Asianet Suvarna News Asianet Suvarna News

ಮಣಿಪುರ ಸಂಘರ್ಷದಿಂದ 14000 ವಿದ್ಯಾರ್ಥಿಗಳ ಸ್ಥಳಾಂತರ: ಕೇಂದ್ರ ಮಾಹಿತಿ

ಮಣಿಪುರದಲ್ಲಿ ಮೇ ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷದಿಂದಾಗಿ 14 ಸಾವಿರಕ್ಕಿಂt ಹೆಚ್ಚಿನ ವಿದ್ಯಾರ್ಥಿಗಳು ಸ್ಥಳಾಂತರಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

14000 students relocated from manipur because of conflict Central govt informed to rajya sabha akb
Author
First Published Aug 3, 2023, 9:35 AM IST | Last Updated Aug 3, 2023, 9:35 AM IST

ನವದೆಹಲಿ: ಮಣಿಪುರದಲ್ಲಿ ಮೇ ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷದಿಂದಾಗಿ 14 ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸ್ಥಳಾಂತರಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ,‘ ಸ್ಥಳಾಂತರಗೊಂಡಿರುವವರ ಪೈಕಿ ಶೇ.93.5ರಷ್ಟು ಶಾಲಾ ಮಕ್ಕಳನ್ನು ಹತ್ತಿರದ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸಲಾಗುತ್ತಿದೆ. ಸ್ಥಳಾಂತರಿಸಲಾಗಿರುವ 14,763 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಕ್ಕೆ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಉತ್ತರಿಸಿದರು.

2 ಮನೆಗೆ ಬೆಂಕಿ: 2 ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆ ವಿಸ್ತರಣೆ

ಕುಕಿ ಮತ್ತು ಮೈತೇಯಿ ಸಮುದಾಯಗಳ ಮಧ್ಯೆ ತೀವ್ರ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮನೆಗಳಿಗೆ ಬೆಂಕಿ ಹಚ್ಚುವ ಕೃತ್ಯಗಳು ಮುಂದುವರೆದಿದ್ದು ಬುಧವಾರ ಪಶ್ಚಿಮ ಇಂಫಾಲ್‌ ಜಿಲ್ಲೆಯ ಲಾಂಗೋಲ್‌ನಲ್ಲಿ ಅಪರಿಚಿತ ವ್ಯಕ್ತಿಗಳು 2 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಕೂಡಲೇ ಅಗ್ನಿಶಾಮಕ ದಳಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮನೆಗಳ ನಿನಾಸಿಗಳು ಮನೆಗಳನ್ನು ತೊರೆದು ಬೇರೆಡೆ ವಾಸಿಸುತ್ತಿದ್ದು ಈ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳು ಕಾವಲು ಕಾಯುತ್ತಿದ್ದಾರೆ. ಈ ಸಿಬ್ಬಂದಿಗಳ ಪಾಳಿ ಬದಲಾಗುವ ಕೆಲವೇ ಸಮಯದಲ್ಲಿ ಈ ಕೃತ್ಯ ಎಸಗಲಾಗಿದೆ.

ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಕೈವಾಡ ತಳ್ಳಿ ಹಾಕುವಂತಿಲ್ಲ: ಮಾಜಿ ಆರ್ಮಿ ಚೀಫ್‌ ನರವಾಣೆ

ಇನ್ನು ಮಂಗಳವಾರ ರಾತ್ರಿ ಸಂಘಟನೆಯೊಂದರ ಅಧ್ಯಕ್ಷ ಸೆರ್ಟೊ ಅಹಾವೊ ಕೋಮ್‌ (45) ಮೇಲೆ ಚುರಾಚಂದ್‌ಪುರದ ಬಳಿ ದುಷ್ಕರ್ಮಿಗಳು ದೈಹಿಕ ಹಲ್ಲೆ ನಡೆಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸೆರ್ಟೊ ತಮ್ಮ ಮೇಲೆ ದಾಳಿ ಮಾಡಿದವರು ಮೈತೇಯಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿದ್ದಾರೆ. ಈ ನಡುವೆ ಜನರಿಗೆ ಅಗತ್ಯ ವಸ್ತು ಖರೀದಿ ಸೇರಿ ಅನೇಕ ಅನುಕೂಲಗಳಿಗಾಗಿ ನೀಡಲಾಗಿರುವ ಕರ್ಫ್ಯೂ ಸಡಿಲಿಕೆ ಅವಧಿಯನ್ನು ಎರಡು ಇಂಫಾಲ್‌ ಜಿಲ್ಲೆಗಳಲ್ಲಿ ಮುಂಜಾನೆ 5 ರಿಂದ ರಾತ್ರಿ 8 ಗಂಟೆವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಉಳಿದೆಡೆ ಈ ಅವಧಿ ಮುಂಜಾನೆ 5 ರಿಂದ ಸಂಜೆ 5ರವರೆಗೆ ಬದಲಾಗದೆ ಮುಂದುವರೆದಿದೆ.

ಮಣಿಪುರ ಗದ್ದಲ: ಸಂಸತ್‌ ಕಲಾಪ ಬಲಿ

ಮಣಿಪುರ ಹಿಂಸಾಚಾರಕ್ಕೆ ಬುಧವಾರವೂ ಸಂಸತ್ತಿನ ಉಭಯ ಕಲಾಪಗಳು ಬಲಿಯಾಗಿವೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಣಿಪುರ ಹಿಂಸಾಚಾರದ ವಿಚಾರವಾಗಿ ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಪ್ರತಿಭಟನೆ ನಡೆಸಿದ ಕಾರಣ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮಣಿಪುರದ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷ ನಾಯಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ವಿಪಕ್ಷಗಳ ನಾಯಕರು ಸದನದ ಬಾವಿಗಿಳಿದು ಮೋದಿ ಅವರ ಹೇಳಿಕೆ ಆಗ್ರಹಿಸಿದರು. ಮೋದಿ ಅವರಿಗೆ ಸಂಸತ್ತಿಗೆ ಬಂದು ಮಾತನಾಡುವಂತೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಸಭಾಪತಿ ಜಗದೀಪ್‌ ಧನಕರ್‌ ಹೇಳಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ವಿಪಕ್ಷಗಳು ಸಭಾತ್ಯಾಗ ನಡೆಸಿದವು.

ಮಣಿಪುರದಲ್ಲಿ ಮತ್ತೆ ಹಿಂಸೆ: 15 ತಾಸು ಗುಂಡಿನ ಚಕಮಕಿ; ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ, ಉಗ್ರರು ಪರಾರಿ

Latest Videos
Follow Us:
Download App:
  • android
  • ios