನಿಲ್ಲುತ್ತೇನೆ," ಎಂಬ ಶೀರ್ಷಿಕೆಯ ಕವನಕ್ಕೆ ಭಾರೀ ಪ್ರಮಾಣದ ಪ್ರಶಂಸೆ ವ್ಯಕ್ತವಾಗಿತ್ತು. ಪೋಷಕರನ್ನು ಕಳೆದುಕೊಂಡು ನೋವು - ಕಷ್ಟಗಳ ನಡುವೆಯೂ ಮನಿಶಾ ಹತ್ತನೇ ತರಗತಿಯಲ್ಲಿ ಮಾಡಿದ ಸಾಧನೆ ಮೆಚ್ಚುವಂತದ್ದು. ಆದರೆ ಈಗ ಮನಿಶಾಗೆ ಎಲ್‌ಐಸಿ ಗೃಹಸಾಲದ ಏಜೆಂಟ್‌ಗಳಿಂದ ನಿತ್ಯ ಕಿರಿಕಿರಿ ಉಂಟಾಗುತ್ತಿದೆ. 

ತಂದೆ ಮಾಡಿದ ಸಾಲಕ್ಕೆ ಅಪ್ರಾಪ್ತ ಯುವತಿ ಹೊಣೆ:
ವನಿಶಾ ತಂದೆ ಎಲ್‌ಐಸಿಯಿಂದ ಗೃಹಸಾಲ ಪಡೆದಿದ್ದರು. ಸುಮಾರು 29 ಲಕ್ಷದಷ್ಟು ಸಾಲ ಇನ್ನೂ ಕಟ್ಟಲು ಬಾಕಿಯಿದೆ. ತಂದೆ - ತಾಯಿ ಇಬ್ಬರೂ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ, ಮಗಳು ಇನ್ನೂ ಹದಿನೆಂಟು ದಾಟಿಲ್ಲ. ಆದರೆ ಎಲ್‌ಐಸಿ ಅಧಿಕಾರಿಗಳು ನೊಟೀಸ್‌ ಮೇಲೆ ನೊಟೀಸ್‌ ಕೊಡುತ್ತಿದ್ದಾರೆ. ಇನ್ನೂ ಓದುತ್ತಿರುವ ಹುಡುಗಿ ಎಲ್ಲಿಂದ ತಿಂಗಳ ಕಂತು ಬರಿಸಲು ಸಾಧ್ಯ. ಅದು ಗೊತ್ತಿದ್ದರೂ ಎಲ್‌ಐಸಿ ಅಧಿಕಾರಿಗಳು ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. 

ಇದನ್ನೂ ಓದಿ: ಲಂಡನ್‌ನಲ್ಲಿ ಶಿಕ್ಷಣ, ಕೇಜ್ರೀ ವಿರುದ್ಧ ಸ್ಪರ್ಧೆ: ಬಿಜೆಪಿಯಿಂದ ವಜಾಗೊಂಡ ನೂಪುರ್ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ

ಮಾಹಿತಿ ಕೋರಿದ ನಿರ್ಮಲಾ ಸೀತಾರಾಮನ್‌:
ಈ ವಿಚಾರದ ಪತ್ರಿಕೆಯೊಂದರಲ್ಲಿ ಪ್ರಕಟವಾದ ನಂತರ ವಿಚಾರ ತಿಳಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Finance Minister Nirmala Sitharaman) ಇಡೀ ವೃತ್ತಾಂತದ ಮಾಹಿತಿ ನೀಡುವಂತೆ ಕೋರಿದ್ದಾರೆ. ಎಲ್‌ಐಸಿ ಮೇಲಾಧಿಕಾರಿಗಳಿಗೆ ನಿರ್ಮಲಾ ಸೀತಾರಾಮನ್‌ ಆದೇಶಿಸಿದ್ದು, ಪ್ರಕರಣ ಏನು ಮತ್ತು ಸದ್ಯ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡುವಂತೆ ಆದೇಶಿಸಿದ್ದಾರೆ. 

ವನಿಶಾ ತಂದೆ ಜೀತೆಂದ್ರ ಪಾಠಕ್‌ ಎಲ್‌ಐಸಿ ಏಜೆಂಟ್‌ ಆಗಿದ್ದವರು. ಅವರ ಕಚೇರಿಯಿಂದಲೇ ಗೃಹಸಾಲ ಪಡೆದಿದ್ದರು. ವನಿಶಾ ಇನ್ನೂ ಅಪ್ರಾಪ್ತೆ ಎಂಬ ಕಾರಣಕ್ಕೆ ಎಲ್‌ಐಸಿ ಆಕೆಯ ತಂದೆಯ ಉಳಿತಾಯದ ಹಣ, ಪ್ರತಿ ತಿಂಗಳು ಬರಬೇಕಾದ ಕಮೀಷನ್‌ ತಡೆಹಿಡಿದಿದ್ದಾರೆ ಎಂದು ವನಿಶಾ ದಿನ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಜತೆಗೆ ಗೃಹಸಾಲದ ಕಂತು ಕಟ್ಟಲು ಕಾಲಾವಕಾಶ ಕೊಡಬೇಕೆಂದು ವನಿಶಾ ಹಲವು ಬಾರಿ ಎಲ್‌ಐಸಿಗೆ ಮನವಿ ಮಾಡಿದ್ದಾರಾದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ಅಪ್ರಾಪ್ತೆ ಎಂಬ ಕಾರಣಕ್ಕೆ ತಂದೆಯ ಹಣವನ್ನೂ ಬಿಡುಗಡೆ ಮಾಡುತ್ತಿಲ್ಲ. ಇನ್ನೊಂದೆಡೆ ಅಪ್ರಾಪ್ತೆಯಾಗಿದ್ದರೂ ಸಾಲದ ಕಂತು ಕಟ್ಟು ಎಂದು ಹಿಂಸಿಸುತ್ತಿದ್ದಾರೆ. 

ಎಲ್‌ಐಸಿ ಅಧಿಕಾರಿಗಳ ಪ್ರಕಾರ ವನಿಶಾ ಅವರ ಮನವಿ ಪತ್ರವನ್ನು ಕೇಂದ್ರ ಕಚೇರಿಗೆ ಕಳಿಸಲಾಗಿದ್ದು, ವಿಚಾರದ ಕುರಿತು ಅವರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ವನಿಶಾ ತಂದೆ ಮೃತಪಟ್ಟ ನಂತರ ಕಂತು ಕಟ್ಟುವಂತೆ ಪದೇ ಪದೇ ವನಿಶಾಗೆ ನೊಟೀಸ್‌ ಕಳಿಸಲಾಗಿದೆ. ಕಡೆಯದಾಗಿ ಫೆಬ್ರವರಿಯಲ್ಲಿ 29 ಲಕ್ಷ ಹಣವನ್ನು ಕಟ್ಟಿ ಇಲ್ಲದಿದ್ದರೆ ಕಾನೂನು ಸಮರಕ್ಕೆ ಸಿದ್ಧರಾಗಿ ಎಂದು ನೊಟೀಸ್‌ ನೀಡಲಾಗಿದೆ. 

ಇದನ್ನೂ ಓದಿ: ಕಾಶ್ಮೀರ ನಿಭಾಯಿಸಲು ಬಿಜೆಪಿಗೆ ಸಾಧ್ಯವಿಲ್ಲ: ಕೇಜ್ರಿವಾಲ್‌ ವಾಗ್ದಾಳಿ

ವನಿಶಾ ಪೋಷಕರು 2021ರ ಎರಡನೇ ಕೊರೋನಾ ಅಲೆಯ ವೇಳೆ ಮೃತಪಟ್ಟಿದ್ದಾರೆ. ಆಕೆಗೆ ಪುಟ್ಟ ತಮ್ಮನೂ ಇದ್ದು, ಆತನಿಗಾಗಿ ತಾನು ಹೋರಾಟ ಮಾಡಲೇಬೇಕು ಎಂದು ನಿರ್ಧರಿಸಿದಳು. ಅದಕ್ಕೆ ಪ್ರತಿಯಾಗಿ ಹತ್ತನೇ ತರಗತಿ ಫಲಿತಾಂಶದಲ್ಲಿ 99.80% ಅಂಕಗಳಿಸಿದ್ದೇ ಸಾಕ್ಷಿ. ನೋವು - ಕಷ್ಟಗಳ ನಡುವೆಯೂ ಸಾಧನೆಯ ಶೀಖರ ಏರಲು ಹೊರಟಿರುವ ವನಿಶಾಗೆ ಹಣಕಾಸು ಸಚಿವಾಲಯದಿಂದ ಸಹಾಯ ಸಿಕ್ಕರೆ ಒಳಿತು.

Follow Us:
Download App:
  • android
  • ios