ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೇಲಿಯೇ ಎದ್ದು ಹೋಲ ಮೇದಂತಹ ಘಟನೆ ನಡೆದಿದೆ. ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಪ್ರಕರಣದಲ್ಲಿ ಭಕ್ಷಕನಾಗಿದ್ದಾನೆ. ಇಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿದೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೇಲಿಯೇ ಎದ್ದು ಹೋಲ ಮೇದಂತಹ ಘಟನೆ ನಡೆದಿದೆ. ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಪ್ರಕರಣದಲ್ಲಿ ಭಕ್ಷಕನಾಗಿದ್ದಾನೆ. ಇಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯೂಟ್ಯೂಬರ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ಘಟನೆಯ ಬಳಿಕ ಆ ಸಬ್ ಇನ್ಸ್‌ಪೆಕ್ಟರ್ ಪರಾರಿಯಾಗಿದ್ದಾನೆ. 14 ವರ್ಷದ ಶಾಲಾ ಬಾಲಕಿಯನ್ನು ಅಪಹರಿಸಿ ಅತ್ಯಾ*ಚಾರವೆಸಗಲಾಗಿದೆ. ಕಾನ್ಪುರದ ಸಚೆಂದಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಅವರು ಪೊಲೀಸ್ ಉಪ ಆಯುಕ್ತ (ಪಶ್ಚಿಮ) ದಿನೇಶ್ ಚಂದ್ರ ತ್ರಿಪಾಠಿ ಅವರನ್ನು ವಜಾಗೊಳಿಸಿದ್ದಾರೆ. ಹಾಗೆಯೇ ಪ್ರಕರಣವನ್ನು ತಿರುಚಿ ಸತ್ಯಗಳನ್ನು ಮರೆಮಾಚಿದ್ದಾರೆ ಎಂಬ ಆರೋಪದ ಮೇಲೆ ಸಚೆಂಡಿ ಸ್ಟೇಷನ್ ಹೌಸ್ ಆಫೀಸರ್ ಎಸ್‌ಎಚ್‌ಒ) ವಿಕ್ರಮ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸರ ಪ್ರಕಾರ ಸಂತ್ರಸ್ತ ಬಾಲಕಿ 7ನೇ ತರಗತಿಯಲ್ಲಿ ಶಾಲೆ ಬಿಟ್ಟಿದ್ದಾಳೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಆಕೆಯನ್ನು ಸ್ಕಾರ್ಫಿಯೋ ಕಾರಿನಲ್ಲಿ ಅಪಹರಿಸಿದ ಕಾಮುಕರು ಆಕೆಯನ್ನು ರೈಲ್ವೆ ಹಳಿಯ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಸುಮಾರು ಎರಡು ಗಂಟೆಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಪ್ರಜ್ಞಾಹೀನ ಸ್ಥಿತಿಯದ್ದ ಆಕೆಯನ್ನು ಮನೆಯ ಹೊರಗೆ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಸಂತ್ರಸ್ತೆ ನೀಡಿದ ಹೇಳಿಕೆ ಆಧರಿಸಿ ಸಬ್ ಇನ್ಸ್‌ಪೆಕ್ಟರ್ ಅಮಿತ್ ಕುಮಾರ್ ಮೌರ್ಯ ಹಾಗೂ ಯೂಟ್ಯೂಬರ್ ಶಿವಬರನ್ ಯಾದವ್ ವಿರುದ್ಧ ಈಗ ಅತ್ಯಾ*ಚಾರ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಯುಟ್ಯೂಬರ್ ಶಿವಬರನ್ ಯಾದವ್ ಅವರನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಎಸ್‌ಐ ಅಮಿತ್ ಕುಮಾರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆತನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಮಾಹಿತಿ ನೀಡಿದ್ದಾರೆ. ಈ ಅಪರಾಧ ಕೃತ್ಯಕ್ಕೆ ಬಳಸಲಾದ ಸಬ್ ಇನ್ಸ್‌ಪೆಕ್ಟರ್ ಅಮಿತ್ ಕುಮಾರ್ ಮೌರ್ಯಗೆ ಸೇರಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಮಿತ್ ಕುಮಾರ್ ಮೌರ್ಯ ಬಿಥೂರ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದರೂ, ಘಟನೆ ನಡೆದ ಸಮಯದಲ್ಲಿ ಸಚೆಂಡಿಯಲ್ಲಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಬಗ್ಗೆ ಮೊದಲು ದೂರು ನೀಡಲು ಹೋದಾಗ ಅವರು ನಿರಾಕರಿಸಿದರು. ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ. ಆರಂಭದಲ್ಲಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ಪ್ರಸ್ತಾಪಿಸಿದಾಗ ಅವರು ನಿರಾಕರಿಸಿದರು ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ.

ಪೊಲೀಸರು ಸಂತ್ರಸ್ತ ಬಾಲಕಿಯ ಬಳಿ ಇದ್ದ ಮೊಬೈಲ್ ಫೋನ್ ವಶಪಡಿಸಿಕೊಂಡರು ಮತ್ತು ನ್ಯಾಯಾಲಯದಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸುವವರೆಗೆ ಮನೆಗೆ ಹೋಗದಂತೆ ತಡೆದರು ಎಂದು ಹುಡುಗಿಯ ಸಹೋದರ ಹೇಳಿದ್ದಾರೆ. ಹೀಗಾಗಿ ಘಟನೆ ನಡೆದ ಆರಂಭದಲ್ಲೇ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಅನ್ವಯಿಸಲು ವಿಫಲವಾದ ಮತ್ತು ಪ್ರಕರಣದ ದಾಖಲೆಗಳಲ್ಲಿ ಸತ್ಯಗಳನ್ನು ತಪ್ಪಾಗಿ ನಿರೂಪಿಸಿದ ಆರೋಪದ ಮೇಲೆ ಎಸ್‌ಎಚ್‌ಒ ವಿಕ್ರಮ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. ದೀನನಾಥ್ ಮಿಶ್ರಾ ಎಂಬುವವರಿಗೆ ಈಗ ಸಚೆಂಡಿ ಪೊಲೀಸ್ ಠಾಣೆಯ ಉಸ್ತುವಾರಿ ನೀಡಲಾಗಿದೆ. ಪ್ರಕರಣದ ತನಿಖೆಯನ್ನು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಕಪಿಲ್ ದೇವ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಶೂಟರ್‌ಗೆ ಲೈಂಗಿಕ ಕಿರುಕುಳ: ರಾಷ್ಟ್ರೀಯ ಕೋಚ್ ಅಂಕುಶ್ ಭಾರದ್ವಾಜ್ ಅಮಾನತು

ಈ ಘಟನೆ ರಾಜ್ಯದಲ್ಲಿ ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಶಿಕ್ಷೆಯ ವಿನಾಯಿತಿಯನ್ನು ಖಂಡಿಸಲು ಸಿಪಿಐ(ಎಂ) ಮಾಜಿ ಸಂಸದೆ ಸುಭಾಷಿಣಿ ಅಲಿ ಆಯುಕ್ತರನ್ನು ಭೇಟಿಯಾದರು. ಈ ವೇಳೆ ಮಾತನಾಡಿದ ಅವರು ತನಿಖೆಯನ್ನು ಸಂಪೂರ್ಣ ಪಾರದರ್ಶಕತೆಯಿಂದ ನಡೆಸಲಾಗುತ್ತಿದ್ದು ಎಲ್ಲಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಘುಬೀರ್ ಲಾಲ್ ಹೇಳಿದ್ದಾರೆ.

ಇದನ್ನೂ ಓದಿ: ಟೀನೇಜ್ ಪ್ರೀತಿಗೆ ವೃದ್ಧಾಪ್ಯದಲ್ಲಿ ಮದುವೆಯ ಮುದ್ರೆ: ಗಂಡ ಹೆಂಡತಿ ಸಾವಿನ ನಂತರ ಮದುವೆಯಾದ ಪ್ರೇಮಿಗಳು